ರಾಜ್ಯೋತ್ಸವದಂದು ಕರಾಳ ದಿನ ಆಚರಣೆ; 46 ಎಂಇಎಸ್‌ ನಾಯಕರ ವಿರುದ್ಧ ಎಫ್‌ಐಆರ್‌

ದೊಂಬಿಗೆ ಪ್ರಚೋದನೆ, ಸಂಚಾರಕ್ಕೆ ಅಡ್ಡಿ ಮತ್ತಿತರ ಆರೋಪಗಳಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ ಎಂದು ಬೆಳಗಾವಿ ನಗರ ಪೊಲೀಸ್‌ ಉಪ ಆಯುಕ್ತ ರೋಹನ್‌ ಜಗದೀಶ್‌ ತಿಳಿಸಿದ್ದಾರೆ.;

Update: 2024-11-03 15:04 GMT

ಕನ್ನಡ ರಾಜ್ಯೋತ್ಸವ ದಿನದಂದು ಬೆಳಗಾವಿಯಲ್ಲಿ ಕರಾಳ ದಿನ ಆಚರಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿಯ 46 ಮಂದಿಯ ವಿರುದ್ಧ ಮಾರ್ಕೆಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದ ದಿನ ಎಂಇಎಸ್‌ ಕರಾಳ ದಿನ ಆಚರಿಸುತ್ತಿತ್ತು, ಈ ವರ್ಷವೂ ಕರಾಳ ದಿನ ಆಚರಣೆಗೆ ಜಿಲ್ಲಾಡಳಿತದ ಅನುಮತಿ ಕೋರಿದ್ದರು. ಆದರೆ, ಜಿಲ್ಲಾಧಿಕಾರಿ ಮೊಹಮದ್‌ ರೋಷನ್‌ ಅವರು ಯಾವುದೇ ಕಾರಣಕ್ಕೂ ಕರಾಳ ದಿನಾಚರಣೆ ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದರು.

ನಗರ ಪೊಲೀಸ್‌ ಆಯುಕ್ತ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಅವರು, ನಾಡವಿರೋಧಿ ಚಟುವಟಿಕೆಗೆ ಅನುಮತಿ ಕೊಡುವುದಿಲ್ಲ ಎಂದು ಹೇಳಿ ಕಳುಹಿಸಿದ್ದರು. ಅನುಮತಿ ಪಡೆಯದೆಯೂ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ಮುಖಂಡರು ಹಾಗೂ ನಾಯಕರು ನ.1 ರಂದು ಕಪ್ಪು ಬಟ್ಟೆ ಧರಿಸಿ ಬೃಹತ್‌ ಬೈಕ್‌ ರ್ಯಾಲಿ ನಡೆಸುವ ಮೂಲಕ ಕರಾಳ ದಿನ ಆಚರಿಸಿದ್ದರು.

ಘಟನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಎಂಇಎಸ್‌ ಕಾರ್ಯಕರ್ತರ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದರು. ಇನ್ನು ನ.3 ರಂದು ಭಾನುವಾರ ಎಂಇಎಸ್‌ನ 46 ನಾಯಕರು ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ದೊಂಬಿಗೆ ಪ್ರಚೋದನೆ, ನಿಯಮಬಾಹಿರವಾಗಿ ಗುಂಪು ಸೇರುವುದು, ಸಂಚಾರಕ್ಕೆ ಅಡ್ಡಿ ಮತ್ತಿತರ ಆರೋಪಗಳಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ ಎಂದು ಬೆಳಗಾವಿ ನಗರ ಪೊಲೀಸ್‌ ಉಪ ಆಯುಕ್ತ ರೋಹನ್‌ ಜಗದೀಶ್‌ ತಿಳಿಸಿದ್ದಾರೆ.

Tags:    

Similar News