ಬಿಜೆಪಿಯವರ ಜೈಲು- ಡಿಸಿಎಂ ಆಫರ್‌ನಲ್ಲಿ ಜೈಲು ಆಯ್ಕೆ ಮಾಡಿದ್ದೆ: ಸತ್ಯ ಬಿಚ್ಚಿಟ್ಟ ಡಿಕೆಶಿ

ನಾನು ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯ ನಾಯಕನಾಗಬೇಕು ಎನ್ನುವ ಅಭಿಲಾಷೆ ಹೊಂದಿದ್ದವನು. ಮೌಂಟ್ ಕಾರ್ಮೆಲ್ ಶಾಲಾ ಚುನಾವಣೆಯಲ್ಲಿ ಗೆದ್ದಿದ್ದ ನನಗೆ ಅಂದೇ ಅನೇಕ ಒತ್ತಡಗಳಿಂದ ಪ್ರತ್ಯೇಕ ಸ್ಥಾನ ನೀಡಲಾಗಿತ್ತು ಎಂದು ಡಿ.ಕೆ ಶಿವಕುಮಾರ್‌ ತಿಳಿಸಿದರು.

Update: 2025-10-16 06:25 GMT

ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌

Click the Play button to listen to article

"ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನದ ನಿರ್ಣಾಯಕ ಘಟ್ಟದಲ್ಲಿ, ಆದಾಯ ತೆರಿಗೆ ಇಲಾಖೆಯ ಆಡಿಟರ್ ಒಬ್ಬರು ನನಗೆ ಕರೆ ಮಾಡಿ, 'ಡಿಸಿಎಂ ಆಗುವಿರಾ ಅಥವಾ ಜೈಲಿಗೆ ಹೋಗುವಿರಾ?' ಎಂದು ಎರಡು ಆಯ್ಕೆಗಳನ್ನು ಮುಂದಿಟ್ಟಿದ್ದರು. ಆದರೆ, ನಾನು ಬೆಳೆದು ಬಂದ ಪಕ್ಷಕ್ಕೆ ದ್ರೋಹ ಬಗೆಯದೆ, ಪಕ್ಷನಿಷ್ಠನಾಗಿ ಜೈಲುವಾಸವನ್ನೇ ಆಯ್ಕೆ ಮಾಡಿಕೊಂಡೆ" ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ರಾಜಕೀಯ ಜೀವನದ ಅತ್ಯಂತ ಕಠಿಣ ಸಂದರ್ಭದ ಬಗ್ಗೆ ಸ್ಫೋಟಕ ಸತ್ಯವನ್ನು ಬಹಿರಂಗಪಡಿಸಿದ್ದಾರೆ.

ನಗರದ ಎಫ್‌ಕೆಸಿಸಿಐ ಸಭಾಂಗಣದಲ್ಲಿ, ಚಲನಚಿತ್ರ ನಿರ್ದೇಶಕ ಕೆ.ಎಂ. ರಘು ಅವರು ರಚಿಸಿರುವ 'ಡಿ.ಕೆ. ಶಿವಕುಮಾರ್' ಜೀವನಚರಿತ್ರೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ರಾಜಕೀಯ ಪಯಣದ ಹಲವು ಮರೆಯಲಾಗದ ಘಟನೆಗಳನ್ನು ಹಂಚಿಕೊಂಡರು.

ಪಕ್ಷಕ್ಕೆ ದ್ರೋಹ ಬಗೆಯಲಾರೆ

ಸಮ್ಮಿಶ್ರ ಸರ್ಕಾರದಲ್ಲಿದ್ದ ಹತ್ತು ಶಾಸಕರು ರಾಜೀನಾಮೆ ನೀಡಲು ಮುಂದಾದಾಗ, ಅವರಲ್ಲಿ ಆರು ಜನರನ್ನು ತಾನು ಸಮಾಧಾನಪಡಿಸಿ ವಾಪಸ್ ಕರೆತಂದಿದ್ದೆ ಎಂದು ನೆನಪಿಸಿಕೊಂಡ ಶಿವಕುಮಾರ್, "ಆ ಸಮಯದಲ್ಲಿ, ನನ್ನ ಸಹೋದರ ಡಿ.ಕೆ. ಸುರೇಶ್ ಅವರ ಸಮ್ಮುಖದಲ್ಲೇ ನನಗೆ ಕರೆ ಬಂದಿತ್ತು. ಶಾಸಕರನ್ನು ವಾಪಸ್ ಕರೆತರುವಂತೆ ಒತ್ತಡ ಹೇರಲಾಯಿತು. ಆದರೆ, ವಿದ್ಯಾರ್ಥಿ ನಾಯಕನಾಗಿದ್ದಾಗಿನಿಂದ ನನ್ನನ್ನು ಬೆಳೆಸಿದ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆಯಲು ನನ್ನ ಮನಸ್ಸು ಒಪ್ಪಲಿಲ್ಲ. ನನಗೆ ರಾಜೀವ್ ಗಾಂಧಿಯವರು ಟಿಕೆಟ್ ಕೊಟ್ಟು ಮಂತ್ರಿ ಮಾಡಿದ್ದರು. ಎಸ್. ಬಂಗಾರಪ್ಪನವರು ನನ್ನನ್ನು ಗುರುವಾಗಿ ತಿದ್ದಿ-ತೀಡಿದ್ದರು. ಅವರೆಲ್ಲರ ಋಣವನ್ನು ಮರೆಯಲು ಸಾಧ್ಯವಿರಲಿಲ್ಲ. ಹಾಗಾಗಿ, ನಾನು ಜೈಲಿಗೆ ಹೋಗಲು ಸಿದ್ಧನಾದೆ. ಅಂದು ನಾನು ಡಿಸಿಎಂ ಪಟ್ಟ ಆರಿಸಿಕೊಂಡಿದ್ದರೆ, ಇತಿಹಾಸವೇ ಬೇರೆಯಾಗುತ್ತಿತ್ತು" ಎಂದು ಸ್ಪಷ್ಟಪಡಿಸಿದರು.

ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದು ಹೈಕಮಾಂಡ್ ಆದೇಶಕ್ಕಾಗಿ

ಜೆಡಿಎಸ್ ನಾಯಕರೊಂದಿಗಿನ ತಮ್ಮ ರಾಜಕೀಯ ಸಂಬಂಧದ ಬಗ್ಗೆ ಮಾತನಾಡಿದ ಅವರು, "ಮಾಜಿ ಪ್ರಧಾನಿ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ವಿರುದ್ಧ ನಾನು ರಾಜಕೀಯವಾಗಿ ಹೋರಾಡಿದ್ದೇನೆ. ಆದರೂ, 2018ರಲ್ಲಿ ಜಾತ್ಯತೀತತೆ ಉಳಿಯಬೇಕು ಎಂಬ ಕಾರಣಕ್ಕೆ ಮತ್ತು ಹೈಕಮಾಂಡ್‌ನ ಆದೇಶಕ್ಕೆ ಬದ್ಧನಾಗಿ, ನನ್ನ ಮನಸ್ಸು ಒಪ್ಪದಿದ್ದರೂ ಕುಮಾರಸ್ವಾಮಿ ಅವರ ಕೈಹಿಡಿದು ಮುಖ್ಯಮಂತ್ರಿ ಮಾಡಿದ್ದೆವು. ಆದರೆ, ನಾನು ಕಷ್ಟದಲ್ಲಿದ್ದಾಗ, ಜೈಲಿಗೆ ಹೋದಾಗ, 'ನಾವೇನಾದರೂ ದುಡ್ಡು ಹೊಡೆಯಲು ಹೇಳಿದ್ದೆವಾ?' ಎಂಬಂತಹ ಮಾತುಗಳನ್ನು ಕೇಳಬೇಕಾಯಿತು" ಎಂದು ತಮ್ಮ ನೋವನ್ನು ತೋಡಿಕೊಂಡರು.

ಪುಸ್ತಕದ ಬಗ್ಗೆ ಮೆಚ್ಚುಗೆ

ಲೇಖಕ ಕೆ.ಎಂ. ರಘು ಅವರ ಪುಸ್ತಕದ ಬಗ್ಗೆ ಮಾತನಾಡಿದ ಅವರು, "ಲೇಖಕರು ನನ್ನ ಬಳಿ ಅನುಮತಿ ಪಡೆದಿಲ್ಲ, ಹತ್ತು ನಿಮಿಷವೂ ಮಾತನಾಡಿಲ್ಲ. ಆದರೆ, ನನ್ನ ಭಾಷಣಗಳು, ಸಂದರ್ಶನಗಳು ಮತ್ತು ಸಾರ್ವಜನಿಕ ಜೀವನವನ್ನು ಆಧರಿಸಿ, ಆಳವಾದ ಸಂಶೋಧನೆ ನಡೆಸಿ ಈ ಪುಸ್ತಕ ಬರೆದಿದ್ದಾರೆ. ಇದರಲ್ಲಿ ಶೇ.99ರಷ್ಟು ಸತ್ಯ ಸಂಗತಿಗಳಿವೆ. ಇದು ಕೇವಲ ನನ್ನ ಕಥೆಯಲ್ಲ, ರಾಜಕೀಯದಲ್ಲಿ ಬೆಳೆಯಬೇಕೆನ್ನುವ ಯುವಕರಿಗೆ ಒಂದು ಮಾರ್ಗದರ್ಶಿ. ನನ್ನ ಶ್ರಮ, ಹೋರಾಟ ಮತ್ತು ಅದರ ಫಲವನ್ನು ಈ ಪುಸ್ತಕದ ಮೂಲಕ ತಿಳಿದುಕೊಳ್ಳಬಹುದು" ಎಂದು ಶ್ಲಾಘಿಸಿದರು.

ಜನರ ಪ್ರೀತಿಯೇ ನನ್ನ ಶಕ್ತಿ

ತಿಹಾರ್ ಜೈಲಿಗೆ ತನ್ನನ್ನು ಷಡ್ಯಂತ್ರದಿಂದ ಕಳುಹಿಸಿದಾಗಲೂ, ಲಕ್ಷಾಂತರ ಜನರು ಮತ್ತು ತಾಯಂದಿರು ತಮಗಾಗಿ ಹರಕೆ ಹೊತ್ತು, ದೇವರಿಗೆ ಪ್ರಾರ್ಥಿಸಿದ್ದರು. "ಅವರೆಲ್ಲರ ಹಾರೈಕೆ ಮತ್ತು ಪ್ರೀತಿಯಿಂದಲೇ ನಾನು ಇಂದು ನಿಮ್ಮ ಮುಂದೆ ನಿಂತಿದ್ದೇನೆ" ಎಂದು ಹೇಳುವ ಮೂಲಕ ಅವರು ಭಾವುಕರಾದರು. ಈ ಪುಸ್ತಕವು ತನ್ನ ಹೆಜ್ಜೆಗಳನ್ನು ಅರಿಯಲು ಮತ್ತು ತನ್ನ ಜೀವನವನ್ನು ತೆರೆದಿಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. 

Tags:    

Similar News