
ಬಿಹಾರ ಚುನಾವಣೆ: ಸೀಟು ಹಂಚಿಕೆಯ ಗೊಂದಲದ ನಡುವೆಯೇ ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್
ಬಿಹಾರದ 243 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ.
ಬಿಹಾರ ವಿಧಾನಸಭಾ ಚುನಾವಣೆಗೆ 'ಇಂಡಿಯಾ ಮೈತ್ರಿಕೂಟ'ದ ಮಿತ್ರಪಕ್ಷಗಳಾದ ಆರ್‌ಜೆಡಿ ಮತ್ತು ಇತರರೊಂದಿಗೆ ಸೀಟು ಹಂಚಿಕೆ ಒಪ್ಪಂದವು ಇನ್ನೂ ಅಂತಿಮಗೊಳ್ಳದಿದ್ದರೂ, ಕಾಂಗ್ರೆಸ್ ಪಕ್ಷವು ಏಕಪಕ್ಷೀಯವಾಗಿ ತನ್ನ ಅಭ್ಯರ್ಥಿಗಳನ್ನು ಘೋಷಿಸಲು ಆರಂಭಿಸಿದೆ. ಇದು ಮೈತ್ರಿಕೂಟದಲ್ಲಿನ ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದೆ.
ಬುಧವಾರ ರಾತ್ರಿ, ಕಾಂಗ್ರೆಸ್‌ನ ಬಿಹಾರ ಘಟಕವು ತನ್ನ ಅಧಿಕೃತ 'ಎಕ್ಸ್' ಖಾತೆಯ ಮೂಲಕ ಅಭ್ಯರ್ಥಿಗಳ ಹೆಸರುಗಳನ್ನು ಒಂದೊಂದಾಗಿ ಪ್ರಕಟಿಸಲು ಪ್ರಾರಂಭಿಸಿತು. ಅಧಿಕೃತ ಪಟ್ಟಿ ಬಿಡುಗಡೆ ಮಾಡುವ ಬದಲು, ಅಭ್ಯರ್ಥಿಗಳಿಗೆ ಪಕ್ಷದ ಬಿಫಾರಂ ಹಸ್ತಾಂತರಿಸುತ್ತಿರುವ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ರಾಜೇಶ್ ರಾಮ್ ಅವರು ಕುಟುಂಬಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಮೊದಲು ಘೋಷಿಸಲಾಯಿತು. ಇದರ ಬೆನ್ನಲ್ಲೇ, ವಜೀರ್‌ಗಂಜ್‌ನಿಂದ ಶಶಿ ಶೇಖರ್ ಸಿಂಗ್, ನಳಂದದಿಂದ ಕೌಶಲೇಂದ್ರ ಕುಮಾರ್, ಬೇಗುಸರಾಯ್‌ನಿಂದ ಅಮಿತಾ ಭೂಷಣ್ ಮತ್ತು ಮುಜಫರ್‌ಪುರ್‌ನಿಂದ ವಿಜೇಂದ್ರ ಚೌಧರಿ ಸೇರಿದಂತೆ ಹಲವು ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಲಾಗಿದೆ.
ಮೈತ್ರಿಯಲ್ಲಿ ಬಿಕ್ಕಟ್ಟು?
ಕಾಂಗ್ರೆಸ್ ನಾಯಕತ್ವವು ಆರ್‌ಜೆಡಿ ಜೊತೆ ಸೀಟು ಹಂಚಿಕೆ ಕುರಿತು ನಿರಂತರ ಮಾತುಕತೆ ನಡೆಸುತ್ತಿದ್ದರೂ, ಒಮ್ಮತ ಮೂಡಿಲ್ಲ. ನಾಮಪತ್ರ ಸಲ್ಲಿಕೆಗೆ ದಿನಗಣನೆ ಆರಂಭವಾಗಿರುವುದರಿಂದ (ಮೊದಲ ಹಂತಕ್ಕೆ ಅಕ್ಟೋಬರ್ 17, ಎರಡನೇ ಹಂತಕ್ಕೆ ಅಕ್ಟೋಬರ್ 20 ಕೊನೆಯ ದಿನ), ಕಾಂಗ್ರೆಸ್ ಈ ನಡೆ ಅನುಸರಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಬುಧವಾರ ರಾಘೋಪುರದಿಂದ ನಾಮಪತ್ರ ಸಲ್ಲಿಸಿದ ನಂತರ, ಕಾಂಗ್ರೆಸ್‌ನ ಈ ನಿರ್ಧಾರವು ಮೈತ್ರಿಕೂಟದಲ್ಲಿನ ಒತ್ತಡವನ್ನು ಹೆಚ್ಚಿಸಿದೆ.
ಬಿಹಾರದ 243 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ.