
ಡಿಸಿಎಂ ಡಿ.ಕೆ ಶಿವಕುಮಾರ್
ಮಳೆಯಲ್ಲೂ ರಸ್ತೆ ಕಾಮಗಾರಿ; ವೆಟ್ ಮಿಕ್ಸಿಂಗ್ ಬಳಸಿ ಗುಂಡಿ ಮುಚ್ಚಿದ ಸಿಬ್ಬಂದಿ
ಒಂದು ವಾರದ ಹಿಂದೆ ಮುಚ್ಚಿದ್ದ ರಸ್ತೆ ಗುಂಡಿಗಳು ಮಳೆಗೆ ಮತ್ತೆ ಹಾಳಾಗಿರುವ ಬಗ್ಗೆ ದೂರುಗಳು ಬಂದಿವೆ. ಮಳೆ ಬಂದಾಗ ಈ ರೀತಿ ತೊಂದರೆಯಾಗುತ್ತದೆ. ಈ ಸಮಸ್ಯೆ ಶೀಘ್ರವೇ ಬಗೆಹರಿಸಲಾಗುವುದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ ಮಳೆಯಿಂದ ಹಾಳಾಗಿರುವ ರಸ್ತೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ವೆಟ್ ಮಿಕ್ಸಿಂಗ್ ವಿಧಾನದ ಮೂಲಕ ದುರಸ್ತಿ ಕಾರ್ಯ ಕೈಗೊಂಡಿದೆ.
ಮಾರತ್ತಹಳ್ಳಿ ಸೇರಿದಂತೆ ಹಲವೆಡೆ ಸುರಿಯುವ ಮಳೆಯಲ್ಲೇ ವೆಟ್ ಮಿಕ್ಸಿಂಗ್ ಹಾಕಲಾಗುತ್ತಿದೆ. ರಸ್ತೆ ಗುಂಡಿಗಳ ಬಗ್ಗೆ ಸಾರ್ವಜನಿಕ ಹಾಗೂ ಉದ್ಯಮ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಮರೋಪಾದಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿತ್ತು. ಆದರೆ, ಕಳೆದ ಒಂದು ವಾರದಿಂದ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಮತ್ತೆ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಈ ಹಿನ್ನೆಲೆಯಲ್ಲಿ ಗುಂಡಿಗಳಿಗೆ ವೆಟ್ ಮಿಕ್ಸಿಂಗ್ ಹಾಕುವ ಕಾರ್ಯ ಆರಂಭಿಸಲಾಗಿದೆ.
ಏನಿದು ವೆಟ್ ಮಿಕ್ಸಿಂಗ್ ?
ರಸ್ತೆಗಳಲ್ಲಿ ಗುಂಡಿಗಳು ಬಿದ್ದಾಗ ವೆಟ್ ಮಿಕ್ಸಿಂಗ್ ಮಕಾಡಮ್ ವಿಧಾನದ ಮೂಲಕ ದುರಸ್ತಿ ಮಾಡಲಾಗುತ್ತದೆ. ವೆಟ್-ಮಿಕ್ಸ್ ಮಕಾಡಮ್ ವಿಧಾನದಲ್ಲಿ ತಳಪದರವನ್ನು ಸ್ಥಿರವಾಗಿ ಇರುವಂತೆ ಮಾಡಲಾಗುತ್ತದೆ. ಬಿಟುಮೆನ್(ಗಟ್ಟಿಯಾದ ಡಾಂಬರ್) ನಂತಹ ಬೈಂಡರ್ ಮಿಶ್ರಣವನ್ನು ಬಳಸಲಾಗುತ್ತದೆ. ಈ ಪ್ರಕ್ರಿಯೆಯಿಂದ ರಸ್ತೆಯು ದೀರ್ಘ ಬಾಳಿಕೆ ಬರಲಿದೆ. ಬಿಟುಮನ್ ಮೇಲೆ ಮಿಕ್ಸ್ ಡಾಂಬಾರು ಪದರ ಇರಲಿದೆ.
ವೆಟ್ ಮಿಕ್ಸಿಂಗ್ ಪ್ರಯೋಜನವೇನು?
ಗುಂಡಿ ಮುಚ್ಚಲು ವೆಟ್ ಮಿಕ್ಸಿಂಗ್ ಬಳಸುವುದರಿಂದ ಭಾರೀ ವಾಹನಗಳ ಸಂಚಾರ ಮತ್ತು ಕಠಿಣ ಹವಾಮಾನ ಪರಿಸ್ಥಿತಿಗಳಲ್ಲೂ ಕೊಚ್ಚಿಹೋಗುವುದಿಲ್ಲ. ರಸ್ತೆಯ ಸಾಮರ್ಥ್ಯ ಹೆಚ್ಚಿಸಲಿದೆ. ಸಾಮಾನ್ಯ ರಸ್ತೆಗಳಿಗೆ ಹೋಲಿಸಿದರೆ ವೆಟ್ ಮಿಕ್ಸಿಂಗ್ ಬಳಸಿ ಹಾಕಿದ ಗುಂಡಿಗಳು ಹಾಗೂ ರಸ್ತೆಗಳು ಬೇಗನೆ ಒಣಗುತ್ತವೆ. ಇದರಿಂದ ನಿರ್ಮಾಣ ಕಾರ್ಯ ತ್ವರಿತವಾಗಿ ಮುಗಿಸಬಹುದು. ಇದು ತಳಪಾಯಕ್ಕೆ ನೀರು ನುಸುಳದಂತೆ ತಡೆಯುತ್ತದೆ. ರಸ್ತೆಯಲ್ಲಿ ಗುಂಡಿಗಳು ಮತ್ತು ಬಿರುಕುಗಳು ಉಂಟಾಗುವ ಸಾಧ್ಯತೆ ಕಡಿಮೆ ಇರಲಿದೆ.
"ಒಂದು ವಾರಗಳ ಹಿಂದೆ ಮುಚ್ಚಿದ್ದ ರಸ್ತೆಗುಂಡಿಗಳು ಮಳೆಗೆ ಮತ್ತೆ ಹಾಳಾಗಿರುವ ದೂರುಗಳು ಬಂದಿವೆ. ಮಳೆ ಬಂದಾಗ ಈ ರೀತಿಯ ತೊಂದರೆಯಾಗುತ್ತದೆ. ನಗರದಾದ್ಯಂತ ಇಡೀ ದಿನ ರಾತ್ರಿ ಜೋರಾಗಿ ಮಳೆ ಸುರಿದಿದೆ. ನಮ್ಮ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಎಲ್ಲಿಯೂ ಅವಘಡಗಳು ನಡೆದ ಸುದ್ದಿಗಳು ವರದಿಯಾಗಿಲ್ಲ. ಒಂದಷ್ಟು ಕಡೆ ಮಾತ್ರ ನೀರಿನ ಹರಿವಿಗೆ ಅಡಚಣೆ ಉಂಟಾಗಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ತಿಳಿಸಿದರು.
ಗುಂಡಿ ಮುಚ್ಚುವ ಕಾರ್ಯ ಚುರುಕು
ಬೆಂಗಳೂರು ನಗರದ ರಸ್ತೆಯಲ್ಲಿ ಗುಂಡಿಗಳು ಹೆಚ್ಚಾಗಿದ್ದು ವಾಹನ ಸವಾರರು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಅಫಘಾತಗಳು ಸಂಭವಿಸುತ್ತಿವೆ ಎಂದು ಐಟಿಬಿಟಿ ಉದ್ಯಮಿಗಳು ಹಾಗೂ ರಾಜಕೀಯ ನಾಯಕರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಸಂಬಂಧ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಅವರು, ಒಂದು ತಿಂಗಳೊಳಗೆ ನಗರದ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ತಪ್ಪಿದಲ್ಲಿ ವಿಭಾಗವಾರು ಮುಖ್ಯ ಎಂಜಿನಿಯರ್‌ಗಳನ್ನು ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ಬಳಿಕ ನಗರದಲ್ಲಿ ಗುಂಡಿ ಮುಚ್ಚುವ ಕಾರ್ಯ ಚುರುಕುಗೊಂಡಿದೆ.
ರಾಜಕೀಯ ಕೆಸರೆರಚಾಟ
ನಗರದ ರಸ್ತೆಗಳಲ್ಲಿ ಗುಂಡಿ ಮುಚ್ಚಲು ಸರ್ಕಾರದ ಬಳಿ ಹಣವಿಲ್ಲದೆ ದಿವಾಳಿಯಾಗಿದೆ. ಗುಂಡಿಗಳನ್ನು ತಪ್ಪಿಸಲು ಹೋಗಿ ಬಹಳಷ್ಟು ಅಪಘಾತಗಳು ಸಂಭವಿಸಿವೆ ಎಂದು ಆರೋಪಿಸಿ ರಾಜ್ಯಾದ್ಯಂತ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ರಸ್ತೆ ಗುಂಡಿಗಳಲ್ಲಿ ಗಿಡ ನೆಡುವ ಮೂಲಕ ಪ್ರತಿಭಟನೆ ನಡೆಸಿದ್ದರು.
ಬೆಂಗಳೂರಿನ ರಸ್ತೆ ಗುಂಡಿಗಳು ಬಿಜೆಪಿ ಸರ್ಕಾರದ ದುರಾಡಳಿತದ ಫಲ. ರಸ್ತೆಗುಂಡಿಗಳನ್ನು ಮುಚ್ಚಲು ನಾವು ಬದ್ಧರಾಗಿದ್ದು, ಇದಕ್ಕಾಗಿಯೇ ಮುಖ್ಯಮಂತ್ರಿಗಳು 750 ಕೋಟಿ ರೂ. ಅನುದಾನ ನೀಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದರು.
“ನಗರದ ರಸ್ತೆಗಳಲ್ಲಿ ಗುಂಡಿಗಳಿರುವುದು ನಿಜ. ಅವುಗಳನ್ನು ಮುಚ್ಚಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಎಲ್ಲೆಲ್ಲಿ ರಸ್ತೆ ಗುಂಡಿಗಳಿವೆ ಎಂದು ಮಾಹಿತಿ ನೀಡಿ ಎಂದು ಸಾರ್ವಜನಿಕರು, ಪೊಲೀಸರಿಗೆ ನಾನೇ ಮನವಿ ಮಾಡಿದ್ದೇನೆ. ಬಿಜೆಪಿ ಸರ್ಕಾರ ದುರಾಡಳಿತದ ಪರಿಣಾಮವಾಗಿ ಈ ಪರಿಸ್ಥಿತಿ ಬಂದಿದೆ. ನಾವು ಈ ಸಮಸ್ಯೆಯನ್ನು ಬಗೆಹರಿಸುತ್ತಿದ್ದೇವೆ ಎಂದು ಹೇಳಿದ್ದರು.
ಬಿಜೆಪಿ ಅವಧಿಯಲ್ಲೇ ಹೆಚ್ಚು ಸಾವು
ಬಿಜೆಪಿ ಅಧಿಕಾರದಲ್ಲಿದ್ದಾಗ ಬೆಂಗಳೂರಿನ ರಸ್ತೆ ಗುಂಡಿಗಳಿಂದಾಗಿ 17 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈಗ ಅದೇ ಗುಂಡಿಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವುದು ನಾಚಿಕೆಗೇಡು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ವಿರೋಧ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.