ಬಿಗ್‌ಬಾಸ್‌ ಶೋ ಸ್ಥಗಿತ | ನಟ್ಟು ಬೋಲ್ಟ್ ಮಿನಿಸ್ಟರ್ ಕೈವಾಡ ಎಂದ ಜೆಡಿಎಸ್‌; ಡಿಕೆಶಿ ತಿರುಗೇಟು
x

ಬಿಗ್‌ಬಾಸ್‌ ಶೋ ಸ್ಥಗಿತ | ನಟ್ಟು ಬೋಲ್ಟ್ ಮಿನಿಸ್ಟರ್ ಕೈವಾಡ ಎಂದ ಜೆಡಿಎಸ್‌; ಡಿಕೆಶಿ ತಿರುಗೇಟು

ಬಿಗ್‌ಬಾಸ್‌ ರಿಯಾಲಿಟಿ ಶೋ ಸ್ಥಗಿತದ ವಿಚಾರ ಈಗ ರಾಜಕೀಯವಾಗಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ನಟ್ಟು ಬೋಲ್ಟ್ ಮಿನಿಸ್ಟರ್ ಅವರು ಬಿಗ್ ಬಾಸ್ ರಿಯಾಲಿಟಿ ಶೋ ಬಂದ್ ಮಾಡಿಸಿ, ಕಲಾವಿದರ ಮೇಲೆ ಸೇಡು ತೀರಿಸಿಕೊಂಡಿದ್ದಾರೆ ಎಂದು ಜೆಡಿಎಸ್ ಟ್ವೀಟ್ ಮಾಡಿ ಕಿಡಿಕಾರಿದೆ.


ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರವಾನಗಿ ಪಡೆಯದ ಕಾರಣಕ್ಕೆ ಜಾಲಿವುಡ್‌ಗೆ ರಾಮನಗರ ಜಿಲ್ಲಾಡಳಿತ ಬೀಗಮುದ್ರೆ ಹಾಕಿದ್ದು, ಇದರಿಂದ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ʼಬಿಗ್‌ಬಾಸ್‌ʼ ಕಾರ್ಯಕ್ರಮ 11ನೇ ದಿನಕ್ಕೇ ಸ್ಥಗಿತಗೊಂಡಿದೆ.

ಬಿಗ್‌ಬಾಸ್‌ ರಿಯಾಲಿಟಿ ಶೋ ಸ್ಥಗಿತದ ವಿಚಾರವೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. "ನಟ್ಟು ಬೋಲ್ಟ್ ಮಿನಿಸ್ಟರ್ ಅವರು ಬಿಗ್ ಬಾಸ್ ರಿಯಾಲಿಟಿ ಶೋ ಬಂದ್ ಮಾಡಿಸಿ, ಕಲಾವಿದರ ಮೇಲೆ ಸೇಡು ತೀರಿಸಿಕೊಂಡಿದ್ದಾರೆ" ಎಂದು ಜೆಡಿಎಸ್ ಟ್ವೀಟ್ ಮಾಡಿ ಕಿಡಿಕಾರಿದೆ.

ಈ ಮಧ್ಯೆ, ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರಗಿ ಕೂಡ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ಸ್ಥಗಿತ ಮಾಡುವ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ನಟ ಸುದೀಪ್, ಎಚ್.ಡಿ.ಕುಮಾರಸ್ವಾಮಿ ಅವರಿಗೆ ಟಾಂಗ್‌ ಕೊಟ್ಟಿದ್ದಾರೆ. ಇದ್ಯಾವುದಕ್ಕೂ ಕವಡೆ ಕಾಸಿನ ಕಿಮ್ಮತ್ತು ಕೊಡಬಾರದು ಎಂದು ಹೇಳಿದ್ದಾರೆ.

ನಟ್ಟು, ಬೋಲ್ಟ್ ಟೈಟ್; ಏನಿದು ವಿವಾದ ?

ಮಾ.2 ರಂದು ರಾಜ್ಯ ಸರ್ಕಾರ ಆಯೋಜಿಸಿದ್ದ ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟರು ಭಾಗವಹಿಸದಿರುವುದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಚಿತ್ರರಂಗದ ನಟ್ಟು ಬೋಲ್ಟ್ ಟೈಟ್ ಮಾಡುವುದು ಹೇಗೆ ಎಂಬುದು ಗೊತ್ತು ಎಂಬ ಹೇಳಿಕೆ ನೀಡಿದ್ದರು.

“ನಟ, ನಟಿಯರ ನಡವಳಿಕೆ ಬಗ್ಗೆ ನನಗೆ ಬೇಸರ ತರಿಸಿದೆ. ಏನಾದರೂ ಕೆಲಸ ಇದ್ದರೆ ಬಂದು ಭೇಟಿ ಮಾಡಿ ಕೆಲಸ ಮಾಡಿಸಿಕೊಂಡು ಹೋಗ್ತಿರಿ. ಆದರೆ, ಸರ್ಕಾರದ ಕರೆಗಳಿಗೆ ಓಗೊಡುವುದಿಲ್ಲ. ಹಿಂದೆ, ಕಾಂಗ್ರೆಸ್ ಪಕ್ಷ ಕುಡಿಯುವ ನೀರಿಗಾಗಿ ಅಭಿಯಾನ ಮಾಡಿತ್ತು. ನಾವು ನಡೆಸಿದ ಪಾದಯಾತ್ರೆಗೆ ಚಿತ್ರರಂಗದ ಬೆಂಬಲ ಕೋರಿದ್ದೆವು. ಆದರೆ, ಸಾಧು ಕೋಕಿಲ ಹಾಗೂ ನಟ ದುನಿಯಾ ವಿಜಯ್ ಮಾತ್ರ ನಮ್ಮ ಜೊತೆ ಬಂದರು. ನಮಗೆ ಗೌರವ ಕೊಟ್ಟವರಿಗೆ ನಾವು ಏನಾದರೂ ಮಾಡಬೇಕು ಎಂದು ಸಾಧು ಕೋಕಿಲ ಅವರನ್ನು ನಾವು ಮಾಧ್ಯಮ ಅಕಾಡೆಮಿ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಉಳಿದವರ ನಟ್ಟು, ಬೋಲ್ಟ್‌ ಟೈಟ್‌ ಮಾಡುವುದು ನನಗೆ ಗೊತ್ತು ಎಂದು ಕಿಡಿಕಾರಿದ್ದರು.

ಇದಕ್ಕೆ ತಿರುಗೇಟು ನೀಡಿದ್ದ ಕಿಚ್ಚ ಸುದೀಪ್, ನಾವು ಓಡಾಡುವ ಕಾರಿನ ನಟ್ಟು, ಬೋಲ್ಟು ಕೂಡ ಟೈಟ್ ಇರಬೇಕಾಗುತ್ತದೆ, ನಟ್ಟು-ಬೋಲ್ಟು ವಿಚಾರ ಮೆಕ್ಯಾನಿಕ್‌ಗೆ ಮಾತ್ರ ಗೊತ್ತು. ಹಾಗೆಯೇ, ಚಿತ್ರರಂಗದ ಕಷ್ಟ-ಸುಖ, ಸತ್ಯಾಸತ್ಯತೆಗಳು ಇಲ್ಲಿರುವ ನಮಗೆ ಮಾತ್ರ ತಿಳಿದಿದೆ. ಹೊರಗಿನಿಂದ ಮಾತನಾಡುವುದು ಸುಲಭ. ರಾಜಕೀಯದ ನೋವು ರಾಜಕಾರಣಿಗಳಿಗೆ ಮಾತ್ರ ಗೊತ್ತು. ಚಿತ್ರರಂಗದ ಸವಾಲುಗಳು ನಮಗೆ ಮಾತ್ರ ಗೊತ್ತು. ಪ್ರಭಾವಿ ನಾಯಕರಾದ ಡಿಕೆಶಿ ಅವರು ಈ ಸತ್ಯವನ್ನು ಅರಿತು ಮಾತನಾಡಬೇಕಿತ್ತು ಎಂದು ಹೇಳಿದ್ದರು.

ಡಿಕೆಶಿ ಮಾತಿನಿಂದ ಚಿತ್ರರಂಗದವರ ಮನಸ್ಸಿಗೆ ಬಹಳ ನೋವಾಗಿದೆ. ಅವರು ಕರೆದ ಎಲ್ಲ ಕಾರ್ಯಕ್ರಮಕ್ಕೂ ನಾವು ಹೋಗಿದ್ದೇವೆ, ನಾವು ಅವರ ಜೊತೆ ನಿಂತಿದ್ದೇವೆ. ಚಿತ್ರರಂಗದಲ್ಲಿ ತುಂಬ ಗೌರವಸ್ಥರು ಇದ್ದಾರೆ. ನಾವು ಯಾರೂ ಕೂಡ ಮೈ ಮಾರಿಕೊಂಡು ಬಾಳುವ ವ್ಯಕ್ತಿಗಳಲ್ಲ ಎಂದು ಹೇಳುವ ಮೂಲಕ ಟಾಂಗ್‌ ನೀಡಿದ್ದರು.

ಅವಕಾಶ ನೀಡಲು ಡಿಕೆಶಿ ಸೂಚನೆ

ಜಾಲಿವುಡ್‌ ಪಾರ್ಕನ್ನು ನಾನೇ ಉದ್ಘಾಟನೆ ಮಾಡಿದ್ದೆ. ಮಾಲಿನ್ಯ ನಿಯಂತ್ರಣ ಮಂಡಳಿ ಪರವಾನಗಿ ಪಡೆಯದ ಕಾರಣ ಜಾಲಿವುಡ್‌ಗೆ ಬೀಗ ಹಾಕಿರುವ ವಿಷಯ ತಿಳಿದಿದೆ. ಇದರಿಂದ ಬಿಗ್‌ಬಾಸ್‌ ಕಾರ್ಯಕ್ರಮ ಸ್ಥಗಿತವಾಗಿದೆ. ಜಾಲಿವುಡ್‌ನ ಲೋಪಗಳನ್ನು ಪರಿಶೀಲಿಸಿ ಮತ್ತೊಂದು ಅವಕಾಶ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಿಗೆ ಸೂಚಿಸಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಬುಧವಾರ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬಿಗ್‌ಬಾಸ್‌ ಸ್ಥಗಿತಕ್ಕೆ ಡಿ.ಕೆ. ಶಿವಕುಮಾರ್‌ ಅವರೇ ಕಾರಣ ಎಂಬ ಜೆಡಿಎಸ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ವಿಷಯ ಮಾತನಾಡಲಿಲ್ಲ ಎಂದರೆ ಕುಮಾರಸ್ವಾಮಿ ಹಾಗೂ ಜೆಡಿಎಸ್‌ ಪಕ್ಷದವರಿಗೆ ನಿದ್ರೆ ಬರುವುದಿಲ್ಲ. ಶಕ್ತಿಯೂ ಇರುವುದಿಲ್ಲ ಎಂದು ಕಿಡಿಕಾರಿದ್ದಾರೆ.

ನಿನ್ನೆ ನಡೆದಿದ್ದೇನು?

ರಾಮನಗರ ತಹಶೀಲ್ದಾರ್ ತೇಜಸ್ವಿನಿ ಅವರು, ಜಾಲಿವುಡ್ ಪ್ರವೇಶದ್ವಾರಕ್ಕೆ ಬೀಗ ಹಾಕಿಸಿದರಲ್ಲದೇ ಬಿಗ್ಬಾಸ್ ಶೋಗೂ ತೆರಳಿ ಶೋ ಸ್ಥಗಿತಗೊಳಿಸುವಂತೆ ಸೂಚಿಸಿದ್ದರು. ಆಗ ಆಯೋಜಕರು ಎಲ್ಲಾ ಸ್ಪರ್ಧಿಗಳನ್ನು ಸ್ಟುಡಿಯೊದಲ್ಲಿರುವ ಮಿನಿ ಥಿಯೇಟರ್ನಲ್ಲಿ ಕೂರಿಸಿ, ಪರಿಸ್ಥಿತಿ ನಿಭಾಯಿಸಿದರು. ಆದರೂ ಬಿಡದ ತಹಶೀಲ್ದಾರ್ ಅವರು, ಕೂಡಲೇ ಸ್ಪರ್ಧಿಗಳನ್ನು ಹೊರ ಕಳಿಸುವಂತೆ ತಾಕೀತು ಮಾಡಿದ್ದರು. ಆಗ ವಿಧಿಯಿಲ್ಲದೇ ಸ್ಪರ್ಧಿಗಳನ್ನು ಹಿಂಬಾಗಿಲ ಮೂಲಕ ಕಾರುಗಳಲ್ಲಿ ಬಿಡದಿಯ ಈಗಲ್ಟನ್ ರೆಸಾರ್ಟ್ಗೆ ಕರೆದೊಯ್ಯಲಾಯಿತು.

ನೋಟಿಸ್ ನಿರಾಕರಣೆ

ಪರಿಸರ ನಿಯಮ ಉಲ್ಲಂಘನೆ ಕುರಿತು ರೆವಿನ್ಯೂ ಇನ್ಸ್ಪೆಕ್ಟರ್ ಮತ್ತು ಗ್ರಾಮ ಆಡಳಿತಾಧಿಕಾರಿ ನೋಟಿಸ್ ನೀಡಲು ತೆರಳಿದ್ದಾಗ ಸಂಸ್ಥೆಯವರು ಪಡೆದಿರಲಿಲ್ಲ. ಖುದ್ದು ನೋಟಿಸ್ ನೀಡಲು ತಹಶೀಲ್ದಾರ್ ಹೋಗಿದ್ದಾಗಲೂ ನಾವು ಪಡೆಯುವುದಿಲ್ಲ ಎಂದು ವಾಗ್ವಾದ ನಡೆಸಿದ್ದರು.

ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರಿಂದ ಅನಿವಾರ್ಯವಾಗಿ ತಹಶೀಲ್ದಾರ್ ಅವರು ಪೊಲೀಸ್ ಭದ್ರತೆಯಲ್ಲಿ ಬೀಗಮುದ್ರೆ ಹಾಕಿಸಬೇಕಾಯಿತು.

ಉಲ್ಲಂಘನೆ ಏನು?

ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಪಾರ್ಕ್ಗೆ ಬಳಸುವ ನೀರನ್ನು ಸಂಸ್ಕರಿಸದೆ ಹೊರ ಬಿಡಲಾಗುತ್ತಿದೆ. ಪ್ರತಿನಿತ್ಯ ಜಾಲಿವುಡ್ನಿಂದ 250 ಕೆಎಲ್ಡಿ (ಕಿಲೋ ಲೀಟರ್) ಸಾಮರ್ಥ್ಯದ ಕೊಳಚೆ ನೀರು ಹೊರ ಬರುತ್ತಿದೆ. ಕೊಳಚೆ ನೀರು ಸಂಸ್ಕರಣೆ ಘಟಕವಿದ್ದರೂ ಅದು ನಿಷ್ಕ್ರಿಯವಾಗಿದೆ ಎಂಬುದು ಪತ್ತೆಯಾಗಿತ್ತು.

ಇದಲ್ಲದೇ ಜಾಲಿವುಡ್ನಲ್ಲಿ 625 ಕೆವಿಎ ಮತ್ತು 500 ಕೆವಿಎ ಸಾಮರ್ಥ್ಯದ ಡಿಜೆ ಸೆಟ್ ಅಳವಡಿಸಿರುವುದರಿಂದ ಪರಿಸರ ಮತ್ತು ಶಬ್ದಮಾಲಿನ್ಯ ಉಂಟಾಗುತ್ತಿದೆ. ಹಸಿ ಮತ್ತು ಒಣ ಕಸ ವಿಂಗಡಿಸದೆ ಹಾಗೆಯೇ ವಿಲೇವಾರಿ ಮಾಡಲಾಗುತ್ತಿದೆ ಎಂದು ದೂರಲಾಗಿತ್ತು.

ಕೋರ್ಟ್ ಮೊರೆಗೆ ಸಿದ್ಧತೆ

ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಿರುವುದರಿಂದ ಬಿಗ್ ಬಾಸ್ ಶೋ ಚಿತ್ರೀಕರಣ ಸ್ಥಗಿತಗೊಂಡಿದೆ. ಜಿಲ್ಲಾಡಳಿತ ಬೀಗಮುದ್ರೆ ಹಾಕಿರುವುದನ್ನು ಪ್ರಶ್ನಿಸಿ ಆಯೋಜಕರು ಬುಧವಾರ ಕೋರ್ಟ್ ಮೊರೆ ಹೋಗಿದ್ದಾರೆ. ಒಂದು ವೇಳೆ ಕೋರ್ಟ್ನಿಂದ ತಡೆಯಾಜ್ಞೆ ಸಿಕ್ಕರೆ ಸ್ಟುಡಿಯೊದಲ್ಲೇ ಶೋ ಮುಂದುವರಿಯಲಿದೆ. ಇಲ್ಲದಿದ್ದರೆ ಬೇರೆಡೆಗೆ ಸ್ಥಳಾಂತರಿಸಲು ಆಯೋಜಕರು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಗಲ್ಟನ್‌ ರೆಸಾರ್ಟ್‌ನಲ್ಲಿ ಸ್ಪರ್ಧಿಗಳು

ಬಿಡದಿಯ ಈಗಲ್ಟನ್ ರೆಸಾರ್ಟ್‌ನಲ್ಲಿ ಬಿಗ್‌ಬಾಸ್ ಸ್ಪರ್ಧಿಗಳನ್ನು ಇರಿಸಿದ್ದು, ಬಿಗ್‌ಬಾಸ್‌ ಮನೆಯಂತೆ ಇಲ್ಲಿಯೂ ನಿಯಮ ಪಾಲಿಸಲು ಸೂಚಿಸಲಾಗಿದೆ.

ಮರಳಿ ಶೋ ನಡೆಯುವವರೆಗೂ ಆಯೋಜಕರ ಸುಪರ್ದಿಯಲ್ಲೇ ಸ್ಪರ್ಧಿಗಳು ಇರಬೇಕಾಗುತ್ತದೆ ಎಂದು ತಿಳಿಸಿದ್ದು, ಇದಕ್ಕೆ ಎಲ್ಲ ಸ್ಪರ್ಧಿಗಳು ಒಪ್ಪಿಕೊಂಡಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಚಿತ್ರೀಕರಣ ಮತ್ತೆ ಆರಂಭವಾಗುವ ಸಾಧ್ಯತೆ ಇದೆ. ಒಂದು ವೇಳೆ ನ್ಯಾಯಾಲಯದಲ್ಲಿ ಪರವಾದ ತೀರ್ಪು ಬಾರದೇ ಹೋದರೆ ಬೇರೆ ರಾಜ್ಯದಲ್ಲಿರುವ ಸೆಟ್‌ಗಳಲ್ಲಿ ಚಿತ್ರೀಕರಣ ನಡೆಸಲು ತೀರ್ಮಾನಿಸಲಾಗಿದೆ ಎಂಂದು ತಿಳಿದು ಬಂದಿದೆ.

Read More
Next Story