ಹೆಗಡೆ ಮನೆ ಬಾಗಿಲಿಗೆ ಹೋಗಿ ಬರಿಗೈಲಿ ಬಂದ ಕಾಗೇರಿ: ಉ.ಕದಲ್ಲಿ ಬಿಜೆಪಿ ಬಿಕ್ಕಟ್ಟು ಮೇಲುʼಗೈʼ!

ದಾವಣಗೆರೆ, ಶಿವಮೊಗ್ಗ, ತುಮಕೂರು, ಬೆಳಗಾವಿ, ರಾಯಚೂರು ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಸ್ವಪಕ್ಷೀಯ ನಾಯಕರೇ ಕಂಟಕವಾಗಿದ್ದಾರೆ. ಆ ಸಾಲಿಗೆ ಇದೀಗ ಉತ್ತರ ಕನ್ನಡ ಕ್ಷೇತ್ರವೂ ಸೇರಿದೆ.

Update: 2024-03-30 01:20 GMT

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿಯ ಆಂತರಿಕ ಕಿತ್ತಾಟಗಳು ಕಾಂಗ್ರೆಸ್ ಗೆ ವರದಾನವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ದಾವಣಗೆರೆ, ಶಿವಮೊಗ್ಗ, ತುಮಕೂರು, ಬೆಳಗಾವಿ, ರಾಯಚೂರು ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಸ್ವಪಕ್ಷೀಯ ನಾಯಕರೇ ಗೆಲುವಿನ ಓಟಕ್ಕೆ ಅಡ್ಡಗಾಲಾಗುವ ಸಾಧ್ಯತೆ ಹೆಚ್ಚಿವೆ. ಈಶ್ವರಪ್ಪ ಅವರಂತೂ ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಇದೀಗ, ಉತ್ತರಕನ್ನಡ ಕ್ಷೇತ್ರದಲ್ಲೂ ಬಿಜೆಪಿ ಅಂತಹದ್ದೇ ಸವಾಲು ಎದುರಿಸುತ್ತಿದೆ.

ಹಾಲಿ ಸಂಸದ ಅನಂತಕುಮಾರ್ ಹೆಗ್ಡೆ ಅವರಿಗೆ ಟಿಕೆಟ್ ತಪ್ಪಿಸಿ ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬಿಜೆಪಿ ಮಣೆ ಹಾಕಿತ್ತು. ಇದರಿಂದ ಅಸಮಾಧಾನಗೊಂಡಿರುವ ಅನಂತಕುಮಾರ ಹೆಗಡೆ ಪಕ್ಷದೊಂದಿಗೆ ಮುನಿಸಿಕೊಂಡಿದ್ದು, ಪಕ್ಷದ ಅಭ್ಯರ್ಥಿ ಪರವಾಗಿ ಯಾವುದೇ ಚಟುವಟಿಕೆಗಳನ್ನು ಮಾಡುತ್ತಿಲ್ಲ. ಇನ್ನೊಂದೆಡೆ ಉತ್ತರಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಕೂಡಾ ಪಕ್ಷದ ಅಭ್ಯರ್ಥಿಯನ್ನು ನಡು ನೀರಿನಲ್ಲಿ ಕೈಬಿಟ್ಟಿದ್ದಾರೆ. ಬಿಜೆಪಿ ಬಲಾಢ್ಯವಾಗಿರುವ ಉತ್ತರಕನ್ನಡದಲ್ಲಿ ಸುಲಭವಾಗಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹಣೆಯಲ್ಲೀಗ ಆತಂಕದ ನೆರಿಗೆಗಳು ಮೂಡಿವೆ.

ಮನೆ ಬಾಗಿಲಿಗೆ ಹೋದರೂ ಸಿಗದ ಹೆಗಡೆ

ಆರು ಬಾರಿ ಸಂಸದರಾಗಿರುವ ಅನಂತಕುಮಾರ ಹೆಗಡೆ, ಉತ್ತರಕನ್ನಡದಲ್ಲಿ ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದರು. ನರೇಂದ್ರ ಮೋದಿ ಅವರ ಎರಡನೇ ಅವಧಿಯು ಸರ್ಕಾರದಲ್ಲಿ ಮತ್ತೊಮ್ಮೆ ಸಚಿವರಾಗಬೇಕಿದ್ದ ಹೆಗಡೆ ಅವರಿಗೆ ಕೊನೆ ಕ್ಷಣದಲ್ಲಿ ಅವಕಾಶ ಕೈ ಚೆಲ್ಲಿತ್ತು. ತಾವು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆಂದು ತಮ್ಮ ಬೆಂಬಲಿಗರನ್ನು ಮತ್ತು ಕುಟುಂಬಸ್ಥರನ್ನು ದೆಹಲಿಗೆ ಕರೆದೊಯ್ದಿದ್ದ ಹೆಗಡೆಗೆ, ಅವರ ಹೆಸರು ಕೊನೇ ಕ್ಷಣದಲ್ಲಿ ಪಟ್ಟಿಯಿಂದ ಕೈಬಿಟ್ಟುಹೋಗಿದ್ದರಿಂದ ದೆಹಲಿಯಲ್ಲಿ ತೀವ್ರ ಮುಜುಗರವಾಗಿತ್ತು. ಈ ಅವಮಾನದಿಂದ ಕುಪಿತರಾಗಿದ್ದ ಅವರು ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳದೆ, ಕಳೆದ ಮೂರು ತಿಂಗಳ ಹಿಂದೆಯಷ್ಟೇ ಸಭೆ-ಸಮಾರಂಭಗಳಲ್ಲಿ ಪಾಲ್ಗೊಳ್ಳಲು ತೊಡಗಿದ್ದರು.

ಆದರೆ, ಇದೀಗ, ಟಿಕೆಟ್ ವಂಚಿತರಾಗಿರುವುದರಿಂದ ಮತ್ತೊಮ್ಮೆ ಅಪಮಾನಿತರಾಗಿರುವ ಹೆಗಡೆ ಮತ್ತೆ ಸಾರ್ವಜನಿಕ ಬದುಕಿನಿಂದ ಹಿಂದೆ ಸರಿದಿದ್ದಾರೆ. ಪಕ್ಷದ ಕಾರ್ಯಕರ್ತರು, ನಾಯಕರ ಕೈಗೂ ಸಿಗದೆ ಮನೆಯ ಒಳಗೆ ಕೂತಿದ್ದಾರೆ. ಇದು ಕಾಗೇರಿ ಅವರಿಗೆ ಸಂಕಷ್ಟ ತಂದೊಡ್ಡಿದೆ.

ಟಿಕೆಟ್ ಲಭಿಸುತ್ತಿದ್ದಂತೆ ಅನಂತಕುಮಾರ್ ಹೆಗಡೆ ಅವರ ವಿಶ್ವಾಸ ಗಳಿಸುವ ಉತ್ಸಾಹದಲ್ಲಿದ್ದ ಕಾಗೇರಿ ಅವರು, “ಹೆಗಡೆ ಮತ್ತು ನಾನು ಸಹೋದರರಿದ್ದಂತೆ, ಅನಂತ ಕುಮಾರ ಹೆಗಡೆ ಅವರ ಅನುಭವ ಪಡೆದು ಅಣ್ಣ ತಮ್ಮನಂತೆ ಕೆಲಸ ಮಾಡಲಿದ್ದೇವೆ” ಎಂದು ಭರವಸೆ ವ್ಯಕ್ತಪಡಿಸಿದ್ದರು. ಆದರೆ, ಕಾಗೇರಿ ಅವರ ಉತ್ಸಾಹಕ್ಕೆ ಹೆಗಡೆಯವರ ಮೌನ ಬಲವಾದ ಏಟು ನೀಡಿದೆ.

ತಮ್ಮ ಭೇಟಿಗೆ ಶ್ರಮಿಸಿದ್ದ ಕಾಗೇರಿ ಬೆಂಬಲಿಗರಿಗೆ ʼನಾಳೆ-ನಾಡಿದ್ದು ನೋಡೋಣʼ ಎಂದಿದ್ದ ಅನಂತ್ ಕುಮಾರ್, ಇದೀಗ, ಯಾರ ಕೈಗೂ ಸಿಕ್ಕದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಹೆಗಡೆ ಮನವೊಲಿಕೆಗೆ ಸಂಸದರ ಮನೆ ಬಾಗಿಲವರೆಗೂ ಸ್ವತಃ ಕಾಗೇರಿ ಅವರೇ ಹೋದರೂ ಬರಿಗೈಲಿ ಮರಳಿ ಬಂದಿದ್ದಾರೆ ಎಂದು ಸ್ಥಳೀಯ ಬಿಜೆಪಿ ಮೂಲಗಳು ಹೇಳಿವೆ. ಹೆಗಡೆ ಅವರು ಸೌಜನ್ಯಕ್ಕೂ ಕಾಗೇರಿ ಅವರನ್ನು ಮನೆ ಒಳಗೆ ಕರೆದುಕೊಂಡಿಲ್ಲ, ಗೇಟಿನ ಹೊರಗಿನಿಂದಲೇ ಕಳುಹಿಸಿದ್ದಾರೆ ಎಂದು ಕಾಗೇರಿ ಆಪ್ತ ಮೂಲಗಳು ತಿಳಿಸಿವೆ.

ಅನಂತಕುಮಾರ್ ಹೆಗಡೆ ಮನವೊಲಿಸಲು ಅವರ ಮನೆ ಬಳಿ ಹೋಗಿ ಕಾಗೇರಿ ಅರ್ಧ ಗಂಟೆ ಕಾದಿದ್ದಾರೆ. ಆದರೆ, ಮನೆಯ ಸೆಕ್ಯುರಿಟಿ ಗಾರ್ಡ್ ಗೇಟ್ ಕೂಡಾ ತೆರೆದಿಲ್ಲ. ಯಾರನ್ನೂ ಒಳ ಕಳುಹಿಸದಂತೆ ಸೆಕ್ಯುರಿಟಿ ಗಾರ್ಡ್ ಗಳಿಗೆ ಹೆಗಡೆ ಅವರು ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೈ ಕೊಟ್ಟ ಶಿವರಾಂ ಹೆಬ್ಬಾರ್

ಉತ್ತರಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕೇವಲ ಎರಡರಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಇದೀಗ ಅದರಲ್ಲಿ ಓರ್ವ ಶಾಸಕರಾದ ಶಿವರಾಂ ಹೆಬ್ಬಾರ್ ಅವರೂ ಪಕ್ಷದ ಪರವಾಗಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಪಕ್ಷದ ಯಾವೊಂದು ಸಭೆಗೂ ಶಿವರಾಂ ಹೆಬ್ಬಾರ್ ಅವರು ಹಾಜರಾಗದೆ ಅಂತರ ಕಾಯ್ದುಕೊಂಡಿದ್ದಾರೆ.

ತಮ್ಮ ಕ್ಷೇತ್ರವಾದ ಯಲ್ಲಾಪುರದಲ್ಲೇ ಬಿಜೆಪಿ ಅಭ್ಯರ್ಥಿ ಪರ ಸಭೆ ನಡೆದರೂ ಶಿವರಾಂ ಹೆಬ್ಬಾರ್ ಗೈರಾಗಿರುವುದು ಕಾಗೇರಿ ಅವರ ತಲೆನೋವಿಗೆ ಕಾರಣವಾಗಿದೆ.

ಇತ್ತೀಚೆಗಷ್ಟೇ ನಡೆದ ರಾಜ್ಯಸಭಾ ಚುನಾವಣೆಯಿಂದ ದೂರ ಉಳಿದಿದ್ದ ಹೆಬ್ಬಾರ್, ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಸಹಾಯ ಮಾಡಿದ್ದರು. ಅನಾರೋಗ್ಯದ ಕಾರಣಕ್ಕೆ ಗೈರಾಗಿದ್ದೆ ಎಂದು ಬಿಜೆಪಿ ಹೈಕಮಾಂಡ್ ಗೆ ತಿಳಿಸಿದ್ದರು. ಬಿಜೆಪಿ ಅವರಿಗೆ ಶೋಕಾಸ್ ನೋಟಿಸ್ ಕೂಡಾ ಜಾರಿ ಮಾಡಿತ್ತು. ಅದಾದ ಬಳಿಕ, ಹೆಬ್ಬಾರ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಹೋಗುವ ಬಗ್ಗೆ ನಿರಾಸಕ್ತಿ ತೋರಿರುವ ಹೆಬ್ಬಾರ್, ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗಬೇಕೇ ಬೇಡವೇ ಎನ್ನುವ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತಳೆದಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ ಪಕ್ಷದ ಪರ ಪ್ರಚಾರದಿಂದ ದೂರ ಉಳಿಯುವುದಾಗಿ ಪರೋಕ್ಷ ಸುಳಿವು ನೀಡಿದ್ದಾರೆ.

ಉತ್ತರ ಕನ್ನಡ; ಕಾಂಗ್ರೆಸ್-ಬಿಜೆಪಿ ಬಲಾಬಲ

ಉತ್ತರಕನ್ನಡ ಕ್ಷೇತ್ರದಲ್ಲಿ ಸಂಸದ ಅನಂತಕುಮಾರ್ ಹೆಗಡೆ ಅವರು ಆರು ಬಾರಿ ನಿರಂತರ ಸಂಸದರಾಗಿದ್ದು, ಬಿಜೆಪಿ ಭದ್ರಕೋಟೆ ಎಂದು ಗುರುತಿಸಿಕೊಂಡಿತ್ತು. ಅದಾಗ್ಯೂ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದ್ದವು. ಎರಡು ಮಾತ್ರ ಬಿಜೆಪಿ ಪಾಲಾಗಿದ್ದರೂ, ಅದರಲ್ಲಿ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಅವರು ಪಕ್ಷದಿಂದ ದೂರ ಉಳಿದಿದ್ದಾರೆ. ಕುಮಟಾ ಶಾಸಕ ದಿನಕರ್ ಶೆಟ್ಟಿ ಅವರು ಕಡಿಮೆ ಅಂತರದಿಂದ ಜಯಿಸಿದ್ದರು. ಹಾಗಾಗಿ, ಉತ್ತರ ಕನ್ನಡದಲ್ಲಿ ಈ ಬಾರಿ ಬಿಜೆಪಿಯ ಬಲ ಗಣನೀಯ ಕುಸಿದಿದೆ ಎಂದು ಅಂದಾಜಿಸಲಾಗಿದೆ.

ಇನ್ನೊಂದೆಡೆ ಅನಂತಕುಮಾರ್ ಅವರ ಪರಮಾಪ್ತರೂ, ಪ್ರಖರ ಹಿಂದುತ್ವವಾದಿಯೂ ಆಗಿರುವ ಕೃಷ್ಣ ಎಸಳೆ ಅವರು ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆಯೂ ಇದೆಯೆಂಬ ಮಾತುಗಳು ಕೇಳಿ ಬರುತ್ತಿದೆ. ಒಂದು ವೇಳೆ ಎಸಳೆ ಕಣಕ್ಕಿಳಿದರೆ, ಅನಂತಕುಮಾರ ಅವರ ಪ್ರಖರ ಹಿಂದುತ್ವವಾದದ ಅಭಿಮಾನಿಗಳು ಕಾಗೇರಿ ಬದಲಾಗಿ ಎಸಳೆಗೆ ಬೆಂಬಲಿಸುವ ಸಾಧ್ಯತೆಗಳು ದಟ್ಟವಾಗಿದೆ. 

ಬಿಜೆಪಿಯ ಈ ಆಂತರಿಕ ಕಚ್ಚಾಟವೇ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ವರದಾನವಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ತನ್ನದೇ ಅಭ್ಯರ್ಥಿಗಳಿರುವುದೂ ಕಾಂಗ್ರೆಸ್‌ಗೆ ಮತ್ತೊಂದು ಅನುಕೂಲ. ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರ ವರ್ಚಸ್ಸೂ ಪಕ್ಷಕ್ಕೆ ವರವಾಗಲಿದೆ ಎಂದು ಅಂದಾಜಿಸಲಾಗಿದೆ.

Tags:    

Similar News