ಯದುವೀರ್ ಎದುರಿಸಲು ಮಾಜಿ ಸಿಎಂ ಕಣಕ್ಕೆ? ಕುತೂಹಲಕ್ಕೆ ಕಾರಣವಾದ ಡಿವಿಎಸ್ ಹೇಳಿಕೆ
ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾಗಿರುವ ಡಿ ವಿ ಸದಾನಂದ ಗೌಡರಿಗೆ ಟಿಕೆಟ್ ತಪ್ಪಿಸಿ ಆ ಕ್ಷೇತ್ರದಿಂದ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಲಾಗಿದೆ.;
ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಅವರು ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಇದೀಗ, ಅವರ ಸಾಲಿಗೆ ಬಿಜೆಪಿಯ ಮತ್ತೋರ್ವ ಹಿರಿಯ ನಾಯಕ ಸೇರುವ ಸಾಧ್ಯತೆ ಕಂಡು ಬರುತ್ತಿದೆ.
ಮಾಜಿ ಸಿಎಂ ಡಿವಿ ಸದಾನಂದ ಗೌಡ ಅವರು ಬಿಜೆಪಿಗೆ ಗುಡ್ ಬೈ ಹೇಳಿ, ಕಾಂಗ್ರೆಸ್ ಕೈ ಹಿಡಿಯುವ ಸಾಧ್ಯತೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾಗಿರುವ ಡಿ ವಿ ಸದಾನಂದ ಗೌಡರಿಗೆ ಈ ಬಾರಿ ಟಿಕೆಟ್ ತಪ್ಪಿಸಿ ಆ ಕ್ಷೇತ್ರದಿಂದ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಲಾಗಿದೆ.
ಪಕ್ಷದ ಈ ನಡೆಯಿಂದ ಡಿ ವಿ ಸದಾನಂದ ಗೌಡರು ಬೇಸತ್ತಿದ್ದು, ಪಕ್ಷೇತರರಾಗಿ ಸ್ಪರ್ಧಿಸುವ ಅಥವಾ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆಯೆಂದು ಹೇಳಲಾಗಿದೆ. ಈಗಾಗಲೇ, ಕಾಂಗ್ರೆಸ್ ಡಿವಿಎಸ್ ಅವರನ್ನು ಸಂಪರ್ಕಿಸಿದೆ ಎನ್ನಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಸ್ವತಃ ಡಿವಿಎಸ್ ಅವರು ಮಹತ್ವದ ಮಾಹಿತಿ ಬಿಟ್ಟು ಕೊಟ್ಟಿದ್ದು, ಸೋಮವಾರ (ಮಾ.18) ಮಾಧ್ಯಮದವರೊಂದಿಗೆ ಮಾತನಾಡಿದ ಡಿವಿಎಸ್ ಈ ಬಗ್ಗೆ ನಾಳೆ ಸ್ಪಷ್ಟ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ʼನನ್ನನ್ನು ಬೇರೆ ಬೇರೆಯವರು ಬಂದು ಸಂಪರ್ಕಿಸುತ್ತಿರುವುದು ನಿಜ. ನಿನ್ನೆ ನಮ್ಮ ಪಕ್ಷದ ನಾಯಕರೊಬ್ಬರು ಬಂದು ಸಮಾಧಾನ ಮಾಡಿ ಹೋಗಿದ್ದಾರೆ. ಇವತ್ತು ನನ್ನ ಜನ್ಮದಿನ. ಇಡೀ ದಿನ ಕುಟುಂಬದ ಸದಸ್ಯರ ಜತೆ ಕಳೆಯುತ್ತೇನೆ, ಅವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ನಾಳೆ ತಿಳಿಸುವೆʼ ಎಂದು ಡಿವಿಎಸ್ ಹೇಳಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಹಾಗೂ ಲಕ್ಷ್ಮಣ ಸವದಿ ಅವರನ್ನು ಮನವೊಲಿಸಿ ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಬಂದು ಲಿಂಗಾಯತ ಮತ ಬ್ಯಾಂಕ್ ಒಡೆಯಲು ಯಶಸ್ವಿಯಾಗಿದ್ದ ಕಾಂಗ್ರೆಸ್, ಈ ಬಾರಿ ಒಕ್ಕಲಿಗ ನಾಯಕರ ಮೂಲಕ ಅದೇ ಪ್ರಯತ್ನಕ್ಕೆ ಕೈ ಹಾಕಲಿದೆ ಎನ್ನಲಾಗಿದೆ. ಈಗಾಗಲೇ ಡಿವಿ ಸದಾನಂದ ಗೌಡ ಅವರನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಸಂಪರ್ಕಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಡಿವಿ ಸದಾನಂದ ಗೌಡರನ್ನು ಮೈಸೂರು ಭಾಗದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ಹೇಳಿಕೊಂಡಿವೆ.
ಮೈಸೂರು ಬಿಜೆಪಿಯಲ್ಲಿ ಈಗಾಗಲೇ ತಲೆದೋರಿರುವ ರಾಜಕೀಯ ಗೊಂದಲವನ್ನು ಸಮರ್ಥವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನ ಪಡುತ್ತಿದೆ. ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ವಿರುದ್ಧ ಕಾಂಗ್ರೆಸ್‌ಲ್ಲಿ ಸೂಕ್ತ ಅಭ್ಯರ್ಥಿ ಇಲ್ಲ. ಅಲ್ಲದೆ, ಒಕ್ಕಲಿಗ ಮತಗಳು ಕೂಡಾ ಈ ಕ್ಷೇತ್ರದಲ್ಲಿ ಹೆಚ್ಚಿದೆ. ಹಾಗಾಗಿ, ಮಾಜಿ ಸಿಎಂ ಆಗಿರುವ ಅಭ್ಯರ್ಥಿಯನ್ನೇ ಮೈಸೂರಿನಲ್ಲಿ ಕಣಕ್ಕಿಳಿಸುವ ಲೆಕ್ಕಾಚಾರದಲ್ಲೂ ಕಾಂಗ್ರೆಸ್ ಇದೆ ಎನ್ನಲಾಗಿದೆ.