ಸರ್ಕಾರ ಬೀಳಿಸಲು ಬಿಜೆಪಿ ಪ್ಲ್ಯಾನ್: ಶಾಸಕರಿಗೆ 50 ಕೋಟಿ ರೂ. ಆಮಿಷ- ಡಿಕೆಶಿ ಗಂಭೀರ ಆರೋಪ

Update: 2024-03-11 06:45 GMT

ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಮೂಲಕ ಶಾಸಕರಿಗೆ ತಲಾ 50ಕೋಟಿ ರೂ. ನೀಡುವುದಾಗಿ ಆಮಿಷ ಒಡ್ಡಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿಯಾಗಿರುವ ಡಿಕೆ ಶಿವಕುಮಾರ್ ಅವರು ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆದ ಉಪ ಚುನಾವಣೆಯಲ್ಲಿ ಪುಟ್ಟಣ್ಣ ಆಯ್ಕೆಯಾದ ಹಿನ್ನೆಲೆಯಲ್ಲಿ ಕೆಂಗೇರಿಯ ಸೂಲಿಕೇರಿ ಮೈದಾನದಲ್ಲಿ ಭಾನುವಾರ ನಡೆದ ಶಿಕ್ಷಕರ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ʼʼಮೈತ್ರಿ ಸರ್ಕಾರವನ್ನು ಕೆಡವಿದ ಬಿಜೆಪಿಯವರು ಕಾಂಗ್ರೆಸ್‌ ಸರ್ಕಾರವನ್ನೂ ಬೀಳಿಸಲು ಪ್ರಯತ್ನಿಸಿದ್ದರು. ಆದರೆ, ಪ್ರಯೋಜನವಾಗಲಿಲ್ಲ. ಇತ್ತೀಚಿನ ರಾಜ್ಯಸಭಾ ಚುನಾವಣೆ ವೇಳೆಯೂ ಶಾಮನೂರು ಶಿವಶಂಕರಪ್ಪ ಅವರಿಗೂ ಕರೆ ಮಾಡಿ ಹಣದ ಆಮಿಷವೊಡ್ಡಿದ್ದರಂತೆ" ಎಂದು ಆರೋಪಿಸಿದ್ದಾರೆ.

ʼʼಇತ್ತೀಚೆಗೆ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಿತು. ಈ ಸಂದರ್ಭದಲ್ಲಿ ನಮ್ಮ ಶಾಸಕರಿಗೆ ತಲಾ 50 ಕೋಟಿ ರೂ. ಕೊಟ್ಟು ಸರ್ಕಾರ ಬೀಳಿಸಲು ಬಿಜೆಪಿಯವರು ಪ್ಲ್ಯಾನ್ ಮಾಡಿದ್ದರು. ಈ ವಿಚಾರವಾಗಿ ಅವರು ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರನ್ನೂ ಸಂಪರ್ಕಿಸಿದ್ದರು. ಆದರೆ, ಇದ್ಯಾವುದೂ ಸಾಧ್ಯವಾಗಲಿಲ್ಲʼʼ ಎಂದು ಹೇಳಿದರು.

ʼʼಇಂತಹ ನೀತಿಗೆಟ್ಟ ರಾಜಕಾರಣ ಕಂಡು ಅಸಹ್ಯವಾಗುತ್ತದೆ. ಜನ ಯಾರನ್ನು ನಂಬಬೇಕು ಎಂಬುದು ತಿಳಿಯುತ್ತಿಲ್ಲ. ನಿಮ್ಮ ಪಕ್ಷದ ನಾಯಕರು ಸರ್ಕಾರ ಬೀಳಿಸುವ ವಿಚಾರದಲ್ಲಿ ತಿರುಕನ ಕನಸು ಕಾಣುತ್ತಿದ್ದಾರೆ' ಎಂದು ಯಡಿಯೂರಪ್ಪ ಅವರಿಗೆ ತಿಳಿಸಲು ಬಯಸುತ್ತೇನೆ. ನಾವು ಜನಾಶೀರ್ವಾದದಿಂದ 135 ಕ್ಷೇತ್ರಗಳನ್ನು ಗೆದ್ದಿದ್ದೇವೆ. ಅಲ್ಲದೆ, ಮೂವರು ಪಕ್ಷೇತರರ ಬೆಂಬಲದಿಂದ ಬಹಳ ಬಲಿಷ್ಠವಾಗಿದ್ದೇವೆ. ಹೀಗಾಗಿ ನಮ್ಮ ಸರ್ಕಾರವನ್ನು ಬೀಳಿಸಲು ಆಗುವುದಿಲ್ಲʼʼ ಎಂದರು.

"ಈ ಹಿಂದೆ ಕೋಮುವಾದಿ ಪಕ್ಷ ಬಿಜೆಪಿ ಸಮಾಜವನ್ನು ಒಡೆಯುತ್ತದೆ ಎಂಬ ಕಾರಣಕ್ಕೆ ಅವರನ್ನು ಅಧಿಕಾರದಿಂದ ದೂರವಿಡಲು ನಾವು ಮತ್ತು ಸಿದ್ದರಾಮಯ್ಯ ಅವರು ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೇಷರತ್ತಾಗಿ ಮುಖ್ಯಮಂತ್ರಿ ಮಾಡಿದೆವು. ಈ ಮೈತ್ರಿ ಸರ್ಕಾರವನ್ನು ಕೆಡವಿದ ಯಡಿಯೂರಪ್ಪ, ಯೋಗೇಶ್ವರ್, ಮುನಿರತ್ನ ಅವರನ್ನೇ ಇವತ್ತು ಕುಮಾರಸ್ವಾಮಿ ಅಪ್ಪಿಕೊಂಡು ಅವರ ವಕ್ತಾರರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

Tags:    

Similar News