ಬಿಜೆಪಿಗೆ ಬಿಗ್ ಶಾಕ್ | ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್ ಸೇರ್ಪಡೆ
ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ರಾಜ್ಯ ಬಿಜೆಪಿಗೆ ಮತ್ತೊಂದು ಆಘಾತ ಎದುರಾಗಿದೆ. ಈ ಬಾರಿ ಟಿಕೆಟ್ ಸಿಗದೇ ಪಕ್ಷದ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದ ಕೊಪ್ಪಳ ಸಂಸದ ಕರಡಿ ಸಂಗಣ್ಣ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಬುಧವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಬಿಜೆಪಿ ಸಂಸದ ಕರಡಿ ಸಂಗಣ್ಣ, ದಾಸರಹಳ್ಳಿ ಕೃಷ್ಣಮೂರ್ತಿ, ನಿವೃತ್ತ ಐಎಎಸ್ ಅಧಿಕಾರಿ ಎ ಎಸ್ ಪುಟ್ಟಸ್ವಾಮಿ, ಪತ್ರಕರ್ತೆ ಸ್ವಾತಿ ಚಂದ್ರಶೇಖರ್ ಮತ್ತಿತರರು ಸಂಗಣ್ಣ ಅವರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ವೇಳೆ ಸಚಿವ ಶಿವರಾಜ್ ತಂಗಡಗಿ, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಮತ್ತಿತರರು ಉಪಸ್ಥಿತರಿದ್ದರು.
ಮಂಗಳವಾರ ಸಂಗಣ್ಣ ಅವರು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. 2014 ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸಂಗಣ್ಣ, ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸಿದ್ದರು.
ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಸಂಗಣ್ಣ ಕರಡಿ ಅವರು ಮಂಗಳವಾರ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಸಂಸದ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಇ-ಮೇಲ್ ಮೂಲಕ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿದ್ದಾರೆ.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದರಿಗೆ ಟಿಕೆಟ್ ಕೊಡದೇ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಡಾ.ಬಸವರಾಜ್ ಕ್ಯಾವಟರ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಇದರಿಂದ ಕರಡಿ ಸಂಗಣ್ಣ ಪಕ್ಷದ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದರು.
ಕೊಪ್ಪಳ ಕ್ಷೇತ್ರದ ಲೋಕಸಭಾ ಅಭ್ಯರ್ಥಿಯನ್ನು ಪುನಃ ಬದಲಾಯಿಸಿ ತಮಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದರು. ಆದರೆ ರಾಜ್ಯ ಬಿಜೆಪಿ ನಾಯಕರು ಟಿಕೆಟ್ ಬದಲಿಸಿದೇ ಕರಡಿ ಸಂಗಣ್ಣ ಅವರ ಮನವೊಲಿಸಲು ಯತ್ನಿಸಿದ್ದರು. ಇದರಿಂದಾಗಿ ಬೇಸರಗೊಂಡಿದ್ದ ಕರಡಿ ಸಂಗಣ್ಣ ಬಿಜೆಪಿ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.
ರಾಜಕೀಯ ಹಿನ್ನಲೆ:
ಸಂಗಣ್ಣ ಕರಡಿ ಅವರು ಮೊದಲು ಕೊಪ್ಪಳ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸುವ ಮೂಲಕ ತಮ್ಮ ರಾಜಕೀಯ ವೃತ್ತಿ ಜೀವನ ಆರಂಭಿಸಿದರು. 2008 ರಲ್ಲಿ ಜೆಡಿಎಸ್ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಆನಂತರ 2011ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದರು.
2013 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಂಗಣ್ಣ ಕರಡಿ ಸೋಲು ಕಾಣುತ್ತಾರೆ. ಆ ಬಳಿಕ ಅವರಿಗೆ 2014 ರಲ್ಲಿ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿತು. ಮೋದಿ ಅವರ ಜನಪ್ರಿಯತೆಯಲ್ಲಿ ಅನಾಯಾಸವಾಗಿ ಗೆದ್ದು, ಸಂಸತ್ತಿಗೆ ಪ್ರವೇಶಿಸಿದರು.
ಮುಂದೆ 2019 ರಲ್ಲಿ ಮತ್ತೆ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಸಂಗಣ್ಣ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ ವಿರುದ್ಧ 38 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಮತ್ತೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಮೂಲಕ ಹ್ಯಾಟ್ರಿಕ್ ಬಾರಿಸುವ ಆಸೆಯಲ್ಲಿದ್ದ ಕರಡಿ ಅವರಿಗೆ ಬಿಜೆಪಿ ಟಿಕೆಟ್ ನೀಡಲಿಲ್ಲ. ಟಿಕೆಟ್ ಕೈತಪ್ಪಿದ್ದರಿಂದ ಬಿಜೆಪಿ ಮೇಲೆ ಮುನಿಸಿಕೊಂಡಿದ್ದ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಇದೀಗ ಕಾಂಗ್ರೆಸ್ ಸೇರ್ಪಡೆಯಾಗಿ ತಮ್ಮ ಹೊಸ ರಾಜಕೀಯ ಅಧ್ಯಾಯ ಬರೆಯಲು ಹೊರಟಿದ್ದಾರೆ.