ದ್ವೇಷದ ರಾಜಕಾರಣದಲ್ಲಿ ಉಸಿರಾಡುವ ಬಿಜೆಪಿ ನಾಯಕರು- ಸಚಿವ ಮಹದೇವಪ್ಪ ವಾಗ್ದಾಳಿ
ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಬಾನು ಮುಷ್ತಾಕ್ ಆಯ್ಕೆ ವಿರೋಧಿಸಲು ಲೋಕಸಭೆ ಚುನಾವಣೆಯ ಟಿಕೆಟ್ ತಪ್ಪಿದ ಬಳಿಕ ಅವರಿಗೆ ಆಗಿರುವ ಅಸಮಾಧಾನ, ನಿರಾಶೆಯೇ ದ್ವೇಷದ ಮೂಲವಾಗಿದೆ ಎಂದು ಸಚಿವ ಮಹದೇವಪ್ಪ ಕಿಡಿಕಾರಿದ್ದಾರೆ.;
ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮಷ್ತಾಕ್ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ವಾಗ್ದಾಳಿಗೆ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ತೀಕ್ಷ್ಣ ತಿರುಗೇಟು ನೀಡಿದ್ದಾರೆ.
“ನಾಡು, ನುಡಿ, ಸಂಸ್ಕೃತಿ, ಸಾಹಿತ್ಯದ ಗಂಧವೂ ಇಲ್ಲದೇ, ದ್ವೇಷದ ರಾಜಕಾರಣದಲ್ಲಿ ಮಾತ್ರ ಉಸಿರಾಡುತ್ತಿರುವ ಬಿಜೆಪಿ ನಾಯಕರು, ಒಬ್ಬ ಮಹಿಳೆಯನ್ನು ಗುರಿಯಾಗಿಸಿಕೊಂಡು ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾನು ಮುಷ್ತಾಕ್ ಅವರು ಸಾಮಾಜಿಕ ಅನ್ಯಾಯ ಮತ್ತು ಧಾರ್ಮಿಕ ಸಂಕೋಲೆಗಳ ವಿರುದ್ಧ ಧೈರ್ಯವಾಗಿ ಮಾತಾಡಿದವರು. ರೈತರು ಹಾಗೂ ಮಹಿಳೆಯರ ಪರವಾಗಿ ದಶಕಗಳಿಂದ ಸಾಹಿತ್ಯ ಸೇವೆ ಸಲ್ಲಿಸಿದವರು. ಅವರ ಕ್ರಿಯಾಶೀಲ ಸಾಹಿತ್ಯಕ್ಕೆ ಬೂಕರ್ ಪ್ರಶಸ್ತಿ ಸಂದಿದೆ.ಅಂತಹ ಮಹಾನ್ ಲೇಖಕಿಯನ್ನು ದಸರಾ ಉದ್ಘಾಟನೆಗೆ ಆಯ್ಕೆಮಾಡಿರುವುದು ರಾಜ್ಯದ ಹೆಮ್ಮೆ. ಇದನ್ನು ಪ್ರಶ್ನಿಸುವುದು ಸರಿಯಲ್ಲ,” ಎಂದು ತಿರುಗೇಟು ನೀಡಿದ್ದಾರೆ.
ಮಾಜಿ ಸಂಸದ ಪ್ರತಾಪ ಸಿಂಹ ಅವರು ಬಾನು ಅವರ ಆಯ್ಕೆ ಪ್ರಶ್ನಿಸಿ ನ್ಯಾಯಾಲಯದಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಮಾತನಾಡಿದ ಅವರು, “ಇದು ಸಾರ್ವಜನಿಕ ಹಿತಾಸಕ್ತಿಗಿಂತ ದ್ವೇಷದ ಹಿತಾಸಕ್ತಿಗೆ ನಿದರ್ಶನವಾಗಿದೆ. ಲೋಕಸಭೆ ಚುನಾವಣೆಯ ಟಿಕೆಟ್ ತಪ್ಪಿದ ಬಳಿಕ ಅವರಿಗೆ ಆಗಿರುವ ಅಸಮಾಧಾನ, ನಿರಾಶೆ, ದ್ವೇಷವೇ ಇದರ ಮೂಲ,” ಎಂದು ಟೀಕಿಸಿದ್ದಾರೆ.
“ಸಾಹಿತ್ಯ ಸೇವೆ ಮಾಡಿದವರನ್ನು ಜಾತಿ, ಧರ್ಮದ ಕಣ್ಣಿನಿಂದ ಅಳೆಯುವುದು ಮನುವಾದದ ಲಕ್ಷಣ. ಆದರೆ, ಈ ನೆಲದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ಅವರ ವಿಚಾರ ಬಲವಾಗಿ ಬೇರೂರಿದೆ. ದಸರಾ ಎಲ್ಲರ ಹಬ್ಬ. ಅದು ಬಿಜೆಪಿ ಅಥವಾ ಆರ್‌ಎಸ್‌ಎಸ್ ಕಚೇರಿಗಳ ಕಾರ್ಯಕ್ರಮವಲ್ಲ. ಬಿಜೆಪಿಗರು ಇದನ್ನು ಬೇಗ ಅರ್ಥಮಾಡಿಕೊಳ್ಳಲಿ,” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.