ಮುಡಾ ಹಗರಣ| ಸಿದ್ದರಾಮಯ್ಯ ರಾಜೀನಾಮೆ ಒತ್ತಾಯಿಸಿ ಆ.3ರಿಂದ ಮೈಸೂರಿಗೆ ಬಿಜೆಪಿ-ಜೆಡಿಎಸ್‌ ಪಾದಯಾತ್ರೆ

ಬೆಂಗಳೂರಿನಲ್ಲಿ ಭಾನುವಾರ ಬಿಜೆಪಿ- ಜೆಡಿಎಸ್ ಪಕ್ಷಗಳ ಮುಖಂಡರ ಸಭೆಯಲ್ಲಿ ಈ ಕುರಿತು ಚರ್ಚಿಸಿ ನಿರ್ಧರಿಸಲಾಗಿದೆ. ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ.

Update: 2024-07-28 15:38 GMT

ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ, ದಲಿತರ ಹಣವನ್ನು ಬೇರೆ ಉದ್ದೇಶಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಖಂಡಿಸಿ ಆಗಸ್ಟ್ 3ರಿಂದ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ- ಜೆಡಿಎಸ್ ಪಕ್ಷಗಳ ಪಾದಯಾತ್ರೆ ನಡೆಸಲಾಗುವುದು ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಕಟಿಸಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ  ಬಿಜೆಪಿ- ಜೆಡಿಎಸ್ ಪಕ್ಷಗಳ ಮುಖಂಡರ ಸಭೆಯಲ್ಲಿ ಈ ಕುರಿತು ಚರ್ಚಿಸಿ ನಿರ್ಧರಿಸಲಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆಯಲ್ಲಿ ತೆರಳಲು 7 ದಿನ ಬೇಕಾಗಲಿದೆ. ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಆ.10ರಂದು ಶನಿವಾರ ಸಮಾರೋಪ ನಡೆಯಲಿದೆ; ಅವತ್ತು ನಮ್ಮ ಕೇಂದ್ರದ ನಾಯಕರೂ ಬರಲಿದ್ದಾರೆ ಎಂದು ತಿಳಿಸಿದರು.

ಇಂದಿನ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಜೆಡಿಎಸ್ ಮುಖಂಡ ಮತ್ತು ಕೇಂದ್ರದ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಎರಡೂ ಪಕ್ಷಗಳ ಮುಖಂಡರು ಭಾಗವಹಿಸಿ ಹಗರಣಗಳ ಕುರಿತು ಚರ್ಚಿಸಲಾಗಿದೆ. ಬಳಿಕ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾಗಿ ವಿವರ ನೀಡಿದ ಅವರು, ವಾಲ್ಮೀಕಿ ನಿಗಮದ ಹಗರಣದಲ್ಲಿ 187 ಕೋಟಿ ದುರ್ಬಳಕೆ ಆಗಿದೆ. ಮೂಡದಲ್ಲಿ ಸಾವಿರಾರು ಕೋಟಿ ರೂಪಾಯಿಯ ಹಗರಣ ನಡೆದಿದೆ ಎಂದು ತಿಳಿಸಿದರು.

ಭ್ರಷ್ಟ ಸರಕಾರ ಕಿತ್ತೊಗೆಯೋಣ- ಬಿಎಸ್‍ವೈ

ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಭ್ರಷ್ಟ ಸರಕಾರ ಕಿತ್ತೊಗೆಯುವ ಹೋರಾಟದಲ್ಲಿ ಜನರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಎರಡೂ ಪಕ್ಷಗಳು ಸೇರಿ ಹೋರಾಟ ನಡೆಸಲಿದ್ದು, ಹತ್ತಾರು ಸಾವಿರ ಜನರು ಸೇರಿ ಹೋರಾಟ ನಡೆಯಲಿದೆ ಎಂದು ತಿಳಿಸಿದರು.

ರಾಜ್ಯದ ಮುಖ್ಯಮಂತ್ರಿ ರಾಜೀನಾಮೆ ಕೊಡುವವರೆಗೂ ಹೋರಾಟ ನಿಲ್ಲುವುದಿಲ್ಲ. ಲೋಕಸಭೆ, ರಾಜ್ಯಸಭೆಯಲ್ಲೂ ಇದರ ಕುರಿತು ಚರ್ಚೆ ಆಗಿದೆ. ಮುಖ್ಯಮಂತ್ರಿಗಳಿಗೆ ಕಿಂಚಿತ್ತು ಗೌರವ ಇದ್ದರೆ, ಮಾಡಿರುವ ಅಪರಾಧವನ್ನು ಒಪ್ಪಿಕೊಂಡು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಇದು ಶೇ 100ರಷ್ಟು ಭ್ರಷ್ಟ ಸರಕಾರ- ಪ್ರಲ್ಹಾದ್ ಜೋಶಿ

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಾತನಾಡಿ, ರಾಜ್ಯದಲ್ಲಿ ಶೇ 100ರಷ್ಟು ಭ್ರಷ್ಟ ಸರಕಾರ ಆಡಳಿತ ನಡೆಸುತ್ತಿದೆ. ಸಿಎಂ ಸಿದ್ದರಾಮಯ್ಯನವರು ಶೇ 100 ಭ್ರಷ್ಟ ಎಂಬ ಬಿರುದನ್ನು ಪಡೆದವರು. ಹಾಗಾಗಿ, ಜನಜಾಗೃತಿಗೆ ಹೋರಾಟ, ಕಾನೂನು ಹೋರಾಟವನ್ನು ಅತ್ಯಂತ ಗಟ್ಟಿಯಾಗಿ ಮುಂದುವರೆಸುತ್ತೇವೆ ಎಂದು ಹೇಳಿದರು.

Tags:    

Similar News