BJP-JDS Alliance | ಬಿಜೆಪಿ-ಜೆಡಿಎಸ್‌ ಮೈತ್ರಿ ಬಿಕ್ಕಟ್ಟು; ಬಿಜೆಪಿ ನಿಲುವಿಗೆ ದೋಸ್ತಿಯಲ್ಲಿ ಮುನಿಸು

ಹಾಲು, ವಿದ್ಯುತ್ ಸೇರಿದಂತೆ ದರ ಹೆಚ್ಚಳದ ವಿರುದ್ಧ ಏಕಾಂಗಿ ಹೋರಾಟ ನಡೆಸುತ್ತಿರುವ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಮೈತ್ರಿ ಪಕ್ಷ ಜೆಡಿಎಸ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದೆ. ಇದು ಮೈತ್ರಿಯಲ್ಲಿ ಬಿಕ್ಕಟ್ಟು ಸೃಷ್ಟಿಸಿದೆ.;

Update: 2025-04-03 13:53 GMT

ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿಯಲ್ಲಿ ಮತ್ತೆ ಬಿಕ್ಕಟ್ಟು ಕಾಣಿಸಿಕೊಂಡಿದೆ. ಹಾಲು, ವಿದ್ಯುತ್ ಸೇರಿದಂತೆ ದರ ಹೆಚ್ಚಳದ ವಿರುದ್ಧ ಏಕಾಂಗಿ ಹೋರಾಟ ನಡೆಸುತ್ತಿರುವ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಮೈತ್ರಿ ಪಕ್ಷ ಜೆಡಿಎಸ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದೆ.

ಸಿಎಂ ವಿರುದ್ದದ ಮುಡಾ ಪಾದಯಾತ್ರೆ, ಅಧಿವೇಶನದಲ್ಲಿ ಶಾಸಕರ ಅಮಾನತು, ದರ ಏರಿಕೆ ವಿರೋಧಿಸಿ ಅಹೋರಾತ್ರಿ ಧರಣಿ ವಿಚಾರದಲ್ಲಿ ಬಿಜೆಪಿಯ ನಿಲುವು ಜೆಡಿಎಸ್ ಪಾಳಯದ ಸಿಟ್ಟಿಗೆ ಕಾರಣವಾಗಿದೆ.  

ಎನ್‌ಡಿಎ ಮೈತ್ರಿಕೂಟ ಪಾಲುದಾರ ಪಕ್ಷವಾಗಿದ್ದರೂ ರಾಜ್ಯ ಸರ್ಕಾರದ ಜಂಟಿ ಹೋರಾಟಕ್ಕೆ ತಮ್ಮನ್ನು ಪರಿಗಣಿಸದ ಬಿಜೆಪಿ ನಾಯಕರಿಗೆ  ತಾವು “ರಾಷ್ಟ್ರೀಯ ಪಕ್ಷ” ಎಂಬ ಅಹಂ ಕಾಡುತ್ತಿದೆ. ಸ್ಥಳೀಯ ಪಕ್ಷವನ್ನು ಯಾಕೆ ಕೇಳಬೇಕು ಎಂಬ ಮನೋಭಾವ ಬಂದಿದೆ ಎಂಬ ಆರೋಪ ಜೆಡಿಎಸ್‌ ವಲಯದಿಂದ ಕೇಳಿಬಂದಿದೆ. ಈ ರೀತಿಯ ನಡೆ ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಲಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ಅವರು ನೇರ ವಾಗ್ದಾಳಿ ನಡೆಸಿರುವುದು ಮೈತ್ರಿಯಲ್ಲಿ ಬಿಕ್ಕಟ್ಟು ಸೃಷ್ಟಿಸುವ ಮುನ್ಸೂಚನೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕಿಡಿ ಹೊತ್ತಿಸಿದ ಬಿಜೆಪಿಗರ ಮಾತು 

ಅಹೋರಾತ್ರಿ ಧರಣಿ, ಶಾಸಕರ ಅಮಾನತು ಖಂಡಿಸಿ ನಡೆಸಲಾದ ಪ್ರತಿಭಟನೆಗೆ ಜೆಡಿಎಸ್ ನಾಯಕರನ್ನು ಆಹ್ವಾನಿಸದ ಕುರಿತು ಪ್ರತಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೀಡಿರುವ ಹೇಳಿಕೆಗಳು ಒಡಕಿಗೆ ಪುಷ್ಠಿ ನೀಡುವಂತಿವೆ ಎಂದು ಹೇಳಲಾಗಿದೆ.

ವಿಧಾನಸಭೆ ಅಧಿವೇಶನ ಹಾಗೂ ಚುನಾವಣೆಗೆ ಮಾತ್ರ ನಮ್ಮ ಮೈತ್ರಿ. ಸರ್ಕಾರದ ವಿರುದ್ಧ ಹೋರಾಟ ಮಾಡುವುದು ಪಕ್ಷದ ಆಂತರಿಕ ವಿಚಾರ. ಮೈತ್ರಿ ಸಂದರ್ಭದಲ್ಲೂ ಇದೇ ಮಾತುಕತೆ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿರುವುದು ಜೆಡಿಎಸ್‌ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. 

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ರಾಜ್ಯ ಸರ್ಕಾರ ಬೆಲೆ ಏರಿಕೆ ವಿರುದ್ಧ ಹೋರಾಡುವುದು ಪ್ರತಿಪಕ್ಷಗಳ ಕರ್ತವ್ಯ. ಗ್ರೇಟರ್ ಬೆಂಗಳೂರು ವಿಚಾರದಲ್ಲೂ ಜೆಡಿಎಸ್‌ ಪ್ರತ್ಯೇಕ ಹೋರಾಟ ಮಾಡಿತ್ತು. ಹಾಗಾಗಿ ನಾವೂ ಕೂಡ ಮಾಡುತ್ತಿದ್ದೇವೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಸರಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಬಿಜೆಪಿಯ ಅಹೋರಾತ್ರಿ ಧರಣಿಗೆ ಆಹ್ವಾನ ನೀಡದ ಬಿಜೆಪಿ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಕೂಡ ಬೇಸರ ಹೊಸಹಾಕಿದ್ದರು. 

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರತ್ಯೇಕ ಹೋರಾಟದ ಮಾತುಗಳನ್ನಾಡಿದ್ದಾರೆ, ಇದು ಒಳ್ಳೆಯದಲ್ಲ. ಎರಡೂ ಪಕ್ಷಗಳ ನಾಯಕರು ಸಮನ್ವಯದಿಂದ ಚರ್ಚಿಸಬೇಕು ಎಂದು ಹೇಳಿದ್ದರು.

ಪ್ರತ್ಯೇಕ ಹೋರಾಟದ ಮಾತು

ಜೆಡಿಎಸ್ ಪಕ್ಷವು ಎನ್‌ಡಿಎ ಮೈತ್ರಿಕೂಟ ಸೇರಿದ ಬಳಿಕ ರಾಜ್ಯದಲ್ಲೂ ಬಿಜೆಪಿ-ಜೆಡಿಎಸ್ ದೋಸ್ತಿ ಏರ್ಪಟ್ಟಿದೆ. ಆದರೆ, ಇತ್ತೀಚಿನ ಬೆಳವಣಿಗೆಗಳು ದೋಸ್ತಿಗಳ ನಡುವೆ ಅಂತರ ಸೃಷ್ಟಿಸುತ್ತಿದೆ ಎಂಬುದಕ್ಕೆ ನಾಯಕರ ಹೇಳಿಕೆ, ಘಟನೆಗಳು ಸಾಕ್ಷಿಯಾಗಿವೆ. 

ವಿಧಾನಸಭೆ ಅಧಿವೇಶನದ ಕೊನೆಯ ದಿನ 18ಮಂದಿ ಬಿಜೆಪಿ ಶಾಸಕರ ಅಮಾನತು ಮಾಡಿದಾಗ ಜೆಡಿಎಸ್‌ ಪಕ್ಷ ಬಿಜೆಪಿ ಬೆಂಬಲಕ್ಕೆ ನಿಂತಿತ್ತು. ಆದರೆ, ಅಮಾನತು ವಿರೋಧಿಸಿ ಸ್ಪೀಕರ್‌ ಅವರಿಗೆ ಮನವಿ ನೀಡುವಾಗ, ಪ್ರತಿಭಟನೆ ನಡೆಸುವಾಗ ಜೆಡಿಎಸ್‌ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ನಡೆ ಮೈತ್ರಿಯಲ್ಲಿ ಬಿರುಕು ಮೂಡುವಂತೆ ಮಾಡಿದೆ. 

ಜೆಡಿಎಸ್‌ ನಡೆಸಿದಂತೆ ನಾವೂ ಕೂಡ ಪ್ರತ್ಯೇಕ ಹೋರಾಟ ರೂಪಿಸಿದ್ದೇವೆ ಎಂಬ ಬಿಜೆಪಿ ನಾಯಕರ ವಾದಗಳು ಎರಡೂ ಪಕ್ಷಗಳ ಮಧ್ಯೆ ಸಮನ್ವಯತೆ ಕೊರತೆ ಸೃಷ್ಟಿಸಿದೆ. ಬಿಜೆಪಿ ನಾಯಕರ ನಿಲುವಿನ ಕುರಿತು ಶೀಘ್ರವೇ ಜೆಡಿಎಸ್‌ ವರಿಷ್ಠರಿಗೆ ಮಾಹಿತಿ ನೀಡಲಿದ್ದು, ಬಿಜೆಪಿ ರಾಷ್ಟ್ರೀಯ ನಾಯಕರ ಕಡೆಯಿಂದ ರಾಜ್ಯ ಬಿಜೆಪಿ ನಾಯಕರಿಗೆ ಎಚ್ಚರಿಕೆ ಕೊಡಿಸಲು ಜೆಡಿಎಸ್‌ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. 

ಈ ಕುರಿತು ದ ಫೆಡರಲ್‌ ಕರ್ನಾಟಕ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್‌ ಬಾಬು ಅವರನ್ನು ಸಂಪರ್ಕಿಸಲು ಯತ್ನಿಸಿತು. ಆದರೆ, ಅವರ ಸಂಪರ್ಕಕ್ಕೆ ಸಿಗಲಿಲ್ಲ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ದೋಸ್ತಿಯಲ್ಲಿ ಕಾಣಿಸಿಕೊಂಡಿರುವ ಅಸಮಾಧಾನದ ಕುರಿತು ಇನ್ನೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಗಮನಕ್ಕೆ ತಂದಿಲ್ಲ. ಕೂಡಲೇ ಈ ಕುರಿತು ವರಿಷ್ಠರಿಗೆ ತಿಳಿಸಲಾಗುವುದು ಎಂದು ಮೂಲಗಳು ಖಚಿತಪಡಿಸಿವೆ.

ಮೂಡಾ ಪಾದಯಾತ್ರೆಗೂ ಅಸಮಾಧಾನ

ಸಿಎಂ ಸಿದ್ದರಾಮಯ್ಯ ವಿರುದ್ಧದ ಮೂಡಾ ಹಗರಣಕ್ಕೆ ಸಂಬಂಧಿಸಿ ಬಿಜೆಪಿ ಹಮ್ಮಿಕೊಂಡಿದ್ದ ಮೈಸೂರು ಪಾದಯಾತ್ರೆ ವಿಚಾರದಲ್ಲೂ ಜೆಡಿಎಸ್ ಹಾಗೂ ಬಿಜೆಪಿ ನಡುವೆ ವೈಮನಸ್ಸು ಮೂಡಿತ್ತು. ಜೆಡಿಎಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಪಾದಯಾತ್ರೆ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೇ ಮೈಸೂರು ಪಾದಯಾತ್ರೆ ಮುಂದಾಳತ್ವವನ್ನು ಮುಖಂಡ ಪ್ರೀತಂಗೌಡ ಅವರಿಗೆ ವಹಿಸಿದ್ದಕ್ಕೆ ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದರು.

ಆಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇತರರು ಮನವೊಲಿಸಿದ ಬಳಿಕ ಪಾದಯಾತ್ರೆಗೆ ಬೆಂಬಲ ನೀಡಿದ್ದರು. ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ಸಮನ್ವಯ ಸಮಿತಿ ರಚನೆಗೆ ಉಭಯರ ಪಟ್ಟು

ಎನ್ಡಿಎ ಭಾಗವಾಗಿರುವ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ನಡುವೆ ಸಮನ್ವಯತೆ ಸಾಧಿಸಲು ಸಮಿತಿ ರಚಿಸಬೇಕೆಂಬ ಬೇಡಿಕೆ ಎರಡೂ ಕಡೆಗಳಿಂದ ಕೇಳಿ ಬರುತ್ತಿದೆ. ಸಣ್ಣ ಪುಟ್ಟ ವೈಮನಸ್ಸುಗಳಿಂದ ಮೈತ್ರಿಗೆ ಧಕ್ಕೆಯಾಗುವುದನ್ನು ತಡೆಯಲು ಸಮನ್ವಯ ಸಮಿತಿ ರಚನೆ ಅಗತ್ಯವಾಗಿದೆ ಎನ್ನಲಾಗಿದೆ.

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಒಗ್ಗಟ್ಟಾಗಿ ಹೋರಾಟ ರೂಪಿಸುವ ಸಲುವಾಗಿ ಮೈತ್ರಿಯನ್ನು ಗಟ್ಟಿಗೊಳಿಸಬೇಕು. ರಾಜ್ಯ ನಾಯಕರ ನಡುವಿನ ಭಿನ್ನಾಭಿಪ್ರಾಯ ಮೈತ್ರಿಗೆ ಮುಳ್ಳಾಗಬಾರದು ಎಂಬ ಉದ್ದೇಶದಿಂದ ಸಮನ್ವಯ ಸಮಿತಿ ರಚಿಸುವುದು ಅನಿವಾರ್ಯವಾಗಿದೆ ಎಂದು ಹೇಳಲಾಗಿದೆ. 

Tags:    

Similar News