ವಾಲ್ಮೀಕಿ ನಿಗಮ ಹಗರಣ: ಕಾಂಗ್ರೆಸ್ ಸಂಸದ ಈ ತುಕಾರಾಂ ರಾಜೀನಾಮೆಗೆ ಬಿಜೆಪಿ ಪಟ್ಟು
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಭಾಗಿಯಾದ ನಾಗೇಂದ್ರರನ್ನು ಬಂಧಿಸಿದ ಇ.ಡಿ.ಯು ನ್ಯಾಯಾಂಗದ ಮುಂದೆ ಹಾಜರುಪಡಿಸುವ ರಿಮಾಂಡ್ ಅರ್ಜಿಯಲ್ಲಿ ತುಕಾರಾಂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ; ಪರಿಶಿಷ್ಟ ವರ್ಗದ ಅಭಿವೃದ್ಧಿಗೆ ಮೀಸಲಿದ್ದ ಹಣ ದುರ್ಬಳಕೆ ಆಗಿದೆ. ಚುನಾವಣೆಗೆ ಕೂಡ 20 ಕೋಟಿ 19 ಲಕ್ಷ ರೂಪಾಯಿ ದುರ್ಬಳಕೆ ಆಗಿದೆ ಎಂದು ರಿಮಾಂಡ್ ಅರ್ಜಿಯಲ್ಲಿ ತಿಳಿಸಿದ್ದಾರೆ ಎಂದು ಬಿಜೆಪಿ ಆಪಾದಿಸಿದೆ;
ವಾಲ್ಮೀಕಿ ನಿಗಮದ ಹಣ ಬಳಸಿಕೊಂಡು ಕಾಂಗ್ರೆಸ್‌ನಿಂದ ಸಂಸದರಾಗಿ ಆಯ್ಕೆಯಾದ ಇ.ತುಕಾರಾಂ ಅವರನ್ನು ಸಂಸದರ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಈ ಕುರಿತಂತೆ ಚುನಾವಣಾ ಆಯೋಗದ ಮುಂದೆ ಮನವಿ ಸಲ್ಲಿಸಲಿದ್ದೇವೆ ಎಂದು ಹೇಳಿದರು. ಅಕ್ರಮ ಹಣದಿಂದ ಆಯ್ಕೆಯಾದ ಈ ಸಂಸದರಿಗೆ ಸಂಸತ್ತಿನ ಒಳಗೆ ಸಂವಿಧಾನದ ಪ್ರತಿಯನ್ನು ಹಿಡಿದು ಪ್ರಮಾಣವಚನ ಸ್ವೀಕರಿಸಲು ಯಾವುದೇ ನೈತಿಕತೆ ಇಲ್ಲ ಎಂದು ತಿಳಿಸಿದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಭಾಗಿಯಾದ ನಾಗೇಂದ್ರರನ್ನು ಬಂಧಿಸಿದ ಇ.ಡಿ.ಯು ನ್ಯಾಯಾಂಗದ ಮುಂದೆ ಹಾಜರುಪಡಿಸುವ ರಿಮಾಂಡ್ ಅರ್ಜಿಯಲ್ಲಿ ತುಕಾರಾಂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ; ಪರಿಶಿಷ್ಟ ವರ್ಗದ ಅಭಿವೃದ್ಧಿಗೆ ಮೀಸಲಿದ್ದ ಹಣ ದುರ್ಬಳಕೆ ಆಗಿದೆ. ಚುನಾವಣೆಗೆ ಕೂಡ 20 ಕೋಟಿ 19 ಲಕ್ಷ ರೂಪಾಯಿ ದುರ್ಬಳಕೆ ಆಗಿದೆ ಎಂದು ರಿಮಾಂಡ್ ಅರ್ಜಿಯಲ್ಲಿ ತಿಳಿಸಿದ್ದಾರೆ ಎಂದು ವಿವರ ನೀಡಿದರು.
ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಆರೋಪ
ಲೋಕಸಭಾ ಚುನಾವಣೆಗೆ ಎಸ್‍ಟಿ ನಿಗಮದ ಹಣವನ್ನು ನಾಗೇಂದ್ರ ಅವರು ಬಳಸಿದ್ದಾರೆ ಎಂದರೆ ಇದಕ್ಕೆ ಏನು ಕಾರಣ? ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ತುಕಾರಾಂ, ನಾಗೇಂದ್ರರ ಸಂಬಂಧಿಕರೂ ಅಲ್ಲ. ನಾಗೇಂದ್ರರ ಸಹೋದರರು, ಮನೆಯವರು, ಮಕ್ಕಳು ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಆದರೂ ಸಹ ನಾಗೇಂದ್ರ ಅವರು 20.19 ಕೋಟಿ ರೂಪಾಯಿಯನ್ನು ಲೋಕಸಭಾ ಚುನಾವಣೆಗೆ ದುರ್ಬಳಕೆ ಮಾಡಿದ ದಾಖಲೆ ಸಿಕ್ಕಿದೆ ಎಂದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರ ಒಪ್ಪಿಗೆ ಮತ್ತು ಕುಮ್ಮಕ್ಕು ಇಲ್ಲದೆ, ಈ ಹಣವನ್ನು ಚುನಾವಣೆಗೆ ಬಳಸಲು ಸಾಧ್ಯವೇ ಎಂದು ಪಿ.ರಾಜೀವ್ ಅವರು ಪ್ರಶ್ನಿಸಿದರು.
ಹಾಗಾಗಿ ಚುನಾವಣಾ ಅಕ್ರಮದ ಕುರಿತು ಇನ್ನಷ್ಟು ಆಳವಾದ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. ಬಡವರ ಹಣವನ್ನು ಚುನಾವಣೆಗೆ ಬಳಸಿಕೊಂಡು ಯಾರು ಸಂಸದರಾಗಿ ಆಯ್ಕೆಯಾಗಿದ್ದಾರೋ (ಇ.ತುಕಾರಾಂ) ಅವರ ಆಯ್ಕೆಯನ್ನು ರದ್ದುಪಡಿಸಲು ಆಗ್ರಹಿಸಿದರು.
ಹೋರಾಟ
ಸಂಸದ ಇ.ತುಕಾರಾಂ ಅವರಿಗೆ ಸಮಾಜದ ಬಗ್ಗೆ ಅಭಿಮಾನ ಮತ್ತು ಕಾಳಜಿ ಇದ್ದರೆ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಅವರು ಆಗ್ರಹಿಸಿದರು. ಇ.ತುಕಾರಾಂ ಅವರು ರಾಜೀನಾಮೆ ಕೊಡದೆ ಇದ್ದಲ್ಲಿ ಎಸ್‍ಟಿ ಮೋರ್ಚಾ ಮತ್ತು ಸಮಾಜದ ವತಿಯಿಂದ ನಿರಂತರ ಹೋರಾಟ ಸಂಘಟಿಸಲಾಗುವುದು ಎಂದು ಇದೇವೇಳೆ ಎಚ್ಚರಿಸಿದರು.
ವಾಲ್ಮೀಕಿ ನಿಗಮದ ಹಗರಣದ ಮೂಲಕ ಕಬಳಿಸಿದ ಸುಮಾರು 30ರಿಂದ 40 ಕೋಟಿ ಹಣವನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಬಳಸಿದ್ದು ಇ.ಡಿ. ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ವಿವರಿಸಿದರು. ವಾಲ್ಮೀಕಿ ನಿಗಮದ ಹಣವನ್ನು ಅಕ್ರಮವಾಗಿ ಕಬಳಿಸಿ ಇವರ ಚುನಾವಣೆಗೆ ಬಳಸಿದ್ದಾರೆ ಎಂದೂ ಅವರು ಟೀಕಿಸಿದರು. ಇ.ತುಕಾರಾಂ ಅವರು ಮನೆಗಳಿಗೆ ಹಣ ಹಂಚಿದ್ದು, ಚುನಾವಣೆಗೆ 50ರಿಂದ 60 ಕೋಟಿ ಖರ್ಚು ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಲೋಕಸಭಾ ಚುನಾವಣಾ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವಂತೆ ಆಯಾ ಜಿಲ್ಲೆಗಳ ಸಚಿವರಿಗೆ ಮುಖ್ಯಮಂತ್ರಿಗಳು ಮತ್ತು ಕೆಪಿಸಿಸಿ ಅಧ್ಯಕ್ಷರು ಟಾಸ್ಕ್ ಕೊಟ್ಟಿದ್ದರು. ಅದರಂತೆ ಆಗಿನ ಸಚಿವ ನಾಗೇಂದ್ರ ಅವರು ನಿಗಮದ ಹಣವನ್ನು ಚುನಾವಣೆಗೆ ಬಳಸಿದ್ದಾರೆ ಎಂದು ಅವರು ತಿಳಿಸಿದರು.
ಎಸ್‍ಟಿ ಮೋರ್ಚಾ ವತಿಯಿಂದ ಈ ಅಕ್ರಮದ ವಿಚಾರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಅವರು ಪ್ರಕಟಿಸಿದರು. ನಿಗಮದ ಅಧ್ಯಕ್ಷ ಬಸವರಾಜ ದದ್ದಲ್ ಅವರು ನಾನೇನೂ ತಪ್ಪು ಮಾಡಿಲ್ಲ ಎಂದು ಸುಳ್ಳು ಹೇಳುತ್ತಿದ್ದರು. ಈಗ ಅವರು ಎಸ್‍ಐಟಿ ಮುಂದೆ ಶರಣಾಗಿದ್ದಾರೆ. ಆದರೂ, ಸಿದ್ದರಾಮಯ್ಯನವರು, ಡಿ.ಕೆ.ಶಿವಕುಮಾರ್ ಅವರು ದದ್ದಲ್ ಅವರ ರಾಜೀನಾಮೆ ಪಡೆದಿಲ್ಲ. ಪಕ್ಷಕ್ಕೆ ಮುಜುಗರ ಆಗುವುದೆಂದು ರಾಜೀನಾಮೆ ಪಡೆದಿಲ್ಲ ಎಂದು ಟೀಕಿಸಿದರು.
ಇದೊಂದು ಭಂಡ ಸರಕಾರ; ಇವರು ಭ್ರಷ್ಟ ಮುಖ್ಯಮಂತ್ರಿ ಎಂದು ಟೀಕಿಸಿದ ಅವರು, ದದ್ದಲ್ ಅವರ ಕುಟುಂಬ ಕೋಟಿಗಟ್ಟಲೆ ಹಣದ ಅಕ್ರಮ ಆಸ್ತಿ ಖರೀದಿ ಮಾಡಿದೆ. ಮುಖ್ಯಮಂತ್ರಿಗಳು ದದ್ದಲ್ ರಾಜೀನಾಮೆ ರಾಜೀನಾಮೆ ಪಡೆಯಬೇಕಲ್ಲದೆ, ತಾವು ಕೂಡ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.