ಬಿಜೆಪಿಯ ಇಬ್ಬರು ಪರಿಷತ್‌ ಸದಸ್ಯರು ಸುಂದರ ಕೋತಿಗಳು; ಹೆಣ್ಮಕ್ಕಳ ಬಗ್ಗೆ ಅವರಿಗೆ ಅಪಾರ ಗೌರವ; ಶಾಸಕ ಪ್ರದೀಪ್‌ ಈಶ್ವರ್‌ ವ್ಯಂಗ್ಯ

ಬಿಜೆಪಿಯ ಈ ಇಬ್ಬರು ಪರಿಷತ್‌ ಸದಸ್ಯರು ಹೆಣ್ಣು ಮಕ್ಕಳ ಬಗ್ಗೆ ಬಹಳ ಗೌರವದಿಂದ ಮಾತನಾಡುತ್ತಾರೆ ಅಲ್ಲವೇ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಮೂದಲಿಸಿದರು.;

Update: 2025-09-12 07:00 GMT

ಶಾಸಕ ಪ್ರದೀಪ್‌ ಈಶ್ವರ್‌

ಬಿಜೆಪಿಯ ವಿಧಾನ ಪರಿಷತ್ ಸದಸ್ಯರನ್ನು ಕೋತಿಗಳಿಗೆ ಹೋಲಿಸುವ ಮೂಲಕ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್‌ನಲ್ಲಿ ಎರಡು ಸುಂದರವಾದ ಕೋತಿಗಳು ಕೂತಿವೆ. ಎರಡು ತಿಂಗಳಿಂದ ಅವು ಸುಮ್ಮನೆ ಕೂತಿವೆ. ಒಬ್ಬರು ಛಲವಾದಿ ಅಣ್ಣ, ಇನ್ನೊಬ್ಬರು ಮೂರಡಿ ಕಟೌಟು ಪರೋಕ್ಷವಾಗಿ ಹೆಸರು ಉಲ್ಲೇಖಿಸದೇ ಎನ್‌.ರವಿಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದರು. 

ಬಿಜೆಪಿಯ ಈ ಇಬ್ಬರು ಪರಿಷತ್‌ ಸದಸ್ಯರು ಹೆಣ್ಣು ಮಕ್ಕಳ ಬಗ್ಗೆ ಬಹಳ ಗೌರವದಿಂದ ಮಾತನಾಡುತ್ತಾರೆ ಅಲ್ಲವೇ ಎಂದು ಮೂದಲಿಸಿದರು.

ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ ಪ್ರದೀಪ್‌ ಈಶ್ವರ್‌ ಅವರು, ಪ್ರತಾಪ್ ಸಿಂಹ ಔಟ್ ಡೇಟೆಡ್ ಪೀಸ್. ಬೇರೆ ಧರ್ಮಗಳ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಹಿಂದೂ ಧರ್ಮದ ಬಗ್ಗೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ಶಾಸಕ ಬಸವನಗೌಡ ಯತ್ನಾಳ್ ಅಣ್ಣ ಮನುಷ್ಯೇತರರ ಬಗ್ಗೆ ಮಾತಾಡಲ್ಲ ಎಂದು ಹೇಳಿದ್ದಾರೆ. ಆದರೆ, ನಾನಂತೂ ಮನುಷ್ಯೇತರರ ಬಗ್ಗೆಯೇ ಮಾತಾಡುತ್ತೇನೆ. ಬಿಜಾಪುರ, ಮೈಸೂರಿನಿಂದ ಬಂದ ಕೋತಿಗಳ ಬಗ್ಗೆ ನಾನು ಮಾತಾಡುತ್ತೇನೆ ಎಂದು ಮೂದಲಿಸಿದ್ದಾರೆ.

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಅವರು, ಎರಡು ವರ್ಷದ ಮೇಲೆ ಅಶೋಕ್ ಅಣ್ಣ ಏನೋ ತೋರಿಸುತ್ತೀನಿ ಅಂತಿದ್ದಾರೆ. ದಯವಿಟ್ಟು ಬೇಡ, ನಮಗೆ ನೋಡುವ ಆಸಕ್ತಿಯೂ ಇಲ್ಲ, ತಾಳ್ಮೆಯೂ ಇಲ್ಲ ಎಂದು ತಿರುಗೇಟು ನೀಡಿದರು.

ಹಿಂದೂ ಧರ್ಮದ ಹೆಸರಲ್ಲಿ ರಾಜಕೀಯ

ಹಿಂದೂ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಯವರು ಎಂದಾದರೂ ದೇವಾಲಯಗಳ ಅಭಿವೃದ್ಧಿ, ಅರ್ಚಕರ ಸಮಸ್ಯೆಗಳ ಬಗ್ಗೆ ದನಿಯೆತ್ತಿದ್ದಾರಾ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 62 ಸಾವಿರ ಹಿಂದೂ ದೇವಾಲಯಗಳಿವೆ. ಅವುಗಳ ನಿರ್ವಹಣೆ ಹಾಗೂ 50 ಸಾವಿರಕ್ಕೂ ಹೆಚ್ಚು ಅರ್ಚಕರ ಕುಟುಂಬಗಳಿಗೆ ರಾಜ್ಯ ಸರ್ಕಾರವು ʼಕಾಮನ್ ಪೂಲ್ ಫಂಡ್ʼ ಮೂಲಕ ನೆರವು ನೀಡುತ್ತಿದೆ. ಇದು ಬಿಜೆಪಿಯವರಿಗೆ ಗೊತ್ತಿಲ್ಲ. ಬರೀ ಹಿಂದೂ ಧರ್ಮದ ಹೆಸರಿನಲ್ಲಿ ಪ್ರೀತಿ ತೋರಿಸುವ ನಾಟಕವಾಡುತ್ತಿದ್ದಾರೆ ಎಂದು ಟೀಕಿಸಿದರು.

ಬಡ ಬ್ರಾಹ್ಮಣರು, ಅರ್ಚಕರು ಹಾಗೂ 62 ಸಾವಿರ ದೇವಾಲಯಗಳ ಅಭಿವೃದ್ಧಿಯ ಬಗ್ಗೆ ಬಿಜೆಪಿಯವರು ಎಂದಿಗೂ ಮಾತನಾಡಿದ್ದೇ ಇಲ್ಲ. ನಾನೂ ಒಬ್ಬ ಹಿಂದೂ ಧರ್ಮಿಯ. ಬಿಜೆಪಿ ಧೋರಣೆ ವಿರುದ್ಧ ಹೋರಾಡುವ ಹಕ್ಕು ನನಗೂ ಇದೆ. ಬಿಜೆಪಿ ನಾಯಕರು ಬೇರೆ ಧರ್ಮ ಬೈದರೆ, ನಾಳೆ ನಮ್ಮ ಧರ್ಮವನ್ನೂ ಬೇರೆಯವರು ಬೈಯುತ್ತಾರೆ. ಆಗ ನಮ್ಮಂತ ಹಿಂದೂಗಳಿಗೆ ನೋವಾಗುವುದಿಲ್ಲವೇ ಎಂದು ತಿರುಗೇಟು ನೀಡಿದರು.

Tags:    

Similar News