ಕೇಂದ್ರ ಬಿಜೆಪಿ ಸರ್ಕಾರದಿಂದ ಕರ್ನಾಟಕಕ್ಕೆ ಅತಿ ಹೆಚ್ಚು ಅನ್ಯಾಯ: ಸಿಎಂ ಸಿದ್ದರಾಮಯ್ಯ
ʼʼನರೇಂದ್ರ ಮೋದಿಯವರು ಗುಜರಾತ್ ಮುಖ್ಯ ಮಂತ್ರಿಯಾಗಿದ್ದಾಗ ಗುಜರಾತಿನಿಂದ ತೆರಿಗೆ ಸಂಗ್ರಹಿಸಿಸಬೇಡಿ ಎಂದಿದ್ದರು. ನಾವು ಆ ಮಾತು ಹೇಳಿಲ್ಲʼʼ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.;
ಬೆಂಗಳೂರು: ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ 2ನೇ ರಾಜ್ಯವಾಗಿರುವ ಕರ್ನಾಟಕಕ್ಕೆ ಅತಿ ಹೆಚ್ಚು ಅನ್ಯಾಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು (ಗುರುವಾರ) ವಿಧಾನಸಭೆಯಲ್ಲಿ ಬಜೆಟ್ ಮೇಲೆ ನಡೆದ ಚರ್ಚೆ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ʼʼ14ನೇ ಹಣಕಾಸು ಆಯೋಗದಲ್ಲಿ ಶೇ. 4.7 ಹಾಗೂ 15ನೇ ಹಣಕಾಸು ಆಯೋಗದಲ್ಲಿ ಶೇ. 3.6 ರಾಜ್ಯಕ್ಕೆ ನಿಗದಿಯಾಗಿ ಶೇ 1.07 ರಷ್ಟು ಕಡಿಮೆಯಾಗಿದೆ. ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಅತಿ ಹೆಚ್ಚು ಅನ್ಯಾಯವಾಗಿದೆ. ಕೇಂದ್ರದ ಅನ್ಯಾಯವನ್ನು ಬೆಂಬಲಿಸುವ ಬಿಜೆಪಿಗೆ ಕನ್ನಡಿಗರ ಬಗ್ಗೆ ಕಾಳಜಿ ಇದೆಯೇ?ʼʼ ಎಂದು ಪ್ರಶ್ನಿಸಿದ್ದಾರೆ.
ʼʼನರೇಂದ್ರ ಮೋದಿಯವರು ಗುಜರಾತ್ ಮುಖ್ಯ ಮಂತ್ರಿಯಾಗಿದ್ದಾಗ ಗುಜರಾತಿನಿಂದ ತೆರಿಗೆ ಸಂಗ್ರಹಿಸಿಸಬೇಡಿ ಎಂದಿದ್ದರು. ನಾವು ಆ ಮಾತು ಹೇಳಿಲ್ಲʼʼ ಎಂದು ಲೇವಡಿ ಮಾಡಿದರು.
ʼರಾಜ್ಯದ ಆರ್ಥಿಕತೆ ಬಗ್ಗೆ ಬಿಜೆಪಿಯವರಿಗೆ ಕಾಳಜಿ ಇಲ್ಲʼ:
ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಬಜೆಟ್ ಓದುವಾಗ ವಿರೋಧ ಪಕ್ಷದವರು ಗೈರು ಹಾಜರಾಗಿದ್ದು, ಇವರಿಗೆ ರಾಜ್ಯದ ಆರ್ಥಿಕತೆ ಬಗ್ಗೆ ಕಾಳಜಿ ಇಲ್ಲ ಎಂದು ಸಿದ್ದರಾಮಯ್ಯ ಹರಿಹಾಯ್ದರು.
ʼʼಕಾಂಗ್ರೆಸ್ನ 9 , ಬಿಜೆಪಿಯ 13 ಜನ ಹಾಗೂ ಜೆಡಿಎಸ್ನ ಮೂವರು ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಕೆಲವು ಸದಸ್ಯರು ಬಜೆಟ್ ಬಗ್ಗೆ ಅನೇಕ ಸಲಹೆ ಸೂಚನೆ ನೀಡಿದ್ದಾರೆ. ಬಜೆಟ್‌ನ್ನು ಟೀಕಿಸಿ ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇವರ ಎಲ್ಲ ಸಲಹೆ ಸೂಚನೆಗಳನ್ನು ಸ್ವಾಗತಿಸುತ್ತೇವೆʼʼ ಎಂದರು.
ʼʼಒಟ್ಟು ಅಭಿವೃದ್ಧಿ ಕಾರ್ಯಕ್ರಮಗಳಿಗೆ 1,20,000 ಕೋಟಿ ರೂ. ವೆಚ್ಚದ ಹಂಚಿಕೆ ಮಾಡಿದ್ದೇವೆ. 52,009 ಕೋಟಿ ರೂ. ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿರಿಸಿದ್ದು, ಉಳಿದ ಮೊತ್ತ ಅಭಿವೃದ್ಧಿ ಕಾರ್ಯಗಳಿಗೆ ಹಂಚಿಕೆ ಮಾಡಲಾಗಿದೆ. ವಿರೋಧ ಪಕ್ಷದವರು ಮಾಡಿರುವ ಆಪಾದನೆ ಸತ್ಯಕ್ಕೆ ದೂರವಾದದ್ದುʼʼ ಎಂದರು.
ʼʼಏಳು ಕೋಟಿ ಕನ್ನಡಿಗರಿಗೆ ಆಗಿರುವ ಅನ್ಯಾಯವನ್ನು ಸಮರ್ಥಿಸಿಕೊಳ್ಳಲು ನಾಚಿಕೆಯಾಗುವುದಿಲ್ಲವೇ?ʼʼ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಮೋದಿ ಮೋದಿ, ಜೈ ಶ್ರೀ ರಾಮ್ ಎಂದು ಕೂಗು ಹಾಕಿದರು. ಆಗ ಸಿದ್ದರಾಮಯ್ಯ ಅವರು, ʼʼನೀವು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದೀರಿ. ನಾವು ಜೈ ಸೀತಾ ರಾಮ್ ಎನ್ನುತ್ತೇವೆʼʼ ಎಂದು ಮುಖ್ಯ ಮಂತ್ರಿಗಳು ಘೋಷಣೆ ಕೂಗಿದರು.