ಬೀದರ್ ಪೊಲೀಸರ ಕಾರ್ಯಾಚರಣೆ; 2.44 ಕೋಟಿ ಮೌಲ್ಯದ ಕಲಬೆರಕೆ ಪಾನ್ ಮಸಾಲಾ ಜಪ್ತಿ
ಕೈಗಾರಿಕಾ ಪ್ರದೇಶದ ಶೆಡ್ ಹೊರಗೆ ‘ಟು ಲೆಟ್’ ಬೋರ್ಡ್ ಹಾಕಿದ್ದ ದಂಧೆಕೋರರು ಒಳಗೆ ಪರವಾನಗಿ ಇಲ್ಲದೆ ರಾಸಾಯನಿಕ ಪದಾರ್ಥ ಸಂಗ್ರಹಿಸಿದ್ದರು. ಈ ಸ್ಥಳದಲ್ಲಿ ಒಟ್ಟು 43.30 ಲಕ್ಷ ರೂ. ಮೌಲ್ಯದ ಪಾನ್ ಮಸಾಲಾ ಹಾಗೂ ತಂಬಾಕು ವಸ್ತುಗಳನ್ನು ಜಪ್ತಿ ಮಾಡಲಾಗಿದೆ.;
ಪೊಲೀಸರು ಕಲಬೆರಕೆ ಪಾನ್ ಮಸಾಲ ಜಪ್ತಿ ಮಾಡಿದರು
ನಿಷೇಧಿತ ಹಾಗೂ ಕಲಬೆರಕೆ ಪಾನ್ ಮಸಾಲಾ, ಗುಟ್ಕಾ ಮಾರಾಟದ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಬೀದರ್ ಪೊಲೀಸರು 2.44 ಕೋಟಿ ರೂ. ಮೌಲ್ಯದ ಹಾನಿಕಾರಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಗಾಂಧಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಚಿದ್ರಿಬುತ್ತಿ ಬಸವಣ್ಣ ಹತ್ತಿರದ ಮನೆ ಸಮೀಪ ಹಾಗೂ ನೂತನ ನಗರ ಠಾಣಾ ವ್ಯಾಪ್ತಿಯ ಕೋಳಾರ ಕೈಗಾರಿಕಾ ಪ್ರದೇಶದ ಶೆಡ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಕಲಬೆರಕೆ ಪಾನ್ ಮಸಾಲಾಗಳನ್ನು ವಶಪಡಿಸಿಕೊಂಡಿದ್ದಾರೆ.
ಕೈಗಾರಿಕಾ ಪ್ರದೇಶದ ಶೆಡ್ ಹೊರಗೆ ‘ಟು ಲೆಟ್’ ಬೋರ್ಡ್ ಹಾಕಿದ್ದ ದಂಧೆಕೋರರು ಒಳಗೆ ಪರವಾನಗಿ ಇಲ್ಲದೆ ರಾಸಾಯನಿಕ ಪದಾರ್ಥ ಸಂಗ್ರಹಿಸಿದ್ದರು. ಇಲ್ಲಿ ಒಟ್ಟು 43.30 ಲಕ್ಷ ರೂ. ಮೌಲ್ಯದ ಪಾನ್ ಮಸಾಲಾ ಹಾಗೂ ತಂಬಾಕು ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಎಂಟು ಮಂದಿಯನ್ನು ಬಂಧಿಸಲಾಗಿದೆ. ಬಂಧಿತರನ್ನು ಹೈದರಾಬಾದ್ ಹಾಗೂ ಮಣಿಪುರ ಮೂಲದವರು ಎಂದು ಗುರುತಿಸಲಾಗಿದೆ.
ಬೀದರ್ ಎಸ್ಪಿ ಪ್ರದೀಪ್ ಗುಂಟೆ ಮಾತನಾಡಿ, ಆರೋಪಿಗಳ ವಿರುದ್ಧ ಬಿಎನ್‌ಎಸ್ ಕಾಯ್ದೆ 2023 ರ ಕಲಂ 7 ಹಾಗೂ ಕೋಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬೀದರ್ ಜಿಲ್ಲೆಯನ್ನು ನಶೆ ಮುಕ್ತ ಜಿಲ್ಲೆಯನ್ನಾಗಿಸಲು ಪೊಲೀಸ್ ಇಲಾಖೆ ಸನ್ನದ್ಧವಾಗಿದ್ದು, ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣಕ್ಕಾಗಿ ಪೊಲೀಸರ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
ಹೊರ ರಾಜ್ಯದವರ ಅಕ್ರಮ ಚಟುವಟಿಕೆಗಳು ಹೆಚ್ಚಿದ್ದು, ಅಧಿಕಾರಿಗಳು ಕಠಿಣ ಕ್ರಮ ಜರುಗಿಸಿ ದಂಧೆಗಳಿಗೆ ಕಡಿವಾಣ ಹಾಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.