ಟೆರಿಟೋರಿಯಲ್ ಆರ್ಮಿ ಲೆಫ್ಟಿನೆಂಟ್ ಆಗಿ ಕೆಪಿಸಿಸಿ ವಕ್ತಾರೆ ಭವ್ಯಾ ನರಸಿಂಹಮೂರ್ತಿ
ಎಐಸಿಸಿ ರಾಷ್ಟ್ರೀಯ ಕೋ ಆರ್ಡಿನೇಟರ್ ಆಗಿರುವ, ಕರ್ನಾಟಕ ಕಾಂಗ್ರೆಸ್ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಈಗ ಭಾರತೀಯ ಸೇನೆಯ ನಾಗರಿಕ ಸೇವಾ ವಿಭಾಗದ ಲೆಫ್ಟಿನೆಂಟ್ ಆಗಿ ನೇಮಕವಾಗಿದ್ದಾರೆ.;
ಎಐಸಿಸಿ ರಾಷ್ಟ್ರೀಯ ಕೋ ಆರ್ಡಿನೇಟರ್ ಆಗಿರುವ, ಕರ್ನಾಟಕ ಪ್ರದೇಶ ಕಾಂಗ್ರೆಸ್ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಅವರು ಈಗ ಭಾರತೀಯ ಸೇನೆಯ ನಾಗರಿಕ ಸೇವಾ ವಿಭಾಗದ ಲೆಫ್ಟಿನೆಂಟ್ ಆಗಿ ನೇಮಕವಾಗಿದ್ದಾರೆ. ಪ್ರಾದೇಶಿಕ ಸೇನೆಯಲ್ಲಿ ಕಮಿಷನ್ಡ್ ಆಫೀಸರ್ ಆಗಿ ಭವ್ಯ ನರಸಿಂಹಮೂರ್ತಿ ಅವರು ನಿಯೋಜನೆಗೊಂಡಿದ್ದಾರೆ.
ಈ ಕುರಿತು ಭವ್ಯಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಭಾರತೀಯ ಸೇನಾ ಸಮವಸ್ತ್ರದಲ್ಲಿ ತರಬೇತಿ ಪಡೆಯುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದು, "ಇದು ನನ್ನ ಜೀವನದ ಹೆಮ್ಮೆಯ ಸಂದರ್ಭ" ಎಂದು ಹೇಳಿದ್ದಾರೆ.
'ನಾನು ಭಾರತೀಯ ಸೇನೆಯ ಭಾಗವಾಗುತ್ತಿರುವುದಕ್ಕೆ ತುಂಬಾ ಹೆಮ್ಮೆಯಾಗುತ್ತಿದೆ. ಟೆರಿಟೋರಿಯಲ್ ಆರ್ಮಿಯಲ್ಲಿ ದಕ್ಷಿಣ ಭಾರತದಿಂದ ಕಮಿಷನ್ಡ್ ಆಫೀಸರ್ ಆದ ಏಕೈಕ ಮಹಿಳೆ ನಾನಾಗಿದ್ದೇನೆ. ಡಿಜಿಟಿಎ 2022ರಲ್ಲಿ ನಡೆಸಿದ ಟಿಎ ಪರೀಕ್ಷೆಯಲ್ಲಿ ಪಾಸಾದ ಏಕೈಕ ಮಹಿಳೆ ನಾನಾಗಿದ್ದೇನೆ' ಎಂದು ಅವರು ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.
ಪ್ರಾದೇಶಿಕ ಸೇನೆ ಎಂಥಲೂ ಹೇಳುವ ಟೆರಿಟೋರಿಯಲ್ ಆರ್ಮಿಯಲ್ಲಿ ಎರಡು ವಿಭಾಗಗಳಿವೆ. ಒಂದು, ಡಿಪಾರ್ಟಮೆಂಟಲ್ ಹಾಗೂ ಎರಡನೇಯದ್ದು ನಾನ್ ಡಿಪಾರ್ಟಮೆಂಟಲ್. ಡಿಪಾರ್ಟಮೆಂಟಲ್‌ನಲ್ಲಿ ಭಾರತೀಯ ನಾಗರಿಕ ಸೇವಾ ಅಧಿಕಾರಿಗಳು, ಸಿಬ್ಬಂದಿ ಹಾಗೂ ರೈಲ್ವೆಯ ನಿವೃತ್ತರು ಸೇರಿಕೊಳ್ಳಬಹುದು. ನಾನ್ ಡಿಪಾರ್ಟಮೆಂಟಲ್‌ನಲ್ಲಿ ಯಾವುದೇ ಭಾರತೀಯ ನಾಗರಿಕರು ಅರೆಕಾಲಿಕ ಸೇವೆಗಾಗಿ ಸೇರಿಕೊಳ್ಳಬಹುದು. ಭವ್ಯಾ ಅವರು ನಾನ್ ಡಿಪಾರ್ಟಮೆಂಟಲ್ ವಿಭಾಗದಿಂದ ಕಮಿಷನ್ಡ್ ಆಫೀಸರ್ ಆಗಿ ನೇಮಕವಾಗಿದ್ದಾರೆ.
ಭಾರತೀಯ ನಾಗರಿಕರು ನಾಗರಿಕ ವೃತ್ತಿಯ ಜೊತೆ ಭಾರತೀಯ ಸೇನೆಯಲ್ಲಿ ಕೆಲಸ ಮಾಡಲು ಟೆರಿಟೋರಿಯಲ್ ಆರ್ಮಿ ಅಥವಾ ಪ್ರಾದೇಶಿಕ ಸೇನೆ ಅವಕಾಶ ಮಾಡಿಕೊಡುತ್ತದೆ. ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಎಂಎಸ್ ಧೋನಿ, ರಾಜಸ್ಥಾನ ಮಾಜಿ ಸಿಎಂ ಸಚಿನ್ ಪೈಲಟ್ ಮತ್ತು ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ಮಾದರಿಯಲ್ಲಿ ಭಾರತೀಯ ಸೇನೆಯ ನಾಗರಿಕ ಸೇವಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಸೇನೆ ಸೇರುವವರು ವರ್ಷದಲ್ಲಿ ಕನಿಷ್ಠ ಎರಡು ತಿಂಗಳು ಸ್ವಯಂಸೇವಕರಾಗಿ ಭಾರತೀಯ ಸೇನೆಯ ಜೊತೆ ಕೆಲಸ ಮಾಡಬಹುದು.