Honeytrap| ರಾಜಣ್ಣನ ಪುತ್ರ ರಾಜೇಂದ್ರ ಕೊಲೆಗೆ ಸುಪಾರಿ ಬಗ್ಗೆ ಮಾಹಿತಿ ನೀಡಿದ ಮಹಿಳೆ ಪುಷ್ಪಾ ಯಾರು?

ಕೊಲೆ ಯತ್ನದ ಬಗ್ಗೆ ಕೇಸ್​ ದಾಖಲಾಗಿರುವ ಬೆನ್ನಲ್ಲೇ ಆಡಿಯೊವೊಂದು ಬಿಡುಗಡೆಗೊಂಡಿದ್ದು ಅದರಲ್ಲಿ ಆರೋಪಿ ರಾಕಿ ಹಾಗೂ ಪುಷ್ಪಾ ಎಂಬ ಮಹಿಳೆ ಕೃತ್ಯದ ಬಗ್ಗೆ ಚರ್ಚಿಸಿದ್ದರು.;

Update: 2025-03-31 07:40 GMT

ಸಚಿವ ರಾಜಣ್ಣ ಪುತ್ರ ರಾಜೇಂದ್ರ ಹತ್ಯೆಗೆ ಯತ್ನ ಪ್ರಕರಣ ತನಿಖೆಯನ್ನು ಕ್ಯಾತಸಂದ್ರ ಪೊಲೀಸರು ಚುರುಕುಗೊಳಿಸಿದ್ದಾರೆ.

ಸಚಿವ ಕೆಎನ್ ರಾಜಣ್ಣ ಹಾಗೂ ಅವರ ಪುತ್ರ ಎಂಎಲ್‌ಸಿ ರಾಜೇಂದ್ರ ಅವರ ಹನಿಟ್ರ್ಯಾಪ್​ ಮತ್ತು ಕೊಲೆ ಯತ್ನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಅವರ ಕೊಲೆಗೆ ಸುಪಾರಿ ಕೊಟ್ಟಿರುವ ವಿಚಾರಕ್ಕೆ ಪೂರಕವಾಗಿ ರಾಕಿ ಹಾಗೂ ಮಹಿಳೆಯೊಬ್ಬಳು ಮಾತನಾಡಿರುವ ಆಡಿಯೊವೊಂದು ವೈರಲ್ ಆಗಿದೆ. ಪುಷ್ಪಾ ಎಂಬ ಹೆಸರಿನ ಮಹಿಳೆ ಮಾತನಾಡಿರುವ ಧ್ವನಿ ಸಂಭಾಷಣೆಯನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ. 

ಸಹಕಾರ ಸಚಿವ ಕೆ.ಎನ್. ರಾಜಣ್ಣ ಪುತ್ರ ಎಂಎಲ್‌ಸಿ ರಾಜೇಂದ್ರ ಅವರು ಕಳೆದ  ಶುಕ್ರವಾರ 'ಅಜ್ಞಾತ' ವ್ಯಕ್ತಿಗಳು ತನ್ನನ್ನು ಕೊಲ್ಲಲು ಸುಪಾರಿ ನೀಡಿದ್ದಾರೆ ಎಂದು ಆರೋಪಿಸಿ ತುಮಕೂರು ಎಸ್‌ಪಿ ಅಶೋಕ್ ಕೆ.ವಿ ಅವರನ್ನು ಭೇಟಿ ಮಾಡಿ ಕ್ರಮ ಕೈಗೊಳ್ಳುವಂತೆ ಕೋರಿದ್ದರು. ಎಫ್‌ಐಆರ್ ದಾಖಲಿಸಲು ಎಸ್‌ಪಿ ಸಚಿವರ ನಿವಾಸ ಇರುವ ಕ್ಯಾತಸಂದ್ರ ಪೊಲೀಸ್​ ಠಾಣೆಗೆ ವರ್ಗಾಯಿಸಿದ್ದರು.  ಕ್ಯಾತಸಂದ್ರ ಪೊಲೀಸರು ರೌಡಿ ಶೀಟರ್ ಸೋಮು ಸೇರಿದಂತೆ ಐದು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಇದೀಗ ಅವರ ನಡುವಿನ ಸಂಭಾಷಣೆಯ ಆಡಿಯೊ ಬಯಲಿಗೆ ಬಂದಿದೆ. 

18 ನಿಮಿಷದ ಆಡಿಯೋದಲ್ಲಿ ಹತ್ಯೆಗೆ ಸುಪಾರಿ ಬಯಲು 

18 ನಿಮಿಷಗಳ ಆಡಿಯೊದಲ್ಲಿ ಪುಷ್ಪಾ ಮತ್ತು ರಾಕಿ  ನಡುವೆ ನಡೆದ ಮಾತುಕತೆ ನಡೆದಿದೆ. ಅದರಲ್ಲಿ ಸುಪಾರಿ ಕೊಟ್ಟಿರುವ ವಿಚಾರ ಗೊತ್ತಾಗಿದೆ. ಪೊಲೀಸರು ಆಡಿಯೋ ರೆಕಾರ್ಡಿಂಗ್‌ ಇರುವ ಪೆನ್ ಡ್ರೈವ್ ವಶಕ್ಕೆ ಪಡೆದಿದ್ದುಅದರಲ್ಲಿ ರಾಕಿ, ರಾಜೇಂದ್ರ ಅವರ ಹತ್ಯೆಗೆ ಪ್ಲಾನ್ ಹೇಗೆ ಮಾಡಿದ್ದಾರೆ ಎಂಬುದನ್ನು ಪುಷ್ಪಾ ವಿವರಿಸಿದ್ದಾಳೆ. 

ಪುಷ್ಪಾ ಯಾರು? 

ಪ್ರಕರಣದ ಒಂದನೇ ಆರೋಪಿ  ಜೈಪುರ ಸೋಮನ ಜತೆ ಸಂಪರ್ಕದಲ್ಲಿದ್ದ ಪುಷ್ಪಾ, ಡಿಸೆಂಬರ್‌ನಲ್ಲಿ ರಾಕಿ ಜತೆ ಮಾತನಾಡಿದ್ದಳು. ಈ ಸಂಭಾಷಣೆಯಲ್ಲಿ, ಸೋಮನು ರಾಜೇಂದ್ರನ ಹತ್ಯೆಗೆ ಸುಪಾರಿ ಪಡೆದಿದ್ದ ಬಗ್ಗೆ ಪುಷ್ಪಾಳಿಗೆ ವಿವರಿಸಿದ್ದ.

ಸೋಮನ ಜೊತೆಗಿದ್ದುಕೊಂಡೇ ಪುಷ್ಪಾ, ಕೊಲೆ ಸಂಚಿನ ಮಾಹಿತಿ ಕಲೆಹಾಕಿದ್ದರಂತೆ. ಬಳಿಕ ಕೊಲೆ ಸಂಚಿನ ವಿಚಾರವನ್ನು ರಾಜೇಂದ್ರ‌ರಿಗೆ ತಿಳಿಸಲು ಪುಷ್ಪಾ ಯೋಜನೆ ರೂಪಿಸಿದ್ದಾರೆ. ರಾಜೇಂದ್ರಗೆ ವಿಚಾರ ಮುಟ್ಟಿಸಲು ರಾಕಿ ಎನ ಬಳಸಿಕೊಂಡಿದ್ದಾರೆ. ಕೊಲೆ ಸಂಚಿನ ಬಗ್ಗೆ ಪುಷ್ಪ ಹೇಳಿದ್ದನ್ನ ರಾಕಿ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಆ ಬಳಿಕ ರಾಜೇಂದ್ರಗೆ ಈ ಆಡಿಯೋ ತಲುಪಿಸಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. 

ಆಡಿಯೋದಲ್ಲಿ ಏನಿದೆ? 

ಕಳೆದ ನವೆಂಬರ್‌ನಲ್ಲಿ ರಾಜೇಂದ್ರ ಅವರ ಮಗಳ ಬರ್ತ್‌ಡೇ ಡೆಕೋರೇಷನ್‌ಗೆ ಜೈಪುರದ ಇಬ್ಬರು ಹುಡುಗರು ಬಂದಿದ್ದರು. ಅವರನ್ನು ಸೋಮ ಕಳುಹಿಸಿದ್ದ, ಆಗಲೇ ಹತ್ಯೆ ಯತ್ನ ನಡೆದಿತ್ತು ಎಂದು ಆಡಿಯೋನಲ್ಲಿ ಪುಷ್ಪಾ ಆಡಿಯೊದಲ್ಲಿ ಮಾಹಿತಿ ನೀಡಿದ್ದಾರೆ.  ಸೋಮನಿಗೆ 5 ಲಕ್ಷ ಹಣ ಬಂದಿರೋದು ಸತ್ಯ. ಪೊಲೀಸರು ಕರೆದುಕೊಂಡು ಹೋಗಿ ವಿಚಾರಣೆ ಮಾಡಿದರೆ ಎಲ್ಲಾ ಗೊತ್ತಾಗುತ್ತದೆ. ರಾಜೆಂದ್ರ ಅವರ ಮುಂದೆ ನಾನೇ ಹೇಳುತ್ತೇನೆ. ನನ್ನನ್ನು ಕರೆದುಕೊಂಡು ಹೋಗು ಅಂತ ರಾಕಿ ಎನ್ನುವವನೊಂದಿಗೆ ಪುಷ್ಪಾ ಹೇಳಿಕೊಂಡಿದ್ದಾರೆ. ಜೊತೆಗೆ ಜೈಪುರದ ಮತ್ತೋರ್ವ ರೌಡಿಶೀಟರ್ ಒಬ್ಬನನ್ನೂ ಕೊಲೆ ಮಾಡುವುದಾಗಿ ಸೋಮ ಹೇಳಿದ್ದಾನೆ. ಅದಕ್ಕಾಗಿ ಬೆಂಗಳೂರಿನ ಕಲಾಸಿಪಾಳ್ಯದಿಂದ ಇಬ್ಬರು ತಮಿಳು ಭಾಷಿಕ ಹುಡುಗರನ್ನು ಸೋಮ ಕರೆಸಿಕೊಂಡಿದ್ದ. ಜೈಲಿನಲ್ಲಿರುವ ಸ್ಟೀಫನ್ ಗುಂಡನನ್ನು ಪೆರೋಲ್ ಮೇಲೆ ಕರೆದುಕೊಂಡು ಬರಲು ಸೋಮ ಯೋಜನೆ ರೂಪಿಸಿದ್ದ. ಅವನನ್ನ ಕರೆಸಿ ನೆಟ್‌ವರ್ಕ್ ಇಲ್ಲದೆ ಇರುವ ಜಾಗದಲ್ಲಿ ಇಡಲು ಮನೆ ಮಾಡಿದ್ದ ಎಂಬ ಬಗ್ಗೆಯೂ ಆಡಿಯೋದಲ್ಲಿ ಪುಷ್ಪಾ ಮಾಹಿತಿ ನೀಡಿದ್ದಳು. 

ಆಡಿಯೋ ಬೆನ್ನತ್ತಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆರೋಪಿಗಳಾದ ಸೋಮ,ಭರತ್,ಅಮಿತ್,ಗುಂಡಾ,ಯತೀಶ್ ಹೆಸರು ಉಲ್ಲೇಖವಾಗಿದೆ. ಐವರ ಮೇಲೆ ಈಗಾಗಲೇ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮಾಡುತ್ತಿದ್ದಾರೆ. 

Tags:    

Similar News