Hebbal Flyover | ಹೆಬ್ಬಾಳ ಮೇಲ್ಸೆತುವೆಯಲ್ಲಿ ಮೇ 21ರವರೆಗೆ ಸಂಚಾರ ಬಂದ್‌; ಪ್ರತಿದಿನ ಮೂರು ಗಂಟೆ ಸಂಚಾರ ಸ್ಥಗಿತ

ಮೂರು ದಿನ ಮೇಲ್ಸೆತುವೆ ಕಾಮಗಾರಿ ಹಿನ್ನೆಲೆಯಲ್ಲಿ ಮೇ 17 ರಿಂದ ಮೇ 21 ರವರೆಗೆ ಮಧ್ಯರಾತ್ರಿ 12 ರಿಂದ ಬೆಳಗಿನ ಜಾವ 3 ಗಂಟೆಯವರೆಗೂ ಎಸ್ಟೀಮ್‌ ಮಾಲ್‌ನಿಂದ ಮೇಖ್ರಿ ವೃತ್ತದ ಕಡೆಗೆ ಹೋಗುವ ಎಲ್ಲಾ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಈ ಸಮಯದಲ್ಲಿ ವಾಹನ ಸವಾರರು ಪರ್ಯಾಯ ಮಾರ್ಗದ ಮೂಲಕ ತೆರಳಬೇಕು ಎಂದು ಸಂಚಾರಿ ಪೊಲೀಸರು ಸೂಚಿಸಿದ್ದಾರೆ.;

Update: 2025-05-17 07:59 GMT

ಹೆಬ್ಬಾಳ ಪ್ಲೈಓವರ್‌ ದುರಸ್ಥಿ ಕಾರ್ಯ ನಡೆಯುತ್ತಿರುವ ದೃಶ್ಯ

ಬೆಂಗಳೂರಿನ ಹೆಬ್ಬಾಳದ ಬಳಿ ನಿರ್ಮಿಸುತ್ತಿರುವ ಉಕ್ಕಿನ ಮೇಲ್ಸೆತುವೆಗೆ ಹೆಚ್ಚುವರಿ ರಾಂಪ್‌ಗಳನ್ನು ಅಳವಡಿಸುವ ಹಿನ್ನೆಲೆಯಲ್ಲಿ ಹೆಬ್ಬಾಳದಿಂದ ಮೇಖ್ರಿ ವೃತ್ತದವರೆಗೆ ಮೇ 17ರಿಂದ 21 ರವರೆಗೆ ನಿತ್ಯ ಮೂರು ಗಂಟೆಗಳ ಕಾಲ ವಾಹನ ಸಂಚಾರ ನಿರ್ಬಂಧಿಸಲಾಗಿದೆ. 

ಹೆಬ್ಬಾಳದ ರೈಲ್ವೆ ಹಳಿಗಳ ಮೇಲೆ 33.5 ಉದ್ದದ ಏಳು ಉಕ್ಕಿನ ಸ್ಟೀಲ್‌ ಗರ್ಡರ್‌ ಅಳವಡಿಸುವ ಕಾರ್ಯ ಶನಿವಾರದಿಂದ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ದಿನ ರಾತ್ರಿ 12ರಿಂದ ಮುಂಜಾನೆ 3 ಗಂಟೆಯವರೆಗೆ ಮೇಲ್ಸೆತುವೆ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ಬೆಂಗಳೂರು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಬ್ಬಾಳದ ಎಸ್ಟೀಮ್‌ ಮಾಲ್‌ನಿಂದ ಮೇಖ್ರಿವೃತ್ತದ ಕಡೆಗೆ ಹೋಗುವ ಎಲ್ಲಾ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಈ ಸಮಯದಲ್ಲಿ ವಾಹನ ಸವಾರರು ಪರ್ಯಾಯ ಮಾರ್ಗದ ಮೂಲಕ ತೆರಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಪರ್ಯಾಯ ಮಾರ್ಗ ಯಾವುದು?

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇಖ್ರಿವೃತ್ತದ ಕಡೆಗೆ ಚಲಿಸುವ ವಾಹನಗಳು ಎಸ್ಟೀಮ್‌ ಮಾಲ್‌ನಿಂದ ಸರ್ವೀಸ್‌ ರಸ್ತೆ ಮೂಲಕ ಹೆಬ್ಬಾಳ ವೃತ್ತದಲ್ಲಿ ಹೊರ ವರ್ತುಲ ರಸ್ತೆಯಲ್ಲಿ ಬಲ ತಿರುವು ಪಡೆದು ತುಮಕೂರು ಮಾರ್ಗವಾಗಿ ಚಲಿಸಬೇಕು. ಕುವೆಂಪು ವೃತ್ತದಲ್ಲಿ ಎಡ ತಿರುವು ಪಡೆದು ನ್ಯೂ ಬಿಇಎಲ್‌ ಮೂಲಕ ಮೇಖ್ರಿವೃತ್ತ ತಲುಪಬಹುದಾಗಿದೆ.  

ಬೆಂಗಳೂರಿನಲ್ಲಿ ಹದಿನೈದು ವರ್ಷಕ್ಕೂ ಹಳೆಯದಾಗಿರುವ ಹಲವಾರು ಸೇತುವೆಗಳು ಶಿಥಿಲಗೊಂಡಿವೆ. ಇದಲ್ಲದೇ ಸಾಕಷ್ಟು ರಸ್ತೆಗಳು ಶಿಥಿಲಗೊಂಡಿದ್ದು, ಮುಂಗಾರು ಆರಂಭಕ್ಕೂ ಮುನ್ನವೇ ಬಿಬಿಎಂಪಿ ಆಡಳಿತ ಎಚ್ಚೆತ್ತುಕೊಂಡು ದುರಸ್ತಿ ಮಾಡಬೇಕಾಗಿದೆ.  

ಬಗೆಹರಿಯದ ಪೀಣ್ಯ ಮೇಲ್ಸೇತುವೆ

ತುಮಕೂರು ರಸ್ತೆಯ ಪೀಣ್ಯ ಮೇಲ್ಸೆತುವೆ ಪದೇ ಪದೇ ದುರಸ್ತಿಗೆ ಒಳಗಾಗುತ್ತಿದೆ. ಕಳೆದ ಕೆಲ ತಿಂಗಳ ಹಿಂದೆ ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು.  ಸೇತುವೆಗೆ 240 ಕೇಬಲ್‌ಗಳನ್ನು ಅಳವಡಿಸಿ ನಂತರ ಭಾರೀ ವಾಹನಗಳಿಗೆ ಪ್ರವೇಶ ನೀಡಲಾಗಿತ್ತು. ದಟ್ಟಣೆ ಹೆಚ್ಚಿರುವುದರಿಂದ ವಾರದಲ್ಲಿ ಎರಡು ದಿನ ಪೊಲೀಸರು ಭಾರೀ ವಾಹನಗಳ ಸಂಚಾರ  ನಿರ್ಬಂಧಿಸಿದ್ದಾರೆ.

Tags:    

Similar News