Population Clock | ಬೆಂಗಳೂರಿನಲ್ಲಿ ಮೊದಲ ಡಿಜಿಟಲ್ ಜನಸಂಖ್ಯಾ ಗಡಿಯಾರ ಸ್ಥಾಪನೆ; ಏನಿದು?
ದೇಶದ ಜನಸಂಖ್ಯೆಯ ಬೆಳವಣಿಗೆಯ ಬಗ್ಗೆ ಅರಿವು ಮೂಡಿಸುವ ಮತ್ತು ಸಂಶೋಧಕರು ಮತ್ತು ವಿದ್ವಾಂಸರಿಗೆ ಅಧಿಕೃತ ಅಂಕಿಅಂಶ ಒದಗಿಸುವ ಉದ್ದೇಶದಿಂದ ಐಎಸ್‌ಇಸಿ ಪ್ರವೇಶದ್ವಾರದಲ್ಲಿ ಇದನ್ನು ಸ್ಥಾಪಿಸಲಾಗಿದೆ;
ಬೆಂಗಳೂರಿನ ಮೊಟ್ಟ ಡಿಜಿಟಲ್ ಜನಸಂಖ್ಯಾ ಗಡಿಯಾರ (Population Clock ) ಶುಕ್ರವಾರ (ನವೆಂಬರ್ 8)ರಂದು ಸ್ಥಾಪನೆಯಾಗಿದೆ. ಇದನ್ನು ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಅಂಡ್ ಎಕನಾಮಿಕ್ ಚೇಂಜ್ (ISEC) ಸಂಸ್ಥೆಯ ಬಳಿ ಸ್ಥಾಪಿಸಲಾಗಿದೆ. ಈ ಡಿಜಿಟಲ್ ಮಾಪಕವು ಕರ್ನಾಟಕ ಮತ್ತು ಭಾರತದ ನೈಜ ಸಮಯದ (Real Time) ಜನಸಂಖ್ಯೆಯ ಅಂದಾಜು ಲೆಕ್ಕಾಚಾರ ಪ್ರದರ್ಶಿಸಲಿದೆ. ರಾಜ್ಯದ ಜನಸಂಖ್ಯೆಯನ್ನು ಪ್ರತಿ 1 ನಿಮಿಷ 10 ಸೆಕೆಂಡುಗಳಿಗೆ ಮತ್ತು ದೇಶದ ಜನಸಂಖ್ಯೆಯನ್ನು ಪ್ರತಿ 2 ಸೆಕೆಂಡಿಗೆ ಈ ಮಾಪಕ ಅಪ್‌ಡೇಟ್ ಮಾಡಲಿದೆ ಎಂದು ʼದಿ ಹಿಂದೂʼ ಪತ್ರಿಕೆ ವರದಿ ಮಾಡಿದೆ.
ದೇಶದ ಜನಸಂಖ್ಯೆಯ ಬೆಳವಣಿಗೆಯ ಬಗ್ಗೆ ಅರಿವು ಮೂಡಿಸುವ ಮತ್ತು ಸಂಶೋಧಕರು ಮತ್ತು ವಿದ್ವಾಂಸರಿಗೆ ಅಧಿಕೃತ ಅಂಕಿಅಂಶ ಒದಗಿಸುವ ಉದ್ದೇಶದಿಂದ ಐಎಸ್‌ಇಸಿ ಪ್ರವೇಶದ್ವಾರದಲ್ಲಿ ಇದನ್ನು ಸ್ಥಾಪಿಸಲಾಗಿದೆ ಎಂದು ವರದಿಯಲ್ಲಿ ಬರೆಯಲಾಗಿದೆ.
ಭಾರತದಾದ್ಯಂತ 16 ರಾಜ್ಯಗಳಲ್ಲಿ 18 ಜನಸಂಖ್ಯಾ ಸಂಶೋಧನಾ ಕೇಂದ್ರಗಳಲ್ಲಿ (PRC) ಡಿಜಿಟಲ್ ಜನಸಂಖ್ಯೆ ಗಡಿಯಾರಗಳನ್ನು ಸ್ಥಾಪಿಸಲಾಗಿದೆ. ಬೆಂಗಳೂರಿನಲ್ಲಿ ಡಿಜಿಟಲ್ ಜನಸಂಖ್ಯೆ ಗಡಿಯಾರವನ್ನು ಐಎಸ್‌ಇಸಿ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಯೋಜನೆಯಡಿ ಸ್ಥಾಪಿಸಲಾಗಿದೆ.
ಐಎಸ್‌ಇಸಿಯ ಜನಸಂಖ್ಯಾ ಸಂಶೋಧನಾ ಕೇಂದ್ರದ (ಪಿಆರ್‌ಸಿ) ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಸಿ.ಎಂ. ಲಕ್ಷ್ಮಣ ಪತ್ರಿಕೆಗೆ ಈ ಕುರಿತು ಮಾತನಾಡಿ “ಗಡಿಯಾರದ ಮೂಲಕ ನಿಖರ ಅಂಕಿ ಅಂಶ ನೀಡುವ ಉದ್ದೇಶದಿಂದ ಉಪಗ್ರಹ ಸಂಪರ್ಕ ಸಾಧಿಸಲಾಗಿದೆ. ಇದು ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಎಲ್ಲಾ ಅಗತ್ಯ ಘಟಕಗಳೊಂದಿಗೆ ಸ್ವಯಂ ಕಾರ್ಯನಿರ್ವಹಿಸಲಿವೆ,ʼʼ ಎಂದು ಹೇಳಿದರು.
ʼʼಜನಸಂಖ್ಯಾ ಬದಲಾವಣೆಗಳ ಬಗ್ಗೆ ಸಾರ್ವಜನಿಕ ತಿಳಿವಳಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಇದು ತ್ವರಿತ ಜನಸಂಖ್ಯೆಯ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿಯ ಅಗತ್ಯದ ನಿರಂತರ ಕರೆಗಂಟೆಯಾಗಿ ಕಾರ್ಯನಿರ್ವಹಿಸುತ್ತದೆ,ʼʼ ಎಂದು ಅವರು ಹೇಳಿದರು.
ಏಪ್ರಿಲ್ 2023ರಲ್ಲಿ ಚೀನಾವನ್ನು ಹಿಂದಿಕ್ಕಿದ ನಂತರ ಭಾರತವು ಈಗ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ನವೆಂಬರ್ 8ರ ಹೊತ್ತಿಗೆ ದೇಶದ ಪ್ರಸ್ತುತ ಜನಸಂಖ್ಯೆಯು 145 ಕೋಟಿ (1.45 ಶತಕೋಟಿ) ದಾಟಿದೆ.