ಬೆಂಗಳೂರು ಪ್ರವಾಹ | ಅಪಾರ್ಟ್‌ಮೆಂಟ್ ಬಾಗಿಲು ಒಡೆದು ತೆರವುಗೊಳಿಸಿ: ಡಿಸಿಎಂ ಖಡಕ್ ಆದೇಶ

ನೀರು, ವಿದ್ಯುತ್ ಮತ್ತು ಆಹಾರ ಇಲ್ಲದೆ, ಮನೆಯೊಳಗೆ ಬೀಗ ಹಾಕಿಕೊಂಡಿರುವ ಸುಮಾರು 20 ಫ್ಲ್ಯಾಟ್ ಇವೆ. ಅದರಲ್ಲಿರುವ ಜನರ ಆರೋಗ್ಯಕ್ಕೆ ಅಪಾಯ ಇರುವುದರಿಂದ ಒಕ್ಕಲಿಗರ ಸಂಘ ಮತ್ತು ಪೊಲೀಸರ ನೆರವು ಪಡೆದು ಬಾಗಿಲು ಒಡೆದು ಅವರನ್ನು ರಕ್ಷಿಸಲು ಬಿಬಿಎಂಪಿಗೆ ಆದೇಶ ನೀಡಲಾಗಿದೆ ಎಂದು ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ.

Update: 2024-10-24 07:15 GMT
ಡಿ.ಕೆ. ಶಿವಕುಮಾರ್‌ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
Click the Play button to listen to article

ಬೆಂಗಳೂರಿನಲ್ಲಿ ಭಾರಿ ಮಳೆಗೆ ಜಲಾವೃತಗೊಂಡಿರುವ ನಗರದ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್‌ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರವಾಹವಿದ್ದರೂ ಅಪಾರ್ಟ್‌ಮೆಂಟ್‌ಗೆ ಬೀಗ ಹಾಕಿ ಮನೆಯೊಳಗೆ ಇರುವವರನ್ನು ಬಾಗಿಲು ಒಡೆದು ಅಲ್ಲಿಂದ ತೆರವುಗೊಳಿಸುವಂತೆ ಆದೇಶಿಸಿದ್ದಾರೆ.

ಭಾರಿ ಮಳೆಯ ಕಾರಣಕ್ಕೆ ಪ್ರವಾಹ ಇದ್ದರೂ ಅಪಾರ್ಟ್‌ಮೆಂಟ್‌ನಲ್ಲಿ ಸುಮಾರು 20 ಫ್ಲ್ಯಾಟ್‌ಗಳ ಮಾಲೀಕರು‌ ಹೊರಗಿನಿಂದ ಬೀಗ ಜಡಿದು ತೆರವಿಗೆ ನಿರಾಕರಿಸಿ ಒಳಗೇ ಇರುವುದರಿಂದ ಅವರ ಜೀವ ಅಪಾಯದಲ್ಲಿದೆ. ಹಾಗಾಗಿ ಬಾಗಿಲು ಒಡೆದು ಒಳನುಗ್ಗಿ ಅವರನ್ನು ತೆರವು ಮಾಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಡಿಸಿಎಂ ಸೂಚಿಸಿದ್ದಾರೆ.

ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು, “ಶೇ95 ರಷ್ಟು ತೆರವು ಕಾರ್ಯ ಪೂರ್ಣಗೊಂಡಿದ್ದು, 5% ರಷ್ಟು ಮಾತ್ರ ಬಾಕಿ ಉಳಿದಿದೆ. 603 ಫ್ಲಾಟ್‌ಗಳಲ್ಲಿ ಸಾವಿರಾರು ಜನರು ವಾಸಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಕೇಂದ್ರ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರಾಗಿದ್ದು ಹೆಚ್ಚಿನವರನ್ನು ಸ್ಥಳಾಂತರಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

ಅಪಾರ್ಟ್‌ಮೆಂಟ್‌ನ ಆಡಳಿತದೊಂದಿಗೆ ಮಾತುಕತೆ ನಡೆಸಿ ತುರ್ತು ಕಾರ್ಯಾಚರಣೆಗಾಗಿ ಅಪಾರ್ಟ್ಮೆಂಟ್ ಅನ್ನು ಬಿಬಿಎಂಪಿ ಸ್ವಾಧೀನಪಡಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.

“ನೀರು, ವಿದ್ಯುತ್ ಮತ್ತು ಆಹಾರ ಇಲ್ಲದೆ, ಮನೆಯೊಳಗೆ ಬೀಗ ಹಾಕಿಕೊಂಡಿರುವ ಸುಮಾರು 20 ಫ್ಲ್ಯಾಟ್ ಇವೆ. ಅದರಲ್ಲಿರುವ ಜನರ ಆರೋಗ್ಯಕ್ಕೆ ಅಪಾಯ ಇರುವುದರಿಂದ ಒಕ್ಕಲಿಗರ ಸಂಘ ಮತ್ತು ಪೊಲೀಸರ ನೆರವು ಪಡೆದು ಬಾಗಿಲು ಒಡೆದು ಅವರನ್ನು ರಕ್ಷಿಸಲು ಬಿಬಿಎಂಪಿಗೆ ಆದೇಶ ನೀಡಲಾಗಿದೆ’’ ಎಂದು ಶಿವಕುಮಾರ್ ಹೇಳಿದ್ದಾರೆ.

ನಿವಾಸಿಗಳು ತಮ್ಮ ಮನೆಗಳೊಂದಿಗೆ ಇರುವ ಭಾವನಾತ್ಮಕ ಸಂಬಂಧದ ಕಾರಣಕ್ಕೆ ಅದರಿಂದ ಹೊರಗೆ ಬರಲು ನಿರಾಕರಿಸಿರಬಹುದು, ಆದರೆ ಅವರ ಸುರಕ್ಷತೆಯೂ ನಮಗೆ ಮುಖ್ಯ ಎಂದು ಅವರು ಹೇಳಿದ್ದಾರೆ. ಅವರನ್ನು ಒಂದು ವಾರದವರೆಗೆ ಹತ್ತಿರದ ಹೋಟೆಲ್‌ಗಳಲ್ಲಿ ಇರಿಸಲಾಗುವುದು, ಪರಿಸ್ಥಿತಿ ಸಹಜವಾದ ನಂತರ ಅವರನ್ನು ಅವರ ಮನೆಗಳಿಗೆ ಹಿಂತಿರುಗಲು ಅವಕಾಶ ನೀಡಲಾಗುವುದು ಎಂದು ಡಿಸಿಎಂ ಹೇಳಿದ್ದಾರೆ.

ಇದೇ ವೇಳೆ ಅವರು, ಪ್ರವಾಹದ ಮೂಲವನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಪ್ರದೇಶವು ಮೊದಲು ಜೌಗು ಪ್ರದೇಶವಾಗಿತ್ತು ಮತ್ತು ಹತ್ತಿರದ ಕೆರೆಯ ಬಫರ್ ವಲಯವಾಗಿತ್ತು. ಅಗತ್ಯ ಕ್ರಮ ಕೈಗೊಂಡು ಪ್ರವಾಹಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಯಾವುದೇ ಪ್ರಾಣ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಡಿಸಿಎಂ ಹೇಳಿದ್ದಾರೆ.

Tags:    

Similar News