ಬೆಂಗಳೂರು: ಕಸ ಎಸೆಯುವವರಿಗೆ 'ರಿಟರ್ನ್ ಗಿಫ್ಟ್'; ಮನೆ ಬಾಗಿಲಿಗೆ ವಾಪಸ್ ಬರಲಿದೆ ತ್ಯಾಜ್ಯ
ನಗರದ ಎಲ್ಲಾ 198 ವಾರ್ಡ್‌ಗಳಲ್ಲಿ ನಿಯೋಜಿಸಲಾಗಿರುವ ಮಾರ್ಷಲ್‌ಗಳಿಗೆ ನಿಯಮ ಉಲ್ಲಂಘಿಸುವವರನ್ನು ಗುರುತಿಸಿ ವಿಡಿಯೋ ದಾಖಲಿಸುವ ಜವಾಬ್ದಾರಿ ನೀಡಲಾಗಿದೆ. ಒಮ್ಮೆ ತಪ್ಪಿತಸ್ಥರನ್ನು ಪತ್ತೆಹಚ್ಚಿದ ನಂತರ, ಸಿಕ್ಕಿರುವ ತ್ಯಾಜ್ಯವನ್ನು ಅವರ ಮನೆಗಳಿಗೆ ಮರಳಿ ನೀಡಿ 'ಜವಾಬ್ದಾರಿ'ಯ ಸಂದೇಶ ಸಾರಲಾಗುತ್ತದೆ.
ಪದೇ ಪದೇ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದು ನಿಯಮ ಉಲ್ಲಂಘಿಸುವ ವಿರುದ್ಧ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಯಮಿತ (BSWML) ಕಠಿಣ ಕ್ರಮಕ್ಕೆ ಮುಂದಾಗಿದೆ.ರಸ್ತೆಯಲ್ಲಿ ಕಸ ಎಸೆಯುವವರ ಮನೆ ಬಾಗಿಲಿಗೇ ಅವರ ತ್ಯಾಜ್ಯವನ್ನು ಮರಳಿ ತಲುಪಿಸಿ ಪಾಠ ಕಲಿಸಲು ನಿರ್ಧರಿಸಿದೆ.
ಕಡೆಯ ಅಸ್ತ್ರ ಎಂದ ಸಿಇಒ
ದಂಡ ವಿಧಿಸುವುದು, ಜಾಗೃತಿ ಅಭಿಯಾನಗಳು ಮತ್ತು ಮನೆ ಮನೆ ಸಮೀಕ್ಷೆಗಳಂತಹ ಕ್ರಮಗಳು ಅನಗತ್ಯವಾಗಿ ಕಸ ಎಸೆಯುವವರನ್ನು ತಡೆಯಲು ವಿಫಲವಾದ ಹಿನ್ನೆಲೆಯಲ್ಲಿ ಈ 'ಕಡೆಯ ಅಸ್ತ್ರ'ವನ್ನು ಪ್ರಯೋಗಿಸಲಾಗುತ್ತಿದೆ ಎಂದು ಬಿಎಸ್‌ಡ್ಲ್ಯೂಎಮ್‌ಎಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕರೀಗೌಡ ಅವರು ಹೇಳಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಪದೇ ಪದೇ ಎಚ್ಚರಿಕೆ ನೀಡಿದರೂ, ಅನೇಕ ಜನರು ನಮ್ಮ ವಾಹನಗಳಿಗೆ ತ್ಯಾಜ್ಯ ನೀಡುವ ಬದಲು ರಸ್ತೆಗಳಲ್ಲಿ ಸುರಿಯುತ್ತಿದ್ದಾರೆ. ಈ ಕ್ರಮವು ಅವರನ್ನು ಹೊಣೆಗಾರರನ್ನಾಗಿ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.
ವಾರ್ಡ್ ಮಾರ್ಷಲ್‌ಗಳ ನೇಮಕ, ವಿಡಿಯೋ ಸಾಕ್ಷ್ಯ
ನಗರದ ಎಲ್ಲಾ 198 ವಾರ್ಡ್‌ಗಳಲ್ಲಿ ನಿಯೋಜಿಸಲಾಗಿರುವ ಮಾರ್ಷಲ್‌ಗಳಿಗೆ ನಿಯಮ ಉಲ್ಲಂಘಿಸುವವರನ್ನು ಗುರುತಿಸಿ ವಿಡಿಯೋ ದಾಖಲಿಸುವ ಜವಾಬ್ದಾರಿ ನೀಡಲಾಗಿದೆ. ಒಮ್ಮೆ ತಪ್ಪಿತಸ್ಥರನ್ನು ಪತ್ತೆಹಚ್ಚಿದ ನಂತರ, ಸಿಕ್ಕಿರುವ ತ್ಯಾಜ್ಯವನ್ನು ಅವರ ಮನೆಗಳಿಗೆ ಮರಳಿ ನೀಡಿ 'ಜವಾಬ್ದಾರಿ'ಯ ಸಂದೇಶ ಸಾರಲಾಗುತ್ತದೆ. ಮನೆ ಮನೆ ಕಸ ಸಂಗ್ರಹ ವ್ಯವಸ್ಥೆ ಸಮರ್ಪಕವಾಗಿರುವ ಪ್ರದೇಶಗಳಲ್ಲಿನ 'ಅಪರಾಧಿಗಳನ್ನು' ಮಾತ್ರ ಈ ಯೋಜನೆಯಡಿಯಲ್ಲಿ ಗುರಿಯಾಗಿಸಲಾಗಿದೆ ಎಂದು ಬಿಎಸ್‌ಡ್ಲ್ಯೂಎಮ್‌ಎಲ್ ಹೇಳಿದೆ.
ವ್ಯವಸ್ಥೆಯಲ್ಲಿನ ದೋಷಗಳ ಬಗ್ಗೆ ತಜ್ಞರ ಎಚ್ಚರಿಕೆ
ಆದರೆ, ಕಸದ ಸಮಸ್ಯೆಗೆ ವ್ಯವಸ್ಥೆಯಲ್ಲಿರುವ ನ್ಯೂನತೆಗಳೂ ಕಾರಣ ಎಂದು ನಾಗರಿಕ ತಜ್ಞರು ಎಚ್ಚರಿಸಿದ್ದಾರೆ. ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಆಟೋ ಟಿಪ್ಪರ್‌ಗಳ ಕೊರತೆ, ಕಸ ಸಂಗ್ರಹದ ವೇಳಾಪಟ್ಟಿಯಲ್ಲಿನ ಏರುಪೇರು, ಹಾಗೂ ಕಷ್ಟಕರ ಮಾರ್ಗಗಳಲ್ಲಿ ಕಸ ಸಂಗ್ರಹ ವಾಹನಗಳು ಬಾರದೇ ಇರುವುದು ಕೂಡ ಇದಕ್ಕೆ ಕಾರಣ ಎಂದು ಅವರು ಹೇಳುತ್ತಾರೆ.
ತಪ್ಪಿತಸ್ಥರನ್ನು ಪತ್ತೆಹಚ್ಚುವುದು ಕಷ್ಟ
ಅನೇಕ ಬಾರಿ ರಾತ್ರಿ ವೇಳೆಯಲ್ಲಿ ಅಥವಾ ಚಲಿಸುವ ವಾಹನಗಳಿಂದ ಕಸ ಎಸೆಯುವುದರಿಂದ ಅಪರಾಧಿಗಳನ್ನು ಪತ್ತೆಹಚ್ಚುವುದು ಕಷ್ಟಕರ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಈವರೆಗೆ ಪ್ರತಿ ವಾರ್ಡ್‌ನಲ್ಲಿ ಕನಿಷ್ಠ ಒಬ್ಬ 'ನಿರಂತರ ಕಸ ಎಸೆಯುವವರನ್ನು' ಗುರುತಿಸಲಾಗಿದ್ದು, ಇದು ನಗರದ ಬೃಹತ್ ಸಮಸ್ಯೆಯ ಸಣ್ಣ ಭಾಗವಷ್ಟೇ ಎಂದು ಬಿಎಸ್‌ಡಬ್ಲ್ಯೂಎಂಎಲ್ ಹೇಳಿದೆ.
ಸ್ವಚ್ಛ ಸರ್ವೇಕ್ಷಣೆಯಲ್ಲಿ ಕಳಪೆ ಸ್ಥಾನ: 5ನೇ ಕೊಳಕು ನಗರ
ಒಂದು ಕಾಲದಲ್ಲಿ 'ಭಾರತದ ಸ್ವಚ್ಛ ಮತ್ತು ಹಸಿರು ಟೆಕ್ ಹಬ್' ಎಂದು ಕರೆಯಲ್ಪಡುತ್ತಿದ್ದ ಬೆಂಗಳೂರು, ಇತ್ತೀಚಿನ ರಾಷ್ಟ್ರೀಯ ಸ್ವಚ್ಛತಾ ಶ್ರೇಯಾಂಕಗಳಲ್ಲಿ ಕಳಪೆ ಪ್ರದರ್ಶನ ನೀಡಿದೆ. ಸ್ವಚ್ಛ ಸರ್ವೇಕ್ಷಣ್ 2025 ಸಮೀಕ್ಷೆಯ ಪ್ರಕಾರ, ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಬೆಂಗಳೂರು ದೇಶದ ಐದನೇ ಕೊಳಕು ನಗರ ಎಂದು ಸ್ಥಾನ ಪಡೆದಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸುರಂಗ ರಸ್ತೆಗಳು ಮತ್ತು ಫ್ಲೈಓವರ್‌ಗಳಂತಹ ಉನ್ನತ ಮಟ್ಟದ ಮೂಲಸೌಕರ್ಯ ಯೋಜನೆಗಳನ್ನು ಮುನ್ನಡೆಸುತ್ತಿರುವಾಗಲೂ, ನಗರದ ಈ ಕಳಪೆ ಪ್ರದರ್ಶನವು ಆಡಳಿತ ವ್ಯವಸ್ಥೆಯ ಬಗ್ಗೆ ಟೀಕೆಗೆ ಕಾರಣವಾಗಿದೆ.
ಬೆಂಗಳೂರು ಕುಸಿದಿದ್ದರೆ, ಇಂದೋರ್, ಸೂರತ್ ಮತ್ತು ನವಿ ಮುಂಬೈ 'ಸೂಪರ್ ಸ್ವಚ್ಛ ಲೀಗ್'ಗೆ ಸೇರಿ ತಮ್ಮ ಅತ್ಯುತ್ತಮ ಸ್ವಚ್ಛತಾ ಪ್ರಯತ್ನಗಳಿಗಾಗಿ ಗುರುತಿಸಿಕೊಂಡಿವೆ. ಅಹಮದಾಬಾದ್, ಭೋಪಾಲ್ ಮತ್ತು ಲಕ್ನೋ ನಗರಗಳು 'ಭಾರತದ ಹೊಸ ಸ್ವಚ್ಛ ನಗರಗಳು' ಎಂದು ಘೋಷಿಸಲ್ಪಟ್ಟಿವೆ.
ನಗರ ವ್ಯವಹಾರಗಳ ಸಚಿವಾಲಯವು ಈ ವರ್ಷದ ಸಮೀಕ್ಷೆಯಲ್ಲಿ ಮಹಾನಗರಗಳಿಗೆ ಸುಧಾರಿತ ಮೌಲ್ಯಮಾಪನ ಚೌಕಟ್ಟನ್ನು ಪರಿಚಯಿಸಿದೆ. ಇದು ಕಸ ನಿರ್ವಹಣೆಯಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಗುರಿ ಹೊಂದಿದೆ.