
ಮಜುಂದಾರ್-ಶಾ
ಅಸಮರ್ಥ ನಗರಪಾಲಿಕೆಯಿಂದ ಬೆಂಗಳೂರು ಕೊಳಕು: ಕಿರಣ್ ಮಜುಂದಾರ್-ಶಾ
ನಾಗರಿಕರು ಕಸ ಸುರಿಯದೆ ಸಹಕರಿಸಬೇಕು. ನಗರವನ್ನು ಸ್ವಚ್ಛವಾಗಿಡಲು ಪೌರಕಾರ್ಮಿಕರಿಗೆ ಉತ್ತಮ ಉಪಕರಣಗಳು ಹಾಗೂ ತರಬೇತಿ ನೀಡುವುದು ಅಗತ್ಯ
ನಗರದಲ್ಲಿ ಹೆಚ್ಚುತ್ತಿರುವ ಕಸ, ಅಸಮರ್ಪಕ ತ್ಯಾಜ್ಯ ನಿರ್ವಹಣೆ ಹಾಗೂ ನಾಗರಿಕ ಪ್ರಜ್ಞೆಯ ಕೊರತೆ ಕುರಿತು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್-ಶಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಬ್ಲಾಕ್‌ಬಕ್ ಮುಖ್ಯಸ್ಥ ರಾಜೇಶ್ ಯಬಾಜಿ ಅವರು ರಸ್ತೆಗುಂಡಿಗಳ ಸಮಸ್ಯೆಯಿಂದ ತಮ್ಮ ಸಂಸ್ಥೆಯನ್ನು ಬೇರೆಡೆ ಸ್ಥಳಾಂತರಿಸುವುದಾಗಿ (ಬಳಿಕ ಬೇರೆ ರಾಜ್ಯಕ್ಕಲ್ಲ ಎಂದು ಸ್ಪಷ್ಟನೆ ನೀಡಿದ್ದರು) ಹೇಳಿದ ಬಳಿಕ ಐಟಿ ದಿಗ್ಗಜರಾದ ಮೋಹನ್‌ದಾಸ್ ಪೈ ಸೇರಿದಂತೆ ಹಲವರು ಬೆಂಗಳೂರು ನಿರ್ವಹಣೆ ಸಂಬಂಧ ಸರ್ಕಾರದ ವಿರುದ್ಧ ಟೀಕಾಸ್ತ್ರ ಎಸೆದಿದ್ದರು.
ಈಗ ಬೆಂಗಳೂರಿನ ಕಸದ ಸಮಸ್ಯೆ ಮತ್ತು ನೈರ್ಮಲ್ಯದ ಬಗ್ಗೆಯೂ ಐಟಿ-ಬಿಟಿ ಖ್ಯಾತನಾಮರು ಟೀಕಾಸ್ತ್ರ ಎಸೆಯಲು ಆರಂಭಿಸಿದ್ದಾರೆ. ಕಿರಣ್ ಮಜುಂದಾರ್-ಶಾ ಅವರು, “ನಾಗರಿಕ ಪ್ರಜ್ಞೆಯ ಕೊರತೆ ಮತ್ತು ನಗರದ ಕಸವನ್ನು ನಿರ್ವಹಿಸುವಲ್ಲಿ ಬಿಬಿಎಂಪಿ ಅಸಮರ್ಥವಾಗಿರುವುದರಿಂದ ಬೆಂಗಳೂರು ಕೊಳಕಾಗಿದೆ. ನಾಗರಿಕರು ಕಸ ಸುರಿಯದೆ ಸಹಕರಿಸಬೇಕು. ನಗರವನ್ನು ಸ್ವಚ್ಛವಾಗಿಡಲು ಪೌರಕಾರ್ಮಿಕರಿಗೆ ಉತ್ತಮ ಉಪಕರಣಗಳು ಹಾಗೂ ತರಬೇತಿ ನೀಡುವುದು ಅಗತ್ಯ” ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
ಮಜುಂದಾರ್-ಶಾ ಅವರ ಹೇಳಿಕೆಗಳಿಗೆ ನಾಗರಿಕರಿಂದಲೂ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಒಬ್ಬ ಬಳಕೆದಾರ "ಬನಶಂಕರಿ ಮುಖ್ಯರಸ್ತೆ ಹೊಲಸಿನಿಂದ ಆವೃತವಾಗಿದೆ. ಪಾದಚಾರಿಗಳಿಗೆ ಇದು ದುಃಸ್ವಪ್ನವಾಗಿದೆ" ಎಂದು ಒಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಮತ್ತೊಬ್ಬರು ಡಬ್ಲ್ಯೂಸಿಸಿ (Waste Collection Centers) ಕೇಂದ್ರಗಳು ಎಲ್ಲಾ ರೀತಿಯ ಒಣ ತ್ಯಾಜ್ಯ, ಪೀಠೋಪಕರಣಗಳನ್ನು ಸ್ವೀಕರಿಸಬೇಕು, ಇಲ್ಲವಾದರೆ ಬೆಂಗಳೂರಿಗೆ ಕಪ್ಪು ಚುಕ್ಕೆಗಳು ಮುಂದುವರಿಯುತ್ತವೆ ಎಂದು ಸಲಹೆ ನೀಡಿದರು.
ಇನ್ನೊಬ್ಬರು “ಸರಿಯಾದ ಪಾದಚಾರಿ ಮಾರ್ಗಗಳಿಲ್ಲ, ಲೇನ್ ಗುರುತುಗಳಿಲ್ಲ. ದೇಶದಲ್ಲಿ ಹೆಚ್ಚು ತೆರಿಗೆ ನೀಡುವ ನಗರವಾಗಿದ್ದರೂ, ಅಧಿಕಾರಿಗಳು ನಾಗರಿಕರ ಹಿತಾಸಕ್ತಿಯನ್ನು ಕಡೆಗಣಿಸುತ್ತಿದ್ದಾರೆ” ಎಂದು ಕಟುವಾಗಿ ಟೀಕಿಸಿದರು.
"ಸರಿಯಾದ ಪಾದಚಾರಿ ಮಾರ್ಗಗಳಿಲ್ಲ, ಲೇನ್ ಗುರುತುಗಳಿಲ್ಲ. ದೇಶದಲ್ಲಿ ಹೆಚ್ಚು ತೆರಿಗೆ ನೀಡುವ ನಗರವಾಗಿದ್ದರೂ, ಅಧಿಕಾರಿಗಳು ನಾಗರಿಕರ ಹಿತಾಸಕ್ತಿಯನ್ನು ಕಡೆಗಣಿಸುತ್ತಿದ್ದಾರೆ" ಎಂದು ಮತ್ತೊಬ್ಬ ಬಳಕೆದಾರರು ಕಟುವಾಗಿ ಟೀಕಿಸಿದ್ದಾರೆ.
ಇತ್ತ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಕೈಗೊಂಡಿರುವ ಸಮಯದಲ್ಲೇ ಅವರ ಹೇಳಿಕೆಗಳು ಪ್ರಸ್ತುತವಾಗಿವೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಬೆಂಗಳೂರು ನಗರಕ್ಕೆ ಅನ್ಯಾಯವಾಗಿ ಟೀಕೆಗಳು ಬರುತ್ತಿವೆ, ಪ್ರಧಾನ ಮಂತ್ರಿ ಮನೆ ಪಕ್ಕದಲ್ಲೂ ಈ ರೀತಿಯ ಸಮಸ್ಯೆಗಳಿವೆ ಎಂದು ಪ್ರತಿಕ್ರಿಯಿಸಿದ್ದರು.
ಮೂಲಸೌಕರ್ಯ ಕೊರತೆ ಬಗ್ಗೆ ಉದ್ಯಮಿಗಳಿಂದ ಆಕ್ರೋಶ
ಬೆಂಗಳೂರು ನಗರದ ನಿರಂತರ ಕಸದ ಸಮಸ್ಯೆ ಮತ್ತು ಮೂಲಸೌಕರ್ಯದ ಕಳಪೆ ನಿರ್ವಹಣೆ ಕುರಿತು ಪ್ರಮುಖ ಉದ್ಯಮಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್-ಶಾ ಮಾತ್ರವಲ್ಲ ಉದ್ಯಮಿ ಟಿ.ವಿ. ಮೋಹನದಾಸ್ ಪೈ ಇಬ್ಬರೂ ನಗರ ಆಡಳಿತದ ವೈಫಲ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ಜುಲೈ 2025ರಲ್ಲಿ ಪ್ರಕಟವಾದ ಸ್ವಚ್ಛ ಸರ್ವೇಕ್ಷಣ್ 2025 ಫಲಿತಾಂಶದಲ್ಲಿ ಬೆಂಗಳೂರು ದೇಶದ ಪ್ರಮುಖ ನಗರಗಳಲ್ಲಿ ಐದನೇ ಅತಿ ಕೊಳಕು ನಗರವಾಗಿ ಸ್ಥಾನ ಪಡೆದಿದ್ದು, ಇದನ್ನು ನೋಡಿ ಮೋಹನದಾಸ್ ಪೈ ಅವರು “ಇದು ನಗರಕ್ಕೂ ರಾಜ್ಯಕ್ಕೂ ದೊಡ್ಡ ಅವಮಾನ. ಬಿಬಿಎಂಪಿ ಹಾಗೂ ಸರ್ಕಾರ ನಗರವನ್ನು ಸ್ವಚ್ಛವಾಗಿಡಲು ಸಾಧ್ಯವಾಗದಿರುವುದು ಭಯಾನಕ ಆಡಳಿತದ ನಿದರ್ಶನ” ಎಂದು ಟೀಕಿಸಿದ್ದರು.
ಕಿರಣ್ ಮಜುಂದಾರ್-ಶಾ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವುದು ಇದು ಎರಡನೇ ಬಾರಿ. ಕಳೆದ ವಾರ ಜಿಬಿಎ ಮಲ್ಲೇಶ್ವರಂ ಪ್ರದೇಶದಲ್ಲಿ ನಡೆಸಿದ ಸ್ವಚ್ಛತಾ ಕಾರ್ಯದ ಮೊದಲು ಮತ್ತು ನಂತರದ ಫೋಟೋಗಳನ್ನು ಹಂಚಿಕೊಂಡಿದ್ದರೂ, ಅನೇಕರು ಕೆಲಸದ ಗುಣಮಟ್ಟವನ್ನು ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಮಜುಂದಾರ್-ಶಾ, “ಪ್ರಯತ್ನಕ್ಕೆ ಪೂರ್ಣ ಅಂಕಗಳು, ಆದರೆ ಉತ್ತಮ ಗುಣಮಟ್ಟದ ಕೆಲಸವೇ ಮುಖ್ಯ. ಇಂತಹ ಕಳಪೆ ಪೂರ್ಣಗೊಳಿಸುವಿಕೆಗೆ ಹೆಮ್ಮೆಪಡುವ ಅಗತ್ಯವಿಲ್ಲ” ಎಂದು ಹೇಳಿದ್ದರು.