
ORR ದಟ್ಟಣೆ ತಗ್ಗಿಸಲು ಅಜೀಂ ಪ್ರೇಮ್ ಮೊರೆ ಹೋದ ಸಿಎಂ
ʼಬ್ಲ್ಯಾಕ್ ಬಕ್ʼ ಪರಿಣಾಮ: ದಟ್ಟಣೆ ನಿವಾರಣೆಗೆ ವಿಪ್ರೋ ಮೇಲೆ ಹೆಚ್ಚಿದ ಒತ್ತಡ
ಒಆರ್‌ಆರ್ ರಸ್ತೆಯಲ್ಲಿ ದಟ್ಟಣೆ, ರಸ್ತೆ ಗುಂಡಿಯಿಂದ ಬೇಸತ್ತು ಬೆಂಗಳೂರಿನಿಂದ ಹೊರಹೋಗುವುದಾಗಿ ಬ್ಲ್ಯಾಕ್ ಬಕ್ ಕಂಪನಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರಿಂದ ಎಚ್ಚೆತ್ತ ಸರ್ಕಾರ ಇಬ್ಲೂರು ಜಂಕ್ಷನ್ ಬಳಿ ದಟ್ಟಣೆ ನಿವಾರಣೆಗೆ ವಿಪ್ರೋ ಕ್ಯಾಂಪಸ್ ಮೇಲೆ ಒತ್ತಡ ಹಾಕುತ್ತಿದೆ.
ಬೆಂಗಳೂರು ಹೊರ ವರ್ತುಲ ರಸ್ತೆಗಳಲ್ಲಿ(ಒಆರ್‌ಆರ್) ಹೆಚ್ಚುತ್ತಿರುವ ಭಾರೀ ವಾಹನ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವತ್ತ ರಾಜ್ಯ ಸರ್ಕಾರ ಮುಂದಡಿ ಇಟ್ಟಿದೆ. ಬಹುಪಾಲು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಹೊರವರ್ತುಲ ರಸ್ತೆ ಸುತ್ತಮುತ್ತ ತಮ್ಮ ಕ್ಯಾಂಪಸ್, ಶಾಖೆಗಳನ್ನು ತೆರೆದಿರುವುದರಿಂದ ವಾಹನ ದಟ್ಟಣೆ ವಿಪರೀತವಾಗಿದೆ.
ಇಬ್ಲೂರು ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ವಿಪ್ರೋ ಸಂಸ್ಥೆಯ ಬೆಂಬಲ ಕೋರಿದೆ. ಪೀಕ್ ಅವರ್ ಸಂದರ್ಭಗಳಲ್ಲಿ ವಿಪ್ರೋ ಕ್ಯಾಂಪಸ್ ಆವರಣದಲ್ಲಿ ಸಾರ್ವಜನಿಕ ವಾಹನಗಳ ಪ್ರವೇಶಕ್ಕೆ ಅನುವು ಮಾಡಿಕೊಡಲು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್‌ಜೀ ಅವರಿಗೆ ಪತ್ರ ಬರೆದಿದ್ದಾರೆ.
ಇಬ್ಲೂರು ಜಂಕ್ಷನ್‌ನಿಂದ ವಿಪ್ರೋ ಕ್ಯಾಂಪಸ್‌ನಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವುದರಿಂದ ದೊಡ್ಡಕನ್ನೆಲ್ಲಿ, ಸರ್ಜಾಪುರ, ದೇವರಬಿಸನಹಳ್ಳಿ ಸೇರಿದಂತೆ ಹಲವೆಡೆ ಸಂಪರ್ಕ ಸುಲಭವಾಗಲಿದೆ. ಈ ಅವಧಿಯಲ್ಲಿ ಶೇ೩೦ ರಷ್ಟು ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂಬ ಸಂಚಾರಿ ಪೊಲೀಸರು ಅಭಿಪ್ರಾಯ ಆಧರಿಸಿ ಸಿಎಂ ಸಿದ್ದರಾಮಯ್ಯ ಅವರು ಸೆ.19 ರಂದು ಪತ್ರ ಬರೆದಿದ್ದರು. ಅಂದೇ ಅಜೀಂ ಪ್ರೇಮ್ ಜೀ ಅವರು ದೀಪಿಕಾ ವಿದ್ಯಾರ್ಥಿ ವೇತನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು. ಇದರಿಂದ ಶೀಘ್ರವೇ ವಿಪ್ರೋ ಕ್ಯಾಂಪಸ್ ಮೂಲಕ ಸೀಮಿತ ವಾಹನಗಳ ಸಂಚಾರಕ್ಕೆ ಅವಕಾಶ ದೊರೆಯುವ ಸಾಧ್ಯತೆ ಇದೆ.
ಹೊರವಲಯದಲ್ಲಿ ಹೆಚ್ಚು ಕಂಪನಿಗಳು
ಬೆಂಗಳೂರು ಹೊರವಲಯದ ವರ್ತುಲ ರಸ್ತೆಯ ಇಕ್ಕೆಲಗಳಲ್ಲೇ ಅತಿ ಹೆಚ್ಚು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು, ಸ್ಟಾರ್ಟ್ ಅಪ್‌ಗಳು ತಲೆ ಎತ್ತಿರುವುದರಿಂದ ವಾಹನ ಸಂಚಾರವೂ ಹೆಚ್ಚಿದೆ. ಪೀಕ್ ಅವರ್‌ಗಳಲ್ಲಿ ಉಂಟಾಗುವ ವಾಹನ ದಟ್ಟಣೆ ಈ ಭಾಗದಲ್ಲಿ ದೊಡ್ಡ ತಲೆ ನೋವಾಗಿದೆ.
ಇನ್ನು ಬೆಂಗಳೂರಿನಲ್ಲಿ ಸಿಲ್ಕ್ ಬೋರ್ಡ್, ಇಬ್ಲೂರು ಜಂಕ್ಷನ್, ಮಾರತ್ತಹಳ್ಳಿ ಬ್ರಿಡ್ಜ್ ಹಾಗೂ ಹೆಬ್ಬಾಳ ಮೇಲ್ಸೇತುವೆ ಅತಿ ಹೆಚ್ಚಿನ ಪ್ರಮಾಣದ ವಾಹನ ದಟ್ಟಣೆ ಕಂಡುಬರಲಿದ್ದು, ಸಿಲಿಕಾನ್ ಸಿಟಿಗೆ ಕಳಂಕ ತಂದೊಡ್ಡಿದೆ. ಈ ಕಳಂಕ ತೊಳೆಯಲು ರಾಜ್ಯ ಸರ್ಕಾರ ಹೊರವರ್ತುಲ ರಸ್ತೆಗಳಲ್ಲಿ ಕ್ಯಾಂಪಸ್‌ಗಳಲ್ಲಿ ಖಾಸಗಿ ವಾಹನಗಳ ಪ್ರವೇಶಕಪ್ಕೆ ಅವಕಾಶ ಕೊಡಿಸುವ ಮೂಲಕ ವಾಹನ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ.
ಕಿರಿದಾದ ರಸ್ತೆಯಲ್ಲಿ ಸವಾರರ ಪರದಾಟ
ಇಬ್ಲೂರು ಜಂಕ್ಷನ್ ಬೆಂಗಳೂರಿನ ಅತ್ಯಂತ ವಾಹನ ದಟ್ಟಣೆಯ ಪ್ರದೇಶ. ಇಲ್ಲಿ ಸರ್ಜಾಪುರ ರಸ್ತೆ, ಹೊರವಲಯ ರಸ್ತೆ (ORR), ಬೆಳ್ಳಂದೂರು, HSR ಲೇಔಟ್ ಹಾಗೂ ಕೈಕೊಂಡರಹಳ್ಳಿಯಿಂದ ಬರುವ ಫೀಡರ್ ರಸ್ತೆಗಳು ಒಂದೇ ಸ್ಥಳದಲ್ಲಿ ಸೇರುತ್ತವೆ. ಒಆರ್‌ಆರ್ ಉದ್ದಕ್ಕೂ ಮೆಟ್ರೋ ಮತ್ತು ಮೂಲಸೌಕರ್ಯ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆ ಇನ್ನಷ್ಟು ಕಿರಿದಾಗಿ, ಜಂಕ್ಷನ್‌ನ ಸಾಮರ್ಥ್ಯ ಕಡಿಮೆಯಾಗಿದೆ.
ಟೆಕ್ ಪಾರ್ಕ್ ಮತ್ತು ವಸತಿ ಪ್ರದೇಶಗಳ ಸಮೀಪವಿರುವ ಸಿಗ್ನಲ್ ವ್ಯವಸ್ಥೆಯನ್ನು ನಿರಂತರವಾಗಿ ಅಸಮರ್ಪಕವಾಗಿದ್ದು, ಪಾದಚಾರಿ ಮೂಲಸೌಕರ್ಯ ಹಾಳಾಗಿರುವುದು ಕೂಡ ದಟ್ಟಣೆಗೆ ಕಾರಣವಾಗಿದೆ.
ವಾಸಯೋಗ್ಯ ಬೆಂಗಳೂರಿಗೆ ಕೊಡುಗೆ
ಹೊರ ವರ್ತುಲ ರಸ್ತೆಯಲ್ಲಿ ದಟ್ಟಣೆಯಿಂದಾಗಿ ಚಲನಶೀಲತೆ, ಉತ್ಪಾದಕತೆ ಮತ್ತು ನಗರ ಜೀವನದ ಗುಣಮಟ್ಟದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಹಾಗಾಗಿ ಸಂಚಾರ ಅಡಚಣೆ ಹಾಗೂ ಪ್ರಯಾಣಿಕರ ಸಮಸ್ಯೆ ನಿವಾರಣೆಗೆ ಕಾರ್ಯಸಾಧ್ಯವಾದ ಯೋಜನೆಯನ್ನು ರೂಪಿಸಲು ವಿಪ್ರೋ ಸಂಸ್ಥೆಯು ಅಧಿಕಾರಿಗಳಿಗೆ ಸ್ಪಂದಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಬರೆದಿರುವ ಪತ್ರದಲ್ಲಿ ವಿನಂತಿಸಿದ್ದಾರೆ.
ದಟ್ಟಣೆಗೆ ಉದ್ಯಮಿಗಳಲ್ಲಿ ಬೇಸರ, ಆಕ್ರೋಶ
ಬೆಳ್ಳಂದೂರು ರಸ್ತೆಯಲ್ಲಿ ಸಂಚಾರ ದಟ್ಟಣೆಯಿಂದ ಬೇಸರಗೊಂಡಿದ್ದ ಬ್ಲ್ಯಾಕ್‌ಬಕ್ ಸಂಸ್ಥೆ ಇತ್ತೀಚೆಗೆ ಸಿಇಒ ರಾಜೇಶ್ ಯಬಾಜಿ ಅವರು ಎಕ್ಸ್ ಖಾತೆಯಲ್ಲಿ ಮಾಡಿದ್ದ ಪೋಸ್ಟ್ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಹೊರವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ, ರಸ್ತೆ ಗುಂಡಿ ಹಾಗೂ ದೂಳಿನಿಂದ ಬೇಸತ್ತುಕಚೇರಿಯನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಬ್ಲ್ಯಾಕ್ ಬಕ್ ಸಂಸ್ಥೆ ಪೋಸ್ಟ್ ಮಾಡಿತ್ತು. ನಿತ್ಯ ಕಚೇರಿಗೆ ಬರಲು ಸಹೋದ್ಯೋಗಿಗಳು ಒಂದೂವರೆ ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕಂಪನಿ ಸ್ಥಳಾಂತರಿಸಲು ನಿರ್ಧರಿಸಿದ್ದೇವೆ ಎಂದು ರಾಜೇಶ್ ಯಬಾಜಿ ಬರೆದುಕೊಂಡಿದ್ದರು.
ಇದಕ್ಕೆ ಐಟಿ ದಿಗ್ಗಜರಾದ ಮೋಹನ್‌ದಾಸ್ ಪೈ, ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಅವರು ಕೂಡಲೇ ಕ್ರಮ ವಹಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ತುರ್ತು ಸಭೆ ಕರೆದು, ರಸ್ತೆಗುಂಡಿ ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಎಚ್ಚೆರಿಕೆಯ ಹೇಳಿಕೆಗೆ ಬ್ಲ್ಯಾಕ್ ಬಕ್ ಸಂಸ್ಥೆ ಉಲ್ಟಾ ಹೊಡೆದಿತ್ತು.
ಹೊರವರ್ತುಲ ರಸ್ತೆಯಲ್ಲಿ ದಟ್ಟಣೆ ಏರಿಕೆ
2025ರ ಜೂನ್ ವೇಳೆಗೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಹೊರ ವರ್ತುಲ ರಸ್ತೆಯ ಉದ್ದಕ್ಕೂ ವಾರದ ಎಲ್ಲ ದಿನವೂ ವಾಹನ ದಟ್ಟಣೆ ಪ್ರಮಾನ ಶೇ 45ರಷ್ಟು ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಕ್ಯಾಂಪಸ್‌ಗಳ ಸಹಕಾರದೊಂದಿಗೆ ಅಲ್ಪಾವಧಿ ಹಾಗೂ ದೀರ್ಘಾವಧಿ ಪರಿಹಾರಗಳನ್ನು ಕಂಡುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ.