ಮುಸ್ಲಿಮನೆಂದರೆ ಉಗ್ರನೆನ್ನುತ್ತಾರೆ, ಒಬ್ಬೊಂಟಿ ಮಾಡುತ್ತಾರೆ: ಗಾಯಕ ಲಕ್ಕಿ ಅಲಿ
ಬೆಂಗಳೂರು ಮೂಲದ ಗಾಯಕ ತಮ್ಮ ʼಎಕ್ಸ್ʼ ಖಾತೆಯಲ್ಲಿ ತಮ್ಮ ನೋವು ತೋಡಿಕೊಂಡು ಶುಕ್ರವಾರ ಪೋಸ್ಟ್ ಮಾಡಿದ್ದು, ಈ ಜಗತ್ತಿನಲ್ಲಿ ಮುಸ್ಲಿಮರೆಂದರೆ ಉಗ್ರರು ಎಂದು ಬಿಂಬಿಸಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.;
"ಇಂದು ಮುಸ್ಲಿಮನೆಂದರೆ ಉಗ್ರ ಎನ್ನುತ್ತಾರೆ. ಮುಸ್ಲಿಮನಾಗಿ ಇರುವುದು ಒಬ್ಬೊಂಟಿ ಭಾವನೆಗೆ ಕಾರಣವಾಗುತ್ತದೆ" ಎಂದು ಖ್ಯಾತ ಗಾಯಕ ಲಕ್ಕಿ ಅಲಿ ನೋವು ತೋಡಿಕೊಂಡಿದ್ದಾರೆ.
ಬೆಂಗಳೂರು ಮೂಲದ ಗಾಯಕ ತಮ್ಮ ʼಎಕ್ಸ್ʼ ಖಾತೆಯಲ್ಲಿ ತಮ್ಮ ನೋವು ತೋಡಿಕೊಂಡು ಶುಕ್ರವಾರ ಪೋಸ್ಟ್ ಮಾಡಿದ್ದು, ಈ ಜಗತ್ತಿನಲ್ಲಿ ಮುಸ್ಲಿಮರೆಂದರೆ ಉಗ್ರರು ಎಂದು ಬಿಂಬಿಸಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.
"ಮುಸ್ಲಿಮನಾಗಿ ಇರುವುದು ಈ ಜಗತ್ತಿನಲ್ಲಿ ಒಬ್ಬೊಂಟಿ ಭಾವನೆ ಮೂಡಿಸುತ್ತದೆ. ಅಲ್ಲಾಹುವಿನ ಮಾರ್ಗದಲ್ಲಿ ನಡೆಯುವುದೆಂದರೆ ಒಂಟಿತನದ ಪಯಣ. ಎಲ್ಲರೂ ಉಗ್ರ ಎಂದು ಕರೆಯುತ್ತಾರೆ. ಸ್ನೇಹಿತರು ಕೂಡ ದೂರಾಗುತ್ತಾರೆ" ಎಂದು ಲಕ್ಕಿ ಅಲಿ ಟ್ವೀಟ್ ಮಾಡಿದ್ದಾರೆ.
ನಟ ಮೆಹಮೂದ್ ಅವರ ಪುತ್ರರಾದ ಲಕ್ಕಿ ಅಲಿ ಅವರು ತಮ್ಮ ಮಾದಕ ದನಿ ಮತ್ತು ಹಾಡುಗಾರಿಕೆಯಿಂದ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ. ಅವರ ʼನಾ ತುಮ್ ಜಾನೋ ನ ಹಮ್ʼ, ʼಓ ಸನಮ್ʼ, ʼಏಕ್ ಪಲ್ ಕಾ ಜೀನಾʼ, ʼಹೈರಾತ್ʼ, ʼಆ ಭೀ ಜಾʼ.. ಮುಂತಾದ ಗೀತೆಗಳು ಇಂದಿಗೂ ಭಾರೀ ಜನಪ್ರಿಯ ಹಾಡುಗಳಾಗಿವೆ.
ಬೆಂಗಳೂರಿನಲ್ಲಿ ನೆಲೆಸಿರುವ ಲಕ್ಕಿ ಅಲಿ ಅವರು ಕಳೆದ ಕೆಲವು ವರ್ಷಗಳಿಂದ ಜಮೀನು ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ ಕೋರ್ಟು, ಕಚೇರಿ ಅಲೆಯುತ್ತಿದ್ದಾರೆ. ಪ್ರಭಾವಿ ಐಎಎಸ್ ಅಧಿಕಾರಿ ಮತ್ತು ಆಕೆಯ ಪತಿ ತಮ್ಮ ಮಾಲೀಕತ್ವದ ಜಮೀನನ್ನು ಕಬಳಿಸಿದ್ದಾರೆ ಎಂದು ಇತ್ತೀಚೆಗೆ ಅವರು ಲೋಕಾಯುಕ್ತಕ್ಕೂ ದೂರು ಸಲ್ಲಿಸಿದ್ದರು.