ಐನಾಪುರದಲ್ಲಿ ಗೋಮಾಂಸ ಸಾಗಾಟ ಶಂಕೆ: ಲಾರಿಗೆ ಬೆಂಕಿ, ಎಂಟು ಮಂದಿ ಬಂಧನ

ರಾಯಬಾಗ ತಾಲ್ಲೂಕಿನ ಕುಡಚಿಯಿಂದ ಹೈದರಾಬಾದ್‌ಗೆ ಮಾಂಸವನ್ನು ಸಾಗಿಸುತ್ತಿದ್ದ ವಾಹನವು ಐನಾಪುರ ಪಟ್ಟಣವನ್ನು ದಾಟುತ್ತಿದ್ದಾಗ ಈ ಘಟನೆ ಸಂಭವಿಸಿದೆ.

Update: 2025-09-23 05:18 GMT

ಐನಾಪುರದಲ್ಲಿ ಲಾರಿಗೆ ಬೆಂಕಿ

Click the Play button to listen to article

ತಾಲ್ಲೂಕಿನ ಐನಾಪುರ ಪಟ್ಟಣದಲ್ಲಿ ಗೋಮಾಂಸ ಸಾಗಿಸುತ್ತಿದ್ದ ವಾಹನವನ್ನು ತಡೆದು ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಈ ಸಂಬಂಧ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು, ಒಟ್ಟು ಎಂಟು ಮಂದಿಯನ್ನು ಬಂಧಿಸಿದ್ದಾರೆ.

ರಾಯಬಾಗ ತಾಲ್ಲೂಕಿನ ಕುಡಚಿಯಿಂದ ಹೈದರಾಬಾದ್‌ಗೆ ಮಾಂಸವನ್ನು ಸಾಗಿಸುತ್ತಿದ್ದ ವಾಹನವು ಐನಾಪುರ ಪಟ್ಟಣವನ್ನು ದಾಟುತ್ತಿದ್ದಾಗ ಈ ಘಟನೆ ಸಂಭವಿಸಿದೆ. ವಾಹನದಲ್ಲಿ ಗೋಮಾಂಸ ಸಾಗಿಸಲಾಗುತ್ತಿದೆ ಎಂದು ಶಂಕಿಸಿದ ಕೆಲವು ಕಾರ್ಯಕರ್ತರು ವಾಹನವನ್ನು ಅಡ್ಡಗಟ್ಟಿ ಬೆಂಕಿ ಹಚ್ಚಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ವಾಹನವು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು.

ಘಟನೆಯ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಡಾ. ಭೀಮಾಶಂಕರ ಗುಳೇದ, "ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಮೂವರನ್ನು ಬಂಧಿಸಲಾಗಿದೆ. ಈ ಪ್ರಕರಣದ ಮುಖ್ಯ ಆರೋಪಿಯನ್ನು ಕಲಬುರಗಿಯಲ್ಲಿ ಬಂಧಿಸಲಾಗಿದೆ" ಎಂದು ತಿಳಿಸಿದ್ದಾರೆ.

"ಇನ್ನು, ಲಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಈ ಘಟನೆಯಲ್ಲಿ ಅವರ ಪಾತ್ರದ ಕುರಿತು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಕೃತ್ಯ ಎಸಗಿದ ಕಾರ್ಯಕರ್ತರು ಯಾವ ಸಂಘಟನೆಗೆ ಸೇರಿದವರು ಎಂಬುದರ ಬಗ್ಗೆಯೂ ತನಿಖೆ ಮುಂದುವರೆದಿದೆ" ಎಂದು ಎಸ್ಪಿ ವಿವರಿಸಿದರು. ಈ ಘಟನೆಯಿಂದಾಗಿ ಐನಾಪುರದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

Tags:    

Similar News