Bengaluru Underpass| ಬಿಬಿಎಂಪಿಯಿಂದ ಬರೀ ಕೆಂಪು ತೇಪೆ; ಮಳೆ ಬಂದಾಗ ಗಮನವಿರಲಿ ಜೋಕೆ!!

ಬೆಂಗಳೂರಿನ ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ನಿಂತು ಸಾರ್ವಜನಿಕರು ಹಾಗೂ ವಾಹನ ಸವಾರರು ಇಂದಿಗೂ ಪರದಾಡುತ್ತಿದ್ದಾರೆ. ಆದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿಯು) ಅಂಡರ್‌ಪಾಸ್‌ಗಳ ಗೋಡೆಗಳ ಮೇಲೆ ಕೆಂಪು ಬಣ್ಣದ ಪೇಂಟ್‌ನಲ್ಲಿ ಪಟ್ಟಿ ಹಾಗೂ ಡೇಂಜರ್ ಎಂದು ಬರೆದು ತೇಪೆ ಹಚ್ಚುವ ಕೆಲಸ ಮಾಡಿದೆ.

By :  Hitesh Y
Update: 2024-06-21 03:08 GMT
ಕೆ.ಆರ್‌ ಸರ್ಕಲ್‌ ಅಂಡರ್‌ಪಾಸ್‌

ಬೆಂಗಳೂರಿನ ಕೆ.ಆರ್‌. ವೃತ್ತ ಬಳಿ ಅಂಡರ್‌ಪಾಸ್‌ ಒಂದಿದೆ! ಮಳೆ ಬಂದರೆ ಕೊಚ್ಚೆ ಹರಿಯುವ ಈ ಅಂಡರ್‌ಪಾಸ್‌ ಮೂಲಕ ವಾಹನ ಸವಾರರು ಪಡುವ ಪಡಿಪಾಟಲು ಅಷ್ಟಿಷ್ಟಲ್ಲ! ಒಮ್ಮೆಯಂತೂ ಕಾರೊಂದು ಮುಳುಗಿ ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬರು ಸಾವಿಗೀಡಾದ ಸುದ್ದಿಯಿಂದ ಈ ಅಂಡರ್‌ಪಾಸ್‌ ರಾಷ್ಟ್ರಾದ್ಯಂತ ಸುದ್ದಿ ಮಾಡಿ ಕುಖ್ಯಾತಿ ಗಳಿಸಿತ್ತು!

ಆದರೂ, ಬಿಬಿಎಂಪಿ ಮಂದಿಗೆ ಜನರ ಪ್ರಾಣದ ಬಗ್ಗೆ ಅಷ್ಟೇನೂ ಆಸ್ಥೆಯಿಲ್ಲ! ಕಾಟಾಚಾರಕ್ಕೆ ಕೆಂಪು ಬಣ್ಣದ ತೇಪೆ ಹಚ್ಚಿ ಡೇಂಜರ್‌ ಎಂದು ಬರೆದು ತನ್ನ ಎಂದಿನ ಉದಾಸೀನ ಪ್ರವೃತ್ತಿಯನ್ನು ಮುಂದುವರಿಸಿದೆ. ಮಳೆ ಬಂದರೆ ಆ ತೇಪೆಯೂ ಕಾಣುವುದಿಲ್ಲ, ಅಕ್ಷರವೂ ಕಾಣುವುದಿಲ್ಲ. ಅಪಾಯ ಕಟ್ಟಿಟ್ಟ ಬುತ್ತಿ!

ಒಟ್ಟಾರೆಯಾಗಿ ಬೆಂಗಳೂರಿನ ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ನಿಂತು ಸಾರ್ವಜನಿಕರು ಹಾಗೂ ವಾಹನ ಸವಾರರು ಇಂದಿಗೂ ಪರದಾಡುತ್ತಿದ್ದಾರೆ. ಕಳೆದ ವರ್ಷ ಸುರಿದ ಮಳೆಯಿಂದ ಬೆಂಗಳೂರಿನ ಕೆ.ಆರ್. ಸರ್ಕಲ್‌ನಲ್ಲಿ ಕಾರು ಮುಳುಗಿ ಆಂಧ್ರಪ್ರದೇಶದ ಯುವತಿಯೊಬ್ಬರು ಮೃತಪಟ್ಟದಿದ್ದರು. ಆದರೆ, ಯುವತಿ ಮೃತಪಟ್ಟು ಒಂದು ವರ್ಷವಾದರೂ ಅಂಡರ್‌ಪಾಸ್‌ಗಳ ನಿರ್ವಹಣೆಗೆ ಬಿಬಿಎಂಪಿ ಇಂದಿಗೂ ಸೂಕ್ತ ಕ್ರಮ ಕೈಗೊಂಡಿಲ್ಲ.

ಬೆಂಗಳೂರಿನ ಅಂಡರ್‌ಪಾಸ್‌ ದುರಂತದಿಂದ ಕಳೆದ ವರ್ಷ ಆಂಧ್ರಪ್ರದೇಶದ ವಿಜಯವಾಡದ ಭಾನುರೇಖಾ ಎನ್ನುವವರು ದಾರುಣವಾಗಿ ಸಾವನ್ನಪ್ಪಿದ್ದರು. ವಾರಾಂತ್ಯದಲ್ಲಿ ಕುಟುಂಬದವರೊಂದಿಗೆ ಸಂತೋಷದಿಂದ ಇದ್ದ ಭಾನುರೇಖಾ ಅವರು ಬಿಬಿಎಂಪಿ ಹಾಗೂ ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಂಡಿದ್ದರು. ಈ ವಿಷಯವು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಬೆಂಗಳೂರಿನ ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದ ಭಾನುರೇಖಾ ಅವರನ್ನು ನೋಡಲು ಅವರ ಕುಟುಂಬ ಸದಸ್ಯರು ಬೆಂಗಳೂರಿಗೆ ಬಾಡಿಗೆ ಕಾರು ಮಾಡಿಕೊಂಡು ಬಂದಿದ್ದರು. ಭಾನುವಾರ ರಜಾ ದಿನವಾದ್ದರಿಂದ ಕಬ್ಬನ್‌ಪಾರ್ಕ್‌ ನೋಡಲು ಕುಟುಂಬದ 6 ಜನ ಸದಸ್ಯರು ಹಾಗೂ ಡ್ರೈವರ್ ಸೇರಿ ಏಳು ಮಂದಿ ಕಾರಿನಲ್ಲಿ ಕೆ.ಆರ್‌ ಸರ್ಕಲ್‌ ಅಂಡರ್‌ಪಾಸ್‌ ಮಾರ್ಗವಾಗಿ ಸಾಗುತ್ತಿದ್ದರು. ಆ ವೇಳೆ ಈ ದುರಂತ ಸಂಭವಿಸಿತ್ತು. ಸಂತೋಷದಿಂದ ಕಾಲ ಕಳೆಯಬೇಕಾದ ಕುಟುಂಬವು ಕಣ್ಣೀರು ಸುರಿಸಿತ್ತು.

ಈ ದುರಂತ ಸಂಭವಿಸಿ ಒಂದು ವರ್ಷವೇ ಕಳೆದಿದೆ. ಕಳೆದ ವರ್ಷ ಮೇ ತಿಂಗಳಿನಲ್ಲಿ ಕೆ.ಆರ್ ಸರ್ಕಲ್‌ನಲ್ಲಿ ಕಾರು ಮುಳುಗಿ ಆಂಧ್ರಪ್ರದೇಶದ ವಿಜಯವಾಡದ ಭಾನುರೇಖಾ ಎನ್ನುವವರು ಮೃತಪಟ್ಟಿದ್ದರು. ಈ ದುರಂತ ಸಂಭವಿಸಿದ ಬೆನ್ನಲ್ಲೇ ಕೆ.ಆರ್ ಸರ್ಕಲ್ ಸೇರಿದಂತೆ ಬೆಂಗಳೂರಿನ ಅಂಡರ್‌ಪಾಸ್‌ಗಳಲ್ಲಿ ಮುಂಜಾಗ್ರತಾಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ತಿಳಿಸಿತ್ತು. ಆದರೆ, ಈ ನಿಟ್ಟಿನಲ್ಲಿ ಮಹತ್ವದ ಬದಲಾವಣೆಗಳು ಆಗಿಲ್ಲ.

ನಗರದಲ್ಲಿ ಇಂದಿಗೂ ಸಣ್ಣ ಮಳೆಯಾದರೂ ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲುತ್ತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುತ್ತಿದ್ದಾರೆ. ಕೆ.ಆರ್ ಸರ್ಕಲ್, ಭಾಷ್ಯಂಸರ್ಕಲ್ ಹಾಗೂ ಕನ್ನಿಂಗ್ಯಾಮ್ ರಸ್ತೆಯ ಅಂಡರ್‌ಪಾಸ್‌ಗಳಲ್ಲಿ ಮಳೆ ಬಂದರೆ ನೀರು ನಿಲ್ಲುತ್ತದೆ. ಇದಲ್ಲದೇ ನಗರದ ಹಲವು ಪ್ರಮುಖ ಅಂಡರ್‌ಪಾಸ್‌ಗಳಲ್ಲೂ ಇದೇ ಪರಿಸ್ಥಿತಿ ಇದೆ. ಸಾಧಾರಣ ಮಳೆಗೂ ರಸ್ತೆ ಹಾಗೂ ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ನಿಲ್ಲುತ್ತಿದೆ.

ಕಣ್ಣಿಗೇ ಕಾಣದ ಡೇಂಜರ್ ಪಟ್ಟಿ

ಬಿಬಿಎಂಪಿಯು ನಗರದ ಪ್ರಮುಖ ಅಂಡರ್‌ಪಾಸ್‌ಗಳಲ್ಲಿ ಅಪಾಯದ ಮಟ್ಟವನ್ನು ತಿಳಿಸುವ ಉದ್ದೇಶದಿಂದ ಅಂಡ್‌ಪಾಸ್‌ಗಳ ಗೋಡೆಗಳ ಮೇಲೆ ಕೆಂಪು ಬಣ್ಣದ ಪೇಂಟ್‌ನಿಂದ ಪಟ್ಟಿ ಹಾಗೂ ಡೇಂಜರ್ ಎಂದು ಬರೆದಿದೆ. ಆದರೆ, ಸಾಮಾನ್ಯ ಜನರಿಗೆ ಇದು ಕಾಣುವುದೇ ಇಲ್ಲ. ಮಳೆ ನೀರು ನಿಂತರೆ, ಈ ಬಣ್ಣ ಕಾಣುವುದಿಲ್ಲ. ಅಲ್ಲದೇ ಇದು ಅಪಾಯ ಮಟ್ಟ ಎಂದು ಎಚ್ಚರಿಸುವ ಉದ್ದೇಶದಿಂದ ಬಳಿಯಲಾಗಿರುವ ಬಣ್ಣ ಎಂದು ಸಹ ಸಾಮಾನ್ಯ ಜನರಿಗೆ ತಿಳಿಯುವುದಿಲ್ಲ. ಡೇಂಜರ್ ಎಂದು ಕೆಂಪು ಬಣ್ಣದಲ್ಲಿ ಬರೆದಿರುವ ಬರಹವು ಸಹ ಧೂಳು ಮತ್ತು ಮಣ್ಣಿನಿಂದ ಕಾಣದಂತಾಗಿದೆ.

ಬಿಬಿಎಂಪಿ ಹೇಳಿದ್ದ ಸುರಕ್ಷತಾ ಕ್ರಮಗಳು

ಕಳೆದ ವರ್ಷ ಮಳೆಯಿಂದ ದುರಂತ ಸಂಭವಿಸಿದ ನಂತರ, ನಗರದ ಅಂಡರ್‌ಪಾಸ್‌ಗಳಲ್ಲಿ ಮುಂಜಾಗ್ರತಾ ಕ್ರಮ ವಹಿಸುವುದಾಗಿ ಬಿಬಿಎಂಪಿ ಹೇಳಿತ್ತು. ಅಂಡರ್‌ಪಾಸ್‌ಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡುವುದಾಗಿಯೂ ತಿಳಿಸಿತ್ತು. ಅಂಡರ್‌ಪಾಸ್‌ನಲ್ಲಿ ನಿಲ್ಲುವ ನೀರಿನ ಪ್ರಮಾಣವನ್ನು ತಿಳಿಯಲು ಮೀಟರ್‌ಗೇಜ್‌ ಅಳಡಿಸಲು ಕ್ರಮವಹಿಸುವುದಾಗಿ ತಿಳಿಸಿತ್ತು. ಕೆಲವು ಅಂಡರ್‌ಪಾಸ್‌ಗಳಲ್ಲಿ ಬೆಳಕಿನ ಕೊರತೆ ಇದ್ದು, ವಿದ್ಯುತ್ ದೀಪ ಅಳವಡಿಸಲಾಗುವುದು ಹಾಗೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ನಿಗಾ ಇರಿಸಲಾಗುವುದು ಎಂದು ಹೇಳಿತ್ತು. ಬಿಬಿಎಂಪಿ ಹೇಳಿದರಲ್ಲಿ ಬಹುತೇಕ ವಿಷಯಗಳನ್ನು ಅಳವಡಿಸಿಕೊಂಡಿಲ್ಲ. ಇಂದಿಗೂ ಮಳೆ ಬಂದರೆ ಅಂಡರ್‌ಪಾಸ್‌ನಲ್ಲಿ ನೀರು ನಿಂತು ಸಮಸ್ಯೆ ಆಗುತ್ತಿದೆ ಎನ್ನುತ್ತಾರೆ ಸಾರ್ವಜನಿಕರು.

ಬಿಬಿಎಂಪಿ ತೆಗೆದುಕೊಂಡಿರುವ ಕ್ರಮಗಳೇನು ?

ನಗರದ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ಅಪಾಯ ಎದುರಾಗುತ್ತಿದೆ. ನೀರಿನ ಆಳ ತಿಳಿಯದೆ ವಾಹನ ಸವಾರರು ಅಂಡರ್‌ಪಾಸ್‌ಗಳಲ್ಲಿ ಸಿಲುಕಿ ಸಂಕಷ್ಟ ಎದುರಿಸುತ್ತಿದ್ದಾರೆ. ಕೆ.ಆರ್ ಸರ್ಕಲ್‌ನ ದುರಂತದ ನಂತರ ಬಿಬಿಎಂಪಿಯು ಕೆ.ಆರ್ ಸರ್ಕಲ್ ಸೇರಿದಂತೆ ಸುತ್ತಮುತ್ತಲಿನ ಅಂಡರ್‌ಪಾಸ್‌ಗಳಲ್ಲಿ  ಮಳೆ ನೀರಿನ ಅಪಾಯ ಮಟ್ಟವನ್ನು ಸೂಚಿಸಲು ಕೆಂಪು ಬಣ್ಣದ ಪಟ್ಟಿಯನ್ನು ಬಳಿದು, ಡೇಂಜರ್ ಎಂದು ಎಚ್ಚರಿಕೆಯ ಸಂದೇಶವನ್ನು ಬರೆಯಲಾಗಿದೆ. ಕೆಲವು ಅಂಡರ್‌ಪಾಸ್‌ಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕನ್ನಿಂಗ್ಯಾಮ್ ರಸ್ತೆಯ ಅಂಡರ್ ಪಾಸ್‌ನಲ್ಲಿ ವಿದ್ಯುತ್ ದೀಪವನ್ನು ಅಳವಡಿಸಲಾಗಿದೆಯಾದರೂ, ಬೆಳಿಗ್ಗೆ ಸಮಯದಲ್ಲಿ ಅಂಡರ್‌ಪಾಸ್‌ನಲ್ಲಿ ಕತ್ತಲು ಆವರಿಸಿರುತ್ತದೆ.  

ಅವೈಜ್ಞಾನಿಕ ಮ್ಯಾಜಿಕ್ ಬಾಕ್ಸ್‌ನಿಂದ ಸಮಸ್ಯೆ 

ಬೆಂಗಳೂರಿನ ಪ್ರಮುಖ ಭಾಗದಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ತಾತ್ಕಾಲಿಕವಾಗಿ ಕಂಡುಕೊಂಡ ಪರಿಹಾರವೇ ಈ ಮ್ಯಾಜಿಕ್ ಬಾಕ್ಸ್. ಯಾವುದೇ ಮುಂದಾಲೋಚನೆ ಇಲ್ಲದೆ ಅಂಡರ್‌ಪಾಸ್‌ಗಳ  ಮಾದರಿಯಲ್ಲಿ ಮ್ಯಾಜಿಕ್ ಬಾಕ್ಸ್‌ಗಳನ್ನು ಅಳವಡಿಸಲಾಗಿದ್ದು, ಇಂದಿಗೂ ನಗರದಲ್ಲಿ ಸಮಸ್ಯೆ ಆಗುತ್ತಿದೆ. ಬಳ್ಳಾರಿ ರಸ್ತೆಯ ಕಾವೇರಿ ಚಿತ್ರಮಂದಿರದ ಸಮೀಪದಲ್ಲಿ 2008ರಲ್ಲಿ ಪ್ರಾಯೋಗಿಕವಾಗಿ ಈ ಮ್ಯಾಜಿಕ್‌ ಬಾಕ್ಸ್ಅನ್ನು ಅಳವಡಿಸಲಾಗಿತ್ತು. 2008ರಲ್ಲಿ ಬಳ್ಳಾರಿ ರಸ್ತೆಯಲ್ಲಿನ ಸಂಚಾರ ದಟ್ಟಣೆಗೆ ತ್ವರಿತ ಪರಿಹಾರವಾಗಿ ಮ್ಯಾಜಿಕ್ ಬಾಕ್ಸ್ ಅಳವಡಿಸಲಾಗಿತ್ತು. ಅಂದಿನ ಬಿಬಿಎಂಪಿ ಆಯುಕ್ತ ಎಸ್.ಸುಬ್ರಹ್ಮಣ್ಯ ಅವರ ಅವಧಿಯಲ್ಲಿ ಇದನ್ನು ಅಳವಡಿಸಲಾಗಿತ್ತು. ಮ್ಯಾಜಿಕ್ ಬಾಕ್ಸ್ ಶಾಶ್ವತ ಪರಿಹಾರ ಎಂದು ಎಂದಿಗೂ ಉದ್ದೇಶಿಸಿರಿಲಿಲ್ಲ ಮತ್ತು ಶಾಶ್ವತ ಪರಿಹಾರದ ಬಗ್ಗೆ ಯೋಚಿಸಲು ಇದು ಸಕಾಲವಾಗಿದೆ ಎಂದು ಸುಬ್ರಹ್ಮಣ್ಯ ಅವರು ಹೇಳಿದ್ದರು.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಡೆರಹಿತ ಪ್ರವೇಶವನ್ನು ನೀಡುವ ಒತ್ತಡದಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದಿದ್ದರು. ಆದರೆ, ಇಂದಿಗೂ ಈ ಸಮಸ್ಯೆ ಪರಿಹಾರವಾಗಿಲ್ಲ. ಮ್ಯಾಜಿಕ್ ಬಾಕ್ಸ್‌ಗಳನ್ನು ತೆರವು ಮಾಡಲಾಗದ ಪರಿಸ್ಥಿತಿ ಮುಂದುವರಿದಿದ್ದು, ಇದರಿಂದ ಈ

ಮಾದರಿಯ ಅಂಡರ್‌ಪಾಸ್‌ಗಳಲ್ಲಿ ವಾಹನ ಸವಾರರು ಇಂದಿಗೂ ಪರದಾಡುತ್ತಿದ್ದಾರೆ.Full View

ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ: ಬಿಬಿಎಂಪಿ

ʻನಗರದಲ್ಲಿರುವ ಅಂಡರ್‌ಪಾಸ್‌ಗಳ ನಿರ್ವಹಣೆಗೆ ಬಿಬಿಎಂಪಿಯಿಂದ ಸೂಕ್ತ ಕ್ರಮ ತೆಗೆದುಕೊಂಡಿದೆʼ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ತಿಳಿಸಿದರು.

ಈ ಸಂಬಂಧ ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಅವರು, ʻಈಗಾಗಲೇ ನಗರದ ಮುಖ್ಯ ಅಂಡರ್‌ಪಾಸ್‌ಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ನಿಂತರೆ, ಅಪಾಯದ ಮಟ್ಟವನ್ನು ಸೂಚಿಸುವ ಉದ್ದೇಶದಿಂದ ಕೆಂಪು ಬಣ್ಣದ ಪೇಂಟ್ ಬಳಿಯಲಾಗಿದೆ. ಕ್ಯಾಮೆರಾಗಳನ್ನು ಹಾಗೂ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಅಲ್ಲದೇ ಪೊಲೀಸ್ ಇಲಾಖೆಯೊಂದಿಗೂ ಸಮನ್ವಯ ಸಾಧಿಸಲಾಗುತ್ತಿದ್ದು, ಮಳೆ ಬಂದು ಅಪಾಯ ಎದುರಾದರೆ ಕೂಡಲೇ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಲಿದ್ದಾರೆʼ ಎಂದರು. 

Tags:    

Similar News