Shiggaon By-election | ಮಗನ ಸ್ಪರ್ಧೆಯ ಪ್ರಸ್ತಾಪ ಇಟ್ಟಿಲ್ಲ- ಬಸವರಾಜ ಬೊಮ್ಮಾಯಿ ಸ್ಪಷ್ಟನೆ
ಉಪ ಚುನಾವಣೆಯಲ್ಲಿ ನಮಗೆ ದೊಡ್ಡ ಪ್ರಮಾಣದ ಬೆಂಬಲ ಸಿಗುವ ಭರವಸೆ ಇದೆ. ನಾನು ಸ್ಪರ್ಧೆ ಮಾಡಿದಾಗ ಸಿಕ್ಕ ಸುಮಾರು 36 ಸಾವಿರ ಗೆಲುವಿನ ಅಂತರ ಈ ಬಾರಿಯೂ ಸಿಗುವ ನಂಬಿಕೆ ಇದೆ. ಮಗನ ಸ್ಪರ್ಧೆಗೆ ಯಾವುದೇ ಪ್ರಸ್ತಾಪ ಇಟ್ಟಿಲ್ಲ..
ಶಿಗ್ಗಾವಿ ಸೇರಿದಂತೆ ಮೂರು ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಎರಡು-ಮೂರು ದಿನಗಳಲ್ಲಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ವಿಧಾನಸಭಾ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಕುರಿತು ಕೋರ್ ಕಮಿಟಿಯಲ್ಲಿ ಒಂದು ಸುತ್ತಿನ ಚರ್ಚೆ ಆಗಿದೆ. ಮೂರು ತಂಡಗಳು ಕ್ಷೇತ್ರಗಳಿಗೆ ತೆರಳಿ ಸ್ಥಳೀಯರ ಅಭಿಪ್ರಾಯ ಪಡೆದು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ನೀಡಿದ್ದಾರೆ. ಅದನ್ನು ಕೋರ್ ಕಮಿಟಿ ಸಭೆಯಲ್ಲಿಟ್ಟು ಚರ್ಚಿಸಿದ ಬಳಿಕ ಹೈಕಮಾಂಡ್‌ಗೆ ಪಟ್ಟಿ ಕೊಡುತ್ತೇವೆ ಎಂದು ಹೇಳಿದರು.
ಶಿಗ್ಗಾವಿ ನಾನು ಪ್ರತಿನಿಧಿಸುವ ಕ್ಷೇತ್ರವಾಗಿರುವ ಕಾರಣ ನನ್ನ ಮೇಲೆ ಹೆಚ್ಚು ಜವಾಬ್ದಾರಿ ಇದೆ. ನಮ್ಮ ಪಕ್ಷದ ಉಸ್ತುವಾರಿ ಕಾರ್ಯದರ್ಶಿ ರಾಧಾ ಮೋಹನ್ ಅಗರವಾಲ್ ಅವರು ಕ್ಷೇತ್ರಕ್ಕೆ ಭೇಟಿ ನೀಡಿ, ಸ್ಥಳೀಯರ ಜೊತೆ ಸಭೆ ನಡೆಸಿ ಅಭಿಪ್ರಾಯ ಪಡೆದಿದ್ದಾರೆ. ಅಲ್ಲಿ ಚುನಾವಣೆಗೆ ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿದ್ದೇವೆ. ಚುನಾವಣೆಯಲ್ಲಿ ನಮಗೆ ದೊಡ್ಡ ಪ್ರಮಾಣದ ಬೆಂಬಲ ಸಿಗುವ ಭರವಸೆ ಇದೆ. ನಾನು ಸ್ಪರ್ಧೆ ಮಾಡಿದಾಗ ಸಿಕ್ಕ ಸುಮಾರು 36 ಸಾವಿರ ಗೆಲುವಿನ ಅಂತರ ಈ ಬಾರಿಯೂ ಸಿಗುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಟಿಕೆಟ್ ನೀಡಿಕೆ ಬಗ್ಗೆ ಈಗಾಗಲೇ ಚರ್ಚೆ ಆಗಿದೆ. ಆಕಾಂಕ್ಷಿಗಳ ಪಟ್ಟಿ ಕೂಡ ಕೊಟ್ಟಿದ್ದಾರೆ. ಎರಡು ಮೂರು ದಿನಗಳಲ್ಲಿ ರಾಜ್ಯ ಕೋರ್ ಕಮಿಟಿ ಚರ್ಚೆ ಮಾಡಿ ಹೈಕಮಾಂಡ್‌ಗೆ ಪಟ್ಟಿ ಕೊಡುತ್ತೇವೆ. ಕೇಂದ್ರ ನಾಯಕರ ಜೊತೆಯೂ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಮಗನ ಸ್ಪರ್ಧೆಗೆ ಪ್ರಸ್ತಾಪ ಇಟ್ಟಿಲ್ಲ
ನನ್ನ ಮಗನ ಸ್ಪರ್ಧೆ ಬಗ್ಗೆ ನನಗೆ ಇಚ್ಚೆಯಿಲ್ಲ. ನಾನು ಆ ಪ್ರಸ್ತಾವನೆಯನ್ನು ನಾಯಕರ ಮುಂದೆ ಇಟ್ಟಿಲ್ಲ. ಕೋರ್ ಕಮಿಟಿ ಸಭೆಯಲ್ಲಿ ಈ ಕುರಿತು ಪ್ರಸ್ತಾಪ ಆಗಿತ್ತು. ಆದರೆ, ನಾನು ಆ ಸಭೆಗೆ ಹಾಜರಾಗದೇ ಇದ್ದುದ್ದರಿಂದ ನನ್ನ ಜೊತೆ ಚರ್ಚಿಸಿ ತೀರ್ಮಾನಿಸುವುದಾಗಿ ಪಕ್ಷದ ರಾಜ್ಯಾಧ್ಯಕ್ಷರು ಹೇಳಿದ್ದಾರೆ.
ಲೋಕಸಭಾ ಚುನಾವಣೆ ಬಳಿಕ ನನ್ನ ಪುತ್ರ ಎಲ್ಲಿಯೂ ಕ್ಷೇತ್ರದಲ್ಲಿ ಓಡಾಡಿಲ್ಲ. ನನ್ನ ಮಗನ ಹೆಸರನ್ನು ಬಹಳ ಜನರು ಸೂಚಿಸಿರಬಹುದು. ಆದರೆ ನಾವಂತೂ ಎಲ್ಲಿಯೂ ಹೆಸರು ಪ್ರಸ್ತಾಪ ಮಾಡಿಲ್ಲ. ಅರ್ಜಿಯನ್ನೂ ಹಾಕಿಲ್ಲ. ಅವನು ವ್ಯೆಯಕ್ತಿಕವಾಗಿ ವ್ಯಾಪಾರದ ಕಡೆ ಗಮನ ಕೊಟ್ಟಿದ್ದಾನೆ. ಅದಕ್ಕೆ ಹಿನ್ನಡೆ ಆಗಬಾರದು ಎಂತಲೂ ಇದೆ. ಜೊತೆಗೆ ಬೇರೆಯವರಿಗೆ ಅವಕಾಶ ಮಾಡಿಕೊಡುವ ಬಗ್ಗೆ ಆಲೋಚನೆ ನಡೆದಿದೆ ಎಂದು ಹೇಳಿದರು.
ಮಾಜಿ ಸಚಿವ ಮುರುಗೇಶ್ ನಿರಾಣಿ ಸ್ಪರ್ಧೆ ಮಾಡುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿರಾಣಿ ಅವರು ಬಂದು ಸ್ಪರ್ಧೆ ಮಾಡುವ ಬಗ್ಗೆ ಕೇಳಿದ್ದಾರೆ, ಆದರೆ ಹೊರಗಿನವರು ಬಂದು ಸ್ಪರ್ಧೆ ಮಾಡುವ ಬಗ್ಗೆ ಹೈಕಮಾಂಡ್ ಚರ್ಚೆ ಮಾಡಿ ತೀರ್ಮಾನ ಮಾಡಬೇಕು. ಸ್ಥಳೀಯರು ಬಿಟ್ಟು ಹೊರಗಿನವರಿಗೆ ಕೊಡುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಬೇಕು. ನಾನು ಸ್ಥಳೀಯವಾಗಿ ಇರುವ ಆಕಾಂಕ್ಷಿಗಳ ಜೊತೆ ಸಭೆ ನಡೆಸಿದ್ದೇನೆ. ಸುಮಾರು ಐವತ್ತಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಸುಮಾರು ಐದಾರು ಜನ ಗಂಭೀರವಾಗಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ಯೋಗೇಶ್ವರ ಪರ ಮಾತನಾಡಿದ್ದೇವೆ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಸ್ಪರ್ಧೆ ಮಾಡುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಐದಾರು ಜನ ಬಿಜೆಪಿ ಮುಖಂಡರು ಹೋಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸಿ.ಪಿ. ಯೋಗೇಶ್ವರ್ ಸ್ಪರ್ಧೆಯ ಬಗ್ಗೆ ಅವರಿಗೆ ಕೇಳಿದ್ದೇವೆ. ಕುಮಾರಸ್ವಾಮಿ ಅವರು ನಮ್ಮ ಪಕ್ಷದ ಹೈಕಮಾಂಡ್ ಜೊತೆ ಚರ್ಚೆ ಮಾಡುವುದಾಗಿ ಹೇಳಿದ್ದರು. ಚನ್ನಪಟ್ಟಣ ಕ್ಷೇತ್ರದ ಟಿಕೆಟನ್ನು ನಮ್ಮ ಪಕ್ಷದ ಹೈಕಮಾಂಡ್ ಹಾಗೂ ಕುಮಾರಸ್ವಾಮಿ ಅವರು ಸೇರಿ ತೀರ್ಮಾನ ಮಾಡುತ್ತಾರೆ.
ಸಿ.ಪಿ. ಯೋಗೇಶ್ವರ್ ಅವರ ಮನಸ್ಸಿನಲ್ಲಿ ಏನಿದೆ ಎಂದು ನಮಗೆ ಗೊತ್ತಿದೆ. ನಾವು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರೊಂದಿಗೆ ಸೇರಿ ಅವರ ಪರವಾಗಿ ಎಷ್ಟು ಪ್ರಯತ್ನ ಮಾಡಬೇಕೊ ಅದನ್ನು ಮಾಡಿದ್ದೇವೆ ಎಂದು ಹೇಳಿದರು.
ಎಸ್ಟಿ ಜನಾಂಗ ಆಕ್ರೋಶ
ಸಂಡೂರು ವಿಧಾನಸಭಾ ಕ್ಷೇತ್ರದ ಕುರಿತು ಕೇಳಿದ ಪ್ರಶ್ನೆಗೆ ಸಂಡೂರು ಎಸ್ಟಿ ಮೀಸಲು ಕ್ಷೇತ್ರವಾಗಿದ್ದು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಯಾವುದೇ ಅಕ್ರಮ ಆಗಿಲ್ಲ ಎಂದು ಮಾಜಿ ಸಚಿವ ನಾಗೇಂದ್ರ ಹೇಳುತ್ತಾರೆ. ಆದರೆ, ಮುಖ್ಯಮಂತ್ರಿಗಳು 187 ಕೋಟಿಯಲ್ಲಿ 89 ಕೋಟಿ ರೂ. ಅವ್ಯವಹಾರವಾಗಿದೆ. ಅದನ್ನು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಹಾಗಿದ್ದರೆ ಯಾರದು ಸತ್ಯ ಎಂದು ಪ್ರಶ್ನಿಸಿದರು. ಅವ್ಯವಹಾರ ಆಗದಿದ್ದರೆ ಇಡಿಯವರು ಯಾಕೆ ಕ್ರಮ ಕೈಗೊಂಡರು. ಇಡೀ ರಾಜ್ಯದ ಜನರು ಈ ಸರ್ಕಾರದ ವಿರುದ್ದ ಆಕ್ರೋಶಗೊಂಡಿದ್ದಾರೆ. ನಮ್ಮಮತ ಪಡೆದ ಸರ್ಕಾರ ನಮ್ಮ ಜನರಿಗೆ ದ್ರೋಹ ಮಾಡುತ್ತಿದೆ ಎಂದು ಎಸ್ಟಿ ಜನಾಂಗ ಆಕ್ರೋಶಗೊಂಡಿದೆ. ಅದರ ಪರಿಣಾಮ ಸಂಡೂರು ಉಪ ಚುನಾವಣೆಯ ಮೇಲೆ ಆಗುತ್ತದೆ ಎಂದು ಹೇಳಿದರು.
ಮುಡಾ ಅವ್ಯವಹಾರ ಸತ್ಯ
ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರೀಗೌಡ ರಾಜೀನಾಮೆ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಡಾದಲ್ಲಿ ಯಾವುದೇ ತಪ್ಪುಗಳಾಗಿಲ್ಲ, ಕಾನೂನು ಉಲ್ಲಂಘನೆ ಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಅವರೇ ಸೈಟ್ ವಾಪಸ್ಸು ಕೊಟ್ಟರು. ಮುಡಾ ಅವ್ಯವಹಾರ ತನಿಖೆ ನಡೆಯುವ ಸಂದರ್ಭದಲ್ಲಿ ನಾನು ತಪ್ಪು ಮಾಡಿಲ್ಲ. ರಾಜೀನಾಮೆ ಕೊಡಲ್ಲ ಅಂತ ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಈಗ ಮುಡಾ ಅಧ್ಯಕ್ಷ ರಿಂದ ರಾಜೀನಾಮೆ ಕೊಡಿಸಿದ್ದಾರೆ. ಇದರ ಅರ್ಥ ಅಲ್ಲಿ ಅವ್ಯವಹಾರ ಆಗಿದೆ ಎಂಬುದಾಗಿದೆ ಎಂದು ಹೇಳಿದರು.