ಬಾನು ಮುಷ್ತಾಕ್ ದಸರಾ ಉದ್ಘಾಟನೆ ವಿವಾದ; ಧರ್ಮಾಂಧರಿಂದ ವಿರೋಧ- ಸಿಎಂ ತಿರುಗೇಟು
ದಸರಾ ಸಾಂಸ್ಕೃತಿಕ ಹಬ್ಬ; ಇದು ಎಲ್ಲಾ ಜಾತಿ, ಧರ್ಮಗಳಿಗೂ ಸೇರಿದೆ. ನಿಸಾರ್ ಅಹಮದ್, ಟಿಪ್ಪು ಹೈದರ್ ಅಲಿ, ದಿವಾನ್ ಮಿರ್ಜಾ ಇಸ್ಮಾಯಿಲ್ ಕೂಡ ದಸರಾ ನಡೆಸಿದ್ದಾರೆ. ಇದಕ್ಕೆ ಧರ್ಮದ ಲೇಪನ ಹಾಕುವುದು ಸರಿಯಲ್ಲ ಎಂದು ಸಿಎಂ ಹೇಳಿದರು.;
ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ಬಗ್ಗೆ ಬಿಜೆಪಿ ನಾಯಕರು ವ್ಯಕ್ತಪಡಿಸುತ್ತಿರುವ ಆಕ್ಷೇಪಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧರ್ಮಾಂಧರು ಮಾತ್ರ ಬಾನು ಮುಷ್ತಾಕ್ ಹೆಸರನ್ನು ವಿರೋಧಿಸುತ್ತಾರೆ. ಕನ್ನಡಾಂಬೆಯ ಬಗ್ಗೆ ಹಳೆಯ ಹೇಳಿಕೆಗೂ, ಇಂದಿನ ದಸರಾ ಉದ್ಘಾಟನೆಗೂ ಸಂಬಂಧವಿಲ್ಲ. ಬಿಜೆಪಿ ನಾಯಕರು ಸದಾ ಯಾವುದಾದರೂ ನೆಪ ಹುಡುಕಿಕೊಂಡು ವಿರೋಧಿಸುತ್ತಾರೆ ಎಂದು ಕಿಡಿಕಾರಿದರು.
ಸಾಂಸ್ಕೃತಿಕ ಹಬ್ಬಕ್ಕೆ ರಾಜಕೀಯ ಬಣ್ಣ ಬೇಡ
ದಸರಾ ಉದ್ಘಾಟಿಸುವವರು ದನದ ಮಾಂಸ ತಿನ್ನುತ್ತಾರೆ ಎಂದು ಬಿಜೆಪಿ ನಾಯಕರು ದೂರುತ್ತಾರೆ. ಬಾನು ಮುಷ್ತಾಕ್ ದನದ ಮಾಂಸ ತಿನ್ನುವುದನ್ನು ನೋಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ವಿರೋಧಿಸಲೆಂದೇ ಮಾತನಾಡುತ್ತಿದ್ದಾರೆ. ದಸರಾ ಸಾಂಸ್ಕೃತಿಕ ಹಬ್ಬ; ಇದು ಎಲ್ಲಾ ಜಾತಿ, ಧರ್ಮಗಳಿಗೂ ಸೇರಿದೆ. ನಿಸಾರ್ ಅಹಮದ್, ಟಿಪ್ಪು ಹೈದರ್ ಅಲಿ, ದಿವಾನ್ ಮಿರ್ಜಾ ಇಸ್ಮಾಯಿಲ್ ಕೂಡ ದಸರಾ ನಡೆಸಿದ್ದಾರೆ. ಇದಕ್ಕೆ ಧರ್ಮದ ಲೇಪನ ಹಾಕುವುದು ಸರಿಯಲ್ಲ ಎಂದು ಹೇಳಿದರು.
ಧರ್ಮಸ್ಥಳ ತನಿಖೆ: ಎನ್ಐಎ ತನಿಖೆ ಅಗತ್ಯವಿಲ್ಲ
ಧರ್ಮಸ್ಥಳ ಪ್ರಕರಣದ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಧರ್ಮಸ್ಥಳದ ಮೇಲೆ ಅನುಮಾನ ತೂಗುಕತ್ತಿ ಇದೆ. ಅದನ್ನು ನಿವಾರಿಸಲು ಎಸ್ಐಟಿ ತನಿಖೆ ನಡೆಯುತ್ತಿದೆ. ಧರ್ಮಾಧಿಕಾರಿಗಳೇ ಇದನ್ನು ಸ್ವಾಗತಿಸಿದ್ದಾರೆ, ಬಿಜೆಪಿ ಕೂಡ ಸ್ವಾಗತ ಮಾಡಿತ್ತು. ಈಗ ಧರ್ಮದ ಹೆಸರಿನಲ್ಲಿ ಜಾಥಾ ಮಾಡುತ್ತಿರುವುದು ರಾಜಕೀಯದ ಆಟ . ನಾವು ತನಿಖೆಯಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ, ಒತ್ತಡ ಹಾಕಿಲ್ಲ, ಸಮಯ ನಿಗದಿಪಡಿಸಿಲ್ಲ ಎಂದು ಹೇಳಿದರು.
ಆಸ್ತಿ ಮುದ್ರಾಂಕ ಶುಲ್ಕ ಹೆಚ್ಚಳಕ್ಕೆ ಸಮರ್ಥನೆ
ರಾಜ್ಯದಲ್ಲಿ ಆಸ್ತಿ ಮುದ್ರಾಂಕ ಶುಲ್ಕವನ್ನು ಶೇ1ರಷ್ಟು ಹೆಚ್ಚಿಸಿರುವ ಬಗ್ಗೆ ಸಿಎಂ ಪ್ರತಿಕ್ರಿಯಿಸಿ, ಇದು ಬೇರೆ ರಾಜ್ಯಗಳಲ್ಲಿ ಈಗಾಗಲೇ ಜಾರಿಯಲ್ಲಿದೆ. ಅದರಂತೆ ನಾವು ಕೂಡ ಹೆಚ್ಚಳ ಮಾಡಿದ್ದೇವೆ ಎಂದು ಹೇಳಿದರು.