Dinner Politics | ಸಿ.ಎಂ, ಸಚಿವರಿಗೆ ಜಾರಕಿಹೊಳಿ ಔತಣ; ಕುತೂಹಲ ಮೂಡಿಸಿದ ಡಿಕೆಶಿ ಗೈರು

ಕೆಪಿಸಿಸಿ ಅಧ್ಯಕ್ಷರು ವಿದೇಶ ಪ್ರವಾಸದಲ್ಲಿರುವಾಗಲೇ ಸಿಎಂ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಜಾರಕಿಹೊಳಿ ಅವರ ನಿವಾಸದಲ್ಲೇ ಡಿನ್ನರ್‌ ಪಾರ್ಟಿ ನಡೆಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.;

Update: 2025-01-03 08:33 GMT
ಸತೀಶ್ ಜಾರಕಿಹೊಳಿ

ಕಾಂಗ್ರೆಸ್‌ನಲ್ಲಿ ಸಂಪುಟ ಪುನಾರಚನೆ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಚರ್ಚೆ ಜೋರಾಗಿರುವಾಗಲೇ ಹೊಸ ವರ್ಷಾಚರಣೆ ನೆಪದಲ್ಲಿ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ, ಸಹೋದ್ಯೋಗಿ ಸಚಿವರು ಹಾಗೂ ಶಾಸಕರಿಗೆ ಗುರುವಾರ ರಾತ್ರಿ ಔತಣಕೂಟ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಆದರೆ, ಔತಣಕೂಟಕ್ಕೆ ಡಿ.ಕೆ.ಶಿವಕುಮಾರ್‌ ಗೈರಾಗಿದ್ದರು.

ಬೆಂಗಳೂರಿನ ಸತೀಶ್‌ ಜಾರಕಿಹೊಳಿ ಅಧಿಕೃತ ನಿವಾಸದಲ್ಲಿ ನಡೆದ ಔತಣಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಡಾ.ಎಚ್.ಸಿ. ಮಹದೇವಪ್ಪ ಸೇರಿ ಏಳು ಮಂದಿ ಸಚಿವರು, 35 ಮಂದಿ ಶಾಸಕರು ಮಾತ್ರ ಭಾಗವಹಿಸಿದ್ದರು. 

ಸಂಪುಟ ಸಭೆಯ ಬಳಿಕ, ಡಿಸಿಎಂ ಹಾಗೂ ಪ್ರದೇಶ ಕಾಂಗ್ರೆಸ್(ಕೆಪಿಸಿಸಿ) ಅಧ್ಯಕ್ಷರಾದ ಡಿ ಕೆ ಶಿವಕುಮಾರ್‌ ಅವರ ಅನುಪಸ್ಥಿತಿಯಲ್ಲಿ ನಡೆದ ಈ ಔತಣಕೂಟ ಕುತೂಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ದಿಢೀರ್‌ ಔತಣಕೂಟ ಆಯೋಜಿಸಿದ ಹಿಂದಿನ ಉದ್ದೇಶಗಳ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿವೆ. 

ಔತಣಕೂಟದ ಮಹತ್ವವೇನು?

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಸಚಿವ ಸತೀಶ್‌ ಜಾರಕಿಹೊಳಿ ನಡುವೆ ದೀರ್ಘ ಕಾಲದಿಂದಲೂ ವೈಮನಸ್ಸಿದೆ. ಬೆಳಗಾವಿ ರಾಜಕಾರಣದಲ್ಲಿ ಡಿ.ಕೆ. ಶಿವಕುಮಾರ್‌ ಹಸ್ತಕ್ಷೇಪ ಮಾಡುತ್ತಿದ್ದಾರೆಂಬ ಅಸಮಾಧಾನ ಸತೀಶ್‌ ಜಾರಕಿಹೊಳಿ ಅವರಿಗಿತ್ತು. ಅದೇ ವಿಷಯದಲ್ಲಿ ಕಳೆದ ಒಂದು ದಶಕದಿಂದಲೂ ಕಾಂಗ್ರೆಸ್‌ನ ಈ ಇಬ್ಬರೂ ಹಿರಿಯ ನಾಯಕರ ನಡುವೆ ಪರೋಕ್ಷ ವಾಕ್ಸಮರ ಚಾಲ್ತಿಯಲ್ಲಿದೆ ಎಂಬುದೂ ಗುಟ್ಟೇನಲ್ಲ.

ಸಿಎಂ ಸ್ಥಾನದ ಅಧಿಕಾರ ಹಂಚಿಕೆಗೆ ಸಂಬಂಧಿಸಿ ಈಚೆಗೆ ಡಿಕೆ ಶಿವಕುಮಾರ್‌ ಪ್ರಸ್ತಾಪಿಸಿದ್ದ ಬೆನ್ನಲ್ಲೇ ಸತೀಶ್‌ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿದ್ದರು. ಅಲ್ಲದೇ ಮುಡಾ ಹಗರಣದಲ್ಲಿ ಸಿಎಂ ರಾಜೀನಾಮೆಗೆ ಪ್ರತಿಪಕ್ಷಗಳಿಂದ ಒತ್ತಡ ಹೆಚ್ಚಿದಾಗ ತಾವೂ ಕೂಡ ಸಿಎಂ ಆಕಾಂಕ್ಷಿ ಎಂಬುದನ್ನು ಸತೀಶ್‌ ಜಾರಕಿಹೊಳಿ ಹೇಳಿಕೊಂಡಿದ್ದರು. ಒಂದು ವೇಳೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಅನಿವಾರ್ಯತೆ ಎದುರಾದರೆ ತಮ್ಮ ಆಪ್ತರಾದ ಜಾರಕಿಹೊಳಿ ಅವರಿಗೇ ಪಟ್ಟ ಕಟ್ಟುವ ಕುರಿತಂತೆ ಸಿದ್ದರಾಮಯ್ಯ ಕೂಡ ಯೋಚಿಸಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಸತೀಶ್‌ ಜಾರಕಿಹೊಳಿ ಅವರು ಸಿಎಂ ಹಾಗೂ ಸಚಿವರಿಗೆ ಔತಣ ನೀಡಿರುವುದು ಕುತೂಹಲ ಮೂಡಿಸಿದೆ.

ಔತಣಕೂಟಕ್ಕೆ ಡಿ.ಕೆ.ಶಿವಕುಮಾರ್‌ ಗೈರು

ಸಚಿವ ಸತೀಶ್‌ ಜಾರಕಿಹೊಳಿ ನೀಡಿದ ಔತಣಕೂಟಕ್ಕೆ ಕೆಪಿಸಿಸಿ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಗೈರಾಗುವ ಮೂಲಕ ಇಬ್ಬರ ನಡುವಿನ ಮುನಿಸು ಮತ್ತೆ ಬಹಿರಂಗವಾಗಿದೆ. ಡಿ.ಕೆ.ಶಿವಕುಮಾರ್‌ ಗೈರು ಹಾಜರಿಯಲ್ಲೇ ದಿಢೀರ್‌ ಔತಣ ಕೂಟ ಆಯೋಜಿಸಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇನ್ನು ಡಿ.ಕೆ. ಶಿವಕುಮಾರ್‌ ವಿದೇಶ ಪ್ರವಾಸಕ್ಕೆ ತೆರಳಿರುವ ಹಿನ್ನೆಲೆಯಲ್ಲಿ ಔತಣಕೂಟಕ್ಕೆ ಬಂದಿರಲಿಲ್ಲ ಎಂದು ಹೇಳಲಾಗಿದೆ. 

ಆದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಷಯದಲ್ಲಿ ಡಿ ಕೆ ಶಿವಕುಮಾರ್‌ ಮತ್ತು ಪ್ರಬಲ ಆಕಾಂಕ್ಷಿಯಾಗಿರುವ ಸತೀಶ್‌ ಜಾರಕಿಹೊಳಿ ನಡುವೆ ಕಳೆದ ಒಂದು ವರ್ಷದಿಂದಲೂ ಪೈಪೋಟಿ ಇದೆ. ಅವಧಿ ಮುಗಿದು ಒಂದು ವರ್ಷ ಕಳೆದಿದ್ದರೂ ಡಿ ಕೆ ಶಿವಕುಮಾರ್‌ ಅವರು ಪಕ್ಷದ ಸಾರಥ್ಯದಿಂದ ಹಿಂದೆ ಸರಿಯಲು ಸಿದ್ಧರಿಲ್ಲ. ಆದರೆ, ಆ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸತೀಶ್‌ ಜಾರಕಿಹೊಳಿ, ಡಾ ಎಂ ಬಿ ಪಾಟೀಲ್‌, ಕೆ ಎನ್‌ ರಾಜಣ್ಣ, ಈಶ್ವರ್‌ ಖಂಡ್ರೆ,‌ ಡಾ ಶರಣಪ್ರಕಾಶ್‌ ಪಾಟೀಲ್ ಸೇರಿದಂತೆ ಹಲವು ಹಿರಿಯ ನಾಯಕರು ಹಲವು ತಿಂಗಳುಗಳಿಂದ ನಿರಂತರ ಲಾಬಿ ನಡೆಸುತ್ತಲೇ ಇದ್ದಾರೆ.

ಆ ಎಲ್ಲಾ ಹಿನ್ನೆಲೆಯಲ್ಲಿ ಇದೀಗ ಕೆಪಿಸಿಸಿ ಅಧ್ಯಕ್ಷರು ವಿದೇಶ ಪ್ರವಾಸದಲ್ಲಿರುವಾಗಲೇ ಸಿಎಂ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಜಾರಕಿಹೊಳಿ ಅವರ ನಿವಾಸದಲ್ಲೇ ಡಿನ್ನರ್‌ ಪಾರ್ಟಿ ನಡೆಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

Tags:    

Similar News