ನ್ಯಾಮತಿ ಎಸ್ಬಿಐ ಬ್ಯಾಂಕ್ ದರೋಡೆಕೋರರ ಬಂಧನ; ಪಾಳುಬಾವಿಯಲ್ಲಿ 17 ಕೆ.ಜಿ ಬಂಗಾರ ಹೂತಿಟ್ಟ ತ.ನಾಡು ಸೋದರರು
ದರೋಡೆ ಬಳಿಕ ಆ ಪೆಟ್ಟಿಗೆಯಲ್ಲಿ ಚಿನ್ನಾಭರಣಗಳನ್ನಿಟ್ಟು ತಮ್ಮ ಸ್ವಗ್ರಾಮದ ಪಾಳು ಬಾವಿಯಲ್ಲಿ ಹೂತಿಟ್ಟಿದ್ದು, 1 ವರ್ಷದವರೆಗೆ ಚಿನ್ನ ಹೊರತೆಗೆಯದಿರಲು ನಿರ್ಧರಿಸಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ.;
ರಾಜ್ಯದ ಇತಿಹಾಸದಲ್ಲಿ ಅತಿದೊಡ್ಡ ಬ್ಯಾಂಕ್ ದರೋಡೆ ಎನಿಸಿದ್ದ, ನ್ಯಾಮತಿ ಬ್ಯಾಂಕ್ ದರೋಡೆ ಪ್ರಕರಣವನ್ನು ದಾವಣಗೆರೆ ಜಿಲ್ಲಾ ಪೊಲೀಸರು ಬೇಧಿಸಿದ್ದಾರೆ.
ತಮಿಳುನಾಡು ಮೂಲದ ಆರು ಮಂದಿಯನ್ನು ಬಂಧಿಸಕಲಾಗಿದ್ದು, ತಮಿಳುನಾಡಿನ ಮಧುರೈನಲ್ಲಿರುವ ತೋಟದ ಮನೆಯ ಪಾಳು ಬಿದ್ದ ಬಾವಿಯಲ್ಲಿ ಗ್ರಾಮದ ಬಾವಿಯೊಂದರಲ್ಲಿ ಅವಿತಿಟ್ಟಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಜಯ್‌ಕುಮಾರ್(30), ಸೋದರ ಅಜಯ್‌ಕುಮಾರ್(28), ಬೆಳಗುತ್ತಿಯ ಅಭಿಷೇಕ(23), ಸುರಹೊನ್ನೆ ಗ್ರಾಮದವರಾದ ಚಂದ್ರ(23), ಮಂಜುನಾಥ(32), ಪರಮಾನಂದ(30)ನನ್ನು ಬಂಧಿಸಲಾಗಿದೆ. 17 ಕೆಜಿ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ತಮಿಳುನಾಡು ಮೂಲದ ಸೋದರರಾದ ವಿಜಯ್, ಅಜಯ್ ಈ ದರೋಡೆಗೆ ಸಂಚು ನಡೆಸಿದವರು. 2 ತಿಂಗಳು ಪ್ಲ್ಯಾನ್ ಮಾಡಿ ಸರಣಿ ರಜೆ ಇದ್ದ ಹಿನ್ನೆಲೆಯಲ್ಲಿ 2024ರ ಅ.28ರಂದು ನ್ಯಾಮತಿ ಎಸ್‌ಬಿಐ ಶಾಖೆಯಲ್ಲಿ ದರೋಡೆ ಮಾಡಲಾಗಿತ್ತು. ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಿ ದರೋಡೆಗೆ ಸಂಚುರೂಪಿಸಿದ್ದ ದರೋಡೆಕೋರರು ಕದ್ದ ಚಿನ್ನಾಭರಣ ಬಚ್ಚಿಡಲು 1 ಪೆಟ್ಟಿಗೆ ಖರೀದಿಸಿದ್ದರು. ದರೋಡೆ ಬಳಿಕ ಆ ಪೆಟ್ಟಿಗೆಯಲ್ಲಿ ಚಿನ್ನಾಭರಣಗಳನ್ನಿಟ್ಟು ತಮ್ಮ ಸ್ವಗ್ರಾಮದ ಪಾಳು ಬಾವಿಯಲ್ಲಿ ಹೂತಿಟ್ಟಿದ್ದು, 1 ವರ್ಷದವರೆಗೆ ಚಿನ್ನ ಹೊರತೆಗೆಯದಿರಲು ನಿರ್ಧರಿಸಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ.
2024ರ ಅಕ್ಟೋಬರ್ 28ರಂದು ನ್ಯಾಮತಿ ಎಸ್ಬಿಐ ಬ್ಯಾಂಕ್ನಲ್ಲಿ 13 ಕೋಟಿ ರೂ. ಮೌಲ್ಯದ 17 ಕೆಜಿ 750 ಗ್ರಾಂ ಚಿನ್ನಾಭರಣ ದರೋಡೆ ಮಾಡಲಾಗಿತ್ತು. ಆರೋಪಿಗಳಿ ದರೋಡೆಗೆ ಮೊದಲು, ದರೋಡೆಯ ನಂತರ ಗಡಿ ಚೌಡಮ್ಮನ ಅಷ್ಟಧಿಗ್ಬಂಧನ ಪೂಜೆ ಮಾಡಿ ತಮ್ಮ ಮಾಹಿತಿ ಯಾರಿಗೂ ತಿಳಿಯಬಾರದು ಎಂದು ನಂಬಿಕೊಂಡಿದ್ದರು. ಮತ್ತು ದರೋಡೆಯ ಮಾಹಿತಿಯನ್ನು ಕುಟುಂಬಸ್ಥರ ಜೊತೆಯೂ ಹಂಚಿಕೊಂಡಿರಲಿಲ್ಲ. ಮೊಬೈಲ್, ವಾಹನ ಬಳಸದೇ, ಯಾವ ಸಾಕ್ಷಿಯನ್ನೂ ಬಿಡದೆ ದರೋಡೆ ಮಾಡಿದ್ದರು.
ಆದರೂ ಪೊಲೀಸರು ನ್ಯಾಮತಿ ಸುತ್ತುಮುತ್ತ ಘಟನೆ ನಡೆದ ಒಂದು ವಾರ ಮತ್ತು ಬಳಿಕ ನಡೆದ ಫೋನ್ ಕರೆಗಳ ಮಾಹಿತಿ ಹಾಗೂ ಇತರ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜತೆಗೆ ಬ್ಯಾಂಕ್‌ನಲ್ಲಿ ಸಾಲಕ್ಕೆ ಅರ್ಜಿ ಹಾಕಿ ತಿರಸ್ಕೃತಗೊಂಡ ವ್ಯಕ್ತಿಗಳ ಮಾಹಿತಿಗಳನ್ನು ಕಲೆಹಾಕಿ, ಅವರ ಮೊಬೈಲ್ ನಂಬರ್‌ಗಳ ದಾಖಲೆ ಪಡೆದು ಮಾಹಿತಿಗಳನ್ನು ಕ್ರೂಢೀಕರಿಸಿ ಕೊನೆಗೂ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳತನಕ್ಕೂ ಮೊದಲು ಬ್ಯಾಂಕ್‌ನಲ್ಲಿ ಸಾಲಕ್ಕೆ ಪಡೆಯಲು ವಿಜಯ್ ಪ್ರಯತ್ನಿಸಿದ್ದಾನೆ. ಆದ್ರೆ, ಸಾಲ ಸಿಗದಿದ್ದಾಗ ಬ್ಯಾಂಕ್ ಕಳ್ಳತನಕ್ಕೆ ಸಂಚು ರೂಪಿಸಿದ್ದ ಎನ್ನುವ ವಿಚಾರ ಈಗ ಬಯಲಾಗಿದೆ.
ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ವಿಜಯ್ ಕುಮಾರ್ ನ್ಯಾಮತಿಯಲ್ಲಿ ಬೇಕರಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ಬ್ಯಾಂಕ್‍ನಲ್ಲಿ ಲೋನ್ ಪಡೆಯಲು ಎರಡು ಬಾರಿ ಅರ್ಜಿ ಹಾಕಿದ್ದ, ಈ ಅರ್ಜಿ ತಿರಸ್ಕಾರವಾಗಿತ್ತು. ಇದರಿಂದ ರೋಸಿ ಹೋಗಿದ್ದ. ಇದೇ ಕಾರಣಕ್ಕೆ ಬ್ಯಾಂಕ್ ದರೋಡೆಗೆ ಹಿಂದಿ ವೆಬ್ ಸೀರಿಸ್ ನೋಡಿ ದರೋಡೆಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎಷ್ಟು ದರೋಡೆ
ಬ್ಯಾಂಕ್‌ನಲ್ಲಿ 509 ಗ್ರಾಹಕರು ಅಡವಿಟ್ಟಿದ್ದ 17 ಕೆಜಿ 750 ಗ್ರಾಂ ಚಿನ್ನವನ್ನು ಅ.28ರಂದು ಕದ್ದೊಯ್ದಿದ್ದರು. "ಮೊದಲು ನಮಗೆ ಅಂತಾರಾಜ್ಯ ಕಳ್ಳರ ಬಗ್ಗೆ ಅನುಮಾನ ಇತ್ತು. ಭದ್ರಾವತಿ ಬ್ಯಾಂಕ್‌ನನಲ್ಲಿ ಕಳ್ಳತನಕ್ಕೆ ಯತ್ನ ನಡೆದಿದ್ದರ ಮಾಹಿತಿ ಪಡೆಯಲಾಗಿತ್ತು. ಉತ್ತರಪ್ರದೇಶ ಮೂಲದ ಕಾಕ್ರಾಳ್ ಗ್ಯಾಂಗ್ ಮೇಲೆ ಅನುಮಾನ ವ್ಯಕ್ತವಾಗಿತ್ತು," ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.