Bangalore Rains | ಭಾರೀ ಮಳೆಗೆ ಅಸ್ತವ್ಯಸ್ತವಾದ ಸಿಲಿಕಾನ್ ಸಿಟಿ
ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗಿನ ಜಾವದ ವರೆಗೆ ಮಳೆ ಎಡೆಬಿಡದೆ ಸುರಿದಿದ್ದು. ನಗರದಾದ್ಯಂತ ಭಾರೀ ಅವಾಂತರ ಸೃಷ್ಟಿಯಾಗಿದೆ.;
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾನುವಾರ ಬಿಡುವು ನೀಡಿದ್ದ ಮಳೆ, ಸಂಜೆ ವೇಳೆಗೆ ಮತ್ತೆ ತನ್ನ ರೌದ್ರಾವತಾರ ಮುಂದುವರಿಸಿತ್ತು. ಸೋಮವಾರ ಬೆಳಗಿನವರೆಗೆ ಸುರಿದ ನಿರಂತರ ಮಳೆಯಿಂದಾಗಿ ನಗರದ ಬಹುತೇಕ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಮೆಜೆಸ್ಟಿಕ್, ಮೈಸೂರು ಬ್ಯಾಂಕ್ ಸರ್ಕಲ್, ವಿಧಾನಸೌಧ, ಶಾಂತಿನಗರ, ಜಯನಗರ, ತ್ಯಾಗರಾಜನಗರ, ಶ್ರೀನಗರ, ಕೆಆರ್ ಮಾರುಕಟ್ಟೆ, ಟೌನ್ ಹಾಲ್, ಕಾರ್ಪೊರೇಷನ್ ಸರ್ಕಲ್, ಮೈಸೂರು ರಸ್ತೆ, ವಿಜಯನಗರ, ಮಾಗಡಿ ರಸ್ತೆ, ರಾಜಾಜಿನಗರ ಹಾಗೂ ಮಲ್ಲೇಶ್ವರಂ ನಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕೆ ಆರ್ ಮಾರ್ಕೆಟ್ ನಲ್ಲಿ ಮಳೆ ನೀರು ನಿಂತು ವ್ಯಾಪಾರ ವಹಿವಾಟಿಗೆ ಅಡ್ಡಿಯಾಗಿತ್ತು. ಬನಶಂಕರಿ ಅಪಾರ್ಟ್ ಮೆಂಟ್ ತಡೆ ಗೋಡೆ ಕುಸಿತಗೊಂಡಿದೆ. ಅಲ್ಲದೆ, ಗವೀಪುರಂ ಗುಟ್ಟಳ್ಳಿ ಕ್ರಾಸ್ ನಲ್ಲಿ ಗೋಡೆ ಕುಸಿದು ವಾಹನದ ಮೇಲೆ ಬಿದ್ದಿದೆ. ಕವಿಕಾ ಲೇಔಟ್ ನಲ್ಲಿ ಶೆಡ್ ಕುಸಿದು ಬಿದ್ದು ಮನೆಯಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಆಸ್ಟಿನ್ ಟೌನ್ ನಲ್ಲಿ ಸುಮಾರು 50 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಕೆಂಗೇರಿ, ಆರ್.ಆರ್.ನಗರ, ದಾಸರಹಳ್ಳಿ, ಬ್ಯಾಟರಾಯನಪುರ ಸೇರಿದಂತೆ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೂ ನೀರು ನುಗ್ಗಿದೆ.
ಮಳೆಯ ಜೊತೆಗೆ ನಗರದ ಹಲವೆಡೆ ಕೆರೆ ನೀರು ಉಕ್ಕಿ ಬಡವಾಣೆಗಳಿಗೆ ನುಗ್ಗಿದೆ. ಆರ್ ಆರ್ ನಗರದ ಗಟ್ಟಿಗೆರೆ ಮೈನ್ ರೋಡ್ ನಲ್ಲಿ ಜನರು ರಸ್ತೆಯಲ್ಲಿಯೇ ಮೀನು ಹಿಡಿಯುವಂತಾಗಿತ್ತು. ಸೋಮವಾರ ಬೆಳಿಗ್ಗೆ ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ಸುಮಾರು 2 ಅಡಿ ನೀರು ನಿಂತಿದ್ದು, ಜೆಜೆಆರ್ ನಗರದಲ್ಲಿ ಚರಂಡಿಯ ಗೋಡೆ ಕುಸಿದು ವಿಎಸ್ ಗಾರ್ಡನ್‌ನಲ್ಲಿ ಸುಮಾರು 10 ಮನೆಗಳಿಗೆ ನೀರು ನುಗ್ಗಿದೆ.
ಸರ್ಜಾಪುರದ ಆರ್‌ಜಿಬಿ ಟೆಕ್ ಪಾರ್ಕ್ ಮುಂಭಾಗದ ರಸ್ತೆಯೂ ಜಲಾವೃತಗೊಂಡಿದ್ದು, ಬೆಳ್ಳಂದೂರು ಕೆರೆಯ ಪಕ್ಕದಲ್ಲಿರುವ ಸಕ್ರಾ ಆಸ್ಪತ್ರೆ ರಸ್ತೆಯೂ ಜಲಾವೃತವಾಗಿತ್ತು. ಶಾಂತಿನಗರದ ಬಿಟಿಎಸ್ ಮುಖ್ಯರಸ್ತೆ, ಲ್ಯಾವೆಲ್ಲೆ ರಸ್ತೆ, ಹುಲ್ಕುಲ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್, ಕೋರಮಂಗಲ 80 ಅಡಿ ರಸ್ತೆ, ಕೋರಮಂಗಲದ ಒಳಾಂಗಣ ಕ್ರೀಡಾಂಗಣ ಸೇರಿದಂತೆ ಹಲವು ರಸ್ತೆಗಳು ಜಲಾವೃತಗೊಂಡಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.
ಕೆ ಆರ್ ಮಾರ್ಕೆಟ್ ಕೆರೆಯಂತಾಗಿದೆ. 3-4 ಅಡಿ ರಸ್ತೆ ಮೇಲೆ ಮಳೆ ನೀರು ನಿಂತಿತ್ತು. ಮಾರ್ಕೆಟ್ ಟೌನ್ ಹಾಲ್ ರಸ್ತೆ ಜಲಾವೃತಗೊಂಡಿದ್ದು, ರಸ್ತೆಯಲ್ಲಿ ಮಳೆ ನೀರು ನಿಂತು ಮೋರಿ ಬ್ಲಾಕ್ ಆಗಿದ್ದವು. ಎಸ್ ಪಿ ರಸ್ತೆ ಪಕ್ಕದ ಪಾರ್ಕ್ ಒಳಗೆ ಮಳೆ ನೀರು ನುಗ್ಗಿತ್ತು. ಸಿಲ್ಕ್ ಬೋರ್ಡ್ ರಸ್ತೆ ಮಳೆ ನೀರಲ್ಲಿ ಮುಳುಗಿಹೋಗಿತ್ತು. ಇಡೀ ರಸ್ತೆ ಕೆರೆಯಂತೆ ಕಾಣುತ್ತಿತ್ತು. ಬನಶಂಕರಿ ಕಡೆ ತೆರಳುವ ರಸ್ತೆ ಮೇಲೆ ಮೂರು ಅಡಿ ಮಳೆ ನೀರು ನಿಂತಿತ್ತು. ಇಡೀ ನಗರದಾದ್ಯಂತ ಮಳೆ ನೀರಿನಿಂದಾಗಿ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.