CAFE BLAST CASE | ಅಲ್-ಹಿಂದ್ ಐಸಿಸ್ ಪ್ರಕರಣದಲ್ಲಿ ಮತೀನ್, ಮುಸ್ಸಾವಿರ್ ವಿರುದ್ಧ ಎನ್‌ಐಎ ಆರೋಪಪಟ್ಟಿ
ಅಬ್ದುಲ್ ಮತೀನ್ ತಾಹಾ ಹಾಗೂ ಮುಸ್ಸಾವಿರ್ ಹುಸೇನ್ ಶಾಜಿಬ್ ವಿರುದ್ಧ 'ಆಲ್ ಹಿಂದ್' ಉಗ್ರ ಚಟುವಟಿಕೆಗಳ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.;
ಬೆಂಗಳೂರಿನ ವೈಟ್‌ಫೀಲ್ಡ್‌ನ 'ದಿ ರಾಮೇಶ್ವರಂ ಕೆಫೆ' ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಐಸಿಸ್ ಶಂಕಿತ ಉಗ್ರರಾದ ಅಬ್ದುಲ್ ಮತೀನ್ ತಾಹಾ ಹಾಗೂ ಮುಸ್ಸಾವಿರ್ ಹುಸೇನ್ ಶಾಜಿಬ್ ವಿರುದ್ಧ 'ಆಲ್ ಹಿಂದ್' ಉಗ್ರ ಚಟುವಟಿಕೆಗಳ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಇದು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯ ದೊಡ್ಡ ಪಿತೂರಿಯ ಭಾಗವಾಗಿದೆ ಎಂದು ತನ್ನ ಆರೋಪ ಪಟ್ಟಿಯಲ್ಲಿ ತಿಳಿಸಿದೆ.
2020ರಿಂದ ಅಜ್ಞಾತವಾಗಿದ್ದ ಮತೀನ್ ಹಾಗೂ ಮುಸ್ಸಾವಿರ್, ಗುಪ್ತವಾಗಿ ಐಸಿಸ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಇದರ ಭಾಗವಾಗಿ ಮಾರ್ಚ್ 1ರಂದು ಬೆಂಗಳೂರಿನ 'ದಿ ರಾಮೇಶ್ವರಂ ಕೆಫೆ'ಯಲ್ಲಿ ಬಾಂಬ್ ಸ್ಫೋಟಿಸಿದ್ದರು. ಆ ಘಟನೆಯಲ್ಲಿ ಒಂಬತ್ತು ಜನರಿಗೆ ಗಾಯವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಿವಾಸಿಗಳಾದ ಅಬ್ದುಲ್ ಮತೀನ್ ತಾಹಾ ಮತ್ತು ಮುಸ್ಸಾವಿರ್ ಹುಸೇನ್ ಶಾಜಿಬ್ ಅವರನ್ನು ಏಪ್ರಿಲ್ 12 ರಂದು ಕೊಲ್ಕತ್ತಾದಲ್ಲಿ ಬಂಧಿಸಲಾಗಿತ್ತು. ಶಾಜಿಬ್ ಕೆಫೆಯಲ್ಲಿ ಬಾಂಬ್ ಇಟ್ಟಿದ್ದ ಮತ್ತು ತಾಹಾ ಮುಖ್ಯ ಸಂಚುಕೋರ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅಲ್-ಹಿಂದ್ ಐಸಿಸ್ ಮಾಡ್ಯೂಲ್ ಪ್ರಕರಣದಲ್ಲಿ ಇಬ್ಬರ ವಿರುದ್ಧ ಎನ್ಐಎ ಆರೋಪ ಪಟ್ಟಿ ಸಲ್ಲಿಸಿದೆ.
2018ರಲ್ಲಿ ಆನ್ಲೈನ್ ಮೂಲಕ ಐಸಿಸ್ ಉಗ್ರ ಭಾಯ್ ಅಲಿಯಾಸ್ ಲ್ಯಾಪ್ಟಾಪ್ ಭಾಯ್ ಎಂಬುವನನ್ನು ಮತೀನ್ ಪರಿಚಯಿಸಿಕೊಂಡಿದ್ದ. ಲ್ಯಾಪ್ಟಾಪ್ ಭಾಯ್ ನ್ಯೂ ಗುರಪ್ಪನ ಪಾಳ್ಯದ ಮೆಹಬೂಬ್ ಪಾಷಾನ ಪರಿಚಯಿಸಿದ್ದ. ಮೆಹಬೂಬ್ ಮೂಲಕ ಅಲ್ ಹಿಂದ್ ಟ್ರಸ್ಟ್ ಸ್ಥಾಪಿಸಿ ಉಗ್ರ ಚಟುವಟಿಕೆ ನಡೆಸುತ್ತಿದ್ದ. ಅಲ್ ಹಿಂದ್ ಮುಖ್ಯಸ್ಥನಾಗಿದ್ದ ಮೆಹಬೂಬ್ ಪಾಷಾ ತನ್ನ ಸಂಬಂಧಿಕರನ್ನೇ ಟ್ರಸ್ಟ್‌ಗೆ ಸೇರಿಸಿಕೊಂಡಿದ್ದ. ಬಳಿಕ ತಮಿಳುನಾಡು ಮೂಲದ ಉಗ್ರ ಖಾಜಾ ಮೊಹಿದೀನ್, ತೌಫೀಕ್, ಅಬ್ದುಲ್ ಶಮೀಮ್ ಸೇರಿದಂತೆ ಹಲವು ಯುವಕರನ್ನು ಸೇರಿಸಿಕೊಂಡಿದ್ದ. ಭಾರತದಲ್ಲಿ ಐಸಿಸ್ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸಲು ತನ್ನ ಸಹಚರರೊಂದಿಗೆ ಅಲ್ ಹಿಂದ್ ಟ್ರಸ್ಟ್‌ಗೆ ಸೇರಿದ್ದ ಖಾಜಾ ಮೊಹಿದೀನ್‌ಗೆ ಆನ್ಲೈನ್ ಹ್ಯಾಂಡ್ಲರ್ ಲಿಂಕ್ ಅನ್ನು ರವಾನಿಸಲು ಮೆಹಬೂಬ್ ಪಾಷಾ ಕಾರಣನಾಗಿದ್ದನು ಎನ್ಐಎ ಹೇಳಿದೆ.
ಇದಲ್ಲದೆ ತಮಿಳುನಾಡು - ಕೇರಳ ಗಡಿಯಲ್ಲಿ ಸಬ್ ಇನ್ಸ್ಪೆಕ್ಟರ್ ವಿಲ್ಸನ್ ಅವರನ್ನು ಹತ್ಯೆಗೈದಿದ್ದ ತೌಫೀಕ್ ಹಾಗೂ ಶಮೀಮ್ ತಲೆಮರೆಸಿಕೊಳ್ಳಲು ಅಬ್ದುಲ್ ಮತೀನ್ ತಾಹಾ ಮತ್ತು ಮುಸ್ಸಾವಿರ್ ಹುಸೇನ್ ಇವರಿಬ್ಬರಿಗೆ ಆಶ್ರಯ ನೀಡಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ತೌಫೀಕ್ ಮತ್ತು ಅಬ್ದುಲ್ ಶಮೀಮ್ ಕೇರಳ-ತಮಿಳುನಾಡು ಗಡಿಯಲ್ಲಿರುವ ಕಲಿಯಕವಿಲ್ಲೈ ಚೆಕ್‌ಪೋಸ್ಟ್ ಗಡಿಯಲ್ಲಿ ಸಬ್ ಇನ್ಸ್ಪೆಕ್ಟರ್ ವಿಲ್ಸನ್ ಅವರನ್ನು ಮೆಹಬೂಬ್ ಪಾಷಾ ನೀಡಿದ ಪಿಸ್ತೂಲಿನಿಂದ ಕೊಲೆ ಮಾಡಿದ್ದರು. ಈ ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಹೇಳಿದೆ.