ಹುಲಿ ದಾಳಿಗೆ ರೈತ ಬಲಿ: ನಾಗರಹೊಳೆ, ಬಂಡೀಪುರ ಸಫಾರಿ ಮತ್ತು ಚಾರಣ ಬಂದ್
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಬಂಡೀಪುರ, ನಾಗರಹೊಳೆ ಅರಣ್ಯದಂಚಿನಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಹುಲಿ ದಾಳಿಯಿಂದ ಮೂರು ಅಮೂಲ್ಯ ಜೀವ ಹಾನಿ ಆಗಿರುವುದು ಅತೀವ ನೋವು ತಂದಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಸಫಾರಿಯನ್ನು ಬಂದ್ ಮಾಡುವಂತೆ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷಕ್ಕೆ ಮತ್ತೊಂದು ಬಲಿಯಾದ ಘಟನೆ ಮೈಸೂರು ಜಿಲ್ಲೆಯ ಸರಗೂರಿನಲ್ಲಿ ನಡೆದಿದೆ. ಹುಲಿ ದಾಳಿಗೆ ರೈತರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ, ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಅವರು ಕಠಿಣ ಕ್ರಮಕ್ಕೆ ಮುಂದಾಗಿದ್ದು, ಶುಕ್ರವಾರದಿಂದಲೇ (ನ.7) ನಾಗರಹೊಳೆ ಮತ್ತು ಬಂಡೀಪುರ ಅಭಯಾರಣ್ಯಗಳಲ್ಲಿ ಸಫಾರಿ ಹಾಗೂ ಚಾರಣವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಆದೇಶಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಇಬ್ಬರು ಕಾಡಾನೆ ದಾಳಿಗೆ ಬಲಿಯಾದ ಘಟನೆ ಮಾಸುವ ಮುನ್ನವೇ, ಸರಗೂರು ತಾಲೂಕಿನ ಹಳೆ ಹೆಗ್ಗೋಡಿಲು ಗ್ರಾಮದ ಬಳಿ ಚೌಡಯ್ಯ ನಾಯ್ಕ (35) ಎಂಬ ರೈತರು ಶುಕ್ರವಾರ ಬೆಳಗ್ಗೆ ಹುಲಿ ದಾಳಿಗೆ ತುತ್ತಾಗಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಬಂಡೀಪುರ ಮತ್ತು ನಾಗರಹೊಳೆ ಅರಣ್ಯದಂಚಿನಲ್ಲಿ ಹುಲಿ ದಾಳಿಗೆ ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.
ನರಹಂತಕ ಹುಲಿ ಸೆರೆಗೆ ಆದ್ಯತೆ
ಸರಣಿ ಸಾವುಗಳಿಂದ ತೀವ್ರ ಆಘಾತಕ್ಕೊಳಗಾಗಿರುವುದಾಗಿ ತಿಳಿಸಿದ ಸಚಿವ ಈಶ್ವರ್ ಖಂಡ್ರೆ, ಈ ಹಿಂದೆಯೇ ಅಧಿಕಾರಿಗಳ ಸಭೆ ನಡೆಸಿ, ಹುಲಿ ಸೆರೆಗೆ ಕ್ರಮ ಕೈಗೊಳ್ಳಲು ಮತ್ತು ಅಗತ್ಯ ಬಿದ್ದರೆ ಸಫಾರಿ ಬಂದ್ ಮಾಡುವ ಎಚ್ಚರಿಕೆ ನೀಡಿದ್ದರೂ, ಮತ್ತೊಂದು ದುರ್ಘಟನೆ ಸಂಭವಿಸಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ನರಹಂತಕ ಹುಲಿಯನ್ನು ಸೆರೆಹಿಡಿಯುವುದಕ್ಕೆ ಮೊದಲ ಆದ್ಯತೆ ನೀಡಲು ನಿರ್ಧರಿಸಲಾಗಿದ್ದು, ಸಫಾರಿಗೆ ನಿಯೋಜನೆಗೊಂಡಿದ್ದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಮತ್ತು ವಾಹನಗಳನ್ನು ತಕ್ಷಣದಿಂದಲೇ ಹುಲಿ ಸೆರೆ ಕಾರ್ಯಾಚರಣೆಗೆ ಬಳಸಿಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.
ಉನ್ನತ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ
ವನ್ಯಜೀವಿ ವಿಭಾಗದ ಎಪಿಸಿಸಿಎಫ್ ಮತ್ತು ಹುಲಿ ಯೋಜನೆಯ ನಿರ್ದೇಶಕರು ಸ್ಥಳದಲ್ಲೇ ಮೊಕ್ಕಾಂ ಹೂಡಿ, ಪದೇ ಪದೇ ದಾಳಿ ಮಾಡುತ್ತಿರುವ ಹುಲಿಯನ್ನು ಸೆರೆಹಿಡಿಯುವ ಕಾರ್ಯಾಚರಣೆಯ ನೇತೃತ್ವ ವಹಿಸಬೇಕೆಂದು ಸಚಿವರು ಸ್ಪಷ್ಟ ಸೂಚನೆ ನೀಡಿದ್ದಾರೆ. ಮುಂದಿನ ಆದೇಶದವರೆಗೆ ಈ ನಿರ್ಬಂಧಗಳು ಜಾರಿಯಲ್ಲಿರಲಿದ್ದು, ಹುಲಿ ಸೆರೆಯಾದ ನಂತರವಷ್ಟೇ ಸಫಾರಿ ಮತ್ತು ಚಾರಣ ಪುನರಾರಂಭಗೊಳ್ಳುವ ಸಾಧ್ಯತೆಯಿದೆ.