ಬ್ಯಾಲೆಟ್ ಪೇಪರ್ ಬಳಕೆ; ಸರ್ಕಾರ ವಿಸರ್ಜಿಸಿ ಚುನಾವಣೆ ಎದುರಿಸಲಿ: ಸುರೇಶ್ ಕುಮಾರ್
"ಗೆದ್ದಾಗ ಇವಿಎಂ ಸರಿ, ಸೋತಾಗ ಸರಿ ಇಲ್ಲ ಎನ್ನುವ ಕಾಂಗ್ರೆಸ್‌ನ ಧೋರಣೆಯು ಅತ್ಯಂತ ಹಳೆಯ ಪಕ್ಷಕ್ಕೆ ಶೋಭೆ ತರುವುದಿಲ್ಲ. ಈ ನಿರ್ಧಾರವು ಕೃತಕ ಬುದ್ಧಿಮತ್ತೆಯ ಯುಗದಲ್ಲಿ, 'ಕೃತಕ ಅಜ್ಞಾನ'ದಿಂದ ಕೂಡಿದ ನಿರ್ಧಾರವಾಗಿದೆ," ಎಂದು ಸುರೇಶ್ ಕುಮಾರ್ ಟೀಕಿಸಿದರು.;
ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್
"ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳ ಬದಲಿಗೆ ಮತಪತ್ರಗಳನ್ನು (ಬ್ಯಾಲೆಟ್ ಪೇಪರ್) ಬಳಸಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಇವಿಎಂಗಳ ಮೇಲೆ ಅಷ್ಟೊಂದು ಸಂಶಯವಿದ್ದರೆ, ತಕ್ಷಣವೇ ವಿಧಾನಸಭೆಯನ್ನು ವಿಸರ್ಜಿಸಿ, ಹೊಸದಾಗಿ ಚುನಾವಣೆ ಎದುರಿಸಲಿ," ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್. ಸುರೇಶ್ ಕುಮಾರ್ ಅವರು ಸವಾಲು ಹಾಕಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಗೆದ್ದಾಗ ಇವಿಎಂ ಸರಿ, ಸೋತಾಗ ಸರಿ ಇಲ್ಲ ಎನ್ನುವ ಕಾಂಗ್ರೆಸ್‌ನ ಧೋರಣೆಯು ಅತ್ಯಂತ ಹಳೆಯ ಪಕ್ಷಕ್ಕೆ ಶೋಭೆ ತರುವುದಿಲ್ಲ. ಈ ನಿರ್ಧಾರವು ಕೃತಕ ಬುದ್ಧಿಮತ್ತೆಯ ಯುಗದಲ್ಲಿ, 'ಕೃತಕ ಅಜ್ಞಾನ'ದಿಂದ ಕೂಡಿದ ನಿರ್ಧಾರವಾಗಿದೆ," ಎಂದು ಟೀಕಿಸಿದರು.
'ಸಿಲಿಕಾನ್ ಸಿಟಿ' ಹೆಸರಿಗೆ ತಿರಸ್ಕಾರ
"ಬೆಂಗಳೂರು ಭಾರತದ 'ಸಿಲಿಕಾನ್ ಸಿಟಿ' ಎಂದೇ ಪ್ರಸಿದ್ಧವಾಗಿದೆ. ಇಂತಹ ತಂತ್ರಜ್ಞಾನದ ರಾಜಧಾನಿಯಲ್ಲಿ, ತಂತ್ರಜ್ಞಾನವನ್ನು ತಿರಸ್ಕರಿಸಿ, ಹಳೆಯ ಯುಗಕ್ಕೆ ಮರಳುವ ನಿರ್ಧಾರವು 'ಸಿಲಿಕಾನ್ ಸಿಟಿ' ಎಂಬ ಹೆಸರಿಗೆ ಮಾಡುವ ದೊಡ್ಡ ತಿರಸ್ಕಾರವಾಗಿದೆ. ತಮ್ಮ ನಾಯಕನನ್ನು ಮೆಚ್ಚಿಸಲು ಮತ್ತು ಆ ತಾಳಕ್ಕೆ ಕುಣಿಯಲು ಇಂತಹ ಪ್ರತಿಗಾಮಿ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ," ಎಂದು ಅವರು ಖಂಡಿಸಿದರು.
'ಹೆಂಗ್ ಗುದ್ತಾ ಇದ್ವಿ ಗೊತ್ತಾ' ಕಾಲಕ್ಕೆ ಮರಳುತ್ತಿದ್ದಾರೆ
"ಸಚಿವ ಡಾ. ಜಿ. ಪರಮೇಶ್ವರ್ ಅವರು 'ಹೆಂಗ್ ಗುದ್ತಾ ಇದ್ವಿ ಗೊತ್ತಾ' ಎಂದು ಹೇಳಿದ್ದ ಆ ಕಾಲಕ್ಕೆ ರಾಜ್ಯವನ್ನು ಕೊಂಡೊಯ್ಯಲು ಇವರು ಹೊರಟಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ಇವಿಎಂ ವ್ಯವಸ್ಥೆಯನ್ನು ಎತ್ತಿ ಹಿಡಿದಿದೆ. ಇವಿಎಂ ಬಂದ ನಂತರವೇ ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿ ಎರಡು ಬಾರಿ ಮತ್ತು ಹಲವು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ ಎಂಬುದನ್ನು ಮರೆಯಬಾರದು," ಎಂದು ಸುರೇಶ್ ಕುಮಾರ್ ನೆನಪಿಸಿದರು.
ಸತ್ಯ ಹೇಳಿದ ರಾಜಣ್ಣನ ತಲೆದಂಡ
"ಕಾಂಗ್ರೆಸ್ ಪಕ್ಷದಲ್ಲಿ ಸತ್ಯ ಮಾತನಾಡುವುದು ಅಪರಾಧ. 2024ರ ಲೋಕಸಭಾ ಚುನಾವಣೆಯ ಮತಪತ್ರಗಳನ್ನು ನಮ್ಮದೇ ಸರ್ಕಾರ ಇದ್ದಾಗ ತಯಾರಿಸಿದ್ದು ಎಂದು ಸತ್ಯ ಹೇಳಿದ್ದಕ್ಕೆ ಸಚಿವ ಕೆ.ಎನ್. ರಾಜಣ್ಣ ಅವರ ತಲೆದಂಡವಾಗಿದೆ. ಇದು ಕಾಂಗ್ರೆಸ್ ಪಕ್ಷದ ಬೌದ್ಧಿಕ ಮತ್ತು ನೈತಿಕ ದಿವಾಳಿತನವನ್ನು ತೋರಿಸುತ್ತದೆ," ಎಂದು ಅವರು ಆರೋಪಿಸಿದರು.
"ಕಾಗದರಹಿತ ಆಡಳಿತದತ್ತ ಜಗತ್ತು ಸಾಗುತ್ತಿರುವಾಗ, ಕಾಂಗ್ರೆಸ್ ಸರ್ಕಾರವು ಮತ್ತೆ ಶಿಲಾಯುಗಕ್ಕೆ ಮರಳಲು ಹೊರಟಿದೆ. ಬಹುಮತ ಇದೆ ಎಂಬ ಅಹಂಕಾರದಿಂದ ಕೈಗೊಳ್ಳುವ ಇಂತಹ ನಿರ್ಧಾರಗಳು ಸರ್ಕಾರದ ಅಧಃಪತನಕ್ಕೆ ದಾರಿ ಮಾಡಿಕೊಡುತ್ತವೆ," ಎಂದು ಅವರು ಎಚ್ಚರಿಸಿದರು.