ಗೌರಿ ಲಂಕೇಶ್ ಹತ್ಯೆ ಪ್ರಕರಣ | ನಾಲ್ವರು ಆರೋಪಿಗಳಿಗೆ ಜಾಮೀನು

Update: 2024-09-17 08:18 GMT
ಗೌರಿ ಲಂಕೇಶ್
Click the Play button to listen to article

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

ಆರೋಪಿಗಳಾದ ಹುಕ್ಕೇರಿಯ ಭರತ್ ಜಯವಂತ ಕುರಾನೆ (42), ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ (ಈ ಹಿಂದಿನ ಹೆಸರು ಔರಂಗಾಬಾದ್) ಶ್ರೀಕಾಂತ್ ಪಂಗಾರ್ಕರ್ (48), ಶಿಕಾರಿಪುರದ ಸುನಿತ್ ಕುಮಾರ್ (42) ಮತ್ತು ಮಹಾರಾಷ್ಟ್ರ ಸತಾರದ ಸುಧನ್ವ ಗೋಂದಲೇಕರ್ (43)ಗೆ ಜಾಮೀನು ಮಂಜೂರು ಮಾಡಿದೆ.

ಈ ಎಲ್ಲ ಆರೋಪಿಗಳು ತಲಾ ಒಂದು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್​, ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ವಿಚಾರಾಧೀನ ನ್ಯಾಯಾಲಯ ವಿನಾಯಿತಿ ನೀಡದ ಹೊರತು ವಿಚಾರಣೆಯ ಎಲ್ಲ ದಿನ ಆರೋಪಿಗಳು ವಿಚಾರಣೆಗೆ ಹಾಜರಾಗಬೇಕು. ಆರೋಪಿಗಳು ಪ್ರಸಿಕ್ಯೂಷನ್​ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಇಂಥದ್ದೇ ಆರೋಪದಲ್ಲಿ ಭಾಗಿಯಾಗಬಾರದು ಎಂದು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.

ಆರೋಪಿಗಳ ವಿರುದ್ಧ 2017 ರಲ್ಲಿ ರಾಜರಾಜೇಶ್ವರಿ ನಗರ ಪೊಲೀಸರು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ, ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ ಮತ್ತು ಐಪಿಸಿಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪಿಗಳು 2018 ರಿಂದ ನ್ಯಾಯಾಂಗ ಬಂಧನದಲ್ಲಿದ್ದರು.

Tags:    

Similar News