ಬಗರ್ ಹುಕುಂ ಅರ್ಜಿ ವಿಲೇವಾರಿಗೆ ನ.25 ರ ಗಡುವು, ತಪ್ಪಿದರೆ ನೊಟೀಸ್: ಸಚಿವರ ಎಚ್ಚರಿಕೆ

ಬಡವರಿಗೆ ಭೂ ಮಂಜೂರುಗೊಳಿಸುವ ʻಬಗರ್ ಹುಕುಂʼ ಅರ್ಜಿಗಳ ಪೈಕಿ ಅರ್ಹ-ಅನರ್ಹ ಅರ್ಜಿಗಳನ್ನು ವಿಂಗಡಿಸಿ ಈ ತಿಂಗಳ 25 ರ ಒಳಗೆ ಜಿಲ್ಲಾಧಿಕಾರಿಗಳಿಗೆ ನೀಡಬೇಕು ಎಂದು ಸಚಿವರು ತಹಶೀಲ್ದಾರರಿಗೆ ತಾಕೀತು ಮಾಡಿದರು

Update: 2024-11-14 13:27 GMT
ಕಂದಾಯ ಸಚಿವ ಕೃಷ್ಣ ಬೈರೇಗೌಡ

ಬಡವರಿಗೆ ಭೂ ಮಂಜೂರುಗೊಳಿಸುವ ʻಬಗರ್ ಹುಕುಂʼ ಅರ್ಜಿಗಳ ಪೈಕಿ ಅರ್ಹ-ಅನರ್ಹ ಅರ್ಜಿಗಳನ್ನು ರಾಜ್ಯದ ಎಲ್ಲಾ ತಹಶೀಲ್ದಾರರೂ ಈ ತಿಂಗಳ 25 ರ ಒಳಗೆ ವಿಂಗಡಿಸಿ ಜಿಲ್ಲಾಧಿಕಾರಿಗಳಿಗೆ ನೀಡಬೇಕು. ತಪ್ಪಿದರೆ ಎಲ್ಲರಿಗೂ ಶೋಕಾಸ್ ನೊಟೀಸ್ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. 

ಅವರು ಗುರುವಾರ ರಾಜ್ಯದ ಎಲ್ಲಾ ತಹಶೀಲ್ದಾರರ ಜೊತೆ ವಿಕಾಸಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಬಗರ್ ಹುಕುಂ ಅರ್ಜಿ ವಿಲೇ ಪ್ರಗತಿ ಪರಿಶೀಲನೆ ನಡೆಸಿದರು.

ʻಬಗರ್ ಹುಕುಂʼ ಬಡವರ ಕೆಲಸ. ಬಡ ರೈತರಿಗೆ ಶೀಘ್ರ ಭೂ ಮಂಜೂರು ಮಾಡಬೇಕು ಎಂದು ರೈತಪರ ಸಂಘಟನೆಗಳು ದಶಕಗಳಿಂದ ಹೋರಾಡುತ್ತಿವೆ. ಈ ಬಗ್ಗೆ ಸರ್ಕಾರಕ್ಕೂ ಬದ್ಧತೆ ಇದ್ದು, ರೈತ ಹೋರಾಟಗಾರರ ಧ್ವನಿಗೆ ಕಿವಿಗೊಡುವ ಅವರ ಸಮಸ್ಯೆಯನ್ನು ಆಲಿಸಿ ಪರಿಹರಿಸುವ ಉತ್ತರದಾಯಿತ್ವ ನನ್ನ ಮೇಲೂ ಇದೆ” ಎಂದರು.

ʻʻಬಗರ್ ಹುಕುಂ ಕೆಲಸಗಳಿಗೆ ಚುರುಕು ಮುಟ್ಟಿಸಬೇಕು ಎಂಬ ಕಾರಣದಿಂದಲೇ ನಾನು ಕಳೆದ ಒಂದು ವರ್ಷದಿಂದ ವ್ಯಯಕ್ತಿಕವಾಗಿ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಕೈಗೊಂಡು ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದೇನೆ. ರಾಜ್ಯದ ಎಲ್ಲಾ ತಹಶೀಲ್ದಾರರ ಜೊತೆ ಪ್ರತಿ ತಿಂಗಳೂ ವಿಡಿಯೋ ಕಾನ್ಫರೆನ್ಸ್ ಮೂಲಕವೂ ಸಭೆ ನಡೆಸಿ ಪ್ರಗತಿ ಪರಿಶೀಲಿಸುತ್ತಿದ್ದೇನೆ. ಆದರೂ ಕೆಲವು ತಹಶೀಲ್ದಾರರು ಬಡವರ ಕೆಲಸದ ಬಗ್ಗೆ ಅಸಡ್ಡೆ ಧೋರಣೆ ತೋರುತ್ತಿರುವುದು ವಿಷಾದನೀಯʼʼ ಎಂದು ತೀವ್ರ ಅಸಾಮಾಧನ ಹೊರಹಾಕಿದರು.

ಬಡವರ ಕೆಲಸದ ಬಗ್ಗೆ ಅಧಿಕಾರಿಗಳಿಂದ ಅಸಡ್ಡೆ  

“ಬಡವರ ಕೆಲಸದ ಬಗ್ಗೆ ಅಧಿಕಾರಿ ವರ್ಗದಿಂದ ಈ ಮಟ್ಟದ ಅಸಡ್ಡೆಯನ್ನು ನಾನು ನಿರೀಕ್ಷಿಸಿರಲಿಲ್ಲ. ರಾಜ್ಯದ ಒಟ್ಟಾರೆ 14 ಲಕ್ಷ ರೈತರು ಬಗರ್ ಹುಕುಂ ಅಡಿ ಭೂ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಅರ್ಜಿಗಳ ಪೈಕಿ ಅರ್ಹ ಅರ್ಜಿ ಯಾವುದು? ಅನರ್ಹ ಅರ್ಜಿ ಯಾವುದು? ಎಂದು ಪರಿಶೀಲಿಸಲು ಅಧಿಕಾರಿಗಳಿಗೆ ಒಂದೂವರೆ ವರ್ಷ ಬೇಕಾ?” ಎಂದು ಸಚಿವರು ಕಿಡಿಕಾರಿದರು.

 “ಇದೇ ತಿಂಗಳ 25 ರ ಒಳಗೆ ತಹಶೀಲ್ದಾರರು ಅರ್ಹ-ಅನರ್ಹ ಅರ್ಜಿಗಳನ್ನು ವಿಂಗಡಿಸಿ ಪಟ್ಟಿ ಮಾಡಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ಎಲ್ಲಾ ಜಿಲ್ಲಾಧಿಕಾರಿಗಳು 26 ರ ಬೆಳಿಗ್ಗೆಯೇ ಇಡೀ ಜಿಲ್ಲೆಯ ಪಟ್ಟಿಯನ್ನು ಒಂದುಗೂಡಿಸಿ ನನಗೆ ಸಲ್ಲಿಸಬೇಕು. ಹಾಗೂ ಡಿಸೆಂಬರ್ ಮೊದಲ ವಾರದಲ್ಲಿ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಅರ್ಹರಿಗೆ ಡಿಜಿಟಲ್ ಭೂ ಸಾಗುವಳಿ ಚೀಟಿ ನೀಡಬೇಕು” ಎಂದು ಅವರು ತಾಕೀತು ಮಾಡಿದರು.

ಅರ್ಹ-ಅನರ್ಹ ವಿಂಗಡನೆಯ ಮಾನದಂಡವೇನು?

ರಾಜ್ಯಾದ್ಯಂತ ಬಗರ್ ಹುಕುಂ ಅಡಿ ಭೂ ಮಂಜೂರಾತಿ ಕೋರಿ 14ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಅನರ್ಹ ಅರ್ಜಿಗಳ ಸಂಖ್ಯೆಯೇ ಅಧಿಕವಾಗಿದೆ. ಹೀಗಾಗಿ ಅರ್ಜಿಗಳನ್ನು ಅನರ್ಹ ಎಂದು ನಿರ್ಧರಿಸಲು ಕೆಲವು ಮಾನದಂಡಗಳನ್ನು ನಿಗದಿಪಡಿಸಲಾಗಿದೆ.

ಅರ್ಜಿದಾರರು ನಿರ್ದಿಷ್ಟ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿಲ್ಲ, ನಿರ್ದಿಷ್ಟ ಪ್ರದೇಶದಲ್ಲಿ ಗೋಮಾಳ ಭೂಮಿ ಅಧಿಕ ಇಲ್ಲ, ಅರಣ್ಯ ಭೂಮಿಯನ್ನು ಕೋರಿ ಸಾಗುವಳಿಗೆ ಅರ್ಜಿ ಸಲ್ಲಿಸಿದ್ದರೆ, ಅರ್ಜಿದಾರರ ಹೆಸರಿನಲ್ಲಿ ಈಗಾಗಲೇ 4.38 ಎಕರೆಗೂ ಅಧಿಕ ಜಮೀನು ಇದ್ದರೆ, ಅರ್ಜಿದಾರರು ಭೂಮಿ ಕೋರಿ ಅರ್ಜಿ ಸಲ್ಲಿಸಿರುವ ಪ್ರದೇಶದಲ್ಲಿ ವಾಸ ಇಲ್ಲದಿದ್ದರೆ, ಅರ್ಜಿಯೇ ನಕಲು ಆಗಿದ್ದರೆ ಅಥವಾ ಅರ್ಜಿದಾರರು ಅಧಿಕಾರಿಗಳ ಕೈಗೆ ಸಿಗದಿದ್ದರೆ ಅಂತಹ ಅರ್ಜಿಗಳನ್ನು ಅನರ್ಹ ಎಂದು ಪರಿಗಣಿಸಲಾಗುವುದು. ಇದರ ಹೊರತಾಗಿ ಬೇರೆ ಸ್ವರೂಪದ ಸಮಸ್ಯೆಗಳು ಕಂಡುಬಂದರೆ ಅದನ್ನೂ ಸಹ ಪಟ್ಟಿಮಾಡಿ ಜಿಲ್ಲಾಧಿಕಾರಿಗಳಿಗೆ ನೀಡುವಂತೆ ಸಚಿವ ಕೃಷ್ಣ ಬೈರೇಗೌಡ ಅವರು ತಹಶೀಲ್ದಾರರಿಗೆ ಸೂಚಿಸಿದರು.

ಮಾಲೂರು ತಹಶೀಲ್ದಾರರಿಗೆ ನೊಟೀಸ್

ಬಗರ್ ಹುಕುಂ ಅರ್ಜಿ ವಿಲೇವಾರಿ ಕೆಲಸದಲ್ಲಿ ಅಸಡ್ಡೆ ತೋರಿದ ಮಾಲೂರು ತಾಲೂಕು ತಹಶೀಲ್ದಾರ್ ರಮೇಶ್ ಅವರಿಗೆ ಶೋಕಾಸ್ ನೊಟೀಸ್ ನೀಡುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಇಂದಿನ ಸಭೆಯಲ್ಲಿ ಸೂಚಿಸಿದರು.

ಕೋಲಾರ ಜಿಲ್ಲೆ ಮಾಲೂರು ತಾಲೂಕಿನಲ್ಲಿ ಬಗರ್ ಹುಕುಂ ಅಡಿ ಭೂ ಮಂಜೂರಾತಿ ಕೋರಿ 10,771 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಈವರೆಗೆ ಸ್ಥಳ ಪರಿಶೀಲನೆಗೊಂಡಿರುವ ಅರ್ಜಿಗಳ ಸಂಖ್ಯೆ ಕೇವಲ 55 ಮಾತ್ರ. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಸಭೆ ಆರಂಭವಾಗುತ್ತಿದ್ದಂತೆ ಸಚಿವ ಕೃಷ್ಣ ಬೈರೇಗೌಡ ಅವರು ಮಾಲೂರು ತಹಶೀಲ್ದಾರ್ ರಮೇಶ್ ಅವರ ಬಳಿ ಮಾತನಾಡಲು ಯತ್ನಿಸಿದರು. ಆದರೆ, ಅವರು ಸಭೆಗೆ ಒಂದು ಗಂಟೆ ತಡವಾಗಿ ಬಂದರು. ಅಲ್ಲದೆ, ಸಚಿವರ ಪ್ರಶ್ನೆಗಳಿಗೆ ಉತ್ತರಿಸಲೂ ತಡವರಿಸಿದರು. ಹೀಗಾಗಿ ಅವರಿಗೆ ಕೂಡಲೇ ಶೋಕಾಸ್ ನೊಟೀಸ್ ನೀಡುವಂತೆ ಸಚಿವರು ಸೂಚಿಸಿದರು.

ಉತ್ತಮ ಕೆಲಸ ಮಾಡುವವರಿಗೆ ಸನ್ಮಾನದ ಭರವಸೆ

ಬಗರ್ ಹುಕುಂ ಬಡವರ ಕೆಲಸವಾಗಿದ್ದು, ಅತ್ಯುತ್ತಮವಾಗಿ ಕೆಲಸ ನಿರ್ವಹಿಸುವ ತಹಶೀಲ್ದಾರರುಗಳಿಗೆ ಪ್ರಶಂಸನೀಯ ಪತ್ರ ನೀಡಿ ಸನ್ಮಾನಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ನೀಡಿದರು.

ಇಂದಿನ ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ತಹಶೀಲ್ದಾರ್ ಶ್ರೀಧರ್ ಶೇಖರ್ ಮುಂದಲಮನಿ ಹಾಗೂ ಮುಂಡಗೋಡು ತಾಲೂಕು ತಹಶೀಲ್ದಾರ್ ಮುಂಡಗೋಡು ಶಂಕರ್ ಗೌಡಿ ಅವರ ಪ್ರಶಂಸಿಸಿದ ಸಚಿವರು, “ಹಲವರು ಕೆಲಸ ಮಾಡಿ ಅಂದ್ರೆ ಬಗರ್ ಹುಕುಂ ಆ್ಯಪ್ ಸಹಕರಿಸುತ್ತಿಲ್ಲ, ನೆಟ್ವರ್ಕ್ ಇಲ್ಲ ಎಂದು ಇಲ್ಲ ಸಲ್ಲದ ಕಾರಣ ನೀಡುತ್ತಾರೆ. ಆದರೆ, ನೆಟ್ವರ್ಕೆ ಇಲ್ಲದ ಗುಡ್ಡಗಾಡು ಅರಣ್ಯ ಪ್ರದೇಶದಲ್ಲಿ ಅಧಿಕಾರಿಗಳು ಹೇಗೆ ಶೇ.80ರಷ್ಟು ಬಗರ್ ಹುಕುಂ ಅರ್ಜಿ ವಿಲೇ ಮಾಡಲು ಸಾಧ್ಯವಾಯಿತು? ಇಲ್ಲಿ ಸಾಧ್ಯವಾಗುವುದಾದರೆ ಬೇರೆ ತಾಲೂಕುಗಳಲ್ಲೂ ಏಕೆ ಸಾಧ್ಯವಿಲ್ಲ?" ಎಂದು ಪ್ರಶ್ನೆ ಮಾಡಿದ ಸಚಿವರು ಬಗರ್ ಹುಕುಂ ವಿಚಾರದಲ್ಲಿ ಉತ್ತಮ ಸೇವೆ ಸಲ್ಲಿಸುವ ಕಾಲಮಿತಿಯೊಳಗೆ ಅರ್ಜಿ ವಿಲೇಗೊಳಿಸುವ ಅಧಿಕಾರಿಗಳನ್ನು ಬೆಂಗಳೂರಿಗೆ ಖುದ್ದಾಗಿ ಕರೆಸಿ ಮುಂದಿನ ತಿಂಗಳ ಸಭೆಯಲ್ಲಿ ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಲಾಗುವುದು” ಎಂದು ಭರವಸೆ ನೀಡಿದರು.

Tags:    

Similar News