ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಸ್ಫೋಟಕ ತುಂಬಿದ್ದ ಬ್ಯಾಗ್‌ ಪತ್ತೆ ಪ್ರಕರಣ: 3 ಜನರ ಬಂಧನ

ಐದು ತಂಡ ರಚಿಸಿ ತನಿಖೆ ನಡೆಸಿದ್ದ ಕಲಾಸಿಪಾಳ್ಯ ಠಾಣೆ ಪೊಲೀಸರು ಸದ್ಯ ಮೂವರನ್ನು ಬಂಧಿಸುವ ಮೂಲಕ ಬಂಧಿತರಿಂದ 22 ಜಿಲೆಟಿನ್​ ಜೆಲ್​, 30 ಡಿಟೋನೇಟರ್ಸ್ ವಶಕ್ಕೆ ಪಡೆದುಕೊಂಡಿದ್ದಾರೆ.;

Update: 2025-07-29 08:08 GMT

ಕಾಲ್ಪನಿಕ ಚಿತ್ರ

ಇತ್ತೀಚೆಗೆ ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಕೋಲಾರ ಮೂಲದ ಗಣೇಶ್​, ಮುನಿರಾಜ್​ ಮತ್ತು ಶಿವಕುಮಾರ್​​ ಬಂಧಿತರು. ಆರೋಪಿಗಳ ವಿಚಾರಣೆ ವೇಳೆ ಕೆಲವು ಮಾಹಿತಿ ಬಹಿರಂಗವಾಗಿದೆ.

ಐದು ತಂಡ ರಚಿಸಿ ತನಿಖೆ ನಡೆಸಿದ್ದ ಕಲಾಸಿಪಾಳ್ಯ ಠಾಣೆ ಪೊಲೀಸರು ಸದ್ಯ ಮೂವರನ್ನು ಬಂಧಿಸುವ ಮೂಲಕ ಬಂಧಿತರಿಂದ 22 ಜಿಲೆಟಿನ್​ ಜೆಲ್​, 30 ಡಿಟೋನೇಟರ್ಸ್ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಕೆಲವು ಆರೋಪಿಗಳ ಪತ್ತೆಗಾಗಿ ಪೊಲೀಸರಿಂದ ಹುಡುಕಾಟ ನಡೆದಿದೆ.

ಬಂಧಿತ ಆರೋಪಿಗಳ ವಿಚಾರಣೆ ವೇಳೆ ಕೆಲವು ಮಾಹಿತಿ ಬಹಿರಂಗಗೊಂಡಿವೆ. ಆರೋಪಿಗಳು ಸ್ಫೋಟಕಗಳನ್ನು ಬ್ಯಾಗ್​ನಲ್ಲಿ ತೆಗೆದುಕೊಂಡು ಬಂದಿದ್ದಾರೆ. ನಂತರ ಬಸ್ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ತೆರಳಿದ್ದು, ಬ್ಯಾಗ್​ಗಳನ್ನು ಹೊರಗಡೆ ಇಟ್ಟು ಹೋಗಿದ್ದಾರೆ. ಈ ವೇಳೆ ಹೊರ ಬಂದಾಗ ಅಲ್ಲಿ ಹೋಮ್ ಗಾರ್ಡ್ಸ್​ ಇರುವುದನ್ನು​ ನೋಡಿ ಬೆದರಿ ಅಲ್ಲಿಯೇ ಬ್ಯಾಗ್​ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. 

ಕೋಲಾರದಲ್ಲಿ ಜಿಲೆಟಿನ್ ಕಡ್ಡಿಗಳನ್ನು ಖರೀದಿಸಿದ್ದಾರೆ. ಆರೋಪಿಗಳು ಸ್ಫೋಟಕಗಳನ್ನು ಕೊಳ್ಳೆಗಾಲದಲ್ಲಿ ಬೋರ್​ವೆಲ್ ಮತ್ತು ಗುಂಡಿಯಲ್ಲಿ ಬಂಡೆ ಒಡೆಯಲು ಬಳಸಲು ತೆಗೆದುಕೊಂಡು ಹೋಗುತ್ತಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ. 

ಆತಂಕ ಸೃಷ್ಟಿಸಿದ್ದ ಪ್ರಕರಣ

ಜುಲೈ 23ರಂದು ಕೆ.ಆರ್.ಮಾರ್ಕೆಟ್​ ಬಳಿಯ ಕಲಾಸಿಪಾಳ್ಯದ ಬಿಎಂಟಿಸಿ ಬಸ್ ನಿಲ್ದಾಣದ ಶೌಚಾಲಯದಲ್ಲಿ  ಸ್ಫೋಟಕಗಳು ತುಂಬಿದ್ದ ಬ್ಯಾಗ್‌ ಕಂಡು ಬಂದಿತ್ತು. ಆರು ಜಿಲೆಟಿನ್ ಕಡ್ಡಿಗಳು, ಡೆಟೋನೇಟರ್‌ಗಳು ಪತ್ತೆಯಾಗಿತ್ತು. ಶೌಚಾಲಯದ ಹೊರಗೆ ಇಟ್ಟಿದ್ದ ಚೀಲವಿರುವ ಬಗ್ಗೆ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ತ್ವರಿತವಾಗಿ ಸ್ಥಳಕ್ಕೆ ಧಾವಿಸಿ, ಇಡೀ ಪ್ರದೇಶವನ್ನು ಸುತ್ತುವರೆದರು. ಕೂಡಲೇ ಪ್ರಯಾಣಿಕರನ್ನು ಬಸ್‌ ನಿಲ್ದಾಣದಿಂದ ತೆರವುಗೊಳಿಸಲಾಗಿತ್ತು. ಈ ಸ್ಪೋಟಕಗಳನ್ನು ಕಲ್ಲುಕ್ವಾರಿಯಲ್ಲಿ ಬಳಸಲು ಕೊಂಡೊಯ್ಯುತ್ತಿದ್ದ ಸ್ಫೋಟಕಗಳು ಇರಬಹುದೆಂದು ಪೊಲೀಸರು ಈ ಮುಂಚೆ ಶಂಕೆ ವ್ಯಕ್ತಪಡಿಸಿದ್ದರು. 

Tags:    

Similar News