ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಏಕಾಏಕಿ ಹೆಚ್ಚಳ: ಆಗಸ್ಟ್ 1 ರಿಂದ ಹೊಸ ದರ ಜಾರಿ
ಹೊಸ ದರದ ಪ್ರಕಾರ, ಪ್ರಯಾಣಿಕರು ಮೊದಲ ಎರಡು ಕಿಲೋ ಮೀಟರ್ಗೆ 36 ರೂಪಾಯಿ ಪಾವತಿ ಮಾಡಬೇಕು. (ಪ್ರಸ್ತುತ ಮೊದಲ 2 ಕಿ.ಮೀ.ಗೆ 30 ರೂಪಾಯಿ ಇದೆ). ನಂತರದ ಪ್ರತಿ ಕಿಲೋಮೀಟರ್‌ಗೆ 18 ರೂಪಾಯಿ ದರ ನಿಗದಿಪಡಿಸಲಾಗಿದೆ.;
ಬೆಂಗಳೂರು ನಗರದಲ್ಲಿ ಆಟೋ ಪ್ರಯಾಣ ದರವನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (RTA) ಪರಿಷ್ಕರಿಸಿದ್ದು. ಹೊಸ ದರಗಳು ಆಗಸ್ಟ್ 1ರಿಂದ ಜಾರಿಗೆ ಬರಲಿವೆ. ಆಟೋ ಚಾಲಕರ ಸಂಘಟನೆಗಳ ಬೇಡಿಕೆಯ ನಂತರ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈಗಾಗಲೇ ನಾನಾ ವಸ್ತುಗಳ ಬೆಲೆ ಏರಿಕೆಯ ಬಿಸಿ ತಟ್ಟಿಸಿಕೊಂಡಿರುವ ಬೆಂಗಳೂರಿನ ಮಂದಿ ಆಟೊ ದರದ ಕಾವನ್ನೂ ತಡೆದುಕೊಳ್ಳಬೇಕಾಗಿದೆ.
ಆದೇಶದ ಪ್ರತಿಯನ್ನು ಇಲ್ಲಿ ಓದಿ
ಹೊಸ ದರದ ಪ್ರಕಾರ, ಪ್ರಯಾಣಿಕರು ಮೊದಲ ಎರಡು ಕಿಲೋ ಮೀಟರ್ಗೆ 36 ರೂಪಾಯಿ ಪಾವತಿ ಮಾಡಬೇಕು. (ಪ್ರಸ್ತುತ ಮೊದಲ 2 ಕಿ.ಮೀ.ಗೆ 30 ರೂಪಾಯಿ ಇದೆ). ನಂತರದ ಪ್ರತಿ ಕಿಲೋಮೀಟರ್‌ಗೆ 18 ರೂಪಾಯಿ ದರ ನಿಗದಿಪಡಿಸಲಾಗಿದೆ. 36 ರೂಪಾಯಿ ಕನಿಷ್ಠ ದರದಲ್ಲಿ ಮೂರು ಜನ ಪ್ರಯಾಣಿಕರು ಮಾತ್ರ ಪ್ರಯಾಣ ಮಾಡಬಹುದು.
ಕಾಯುವಿಕೆ ಸಮಯಕ್ಕೆ ಸಂಬಂಧಿಸಿದಂತೆ, ಮೊದಲ ಐದು ನಿಮಿಷಗಳು ಉಚಿತ, ನಂತರದ ಪ್ರತಿ ಹದಿನೈದು ನಿಮಿಷಕ್ಕೆ 10 ಶುಲ್ಕ ರೂಪಾಯಿ ವಿಧಿಸಲಾಗುತ್ತದೆ. ಲಗೇಜು ದರದ ವಿಚಾರಕ್ಕೆ ಬಂದಾಗ ಮೊದಲ 20 ಕೆ.ಜಿ. ಉಚಿತ, 20 ಕೆ.ಜಿ. ನಂತರದ ಹೆಚ್ಚುವರಿ ಪ್ರತಿ 20 ಕೆ.ಜಿಗೆ 10 ರೂಪಾಯಿ ಪಡೆಯಬಹುದು. ಆಟೋದಲ್ಲಿ ಗರಿಷ್ಠ 50 ಕೆ.ಜಿ. ಲಗೇಜು ಕೊಂಡೊಯ್ಯಬಹುದು.
ರಾತ್ರಿಯ ವೇಳೆಯ ಪ್ರಯಾಣದ ದರವನ್ನೂ ಪರಿಷ್ಕರಿಸಲಾಗಿದ್ದು, ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಸಾಮಾನ್ಯ ದರದ ಜೊತೆಗೆ ಹೆಚ್ಚುವರಿಯಾಗಿ ಸಾಮಾನ್ಯ ದರದ ಅರ್ಧದಷ್ಟು ಹೆಚ್ಚು ಶುಲ್ಕ ಪಡೆಯಲು ಒಪ್ಪಿಗೆ ನೀಡಲಾಗಿದೆ. .
ಪ್ರಾಧಿಕಾರದ ಆದೇಶದ ಪ್ರಕಾರ, ಪ್ರತಿಯೊಂದು ಆಟೋರಿಕ್ಷಾದಲ್ಲಿ ಪರಿಷ್ಕೃತ ದರದ ಮೂಲ ಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಅಲ್ಲದೆ, ಎಲ್ಲಾ ಆಟೋ ಮೀಟರ್‌ಗಳನ್ನು ಅಕ್ಟೋಬರ್ 31 ರೊಳಗಾಗಿ ಹೊಸ ದರಗಳಿಗೆ ಅನುಗುಣವಾಗಿ ಸೆಟ್ಟಿಂಗ್ ಮಾಡಿ ಸೀಲ್ ಹಾಕಿಸಿಕೊಳ್ಳಬೇಕು ಎಂದು ಬೆಂಗಳೂರು ನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಆದೇಶಿಸಿದೆ. ಈ ದರ ಪರಿಷ್ಕರಣೆಯು ಪ್ರಯಾಣಿಕರ ಜೇಬಿಗೆ ಸ್ವಲ್ಪ ಭಾರವಾಗಲಿದ್ದು, ಆಟೋ ಚಾಲಕರ ಬಹುದಿನಗಳ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದಂತಾಗಿದೆ.