ರನ್ಯಾರಾವ್‌ ಪ್ರಕರಣ| ಮಾಸ್ಟರ್ ಮೈಂಡ್ ನಟ ತರುಣ್ ಜೈಲಿನಲ್ಲಿ ಬಿಂದಾಸ್ ಲೈಫ್

ತೆಲುಗು ಸಿನಿಮಾಗಳಲ್ಲಿ ನಾಯಕ ನಟನಾಗಿ 'ಪರಿಚಯಂ' ಮೂವಿಯಲ್ಲಿ ನಟಿಸಿದ್ದರು. ತಮಿಳು ಚಿತ್ರರಂಗದಲ್ಲಿ ಕಾಣಿಸಿಕೊಂಡಿರುವ ತರುಣ್, ಚಿನ್ನ ಕಳ್ಳಸಾಗಣೆ ಜಾಲದ ಮಾಸ್ಟರ್ ಮೈಂಡ್ ಆಗಿದ್ದ.

Update: 2025-11-08 07:21 GMT

ರನ್ಯಾರಾವ್‌ ಪ್ರಿಯಕರ 

Click the Play button to listen to article

ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ, ನಟಿ ರನ್ಯಾ ರಾವ್ ಪ್ರಿಯಕರ ಹಾಗೂ ತೆಲುಗು ನಟ ತರುಣ್ ಜೈಲಿನೊಳಗೆ ಐಷಾರಾಮಿ ಜೀವನ ನಡೆಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಕೈಯಲ್ಲಿ ಮೊಬೈಲ್, ತನ್ನ ಸೆಲ್‌ನಲ್ಲಿ ಟಿವಿ ಇಟ್ಟುಕೊಂಡು ತರುಣ್ ಬಿಂದಾಸ್ ಆಗಿ ಕಾಲ ಕಳೆಯುತ್ತಿದ್ದು, ಜೈಲಾಧಿಕಾರಿಗಳ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಯಾರು ಈ ತರುಣ್?

ತೆಲುಗು ಸಿನಿಮಾಗಳಲ್ಲಿ ನಾಯಕ ನಟನಾಗಿ 'ಪರಿಚಯಂ' ಚಿತ್ರದಲ್ಲಿ ನಟಿಸಿದ್ದರು. ತಮಿಳು ಚಿತ್ರರಂಗದಲ್ಲೂ ಕಾಣಿಸಿಕೊಂಡಿರುವ ತರುಣ್, ಚಿನ್ನ ಕಳ್ಳಸಾಗಣೆ ಜಾಲದ ಮಾಸ್ಟರ್ ಮೈಂಡ್ ಆಗಿದ್ದ. ಅಮೆರಿಕಾದ ಪೌರತ್ವ ಹೊಂದಿರುವ ಈತ, ರನ್ಯಾ ರಾವ್ ಜೊತೆ ಸೇರಿ ಅಂತರಾಷ್ಟ್ರೀಯ ಚಿನ್ನ ಕಳ್ಳಸಾಗಣೆ ದಂಧೆಯಲ್ಲಿ ತೊಡಗಿದ್ದ. ಡಿಆರ್‌ಐ ಮತ್ತು ಇಡಿ ತನಿಖೆಗೆ ಇಳಿದಾಗ ತರುಣ್ ಪಾತ್ರ ಬಯಲಾಗಿತ್ತು. ಈತ ಭಾರತ ಬಿಟ್ಟು ಜಿನೀವಾಗೆ ಪರಾರಿಯಾಗುವ ವೇಳೆ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ರನ್ಯಾ-ತರುಣ್ ನಂಟು ಹೇಗಾಯಿತು? 

2023ರಿಂದ ಮಾರ್ಚ್ 2025ರ ನಡುವೆ ನಟಿ ರನ್ಯಾ ರಾವ್ ಬರೋಬ್ಬರಿ 52 ಬಾರಿ ದುಬೈಗೆ ಹೋಗಿ ಬಂದಿದ್ದರು ಎಂಬ ಮಾಹಿತಿ ತನಿಖೆಯಿಂದ ಹೊರಬಿದ್ದಿತ್ತು. ಈ ಪೈಕಿ 26 ಬಾರಿ ತೆಲುಗು ನಟ ತರುಣ್ ಜೊತೆಗೇ ದುಬೈಗೆ ಪ್ರಯಾಣ ಮಾಡಿದ್ದರು. ಸಿನಿಮಾ ಈವೆಂಟ್‌ಗಳ ಹೆಸರಿನಲ್ಲಿ ನಡೆಯುವ ಪಾರ್ಟಿಗಳಲ್ಲಿ ರನ್ಯಾಳನ್ನು ಪರಿಚಯಿಸಿಕೊಂಡಿದ್ದ ತರುಣ್, ಆಕೆಯೊಂದಿಗೆ ಸ್ನೇಹ ಬೆಳೆಸಿ, ನಂತರ ಪ್ರಿಯಕರನಾಗಿ ಚಿನ್ನ ಕಳ್ಳಸಾಗಣೆಗೆ ಆಕೆಯನ್ನು ಬಳಸಿಕೊಂಡಿದ್ದ.

ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರ ಮಗಳಾದ ರನ್ಯಾಳಿಗೆ ದುಬೈನಲ್ಲಿ ತರುಣ್ ಚಿನ್ನವನ್ನು ನೀಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ರನ್ಯಾ ರಾವ್ ಐಪಿಎಸ್ ಅಧಿಕಾರಿ ತಂದೆಯ ಪೊಲೀಸ್ ಜೀಪ್ ಸೆಕ್ಯೂರಿಟಿ ಮತ್ತು ವಿಮಾನ ನಿಲ್ದಾಣದ ವಿಐಪಿ ಪ್ರೀ-ಎಕ್ಸಿಟ್ ಸೌಲಭ್ಯ ದುರುಪಯೋಗಪಡಿಸಿಕೊಂಡು ಚಿನ್ನ ಸಾಗಿಸುತ್ತಿದ್ದರು ಎಂಬ ಸ್ಫೋಟಕ ಮಾಹಿತಿ ತನಿಖೆಯಲ್ಲಿ ಬಯಲಾಗಿತ್ತು.

ಜೈಲಿನಲ್ಲಿ ಬಿಂದಾಸ್ ಲೈಫ್ 

ಸದ್ಯ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ತರುಣ್, ಕಾರಾಗೃಹದೊಳಗೆ ಐಷಾರಾಮಿ ಜೀವನ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ಆತನ ಸೆಲ್‌ನಲ್ಲಿ ಮೊಬೈಲ್ ಮತ್ತು ಟಿವಿ ಪತ್ತೆಯಾಗಿದ್ದು, ಜೈಲಿನ ನಿಯಮ ಗಾಳಿಗೆ ತೂರಲಾಗಿದೆ.

ಪ್ರತಿ ರೂಮಿಗೂ ಟಿವಿ, ಮೊಬೈಲ್ ಕೊಡುವುದಕ್ಕೆ ಇದೇನು ಲಾಡ್ಜಾ? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೈಲಾಧಿಕಾರಿಗಳ ಸಹಾಯವಿಲ್ಲದೆ ಈ ರೀತಿ ಕಾನೂನುಬಾಹಿರ ವ್ಯವಸ್ಥೆ ನಡೆಯಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿಬಂದಿದ್ದು, ಉನ್ನತ ಮಟ್ಟದ ತನಿಖೆ ಆಗಬೇಕು ಎಂಬ ಒತ್ತಾಯ ಕೇಳಿ ಬಂದಿದೆ. 

Tags:    

Similar News