ಆದಾಯ ಮೀರಿದ ಆಸ್ತಿ ಪ್ರಕರಣ | ತೀರ್ಪು ಏನೇ ಬಂದರೂ ಸ್ವೀಕರಿಸುತ್ತೇನೆ: ಡಿ ಕೆ ಶಿವಕುಮಾರ್
"ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ನ್ಯಾಯಾಲಯ ಏನೇ ತೀರ್ಪು ನೀಡಿದರೂ ನಾನು ಅದನ್ನು ದೇವರ ಪ್ರಸಾದ ಎಂದು ಸ್ವೀಕರಿಸುತ್ತೇನೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ತನಿಖೆ ನಡೆಸಲು ಸಿಬಿಐ, ರಾಜ್ಯ ಹೈಕೋರ್ಟಿಗೆ ಅರ್ಜಿ ಸಲ್ಲಿಸಿರುವ ಪ್ರಕರಣದ ತೀರ್ಪು ಗುರುವಾರ(ಆ.29) ನಿಗದಿಯಾಗಿರುವ ಹಿನ್ನೆಲೆಯಲ್ಲಿ ಆ ಬಗ್ಗೆ ಪ್ರತಿಕ್ರಿಯಿಸಿದ ಅವರು, "ನನಗೆ ದೇವರ ಮೇಲೆ ಮತ್ತು ನ್ಯಾಯಾಲಯದ ಮೇಲೆ ನಂಬಿಕೆ ಇದೆ" ಎಂದರು.
ಎತ್ತಿನಹೊಳೆ ಕಾಮಗಾರಿ ವೀಕ್ಷಣೆ ನಂತರ ಸಕಲೇಶಪುರದ ಹೆಬ್ಬನಹಳ್ಳಿ ಬಳಿ ಮಾಧ್ಯಮಗಳಿಗೆ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು.
ಸಿಎಂ ಸಿದ್ದರಾಮಯ್ಯ ಅವರ ಪತ್ನಿಯ ಮೇಲೆ ದೂರು ದಾಖಲಾಗಿರುವ ಬಗ್ಗೆ ಕೇಳಿದಾಗ "ಸಿಎಂ ಏನು ಮಾಡಿದ್ದಾರೆ ಎಂದು ಅವರ ಮೇಲೆ ಎಲ್ಲಾ ಏಕೆ ಮುಗಿಬೀಳುತ್ತಿದ್ದಾರೋ ನನಗೆ ಗೊತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅವರಿಗೆ ಏನೂ ಆಗುವುದಿಲ್ಲ. ಜಮೀನು ಕಳೆದುಕೊಂಡಿರುವುದಕ್ಕೆ ಪರಿಹಾರವಾಗಿ ಬಿಜೆಪಿಯವರೇ ನಿವೇಶನ ನೀಡಿದ್ದಾರೆ. ಸಿಎಂ ಅವರು ಎಲ್ಲೂ ಪ್ರಭಾವ ಬೀರಿಲ್ಲ, ಸಹಿಯನ್ನೂ ಮಾಡಿಲ್ಲ" ಎಂದರು.
ನಕಲಿಗಲ್ಲ ಅಸಲಿಗೆ ಉತ್ತರ ಕೊಡುತ್ತೇನೆ
ಜಮೀನನ್ನು ಡೀನೋಟಿಫಿಕೇಶನ್ ಮಾಡಿದ್ದಾರೆ ಎನ್ನುವ ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ "ನಕಲಿಗೆಲ್ಲ ನಾನು ಉತ್ತರ ಕೊಡುವುದಿಲ್ಲ. ಅಸಲಿಗೆ ಮಾತ್ರ ಉತ್ತರ ಕೊಡುತ್ತೇನೆ" ಎಂದು ತಿರುಗೇಟು ನೀಡಿದರು.