ಶಾಂತಿ ಕದಡುವ ಷಡ್ಯಂತ್ರ ಮಾಡುತ್ತಿರುವುದು ಅಶೋಕ್: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

ವಿಪಕ್ಷ ನಾಯಕ ಆರ್. ಅಶೋಕ್ ಅವರಿಗೆ ಬೇರೆ ಯಾವುದೇ ಉದ್ಯೋಗವಿಲ್ಲ. ಅದಕ್ಕಾಗಿಯೇ ಇಂತಹ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.;

Update: 2025-09-10 14:51 GMT

ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌

Click the Play button to listen to article

"ಸಮಾಜದಲ್ಲಿ ದ್ವೇಷವನ್ನು ಬಿತ್ತುವುದು, ಜನರನ್ನು ಧರ್ಮದ ಹೆಸರಿನಲ್ಲಿ ಇಬ್ಬಾಗ ಮಾಡುವುದೇ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಅಜೆಂಡಾ. ಅವರೇ ರಾಜ್ಯದಲ್ಲಿ ಶಾಂತಿ ಕದಡುವ, ಅಶಾಂತಿ ಉಂಟುಮಾಡುವ ಷಡ್ಯಂತ್ರಗಳನ್ನು ರೂಪಿಸುತ್ತಿದ್ದಾರೆ," ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕನಕಪುರದಲ್ಲಿ ಬುಧವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಧರ್ಮಸ್ಥಳ, ದಸರಾ ಉದ್ಘಾಟನೆ ಮತ್ತು ಚಾಮುಂಡಿ ಬೆಟ್ಟಕ್ಕೆ ಸಂಬಂಧಿಸಿದಂತೆ ಆರ್. ಅಶೋಕ್ ಅವರು ಮಾಡುತ್ತಿರುವ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. "ವಿಪಕ್ಷ ನಾಯಕ ಆರ್. ಅಶೋಕ್ ಅವರಿಗೆ ಬೇರೆ ಯಾವುದೇ ಉದ್ಯೋಗವಿಲ್ಲ. ಅದಕ್ಕಾಗಿಯೇ ಇಂತಹ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಅವರು ಮಾಡುತ್ತಿರುವ ಎಲ್ಲಾ ಷಡ್ಯಂತ್ರಗಳ ಬಗ್ಗೆ ತನಿಖೆ ನಡೆಯುತ್ತಿದೆ ಮತ್ತು ಸತ್ಯಾಂಶವು ಶೀಘ್ರದಲ್ಲೇ ಜನರ ಮುಂದೆ ಬರಲಿದೆ," ಎಂದು ಶಿವಕುಮಾರ್ ಹೇಳಿದರು.

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಸಮಾಧಿ ಪ್ರಕರಣ ಮತ್ತು ಚಾಮುಂಡಿ ಬೆಟ್ಟವು ಕೇವಲ ಹಿಂದೂಗಳಿಗೆ ಸೇರಿದ್ದಲ್ಲ ಎಂಬ ಹೇಳಿಕೆಗಳ ಹಿನ್ನೆಲೆಯಲ್ಲಿ, ಬಿಜೆಪಿ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ, ಡಿ.ಕೆ. ಶಿವಕುಮಾರ್ ಅವರು, ಬಿಜೆಪಿ ನಾಯಕರೇ ರಾಜ್ಯದ ಸಾಮರಸ್ಯವನ್ನು ಕದಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Tags:    

Similar News