ಜಾತಿ ಗಣತಿಗೆ ಆರಂಭದಲ್ಲೇ ವಿಘ್ನ? ಆಶಾ ಕಾರ್ಯಕರ್ತರಿಂದ ರಾಜ್ಯಾದ್ಯಂತ ಬಹಿಷ್ಕಾರ

ಈ ಹಿಂದೆ ಗ್ಯಾರಂಟಿ ಯೋಜನೆಗಳ ಸಮೀಕ್ಷೆ ಸೇರಿದಂತೆ ಇತರೆ ಸಮೀಕ್ಷೆಗಳ ಹಣವನ್ನು ಸರ್ಕಾರ ಆಶಾ ಕಾರ್ಯಕರ್ತರೆಯರಿಗೆ ಪಾವತಿ ಮಾಡಿಲ್ಲ. ಹೀಗಾಗಿ ಸಮೀಕ್ಷೆ ಕಾರ್ಯದಿಂದ ದೂರವಿರಲು ತೀರ್ಮಾನಿಸಿದ್ದಾರೆ.

Update: 2025-09-18 15:34 GMT
Click the Play button to listen to article

ರಾಜ್ಯದಲ್ಲಿ ನಡೆಯುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ (ಜಾತಿ ಗಣತಿ) ಆರಂಭದಲ್ಲಿಯೇ ವಿಘ್ನ ಎದುರಾಗಿದ್ದು, ಆಶಾ ಕಾರ್ಯಕರ್ತೆಯರು ಸಮೀಕ್ಷೆಯನ್ನು ಬಹಿಷ್ಕರಿಸಿದ್ದಾರೆ.

ಹೀಗಾಗಿ ಸೋಮವಾರದಿಂದ (ಸೆ.22) ಆರಂಭವಾಗಬೇಕಾದ ಸಮೀಕ್ಷೆಗೆ ಹಿನ್ನಡೆಯಾಗಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಆಶಾ ಕಾರ್ಯಕರ್ತರು ತಮ್ಮ ಬೇಡಿಕೆಯುಳ್ಳ ಮನವಿಯನ್ನು ಆಯಾ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. 

ಈ ಹಿಂದೆ ಗ್ಯಾರಂಟಿ ಯೋಜನೆಗಳ ಸಮೀಕ್ಷೆ ಸೇರಿದಂತೆ ಇತರೆ ಸಮೀಕ್ಷೆಗಳ ಹಣವನ್ನು ಸರ್ಕಾರ ಈವರೆವಿಗೂ ಪಾವತಿ ಮಾಡಿಲ್ಲ. ಹೀಗಾಗಿ ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸದಿರಲು ಆಶಾ ಕಾರ್ಯಕರ್ತೆಯರು ಈ ನಿರ್ಧಾರಕ್ಕೆ ಬಂದಿದ್ದಾರೆ.  ಸಮೀಕ್ಷೆ ವೇಳೆ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಸಮೀಕ್ಷೆಯ ನಮೂನೆಯನ್ನು ವಿತರಿಸುವುದು ಸೇರಿ ಇತರೆ ಪೂರಕ ಕಾರ್ಯನಿರ್ವಹಿಸಬೇಕು. ಸಮೀಕ್ಷೆ ನಮೂನೆ ವಿತರಿಸುವ ಜೊತೆಗೆ ಸಮೀಕ್ಷೆಯಲ್ಲಿರುವ 60 ಪ್ರಶ್ನೆಗಳಿಗೆ ಮಾಹಿತಿ ನೀಡಲು ಮುಂಚಿತವಾಗಿ ತಯಾರಿರುವಂತೆ ನೋಡಿಕೊಳ್ಳಬೇಕು. ವಿವರಗಳನ್ನು ಮೊಬೈಲ್ ಅಪ್ಲಿಕೇಶನ್ ನಲ್ಲಿ ಅಪ್ಲೋಡ್ ಸೇರಿ ಇನ್ನಿತರೆ ಕಾರ್ಯ ಮಾಡಬೇಕು. ಇದಕ್ಕಾಗಿ ಕೇವಲ ಎರಡು ಸಾವಿರ ರೂ. ಗೌರವ ಧನ ನಿಗದಿಗೊಳಿಸಲಾಗಿದೆ. ಈ ಹಿಂದೆ ನಡೆಸಿದ ಸಮೀಕ್ಷೆಗಳ ಹಣ ಜಮೆಯಾಗಿಲ್ಲ. ಇದರ ಹಣವು ಬರಲಿದೆ ಎಂಬ ವಿಶ್ವಾಸ ಇಲ್ಲ. ಹೀಗಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಿಂದ ದೂರ ಇರಲು ತೀರ್ಮಾನಿಸಿದ್ದಾರೆ. 

ಇದಲ್ಲದೇ, ಏ.1 ರಿಂದ 10 ಸಾವಿರ ರೂ. ಮಾಸಿಕ ಗೌರವಧನದ ಭರವಸೆ ನೀಡಲಾಗಿತ್ತು. ಈ ಮೊತ್ತವು ಸಹ ಪಾವತಿಯಾಗಿಲ್ಲ. ಬಜೆಟ್‌ನಲ್ಲಿ ಅಂಗನವಾಡಿ ಮತ್ತು ಮಧ್ಯಾಹ್ನದ ಬಿಸಿಯೂಟ ಕಾರ್ಯಕರ್ತೆಯರಿಗೆ ಮಾತ್ರ 1ಸಾವಿರ ರೂ. ವೇತನ ಹೆಚ್ಚಳದ ಭರವಸೆ ನೀಡಲಾಗಿದೆ. ಆದರೆ ಆಶಾ ಕಾರ್ಯಕರ್ತರನ್ನು ನಿರ್ಲಕ್ಷಿಸಲಾಗಿದೆ ಎಂಬುದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಆರೋಪವಾಗಿದೆ. 

ಗೌರವ ಭತ್ಯೆ ಕುರಿತು ಆದೇಶ ಇಲ್ಲ 

ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪೂರ್ವಭಾವಿಯಾಗಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಸಮೀಕ್ಷೆಯ ನಮೂನೆಯನ್ನು ವಿತರಿಸಬೇಕು ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಆದರೆ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ನಮೂನೆ ನೀಡುವುದರ ಜತೆಗೆ ಸಮೀಕ್ಷೆಯಲ್ಲಿರುವ 60 ಪ್ರಶ್ನೆಗಳಿಗೆ ಮಾಹಿತಿ ನೀಡಲು ಕುಟುಂಬದ ಸದಸ್ಯರು ಮುಂಚಿತವಾಗಿ ತಯಾರಿರುವಂತೆ ನೋಡಿಕೊಳ್ಳಬೇಕು. ಇದರ ಜತೆಗೆ ಅಗತ್ಯ ದಾಖಲಾತಿಗಳನ್ನು ತೆಗೆದಿಟ್ಟುಕೊಳ್ಳಲು ಹೇಳಬೇಕು. ಒಂದು ವೇಳೆ ದಾಖಲಾತಿಗಳು ಸರಿ ಇಲ್ಲದಿದ್ದರೆ  ಅವುಗಳನ್ನು ಸರಿಪಡಿಸಿಕೊಳ್ಳುವ ಮಾಹಿತಿಯನ್ನು ನೀಡಬೇಕು. ನಮೂನೆಗಳನ್ನು ಹಂಚಿರುವ ವಿವರಗಳನ್ನು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಅಪ್ಲೋಡ್ ಮಾಡುವುದು ಸೇರಿ ಇತ್ಯಾದಿ ಕಾರ್ಯಗಳನ್ನು ಮಾಡಬೇಕು ಎಂದು ಸರ್ಕಾರ ಹೇಳಿದೆ. ಈ ಎಲ್ಲಾ ಕೆಲಸಗಳಿಗೆ 2 ಸಾವಿರ ರೂ. ನೀಡಲಾಗುವುದು ಎಂದು ಮಾಧ್ಯಮಗಳ ಮೂಲಕ ಹೇಳಿದೆ. ಆದರೆ ಇಲಾಖೆಯಿಂದ ಇದುವರೆಗೂ ಅಧಿಕೃತವಾಗಿ ಯಾವುದೇ ಆದೇಶ ಬಂದಿಲ್ಲ ಎಂದು ಕಾರ್ಯಕರ್ತೆಯರು ದೂರಿದ್ದಾರೆ. 

ಸರ್ಕಾರದ ನಡೆಯ ಬಗ್ಗೆ ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ  ಡಿ.ನಾಗಲಕ್ಷ್ಮೀ, ಈ ಹಿಂದೆಯೂ ಸಹ ಗ್ಯಾರಂಟಿ ಯೋಜನೆಯ ಸಮೀಕ್ಷೆಗೆ 1ಸಾವಿರ ರೂ. ನೀಡುವುದಾಗಿ ಹೇಳಿ, ಆಶಾ ಕಾರ್ಯಕರ್ತೆಯರು ಸಮೀಕ್ಷೆಯನ್ನು ಮಾಡಿಕೊಟ್ಟ ಬಳಿಕ ಒಂದು ಪೈಸೆಯನ್ನೂ ನೀಡಲಿಲ್ಲ. ಅದೇ ರೀತಿ ಇತರ ಇಲಾಖೆಗಳಿಂದ ಮಾಡಿಸಿಕೊಂಡ ಹಲವಾರು ಸಮೀಕ್ಷೆಗಳಿಗೂ ಇದುವರೆಗೂ ಸೂಕ್ತ ಸಂಭಾವನೆ ದೊರೆತಿಲ್ಲ. ಅಲ್ಲದೇ, ಏ.1 ರಿಂದ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 10 ಸಾವಿರ ರೂ. ಗ್ಯಾರಂಟಿ ಗೌರವಧನ ಎಂದು ಭರವಸೆ ನೀಡಿದ ರಾಜ್ಯ ಸರ್ಕಾರ ಇದುವರೆಗೂ ಅದನ್ನೂ ಈಡೇರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ಈಗ ನಡೆಯಲಿರುವ ಸಮೀಕ್ಷೆ ಕೆಲಸಕ್ಕೆ ಆಶಾ ಕಾರ್ಯಕರ್ತೆಯರಿಗೆ ಎಷ್ಟು ಗೌರವ ಧನ ನೀಡಲಾಗುವುದು ಎಂದು ಸರ್ಕಾರದ ಅಧಿಕೃತ ಆದೇಶವೇ ಇಲ್ಲ. ಸಮೀಕ್ಷೆ ಮಾಡುವಷ್ಟು ದಿನಗಳ ಕಾಲ, ಚಟುವಟಿಕೆ ಆಧಾರಿತ ಪ್ರೋತ್ಸಾಹಧನಕ್ಕೂ ಕುತ್ತು ಬರುತ್ತದೆ. ಮಾತ್ರವಲ್ಲದೆ, ಈ ಸಮೀಕ್ಷೆಗಾಗಿ ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿಕೊಂಡು ಬರಿಗೈಯಲ್ಲಿ ಮನೆಗೆ ಹೋಗುವಂತಹ ಪರಿಸ್ಥಿತಿ ಬಂದೊದಗಿದೆ. ನ್ಯಾಯಯುತವಾಗಿ ಸಿಗಬೇಕಾದ ಗೌರವಧನವೂ ಇಲ್ಲದಿರುವುದರಿಂದ ಸಮೀಕ್ಷೆ ಕೆಲಸದಿಂದಲೇ ಹಿಂದೆ ಸರಿಯಲು ಆಶಾ ಕಾರ್ಯಕರ್ತೆಯರು ನಿರ್ಣಯ ಮಾಡಿದ್ದಾರೆ ಎಂದು ತಿಳಿಸಿದರು. 

ಆಶಾ ಕಾರ್ಯಕರ್ತೆಯರ ಬೇಡಿಕೆಗಳು 

ಆಶಾ ಕಾರ್ಯಕರ್ತೆಯರು ಪ್ರೋತ್ಸಾಹಧನ ಆಧಾರಿತ ಕೆಲಸ ಮಾಡುವ ಕಾರ್ಯಕರ್ತೆಯರಾಗಿದ್ದಾರೆ. ಗ್ರಾಮೀಣ ಆಶಾ ಕಾರ್ಯಕರ್ತೆಯರಿಗೆ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಯ ಕೆಲಸಕ್ಕೆ 5 ಸಾವಿರ ಮತ್ತು ನಗರ ಆಶಾ ಕಾರ್ಯಕರ್ತೆಯರಿಗೆ ಮನೆಗಳ ಸಂಖ್ಯೆ ಹೆಚ್ಚು ಇರುವುದರಿಂದ 10ಸಾವಿರ ರೂ.ಗಿಂತ ಕಡಿಮೆ ಇರದಂತೆ ಗೌರವಧನ ನಿಗದಿ ಮಾಡಿ ಆದೇಶ ಮಾಡಬೇಕು. ಇಲ್ಲವೇ ಸಮೀಕ್ಷೆ ಕೆಲಸಗಳಿಂದ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ. 

ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಹಿಂದೆ ರಾಜ್ಯ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಯ ಸಮೀಕ್ಷೆ ಮಾಡಿರುವುದಕ್ಕೆ ಕೊಡಬೇಕಾಗಿದ್ದ1 ಸಾವಿರ ರೂ. ಬಾಕಿ ಗೌರವಧನ ಈ ಕೂಡಲೇ ನೀಡಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಮಾಡಿದ ಆಶಾ ಕಾರ್ಯಕರ್ತೆಯರಿಗೆ ನಿಗದಿಯಾಗಿದ್ದ ಬಾಕಿ ಸಂಭಾವನೆ ನೀಡಬೇಕು. ಇದಕ್ಕೆ ಸರ್ಕಾರ ಒಪ್ಪಿದಲ್ಲಿ ಆಶಾ ಕಾರ್ಯಕರ್ತೆಯರು ಸಮೀಕ್ಷೆಯ ಕೆಲಸಗಳಿಗೆ ಜೊತೆಗೂಡುವುದಾಗಿ ತೀರ್ಮಾನಿಸಿದ್ದಾರೆ ಎಂದು ತಿಳಿಸಿದರು. 

Tags:    

Similar News