ಲೈಂಗಿಕ ದೌರ್ಜನ್ಯ | ಸ್ಯಾಂಡಲ್‌ವುಡ್‌ನಲ್ಲೂ ಎದ್ದ ಕೂಗು: ಅಧ್ಯಯನಕ್ಕೆ ಸಮಿತಿ ರಚನೆಗೆ ಕಲಾವಿದರ ಆಗ್ರಹ

ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸೇರಿದಂತೆ ಸಮಸ್ಯೆಗಳನ್ನು ಅಧ್ಯಯನ ಮಾಡಿ ವರದಿ ಮಾಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆ ಫಿಲಂ ಇಂಡಸ್ಟ್ರಿ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ.

Update: 2024-09-04 07:51 GMT
ಫಿಲ್ಡ್ ಇಂಡಸ್ಟ್ರಿ ರೈಟ್ಸ್ ಅಂಡ್ ಇಕ್ವಾಲಿಟಿ
Click the Play button to listen to article

ಮಲಯಾಳಂ ಚಿತ್ರರಂಗದ ನಟಿಯರಿಗೆ ಕಿರುಕುಳ ಕೊಡಲಾಗುತ್ತಿದೆ ಎಂಬ ನ್ಯಾ. ಹೇಮಾ ಆಯೋಗದ ವರದಿಯ ಆರೋಪವು ಮಲಯಾಳಂ ಚಿತ್ರರಂಗದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದು, ಇದೀಗ  ಕರ್ನಾಟಕದಲ್ಲಿಯೂ ಅಂತಹದ್ದೆ ಸಮಿತಿ ರಚಿಸಬೇಕು ಎಂದು ಕನ್ನಡ ಚಿತ್ರರಂಗದ ಕಲಾವಿದರು ಒತ್ತಾಯಿಸಿದ್ದಾರೆ.

ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸೇರಿದಂತೆ ಸಮಸ್ಯೆಗಳನ್ನು ಅಧ್ಯಯನ ಮಾಡಿ ವರದಿ ಮಾಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆ ಫಿಲ್ಡ್ ಇಂಡಸ್ಟ್ರಿ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ. ಲಿಂಗ ನ್ಯಾಯವನ್ನು ಪ್ರತಿಪಾದಿಸುವ ಕನ್ನಡ ಚಲನಚಿತ್ರೋದ್ಯಮದ ಮತ್ತು ವಿವಿಧ ಕ್ಷೇತ್ರಗಳ 153 ವ್ಯಕ್ತಿಗಳು ಈ ಅರ್ಜಿಗೆ ಸಹಿ ಹಾಕಿದ್ದಾರೆ. ಕನ್ನಡ ಚಿತ್ರರಂಗದ ಕಲಾವಿದರು, ನಿರ್ದೇಶಕರು ಸೇರಿದಂತೆ ಹಲವು ಬರಹಗಾರರು, ನಿರ್ಮಾಪಕರು ಸಮಿತಿ ರಚನೆಗೆ ಆಗ್ರಹಿಸಿದ್ದಾರೆ.

ʼಫೈರ್‌ʼ ಬೇಡಿಕೆ ಏನು?

'ಫೈರ್' ಮೂಲಕ ಕರ್ನಾಟಕ ಸರ್ಕಾರಕ್ಕೆ ಎರಡು ಬೇಡಿಕೆಗಳನ್ನು ಇಡಲಾಗಿದೆ. ಮೊದಲನೆಯದ್ದು ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ನಿವೃತ್ತ ನ್ಯಾಯಾಧೀಶರ ಕಮಿಟಿ ರಚಿಸಿ, ವ್ಯವಸ್ಥಿತವಾಗಿ ತನಿಖೆ ಆಗಬೇಕು ಎಂದು ಆಗ್ರಹಿಸಿದೆ. ಇನ್ನೊಂದು ಕಡೆ ಮಹಿಳೆಯರು ಕನ್ನಡ ಚಿತ್ರರಂಗದಲ್ಲಿ ಆರೋಗ್ಯಕರವಾಗಿ ಹಾಗೂ ಸಮಾನವಾಗಿ ಕೆಲಸ ಮಾಡುವಂತೆ ನಿಯಮಗಳನ್ನು ತರುವಂತೆ ಕೇಳಿಕೊಂಡಿದೆ.

153 ಮಂದಿ ಅರ್ಜಿಗೆ ಸಹಿ

ಕನ್ನಡ ಚಿತ್ರರಂಗದ ಪ್ರಮುಖರು ಈ ಅರ್ಜಿಗೆ ಸಹಿ ಹಾಕಿದ್ದಾರೆ. ಫೈರ್‌ನ ಅಧ್ಯಕ್ಷೆ ಕವಿತಾ ಲಂಕೇಶ್, ಕಾರ್ಯದರ್ಶಿ ಚೇತನ್ ಅಹಿಂಸಾರಿಂದ ಹಿಡಿದು ರಮ್ಯಾ, ಶ್ರುತಿ ಹರಿಹರನ್, ಆಶಿಕಾ ರಂಗನಾಥ್, ಐಂದ್ರಿತಾ ರೇ, ಅಮೃತಾ ಅಯ್ಯಂಗಾರ್, ಪೂಜಾ ಗಾಂಧಿ, ಚೈತ್ರಾ ಜೆ ಆಚಾರ್, ಧನ್ಯಾ ರಾಮ್‌ಕುಮಾರ್, ಸಂಯುಕ್ತ ಹೆಗಡೆ, ಶ್ರದ್ಧ ಶ್ರೀನಾಥ್, ಕಿಶೋರ್, ನಿಶ್ವಿಕಾ ನಾಯ್ಡು, ವಿನಯ್ ರಾಜ್‌ಕುಮಾರ್, ಸೇರಿದಂತೆ 153 ಮಂದಿ ಅರ್ಜಿಗೆ ಸಹಿ ಹಾಕಿದ್ದಾರೆ.

ಏನಿದು ಫೈರ್ ಸಂಘಟನೆ?

ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಲೈಂಗಿಕ ಕಿರುಕುಳ ಹಾಗೂ ಇತರ ಸಮಸ್ಯೆಗಳು ಎದುರಾದರೆ, ಅದನ್ನು ವಿರುದ್ಧ ಹೋರಾಡುವ ಒಂದು ಕಮಿಟಿಯೇ ಫೈರ್‌. ಇದನ್ನು 2017ರಲ್ಲಿ ಸ್ಥಾಪನೆ ಮಾಡಲಾಗಿತ್ತು. ಕೆಲವು ವರ್ಷಗಳು ಈ ಸಮಿತಿ ಮೌನವಾಗಿತ್ತು. ಇದೀಗ ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಕಮಿಟಿ ವರದಿ ಸಂಚಲನ ಸೃಷ್ಟಿಸಿದ ಬಳಿಕ ಮತ್ತೆ ಕಾರ್ಯೋನ್ಮುಖವಾಗಿದೆ.

ನ್ಯಾ.ಹೇಮಾ ನೇತೃತ್ವದ ಆಯೋಗದ ವರದಿಯಲ್ಲಿ ಏನಿದೆ? 

ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಲು 2017ರಲ್ಲಿ ಸರ್ಕಾರ ರಚಿಸಿದ್ದ ನ್ಯಾ.ಹೇಮಾ ನೇತೃತ್ವದ ಆಯೋಗ ಸಲ್ಲಿಸಿರುವ ವರದಿಯಲ್ಲಿ ಮಲಯಾಳಂ ಚಿತ್ರರಂಗದ ಈ ಕರಾಳ ಮುಖವನ್ನು ಅನಾವರಣವಾಗಿದೆ. ಮಲಯಾಳಂ ಚಿತ್ರರಂಗದಲ್ಲಿ ನಟಿಯರ ಮಾನಕ್ಕೆ ಬೆಲೆಯೇ ಇಲ್ಲದಂತಾಗಿದೆ.

ಹೊಂದಾಣಿಕೆ ಮತ್ತು ರಾಜಿ ಎಂಬ ಪದಗಳು ಈ ಚಿತ್ರರಂಗದಲ್ಲಿ ಚಿರಪರಿಚಿತವಾಗಿದ್ದು, ಸಿನಿಮಾ ಅಥವಾ ಸೀರಿಯಲ್‌ ಮತ್ತಿತರ ಅಭಿನಯ ಪ್ರವೃತ್ತಿಯಲ್ಲಿಅವಕಾಶ ಪಡೆಯಲು ನಟಿಯರು ಲೈಂಗಿಕ ಬೇಡಿಕೆ ಈಡೇರಿಸಬೇಕಾದ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ನ್ಯಾ. ಹೇಮಾ ಆಯೋಗ ನೀಡಿದ ವರದಿಯಲ್ಲಿ ಬಯಲಾಗಿದೆ.

ನಟಿಯರ ಲೈಂಗಿಕ ಶೋಷಣೆ ಬಗ್ಗೆ ಮಾತ್ರವಲ್ಲದೆ, ಶೂಟಿಂಗ್ ನಡೆಯುವ ಜಾಗಗಳಲ್ಲಿ ನಟಿಯರಿಗೆ ಕನಿಷ್ಠ ಶೌಚಾಲಯ ವ್ಯವಸ್ಥೆಯನ್ನೂ ಮಾಡಿರುವುದಿಲ್ಲ. ಚಿತ್ರರಂಗದಲ್ಲಿ ಲಿಂಗ ಅಸಮಾನತೆ ದೊಡ್ಡ ಮಟ್ಟದಲ್ಲಿದೆ. ಮಹಿಳೆಯರ ಮೇಲೆ ನಿತ್ಯ ದೌರ್ಜನ್ಯಗಳು ನಡೆಯುತ್ತಿವೆ. ಜೀವ ಹಾಗೂ ಮಾನ ಭಯದಿಂದ ದೂರು ದಾಖಲಿಸಲು ಅನೇಕ ನಟಿಯರು ಹಿಂಜರಿಯುತ್ತಿದ್ದಾರೆ ಅಂತ ವರದಿಯಲ್ಲಿ ಹೇಳಲಾಗಿದೆ. 

Tags:    

Similar News