ಲೈಂಗಿಕ ದೌರ್ಜನ್ಯ ಆರೋಪ: ಸೂರಜ್ ರೇವಣ್ಣ 8 ದಿನ ಸಿಐಡಿ ಕಸ್ಟಡಿಗೆ
ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಜೆಡಿಎಸ್ ಎಂಎಲ್ ಸಿ ಸೂರಜ್ ರೇವಣ್ಣನನ್ನು 8 ದಿನಗಳ ಕಾಲ ಸಿಐಡಿ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಲಾಗಿದೆ.;
ವ್ಯಕ್ತಿಯೊಬ್ಬನ ಮೇಲೆ ಸಲಿಂಗ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಜೆಡಿಎಸ್ ಎಂಎಲ್ ಸಿ ಸೂರಜ್ ರೇವಣ್ಣನನ್ನು 8 ದಿನಗಳ ಕಾಲ ಅಪರಾಧ ತನಿಖಾ ಇಲಾಖೆ (Crime Investigation Department-ಸಿಐಡಿ) ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಲಾಗಿದೆ.
ಸಿಐಡಿ ಭಾನುವಾರ ರಾತ್ರಿ ಅವರನ್ನು 42ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ (ಎಸಿಎಂಎಂ) ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಅವರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ವೇಳೆ ವಿಚಾರಣೆ ನಡೆಸಿದ ನ್ನ್ಯಾಯಾಧೀಶರ ಮುಂದೆ ಕೇಸಿನ ಸಂಬಂಧಪಟ್ಟಂತೆ ವಿಚಾರಣೆ ಮಾಡುವುದಕ್ಕೆ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. . ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಶಿವಕುಮಾರ್ ಅವರ ಪೀಠವು 8 ದಿನ ಸಿಐಡಿ ಪೊಲೀಸ್ ಕಸ್ಟಡಿಗೆ (ಜುಲೈ 1 ರವರೆಗೆ) ನೀಡಿ ಕೋರ್ಟ್ ಆದೇಶ ನೀಡಿದ್ದಾರೆ. ಇದರ ಬೆನ್ನಲ್ಲಿಯೇ ಸಿಐಡಿ ಪೊಲೀಸರು ಸೂರಜ್ ರೇವಣ್ಣನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಜೂ.22ರಂದು ಹಾಸನದ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಸಂತ್ರಸ್ತ ಯುವಕನೊಬ್ಬ ಸೂರಜ್ ರೇವಣ್ಣ ಅವರು ತಮ್ಮ ಗನ್ನಿಗಡದ ಫಾರಂ ಹೌಸ್‍ಗೆ ಬರಮಾಡಿಕೊಂಡು ನನ್ನ ಮೇಲೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದು ಹಾಗೂ ದೌರ್ಜನ್ಯವನ್ನು ನಡೆಸಿದ್ದಾರೆ. ಹನುಮನಹಳ್ಳಿ ಗ್ರಾಮದ ಶಿವಕುಮಾರ್ ಮತ್ತು ಸೂರಜ್ ರೇವಣ್ಣ ಅವರಿಂದ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ಯುವಕ ಲಿಖಿತ ದೂರು ನೀಡಿದ್ದರು. ಸೂರಜ್ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 377, 342, 506, 34ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ಯುವಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದಡಿ ವಿಧಾನ ಪರಿಷತ್ತಿನ ಜೆಡಿಎಸ್ ಸದಸ್ಯ ಸೂರಜ್ ರೇವಣ್ಣ ಅವರನ್ನು ಹಾಸನ ಜಿಲ್ಲಾ ಸಿಇಎನ್ ಠಾಣೆ ಪೊಲೀಸರು ರವಿವಾರ ( ಜೂನ್ ೨೩) ಬಂಧಿಸಿದ್ದರು.