Bank Robbery | ಮಂಗಳೂರಿನಲ್ಲಿ ಹಾಡಹಗಲೇ ಸಿನಿಮೀಯ ರೀತಿ ಬ್ಯಾಂಕ್‌ ದರೋಡೆ

ನಾಲ್ಕೈದು ಚೀಲದಲ್ಲಿ ಹಣ ತುಂಬಿಕೊಂಡು ಹೋಗಿರುವ ದರೋಡೆಕೋರರು ಬ್ಯಾಂಕಿನಲ್ಲಿ ಸಿಸಿ ಟಿವಿ ಕ್ಯಾಮೆರಾ ರಿಪೇರಿ ಮಾಡಲು ಬಂದವನ ಉಂಗುರವನ್ನು ದೋಚಿ ಪರಾರಿಯಾಗಿದ್ದಾರೆ.;

Update: 2025-01-17 12:19 GMT
ಮಂಗಳೂರಿನ ಕೋಟೆಕಾರು ಬ್ಯಾಂಕ್ ದರೋಡೆ

ಬೀದರ್​​ನಲ್ಲಿ ಎಟಿಎಂಗೆ ಹಣ ತುಂಬಿಸುವ ವಾಹನ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಹಣ ದೋಚಿದ ಪ್ರಕರಣ ನಡೆದ ಮರುದಿನವೇ ಮಂಗಳೂರಿನ ಕೋರೆಕಾರು ವ್ಯವಸಾಯ ಸೇವಾ ಸಹಕಾರ ನಿಯಮಿತದ ಬ್ಯಾಂಕಿಗೆ ನುಗ್ಗಿದ ದುಷ್ಕರ್ಮಿಗಳು ​ಬಂದೂಕು ತೋರಿಸಿ ನಗದು, ಚಿನ್ನ ದರೋಡೆ ಮಾಡಿದ ಘಟನೆ ಶುಕ್ರವಾರ ನಡೆದಿದೆ. 

ಶಸ್ತ್ರಸಜ್ಜಿತ ಐದು ಮಂದಿ ಆಗಂತುಕರು ಫಿಯೆಟ್ ಕಾರಿನಲ್ಲಿ ಬಂದು 12 ಕೋಟಿ ರೂ. ಮೌಲ್ಯದ ನಗದು, ಚಿನ್ನ ದರೋಡೆ ಮಾಡಿದ್ದಾರೆ. ಉಳ್ಳಾಲ ತಾಲೂಕಿನ ಕೆ.ಸಿ.ರೋಡ್‌ ಶಾಖೆಯ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಸಿನಿಮೀಯ ಶೈಲಿಯಲ್ಲಿ ಮಾರಕಾಸ್ತ್ರ ಹಾಗೂ ಬಂದೂಕು ತೋರಿಸಿ ಚಿನ್ನ, ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. 

ದರೋಡೆಕೋರರು ನಾಲ್ಕೈದು ಚೀಲದಲ್ಲಿ ಹಣ ತುಂಬಿಕೊಂಡು ಹೋಗುವ ವೇಳೆ ಸಿಸಿ ಟಿವಿ ಕ್ಯಾಮೆರಾ ರಿಪೇರಿ ಮಾಡಲು ಬಂದವನ ಉಂಗುರವನ್ನೂ ಕಸಿದು ಪರಾರಿಯಾಗಿದ್ದಾರೆ.

ಸಿಎಂ ಕಾರ್ಯಕ್ರಮದಂದೇ ದರೋಡೆ

ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕಾರ್ಯಕ್ರಮ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಕ್ರಮ ನಡೆಯುವ ಪ್ರದೇಶದ ಸುತ್ತ ಭದ್ರತೆ ಒದಗಿಸಿದ್ದರು.  ಮುಸ್ಲಿಂ ಸಮುದಾಯದವರು ಶುಕ್ರವಾರ ಮಧ್ಯಾಹ್ನ ಪ್ರಾರ್ಥನೆಗಾಗಿ ಮಸೀದಿಗೆ ತೆರಳಿದ್ದರು. ಇದೇ ವೇಳೆ ಬ್ಯಾಂಕ್ ಸಿಸಿ ಟಿವಿ ಕ್ಯಾಮೆರಾ ಹಾಳಾಗಿದ್ದು, ಅದನ್ನು ರಿಪೇರಿ ಮಾಡಲಾಗುತ್ತಿತ್ತು. ಇದೇ ಸಂದರ್ಭ ಬಳಸಿಕೊಂಡ ದುಷ್ಕರ್ಮಿಗಳು ಬ್ಯಾಂಕ್​​ ದರೋಡೆಗೆ ಮುಂದಾಗಿದ್ದಾರೆ. ವಿಪರ್ಯಾವೆಂದರೆ ಕೆ.ಸಿ.ರೋಡ್‌ನಲ್ಲಿಒಂದೇ ಒಂದು ಸಿಸಿಟಿವಿ ಕಾರ್ಯ ನಿರ್ವಹಿಸದ ಸಂಗತಿ ಕುತೂಹಲ ಮೂಡಿಸಿದೆ.   

ತುರ್ತು ಸಭೆ ಕರೆದ ಸಿಎಂ

ತಮ್ಮ ಕಾರ್ಯಕ್ರಮದ ದಿನವೇ ಬ್ಯಾಂಕ್‌ ದರೋಡೆ ನಡೆದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದರು. ಎಲ್ಲಾ ಟೋಲ್‌, ಕೇರಳ ಗಡಿಯ ಸಿಸಿ ಕ್ಯಾಮರಾ ಪರಿಶೀಲನೆ ಮಾಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಐದು ವರ್ಷಗಳ ಹಿಂದೆಯೂ ಇದೇ ಬ್ಯಾಂಕ್‌ನಲ್ಲಿ ಕಳ್ಳತನವಾಗಿತ್ತು. ಈ ಬಾರಿ ಗನ್, ತಲ್ವಾರ್, ಚಾಕು ತೋರಿಸಿ ದರೋಡೆ ಮಾಡಿರುವುದು ಆತಂಕಕಾರಿ ವಿಚಾರವಾಗಿದೆ. ಕೂಡಲೇ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ದರೋಡೆಕೋರರ ಪತ್ತೆಗಾಗಿ ಪೊಲೀಸರು ಎರಡು ತಂಡಗಳನ್ನು ರಚಿಸಿದ್ದಾರೆ.

ಪೊಲೀಸರ ವಿರುದ್ಧ ಸಿಎಂ ಗರಂ

ದರೋಡೆ ಪ್ರಕರಣ ಕುರಿತಂತೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು, ಐಜಿಪಿ ಅಮಿತ್ ಸಿಂಗ್‌, ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್, ಎಸ್.ಪಿ ಯತೀಶ್ , ಡಿವೈಎಸ್ ಪಿ ಸೇರಿ ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.  ನೀವೆಲ್ಲಾ ಇದ್ದು ಯಾಕೆ ಹೀಗಾಯ್ತು? ಆರೋಪಿಗಳು ಸಲೀಸಾಗಿ ತಪ್ಪಿಸಿಕೊಂಡು ಹೋಗಿದ್ದು ಹೇಗೆ ? ಎಷ್ಟು ಟೋಲ್ ಗಳನ್ನು ದಾಟಿ ಹೋಗಿದ್ದಾರೆ. ನೀವು ಟೋಲ್ ಗಳನ್ನು‌ ಏಕೆ ಟೈಟ್ ಮಾಡಲಿಲ್ಲ ಆಕ್ರೋಶ ವ್ಯಕ್ತಪಡಿಸಿದರು. 

ಸಹಕಾರಿ ಬ್ಯಾಂಕ್‌ನಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ. ಐದಾರು ಮಂದಿ ಮಾತ್ರ ಬ್ಯಾಂಕ್ ಸಿಬ್ಬಂದಿ ಇದ್ದರು. ಆರೋಪಿಗಳು ಕನ್ನಡ ಮತ್ತು ಹಿಂದಿಯಲ್ಲಿ ಮಾತಾಡಿರುವುದು ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. 

ಎಲ್ಲಾ ಟೋಲ್ ಗಳಲ್ಲೂ ಬಿಗಿ ತಪಾಸಣೆ ನಡೆಸಬೇಕು. ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ನಾಕಾಬಂಧಿ ಹಾಕಿ ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮಕ್ಕೆ ಒಪ್ಪಿಸಿ ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.

Tags:    

Similar News