ಅಡಿಕೆ ಆತಂಕ | ಪ್ರಯೋಜನಗಳನ್ನು ಪಟ್ಟಿ ಮಾಡಿದ್ದ ವಿಶ್ವ ಆರೋಗ್ಯ ಸಂಸ್ಥೆ ಈಗ ಯೂ-ಟರ್ನ್‌!

ವಿಶ್ವ ಆರೋಗ್ಯ ಸಂಸ್ಥೆಯೇ ಅಡಿಕೆಯ ಪ್ರಯೋಜನಕಾರಿ ಅಂಶಗಳನ್ನು ಪಟ್ಟಿ ಮಾಡಿತ್ತು ಎಂದು ಹೇಳುವ ಕಾಸರಗೋಡಿನ ಸಿಪಿಸಿಆರ್ ಅಧ್ಯಯನ ವರದಿಯನ್ನು ಈಗ ಎತ್ತಿಹಿಡಿಯುವ ಅವಶ್ಯಕತೆ ಇದೆ.;

Update: 2024-12-05 04:00 GMT

ವಿಶ್ವ ಆರೋಗ್ಯ ಸಂಸ್ಥೆ(WHO)ಯ ಸಹಸಂಸ್ಥೆಯಾಗಿರುವ ಇಂಟರ್ ನ್ಯಾಶನಲ್ ಏಜನ್ಸಿ ಫಾರ್ ರಿಸರ್ಚ್ ಆಂಡ್ ಕ್ಯಾನ್ಸರ್ ಸಂಸ್ಥೆ ನೀಡಿರುವ ವರದಿ ಈಗ ದೇಶದ ಕೃಷಿ ಆರ್ಥಿಕತೆಯಲ್ಲಿ ಶೇ.25ರಷ್ಟು ಕೊಡುಗೆ ನೀಡುವ ಅಡಿಕೆ ಬೆಳೆಗಾರರನ್ನು ಆತಂಕಕ್ಕೆ ದೂಡಿದೆ.

ಗುಟ್ಕಾ ,ಪಾನ್ ಮಸಾಲಾ ಅತಿಯಾದ ಬಳಕೆಯಿಂದ ಆರೋಗ್ಯಕ್ಕೆ ಹಾನಿಯುಂಟಾಗಬಹುದು ಎಂಬ ಅಂಶವನ್ನು ಪರಿಗಣಿಸಿ ಈ ವರದಿ ನೀಡಲಾಗಿದೆ.

ಏನಿದು ವರದಿ? ಅಡಿಕೆ ಬೆಳೆಗಾರನಿಗೆ ಯಾಕೆ ಆತಂಕ?

ಇಂಟರ್ನ್ಯಾಶನಲ್ ಏಜನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್(ಐಎಆರ್‌ಸಿ) ಸಂಸ್ಥೆ ಇತ್ತೀಚೆಗೆ ವಿಜ್ಞಾನ ನಿಯತಕಾಲಿಕ ʼದಿ ಲ್ಯಾನ್ಸೆಟ್ʼ ಆಂಕೋಲಜಿ ಜರ್ನಲ್ ನಲ್ಲಿ ಪ್ರಕಟಿಸಿರುವ ಅಧ್ಯಯನ ವರದಿಯಲ್ಲಿ ಅಡಿಕೆ ಹಾಗೂ ಹೊಗೆರಹಿತ ತಂಬಾಕು ಕ್ಯಾನ್ಸರ್ ಕಾರಕ ಎಂದು ಹೇಳಲಾಗಿದೆ.

ಸಾಮಾನ್ಯವಾಗಿ ಯಾವುದೋ ಸಂಸ್ಥೆ ಹೀಗೆ ವರದಿ ನೀಡಿದ್ದರೆ ತಲೆಕೆಡಿಸಿಕೊಳ್ಳಬೇಕಾಗಿರಲಿಲ್ಲ. ಆದರೆ ಕ್ಯಾನ್ಸರ್ ಕುರಿತು ಸಂಶೋಧನೆ ನಡೆಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆಯಾಗಿರುವ ಐಎಆರ್ ಸಿ (ಇಂಟರ್ನ್ಯಾಶನಲ್ ಏಜನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್) ಹಾಗೆ ವರದಿ ನೀಡಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರತಿ ಐದು ವರ್ಷಗಳಿಗೆ ಒಮ್ಮೆ ವಿಶ್ವದಲ್ಲಿ ಕ್ಯಾನ್ಸರ್ ಉಂಟಾಗಲು, ಪ್ರಸಾರವಾಗಲು ಏನೇನು ಕಾರಣ ಎಂಬ ಕುರಿತು ಅಧ್ಯಯನ ನಡೆಸಿ ಐಎಆರ್ಸಿ ವರದಿ ಸಲ್ಲಿಸುತ್ತದೆ. ಈ ಬಾರಿಯ ವರದಿಯಲ್ಲಿ ಹೊಗೆರಹಿತ ತಂಬಾಕಿನಿಂದ ಉಂಟಾಗುವ 1,20,200 ಬಾಯಿ ಕ್ಯಾನ್ಸರ್ ಪ್ರಕರಣಗಳಲ್ಲಿ 83,400 ಪ್ರಕರಣಗಳು ಭಾರತದಲ್ಲಿ ವರದಿಯಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗೂ ಇದಕ್ಕೆ ಅಡಿಕೆಯೂ ಒಂದು ಕಾರಣ ಎಂದು ಹೇಳಲಾಗಿದೆ. ಇದು ಆತಂಕಕ್ಕೆ ಕಾರಣವಾಗಿದೆ.

ಆದರೆ, ಈ ಆತಂಕದ ನಡುವೆಯೇ ಅಡಿಕೆ ಬೆಳೆಗಾರರ ನಡುವೆ ಈ ಹಿಂದೆ ಸ್ವತಃ ವಿಶ್ವಸಂಸ್ಥೆಯೇ ಅಡಿಕೆಯ ಪ್ರಯೋಜನಗಳ ಕುರಿತು ನೀಡಿದ್ದ ವರದಿ ಚರ್ಚೆಯ ಮುನ್ನೆಲೆಗೆ ಬಂದಿದೆ.

ಪ್ರಯೋಜನಗಳ ಪಟ್ಟಿ ಮಾಡಿತ್ತು ವಿಶ್ವ ಆರೋಗ್ಯ ಸಂಸ್ಥೆ!

ವಿಶ್ವ ಆರೋಗ್ಯ ಸಂಸ್ಥೆಯೇ ಅಡಿಕೆಯ ಬಹೂಪಯೋಗಿ ಪ್ರಯೋಜನಗಳ ಪಟ್ಟಿ ಮಾಡಿತ್ತು ಎಂಬ ಸಂಗತಿಯನ್ನು ಕಾಸರಗೋಡಿನ ಸಿಪಿಸಿಆರ್ ಐ ಸಂಸ್ಥೆ 2018ರಲ್ಲಿ ನೀಡಿದ ವರದಿಯಲ್ಲಿ ಹೇಳಿತ್ತು ಎಂದು ಅಡಿಕೆ ಬೆಳೆಗಾರ ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಗಮನ ಸೆಳೆಯುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆಯೇ ಅಡಿಕೆಯ ಪ್ರಯೋಜನಕಾರಿ ಅಂಶಗಳನ್ನು ಪಟ್ಟಿ ಮಾಡಿತ್ತು ಎಂದು ಹೇಳುವ ಕಾಸರಗೋಡಿನ ಸಿಪಿಸಿಆರ್ ಅಧ್ಯಯನ ವರದಿಯನ್ನು ಈಗ ಎತ್ತಿಹಿಡಿಯುವ ಅವಶ್ಯಕತೆ ಇದೆ. ಅದರ ಕುರಿತು ಇನ್ನಷ್ಟು ಮಾಹಿತಿ ಸಂಗ್ರಹ ಕಾರ್ಯವನ್ನೂ ಮಾಡಲಾಗುತ್ತಿದೆ ಎಂದು ವಿಜ್ಞಾನಿ ಡಾ. ಕೇಶವ ಭಟ್ ಹೇಳಿದ್ದಾರೆ.

ಕಾಸರಗೋಡಿನ ಸಿಪಿಸಿಆರ್ ತನ್ನ ಅಧ್ಯಯನ ವರದಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೇ ಅಡಿಕೆಯ ಬಹುಪಯೋಗಿ ಪ್ರಯೋಜನಗಳ ಪಟ್ಟಿಮಾಡಿದೆ. ಆ ಹಿನ್ನೆಲೆಯಲ್ಲಿ ಇತ್ತೀಚೆಗಿನ ವಿಶ್ವ ಆರೋಗ್ಯ ಸಂಸ್ಥೆಯ ವರದಿಯನ್ನು ಪ್ರಶ್ನಿಸಬಹುದು ಮತ್ತು ಶುದ್ಧ ಅಡಿಕೆಯ ಕ್ಲಿನಿಕಲ್ ಟ್ರಯಲ್ ಬಗ್ಗೆ ಪುನರ್ವಿಮರ್ಶೆ ಮಾಡಬಹುದು ಎನ್ನುತ್ತಾರೆ ಕುಮಾರ ಸುಬ್ರಹ್ಮಣ್ಯ ಮುಳಿಯಾಲ. ಸಿಪಿಸಿಆರ್ ಐ ಪ್ರಕಟಿಸಿದ ವರದಿಯ ಅಂಶಗಳು ಇವು ಎಂಬ ವಿಚಾರ ಗಮನ ಸೆಳೆಯುತ್ತಾರೆ.

1. WHO-ವಿಶ್ವ ಆರೋಗ್ಯ ಸಂಸ್ಥೆ , ಅಡಿಕೆಯ 25 ವಿವಿಧ ಪ್ರಯೋಜನಕಾರಿ ಪರಿಣಾಮಗಳನ್ನು ಪಟ್ಟಿಮಾಡಿದೆ. ಅಡಿಕೆಯನ್ನು ಜಗಿಯುವುದರಿಂದ ಉಸಿರಾಟವನ್ನು ಸಿಹಿಗೊಳಿಸುತ್ತದೆ, ಬಾಯಿಯಿಂದ ಕೆಟ್ಟ ರುಚಿಯನ್ನು ತೆಗೆದುಹಾಕುತ್ತದೆ, ಒಸಡುಗಳನ್ನು ಬಲಪಡಿಸುತ್ತದೆ ಮತ್ತು ಬೆವರುವಿಕೆಯನ್ನು ತಡೆಯುತ್ತದೆ. ಇದು ಪ್ರಬಲವಾದ Antioxidant (ಉತ್ಕರ್ಷಣ ನಿರೋಧಕ, ) ಉರಿಯೂತದ ಮತ್ತು ನೋವು ನಿವಾರಕ, ಆಂಟಿಅಲ್ಸರ್, ಹೈಪೋಲಿಪಿಡೆಮಿಕ್, ಆಂಟಿಡಯಾಬಿಟಿಕ್ ಮತ್ತು ನ್ಯೂರೋಪ್ರೊಟೆಕ್ಟಿವ್ ಗುಣಲಕ್ಷಣಗಳನ್ನು ಹೊಂದಿದೆ. ವಿರೇಚಕ, ಜೀರ್ಣಕಾರಿ, ಕಾರ್ಮಿನೇಟಿವ್, ಆಂಟಿಅಲ್ಸರ್, ಆಂಟಿಡಿಯಾರಿಯಾಲ್, ಆಂಥೆಲ್ಮಿಂಟಿಕ್, ಆಂಟಿಮಲೇರಿಯಲ್, ಆಂಟಿಹೈಪರ್ಟೆನ್ಷನ್, ಮೂತ್ರವರ್ಧಕ, ರೋಗನಿರೋಧಕ, ಬ್ಯಾಕ್ಟೀರಿಯಾ ವಿರೋಧಿ, ಹೈಪೊಗ್ಲಿಸಿಮಿಕ್, ಎದೆಯುರಿ ಗುಣಲಕ್ಷಣಗಳಿಗಾಗಿ ಇದನ್ನು ಸಾಂಪ್ರದಾಯಿಕವಾಗಿ ಹಲವಾರು ಕಾಯಿಲೆಗಳಲ್ಲಿ ಬಳಸಲಾಗುತ್ತದೆ ಎಂದು ಹೇಳಿದೆ.

2. ಅಡಿಕೆ ಈ ಎಲ್ಲಾ ಪ್ರಯೋಜನಕಾರಿ ಗುಣಗಳನ್ನು ಹೊಂದಿದ್ದರೂ, ಅಡಿಕೆ ಜಗಿಯುವುದರಿಂದ ಕ್ಯಾನ್ಸರ್ ಉಂಟಾಗಬಹುದು ಎಂದು ಹಲವಾರು ಸಂಶೋಧಕರು ಎತ್ತಿ ತೋರಿಸಿದ್ದಾರೆ. ಆದರೆ ಅಡಿಕೆ ಅಗಿಯುವುದರೊಂದಿಗೆ ವರದಿಯಾದ ಪ್ರತಿಕೂಲ ಪರಿಣಾಮಗಳು, ಬೀಟೆಲ್ ಕ್ವಿಡ್ ತಯಾರಿಕೆಯಲ್ಲಿ ಬಳಸುವ ಇತರ ಪದಾರ್ಥಗಳ ಪಾತ್ರ, ತಯಾರಿಸಲು ಬಳಸುವ ವಿವಿಧ ಅಡಿಕೆಗಳ ಗುಣಮಟ್ಟ (ಮಾಲಿನ್ಯ ಮತ್ತು ಕಲಬೆರಕೆ ಸೇರಿದಂತೆ) ಮುಂತಾದ ಹಲವಾರು ಅಂಶಗಳಿಂದ ಉಂಟಾಗಬಹುದು.

3. MCP-7 ಸ್ತನ ಕ್ಯಾನ್ಸರ್ ಕೋಶಗಳು, SGC-7901 ಗ್ಯಾಸ್ಟ್ರಿಕ್ ಕ್ಯಾನ್ಸರ್ ಕೋಶಗಳು ಮತ್ತು SMMC-7721 ಯಕೃತ್ತಿನ ಕ್ಯಾನ್ಸರ್ ಕೋಶಗಳಂತಹ ಹಲವಾರು ಮಾನವ ಕ್ಯಾನ್ಸರ್ ಕೋಶಗಳ ಬೆಳವಣಿಗೆ ಮತ್ತು ಏರಿಕೆಯನ್ನು ಡೋಸ್ ಅವಲಂಬಿತ ರೀತಿಯಲ್ಲಿ ಅಡಿಕೆಯಿಂದ ತಡೆಯಲು ಸಾಧ್ಯವಿದೆ ಎಂದು ಕಂಡುಬಂದಿದೆ. ಸಾಮಾನ್ಯ ಮತ್ತು ಪ್ರತಿರಕ್ಷಣಾ ನಿಗ್ರಹಿಸಿದ ಪ್ರಯೋಗಾಲಯದ ಇಲಿಗಳ ಮೇಲೆ ನಡೆಸಿದ ಕೆಲವು ಅಧ್ಯಯನಗಳು ತಂಬಾಕು ಇಲ್ಲದೆ ಅಡಿಕೆ ಮತ್ತು ಬೀಟೆಲ್ ಕ್ವಿಡ್ ಸಾರಗಳು ಕ್ಯಾನ್ಸರ್ ಕಾರಕವಲ್ಲ ಎಂದು ದೃಢಪಡಿಸಿತ್ತು. ಮಾಗಿದ ಮತ್ತು ಬಲಿಯದ, ಒಣ ಅಡಿಕೆ ಎರಡೂ ಸುರಕ್ಷಿತ ಎಂದು ಕಂಡುಬಂದಿದೆ ಮತ್ತು 1.0g/kg bw/day ಇಲಿಗಳಲ್ಲಿ ಯಾವುದೇ ಗೆಡ್ಡೆಯನ್ನು ಉಂಟುಮಾಡುವುದಿಲ್ಲ ಎಂದು ಅದು ವರದಿ ಮಾಡಿದೆ.

4. ಅಡಿಕೆಯ antioxident activity –(ಉತ್ಕರ್ಷಣ ನಿರೋಧಕ ) ಚಟುವಟಿಕೆಯು ಕ್ಯಾನ್ಸರ್ ಕೋಶಗಳಲ್ಲಿನ DNA ಹಾನಿಯನ್ನು ಸರಿಪಡಿಸುವಲ್ಲಿ ಸಕ್ರಿಯ ಪಾತ್ರವನ್ನು ವಹಿಸುತ್ತದೆ.

5. ವಿನ್ಶಿಪ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಆಫ್ ಎಮೋರಿ ಯುನಿವರ್ಸಿಟಿ, ಅಟ್ಲಾಂಟಾ, USA ನಲ್ಲಿ ಇತ್ತೀಚಿನ ಅಧ್ಯಯನದಲ್ಲಿ, ಅರೆಕೋಲಿನ್ ಹೈಡ್ರೋಬ್ರೋಮೈಡ್, ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಅಡಿಕೆಯ ಪ್ರಮುಖ ಸಕ್ರಿಯ ತತ್ವವು ಕಂಡುಬಂದಿದೆ. ಅರೆಕೋಲಿನ್ ಹೈಡ್ರೊಬ್ರೊಮೈಡ್ ACAT1 (ಅಸಿಟೈಲ್-C0A ಅಸೆಟೈಲ್ಟ್ರಾನ್ಸ್ಫರೇಸ್) ಕಿಣ್ವದ ಚಟುವಟಿಕೆಯನ್ನು ಪ್ರತಿಬಂಧಿಸುತ್ತದೆ ಎಂದು ವರದಿಯಾಗಿದೆ. ಇದು ಕ್ಯಾನ್ಸರ್ ಕೋಶಗಳ ಪ್ರಸರಣ ಮತ್ತು ಇಲಿಗಳಲ್ಲಿ ಕ್ಯಾನ್ಸರ್ ಗೆಡ್ಡೆಯ ಬೆಳವಣಿಗೆಯ ಕ್ಷೀಣತೆಗೆ ಕಾರಣವಾಗುತ್ತದೆ.

6. ಅಡಿಕೆ ಅದರ ಶುದ್ಧ ರೂಪದಲ್ಲಿ ಅಪಾಯಕಾರಿ ಅಲ್ಲ. ಆದರೆ ಹುಣ್ಣುಗಳು, ಗಾಯಗಳು ಮತ್ತು ಕ್ಯಾನ್ಸರ್ ಅನ್ನು ಗುಣಪಡಿಸುವುದು ಸೇರಿದಂತೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ ಎಂದು ವರದಿಗಳು ದೃಢಪಡಿಸುತ್ತವೆ. ಅದರ ಹೆಚ್ಚಿನ ಜಾನಪದ ಔಷಧೀಯ ಗುಣಗಳು ಈಗ ವೈಜ್ಞಾನಿಕ ಪುರಾವೆಗಳಿಂದ ಮೌಲ್ಯೀಕರಿಸಲ್ಪಟ್ಟಿವೆ.

ಈ ಎಲ್ಲಾ ಗುಣಲಕ್ಷಣಗಳಿಗೆ ಕಾರಣವಾಗುವ ಸಕ್ರಿಯ ತತ್ವ(ಗಳ) ಸ್ವರೂಪದ ಬಗ್ಗೆ ವಿವರವಾದ ಅಧ್ಯಯನಗಳು ಮತ್ತು ಅವುಗಳ ಮೇಲೆ ಕ್ಲಿನಿಕಲ್ ಪ್ರಯೋಗಗಳು ಅಂತಹ ಸಸ್ಯ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಮತ್ತು ಲಾಭದಾಯಕವಾಗಿ ಬಳಸಿಕೊಳ್ಳಲು ಸಮರ್ಥವಾಗಿವೆ. ಏಕೆಂದರೆ ಈ ಸಸ್ಯಗಳು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಹೆಚ್ಚಿನ ದೇಶಗಳಲ್ಲಿ ಸಾಕಷ್ಟು ಲಭ್ಯವಿದೆ ಎಂದು ಸಿಪಿಸಿಆರ್ ಐ ಸಂಸ್ಥೆ ತನ್ನ ವರದಿಯಲ್ಲಿ ಹೇಳಿತ್ತು.

ಕ್ಯಾಂಪ್ಕೊ ಸಂಸ್ಥೆ ಏನೆನ್ನುತ್ತದೆ?

ವಿಶ್ವ ಆರೋಗ್ಯ ಸಂಸ್ಥೆ ಅಡಿಕೆಯನ್ನು ನೇಣುಗಂಬಕ್ಕೆ ಏರಿಸಲು ಪ್ರಯತ್ನಿಸುವುದು ಹೊಸದೇನಲ್ಲ. ಆಗಾಗ ಅದರ ಅಂಗಸಂಸ್ಥೆಗಳ ಮೂಲಕ ಲೇಖನಗಳನ್ನು ಪ್ರಕಟಿಸುತ್ತವೆ. ಕೆಮಿಕಲ್ ಹಾಕಿದ ಗುಟ್ಕಾ ತಿಂದವರು ಕ್ಯಾನ್ಸರ್ ಪೀಡಿತರಾದರೆ ಅದಕ್ಕೆ ಅಡಿಕೆ ಕಾರಣ ಎಂದು ಹೇಳುವುದು ಹೇಗೆ? ಎಂದು ಕ್ಯಾಂಪ್ಕೊ ಸಂಸ್ಥೆ ಕ್ಯಾಂಪ್ಕೊ ಉಪಾಧ್ಯಕ್ಷ ಶಂ.ನಾ.ಖಂಡಿಗೆ ಹೇಳುತ್ತಾರೆ.

ಈ ವಿಷಯವನ್ನು ಕ್ಯಾಂಪ್ಕೊ ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ನ್ಯಾಯಾಲಯ ಮೆಟ್ಟಿಲೇರಿದೆ. ಕೇಸು ನಡೆಯುತ್ತಿದೆ. ಈತನ್ಮಧ್ಯೆ ಕ್ಯಾಂಪ್ಕೊ ವತಿಯಿಂದ ನಿಟ್ಟೆ ವಿಶ್ವವಿದ್ಯಾಲಯ ಹಾಗೂ ಡಾ.ಜೆಡ್ಡು ಗಣಪತಿ ಭಟ್ ಅವರ ಸಂಶೋಧನಾ ಕೇಂದ್ರದ ಮೂಲಕ ಅಧ್ಯಯನವನ್ನು ಮಾಡಿಸಿ, ಅಡಿಕೆ ಕ್ಯಾನ್ಸರ್ ಗೆ ಕಾರಣವಾಗುವುದಿಲ್ಲ ಎಂಬುದನ್ನು ತಿಳಿಸುವ ಪ್ರಯತ್ನ ಮಾಡಿದೆ. ಆದರೂ ಜಾಗತಿಕವಾಗಿ ಅಡಿಕೆಯನ್ನು ಎಳೆದು ತರುವುದನ್ನು ಮಾಡಲಾಗುತ್ತಿರುವುದು ಖಂಡನೀಯ. ಹೀಗಾಗಿ ಕ್ಯಾಂಪ್ಕೊ ನ್ಯಾಯಾಲಯದ ಮೆಟ್ಟಿಲೇರಿದೆ ಎಂದು ಅವರು ಹೇಳಿದರು.

ARDF ಪ್ರಯತ್ನ ಜಾರಿಯಲ್ಲಿದೆ: ಡಾ. ಕೇಶವ ಭಟ್

ಈ ಕುರಿತು ಮಾತನಾಡಿದ ಎ.ಆರ್.ಡಿ.ಎಫ್. ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೇಶವ ಭಟ್, ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಗೆ ನಾವು ಪತ್ರ ಬರೆದಿದ್ದು, ಯಾವ ಆಧಾರದಲ್ಲಿ ನೀವು ಅಡಿಕೆ ಕ್ಯಾನ್ಸರ್ ಕಾರಕ ಎಂದು ಪ್ರಶ್ನಿಸಿದ್ದೇವೆ. ಅಲ್ಲದೆ, ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಎಂ.ಡಿ. ಬಿ.ವಿ. ಸತ್ಯನಾರಾಯಣ ಮತ್ತು ತಾನು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿಯಾಗಿ ಕೆಲಸ ಮಾಡಿದ್ದ ಡಾ. ಸೌಮ್ಯಾ ಸ್ವಾಮಿನಾಥನ್ ಅವರನ್ನು ಚೆನ್ನೈನ ಎಂ.ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ ನಲ್ಲಿ ಭೇಟಿಯಾಗಿ ವಿಶ್ವ ಆರೋಗ್ಯ ಸಂಸ್ಥೆಯ ನಡೆಯ ಕುರಿತು ಚರ್ಚಿಸಿದ್ದೇವೆ. ಈ ವೇಳೆ ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂಬ ಕುರಿತು 20ಕ್ಕೂ ಅಧಿಕ ಅಧ್ಯಯನ ವರದಿಗಳನ್ನು ಪ್ರಕಟಿಸಿದ್ದನ್ನು ಅವರಿಗೆ ಮನವರಿಕೆ ಮಾಡಿದ್ದೇವೆ. ಈ ಕುರಿತು ಕೇಂದ್ರ ಮಟ್ಟದಲ್ಲಿ ಚರ್ಚಿಸುವುದಾಗಿ ಅವರು ತಿಳಿಸಿದ್ದಾರೆ. 2004ರಲ್ಲೇ ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳು ಅಡಿಕೆ ಹಾನಿಕಾರಕ ಎಂಬ ಅಂಶವನ್ನು ಪ್ರಕಟಿಸುತ್ತಾ ಬಂದಿತ್ತು. ಅದನ್ನೀಗ ಪರಿಷ್ಕರಣೆ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ನಾವು ಸಾಕಷ್ಟು ಅಧ್ಯಯನ ಮಾಡುತ್ತಿದ್ದೇವೆ. ಕ್ಯಾಂಪ್ಕೊ ಜೊತೆಗೆ ರೈತಪರ ಸಂಘಟನೆಗಳು, ಅಡಿಕೆ ಬೆಳೆಗಾರರ ಪರವಾಗಿರುವ ಸಂಸ್ಥೆಗಳು ಕೈಜೋಡಿಸುವ ಮೂಲಕ ಒಟ್ಟಾಗಿ ಈ ವಿಷಯದ ಕುರಿತು ಹೋರಾಟ ಮಾಡಬೇಕಾಗಿದೆ ಎಂದರು.

ಅಡಿಕೆ ಬೆಳೆಗಾರರ ಸಂಘ ಏನು ಹೇಳುತ್ತದೆ?

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ, ಪ್ರಗತಿಪರ ಕೃಷಿಕ ಮಹೇಶ್ ಪುಚ್ಚಪ್ಪಾಡಿ, ಇದನ್ನು ವಿರೋಧಿಸದೇ ಇದ್ದರೆ, ಇದರಿಂದ ಆರ್ಥಿಕ ಪಲ್ಲಟಗಳಾಗಬಹುದು. ಆದರೆ, ಸದ್ಯ ಬೆಳೆಗಾರರು ಆತಂಕಪಡಬೇಕಾದ್ದಿಲ್ಲ. ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂಬುದನ್ನು ಸಾಬೀತುಪಡಿಸುವ ಕಾರ್ಯವಾಗಬೇಕು ಎಂದವರು ಅಭಿಪ್ರಾಯಪಡುತ್ತಾರೆ.

ಅಡಿಕೆ ಹಾನಿಕಾರಕ ವಿಚಾರದಲ್ಲಿ ಸದ್ಯ ಬೆಳೆಗಾರರು ಆತಂಕಗೊಳ್ಳಬೇಕಾಗಿಲ್ಲ. ಆಗಬೇಕಿರುವುದು ಅಧ್ಯಯನ ವರದಿಗಳ ಸಲ್ಲಿಕೆ, ಅಲ್ಲಲ್ಲಿ ಅಡಿಕೆಯ ಬಗ್ಗೆ ಆಗಿರುವ ಅಧ್ಯಯನಗಳ ಕ್ರೋಢೀಕರಣ ಹಾಗೂ ಈ ವರದಿಗಳು WHO ಕೈಸೇರಬೇಕು. ಅಡಿಕೆ ಹಾನಿಕಾರಕ ಅಲ್ಲ ಎನ್ನುವುದರ ಬಗ್ಗೆ ಕ್ಲಿನಿಕಲ್ ಟ್ರಯಲ್ ಗಳು ಕೂಡಾ ಜೊತೆಗೇ ನಡೆಯಬೇಕು ಎಂಬ ಅಂಶವನ್ನು ಅವರು ಗಮನಸೆಳೆಯುತ್ತಾರೆ.

Tags:    

Similar News