ಒಳ ಮೀಸಲಾತಿಯಲ್ಲಿ ಛಲವಾದಿ ಸಮುದಾಯಕ್ಕೆ ವಂಚನೆ: ಛಲವಾದಿ ನಾರಾಯಣಸ್ವಾಮಿ ಆರೋಪ
ಕೆಲವು ಸಮುದಾಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ದುರುದ್ದೇಶದಿಂದ, ಛಲವಾದಿ ಸಮುದಾಯಕ್ಕೆ ಸೇರಬೇಕಿದ್ದ ಹಲವು ಜಾತಿಗಳನ್ನು ಮಾದಿಗ ಸಮುದಾಯಕ್ಕೆ ಸೇರಿಸಲಾಗಿದೆ ಎಂದು ನಾರಾಯಣಸ್ವಾಮಿ ಆರೋಪಿಸಿದ್ದಾರೆ.;
ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ
ಒಳ ಮೀಸಲಾತಿ ಜಾರಿಯ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರವು ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸುವ ಮೂಲಕ ದಲಿತ ಸಮುದಾಯಗಳನ್ನು, ವಿಶೇಷವಾಗಿ ಬಲಗೈ ಸಮುದಾಯವನ್ನು ವಂಚಿಸುತ್ತಿದೆ ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಒಳ ಮೀಸಲಾತಿ ಜಾರಿಗಾಗಿ ರಾಜ್ಯದ ಬೀದಿ ಬೀದಿಗಳಲ್ಲಿ ಹೋರಾಟಗಳು ನಡೆಯುತ್ತಿವೆ. ನಮ್ಮ ಬಿಜೆಪಿ ಸರ್ಕಾರವಿದ್ದಾಗಲೇ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಆಧರಿಸಿ, ಮಾಧುಸ್ವಾಮಿ ನೇತೃತ್ವದ ಸಂಪುಟ ಉಪ ಸಮಿತಿಯು ಪರಿಶಿಷ್ಟ ಜಾತಿಯನ್ನು ಎ, ಬಿ, ಸಿ, ಡಿ ಎಂದು ನಾಲ್ಕು ಗುಂಪುಗಳಾಗಿ ವಿಂಗಡಿಸಿ, ಜನಸಂಖ್ಯೆಗೆ ಅನುಗುಣವಾಗಿ ಎ ಗುಂಪಿಗೆ ಶೇ. 6, ಬಿ ಗುಂಪಿಗೆ ಶೇ. 5.5, ಸಿ ಗುಂಪಿಗೆ ಶೇ. 4.5 ಮತ್ತು ಡಿ ಗುಂಪಿಗೆ ಶೇ. 1ರಷ್ಟು ಮೀಸಲಾತಿ ಹಂಚಿಕೆ ಮಾಡಿತ್ತು. ಆದರೆ, ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇದನ್ನು ಒಪ್ಪದೆ, ನ್ಯಾಯಾಲಯದ ಆದೇಶ ಬಂದು ಒಂದು ವರ್ಷ ಕಳೆದರೂ ಮೀನಮೇಷ ಎಣಿಸುತ್ತಿದೆ. ಇದರಿಂದಾಗಿ ಸೌಮ್ಯ ಸ್ವಭಾವದ ಪರಿಶಿಷ್ಟ ಜಾತಿಗಳು ಇಂದು ಆಕ್ರೋಶದಿಂದ ಬೀದಿಗಿಳಿದು ಹೋರಾಡುವಂತಹ ಪರಿಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರವೇ ಸೃಷ್ಟಿಸಿದೆ," ಎಂದು ಆಕ್ಷೇಪಿಸಿದರು.
ನಾಗಮೋಹನದಾಸ್ ಆಯೋಗದ ವರದಿ ಅವೈಜ್ಞಾನಿಕ
ನಾಗಮೋಹನದಾಸ್ ಆಯೋಗದ ವರದಿಯನ್ನು ತೀವ್ರವಾಗಿ ಟೀಕಿಸಿದ ಅವರು, "ಈ ಆಯೋಗವು ಐದು ಗುಂಪುಗಳನ್ನು ಮಾಡಿದ್ದು ದೊಡ್ಡ ತಪ್ಪು. ಕೆಲವು ಸಮುದಾಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ದುರುದ್ದೇಶದಿಂದ, ಛಲವಾದಿ ಸಮುದಾಯಕ್ಕೆ ಸೇರಬೇಕಿದ್ದ ಹಲವು ಜಾತಿಗಳನ್ನು ಮಾದಿಗ ಸಮುದಾಯಕ್ಕೆ ಸೇರಿಸಲಾಗಿದೆ. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂಬುವು ಪ್ರತ್ಯೇಕ ಜಾತಿಗಳಲ್ಲ, ಅವುಗಳ ಮೂಲ ಜಾತಿ ಛಲವಾದಿ. ಆದರೆ ಇವುಗಳನ್ನು ಬೇರೆ ಗುಂಪಿಗೆ ಸೇರಿಸಿ ಬಲಗೈ ಸಮುದಾಯಕ್ಕೆ ಸಂಪೂರ್ಣ ಅನ್ಯಾಯ ಮಾಡಲಾಗಿದೆ," ಎಂದು ಆರೋಪಿಸಿದರು.
"ಪರಿಶಿಷ್ಟ ಜಾತಿಗಳಾದ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ, ಪರೆಯನ್, ಪರೆಯ, ಮುಂಡಾಳ, ಮೊಗೇರ ಮುಂತಾದ ಜಾತಿಗಳು ವಾಸ್ತವವಾಗಿ ಬಲಗೈ ಸಮುದಾಯದಲ್ಲಿ ಬರಬೇಕಿತ್ತು. ಆದರೆ, ಅವುಗಳನ್ನು ತಪ್ಪಾಗಿ ಬೇರೆಡೆ ಸೇರಿಸಿ, ಅವರಿಗೆ ಸಿಗಬೇಕಾದ ನ್ಯಾಯಯುತ ಪಾಲನ್ನು ಮೋಸದಿಂದ ಕಸಿದುಕೊಳ್ಳಲಾಗಿದೆ. ಇದು ಸಂಪೂರ್ಣ ಅವೈಜ್ಞಾನಿಕ ವರದಿ," ಎಂದು ಅವರು ವಾಗ್ದಾಳಿ ನಡೆಸಿದರು.
ತಪ್ಪಾದ ಗಣತಿ, ನಿಂತಿರುವ ನೇಮಕಾತಿ
ಜಾತಿ ಗಣತಿಯೇ ಸಮರ್ಪಕವಾಗಿ ನಡೆದಿಲ್ಲ ಎಂದು ಟೀಕಿಸಿದ ಅವರು, "ಕೇವಲ ಶೇ. 60-65ರಷ್ಟು ಗಣತಿ ಮಾತ್ರ ನಡೆದಿದೆ ಎಂದು ಎಲ್ಲಾ ಮಾಧ್ಯಮಗಳೂ ವರದಿ ಮಾಡಿವೆ. ಇಂತಹ ಅಪೂರ್ಣ ಗಣತಿಯಿಂದ ಸರಿಯಾದ ದತ್ತಾಂಶ ಸಿಗಲು ಸಾಧ್ಯವಿಲ್ಲ. ಒಂದು ವರ್ಷದಿಂದ ಒಳ ಮೀಸಲಾತಿ ಗೊಂದಲದಿಂದಾಗಿ ರಾಜ್ಯದಲ್ಲಿ ಯಾವುದೇ ನೇಮಕಾತಿ, ಬಡ್ತಿಗಳು ಆಗುತ್ತಿಲ್ಲ. ಇದರಿಂದಾಗಿ ಅನೇಕ ಯುವಕರು ಉದ್ಯೋಗವಿಲ್ಲದೆ ಬೀದಿ ಸುತ್ತುವಂತಾಗಿದೆ. ಸರ್ಕಾರ ಕೂಡಲೇ ಛಲವಾದಿ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು. ಈ ವಿಷಯದಲ್ಲಿ ಯಾವುದೇ ರೀತಿಯ ಮೋಸ, ವಂಚನೆಯನ್ನು ನಾವು ಸಹಿಸುವುದಿಲ್ಲ," ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದರು.