ಮೈಸೂರು ಮೃಗಾಲಯದ ಹಿರಿಯ ಆನೆ 'ಪದ್ಮಾವತಿ' ನಿಧನ: ಐದು ದಶಕಗಳ ಅವಿನಾಭಾವ ಸಂಬಂಧ ಅಂತ್ಯ
ಮೈಸೂರು ಮೃಗಾಲಯದ ಪದ್ಮಾವತಿ ಹೆಣ್ಣು ಆನೆಯು ವಯೋವೃದ್ಧತೆಗೆ ಸಂಬಂಧ ಮರಣಹೊಂದಿದೆ. ಸಾವಿಗೆ ನಿಖರವಾದ ಕಾರಣವನ್ನು ತಿಳಿಯಲು ಸದ್ಯದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಲಾಗುವುದು.;
ಕಳೆದ ಐದು ದಶಕಗಳಿಂದ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ ಅವಿಭಾಜ್ಯ ಅಂಗವಾಗಿದ್ದ, 71 ವರ್ಷದ ಹಿರಿಯ ಹೆಣ್ಣಾನೆ 'ಪದ್ಮಾವತಿ', ವಯೋಸಹಜ ಕಾಯಿಲೆಯಿಂದಾಗಿ ಗುರುವಾರ ಕೂರ್ಗಳ್ಳಿಯಲ್ಲಿರುವ ಪುನರ್ವಸತಿ ಕೇಂದ್ರದಲ್ಲಿ ಕೊನೆಯುಸಿರೆಳೆದಿದೆ. ಈ ಮೂಲಕ ಮೃಗಾಲಯದ ಇತಿಹಾಸದಲ್ಲಿಯೇ ಅತ್ಯಂತ ಹಿರಿಯ ಆನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಪದ್ಮಾವತಿಯ ಸುದೀರ್ಘ ಅಧ್ಯಾಯವೊಂದು ಅಂತ್ಯಗೊಂಡಿದೆ.
1973ರ ಖೆಡ್ಡಾ ಕಾರ್ಯಾಚರಣೆಯಲ್ಲಿ ರಕ್ಷಿಸಲ್ಪಟ್ಟ ಪದ್ಮಾವತಿಯು, ಸುಮಾರು 53 ವರ್ಷಗಳ ಕಾಲ ಮೈಸೂರು ಮೃಗಾಲಯದ ಆರೈಕೆಯಲ್ಲಿತ್ತು. ಬುಧವಾರದವರೆಗೂ ಆರೋಗ್ಯವಾಗಿದ್ದ ಆನೆಗೆ ವಯೋಸಹಜ ಲಕ್ಷಣಗಳು ಕಾಣಿಸಿಕೊಂಡಿದ್ದವು. ಗುರುವಾರ ಬೆಳಗ್ಗೆ ಏಳಲು ಸಾಧ್ಯವಾಗದೆ ಮಲಗಿದ ಸ್ಥಿತಿಯಲ್ಲಿಯೇ ಇದ್ದಾಗ, ಮೃಗಾಲಯದ ಪಶುವೈದ್ಯರ ತಂಡವು ತಕ್ಷಣವೇ ಸಹಾಯಕ ಚಿಕಿತ್ಸೆ ಸೇರಿದಂತೆ ತೀವ್ರ ವೈದ್ಯಕೀಯ ಆರೈಕೆಯನ್ನು ಆರಂಭಿಸಿತ್ತು. ಆದರೆ, ಎಲ್ಲಾ ಪ್ರಯತ್ನಗಳ ನಡುವೆಯೂ ಚಿಕಿತ್ಸೆಗೆ ಸ್ಪಂದಿಸದೆ ಪದ್ಮಾವತಿ ಸಾವನ್ನಪ್ಪಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಸಾವಿಗೆ ನಿಖರ ಕಾರಣವನ್ನು ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಪದ್ಮಾವತಿಯು 1979ರಲ್ಲಿ ಗಜಲಕ್ಷ್ಮೀ, 1996ರಲ್ಲಿ ಕೋಮಲ ಮತ್ತು 2004ರಲ್ಲಿ ಅಭಿಮನ್ಯು ಎಂಬ ಮೂರು ಮರಿಗಳಿಗೆ ಜನ್ಮ ನೀಡಿತ್ತು. ನಾಲ್ಕು ವರ್ಷಗಳ ಹಿಂದೆ, ಮೃಗಾಲಯದ ಒತ್ತಡದಿಂದ ದೂರವಿರಲಿ ಎಂಬ ಕಾರಣಕ್ಕೆ, ಅವಳನ್ನು ಕೂರ್ಗಳ್ಳಿಯಲ್ಲಿರುವ ಚಾಮುಂಡಿ ವನ್ಯಜೀವಿ ಸಂರಕ್ಷಣೆ, ರಕ್ಷಣೆ ಮತ್ತು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿ, ವಿಶಾಲವಾದ ನೈಸರ್ಗಿಕ ವಾತಾವರಣದಲ್ಲಿ ಪದ್ಮಾವತಿ ತನ್ನ ಕೊನೆಯ ದಿನಗಳನ್ನು ನೆಮ್ಮದಿಯಿಂದ ಕಳೆದಿತ್ತು.