ತೆರಿಗೆ ಸೋರಿಕೆ ತಡೆಗೆ 'ಟ್ರಾಕ್ ಆ್ಯಂಡ್ ಟ್ರೇಸ್' ಅಸ್ತ್ರ: ಕರ್ನಾಟಕ ಸರಕು ಸೇವೆಗಳ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ
ರಾಜ್ಯದಲ್ಲಿ ಅಡಿಕೆ ಮತ್ತು ತಂಬಾಕು ಆಧಾರಿತ ಉತ್ಪನ್ನಗಳ ವಹಿವಾಟಿನಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಸೋರಿಕೆಯಾಗುತ್ತಿದೆ ಎಂದು ಸಚಿವ ಕೃಷ್ಣಭೈರೇಗೌಡ ಕಳವಳ ವ್ಯಕ್ತಪಡಿಸಿದ್ದರು;
ರಾಜ್ಯದಲ್ಲಿನ ತೆರಿಗೆ ವಂಚನೆಗೆ, ವಿಶೇಷವಾಗಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಹಗರಣಗಳು ಮತ್ತು ತಂಬಾಕು-ಅಡಿಕೆ ಆಧಾರಿತ ಉತ್ಪನ್ನಗಳಲ್ಲಿನ ಭಾರಿ ತೆರಿಗೆ ಸೋರಿಕೆಗೆ ಕಡಿವಾಣ ಹಾಕುವ ಮಹತ್ವದ ಉದ್ದೇಶದೊಂದಿಗೆ, 2025ನೇ ಸಾಲಿನ ಕರ್ನಾಟಕ ಸರಕು ಮತ್ತು ಸೇವೆಗಳ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಈ ತಿದ್ದುಪಡಿಯು ದೇಶದಾದ್ಯಂತ ಏಕರೂಪ ತೆರಿಗೆ ವ್ಯವಸ್ಥೆಯನ್ನು ಕಾಪಾಡುವ ಜಿಎಸ್ಟಿ ಮಂಡಳಿಯ ನಿರ್ಧಾರಗಳ ಅನ್ವಯ, ತೆರಿಗೆ ಜಾಲದಲ್ಲಿನ ಲೋಪಗಳನ್ನು ವ್ಯವಸ್ಥಿತವಾಗಿ ಸರಿಪಡಿಸುವ ಗುರಿ ಹೊಂದಿದೆ.
ಈ ಕುರಿತು ಸದನದಲ್ಲಿ ಮಾಹಿತಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, "ಕೆಲವರು ವ್ಯವಸ್ಥೆಯಲ್ಲಿನ ಅವಕಾಶಗಳನ್ನು ದುರ್ಬಳಕೆ ಮಾಡಿಕೊಂಡು, ಅಕ್ರಮವಾಗಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯುತ್ತಿದ್ದಾರೆ. ದೊಡ್ಡ ಪ್ರಮಾಣದ ಐಟಿಸಿ ಮರುಪಾವತಿ ಹಗರಣಗಳು ಆಗಾಗ ವರದಿಯಾಗುತ್ತಲೇ ಇವೆ. ಇಂತಹ ವಂಚಕರನ್ನು ಒಬ್ಬೊಬ್ಬರನ್ನಾಗಿ ಹಿಡಿಯಲು ಹರಸಾಹಸ ಪಡಬೇಕಾಗುತ್ತದೆ. ಹಾಗಾಗಿ, ಈ ಅಕ್ರಮಗಳನ್ನು ವ್ಯವಸ್ಥೆಯ ಹಂತದಲ್ಲೇ ತಡೆಗಟ್ಟಲು ಈ ತಿದ್ದುಪಡಿಯಲ್ಲಿ ಪ್ರಮುಖ ಕ್ರಮಗಳನ್ನು ಉದ್ದೇಶಿಸಲಾಗಿದೆ," ಎಂದು ವಿವರಿಸಿದರು.
ಅಡಿಕೆ-ಗುಟ್ಕಾ ತೆರಿಗೆ ವಂಚನೆಗೆ ಬ್ರೇಕ್
ರಾಜ್ಯದಲ್ಲಿ ಅಡಿಕೆ ಮತ್ತು ತಂಬಾಕು ಆಧಾರಿತ ಉತ್ಪನ್ನಗಳ ವಹಿವಾಟಿನಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಸೋರಿಕೆಯಾಗುತ್ತಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದ್ದರು. "ಮಾರಾಟವಾಗುತ್ತಿರುವ ಪಾನ್ ಮಸಾಲ, ಗುಟ್ಕಾದ ಪ್ರಮಾಣಕ್ಕೂ, ನಮಗೆ ಲೆಕ್ಕಕ್ಕೆ ಸಿಗುತ್ತಿರುವ ಪ್ರಮಾಣಕ್ಕೂ ಅಜಗಜಾಂತರ. ಸಿರಸಿ, ಹೊನ್ನಾಳಿಯಿಂದ ನೂರಾರು ಲೋಡ್ ಅಡಿಕೆ ಹೊರ ರಾಜ್ಯಗಳಿಗೆ ಸಾಗಣೆಯಾಗುತ್ತದೆ. ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶದ ಗಡಿ ದಾಟಿ ಉತ್ತರ ಪ್ರದೇಶದವರೆಗೂ ತಲುಪುವ ಈ ವ್ಯವಹಾರದ ಹಿಂದೆ ದೊಡ್ಡ ಜಾಲವೇ ಇದೆ. ಆದರೆ ಅಂತಿಮ ಉತ್ಪನ್ನದ ಮಾರಾಟಕ್ಕೂ, ಕಚ್ಚಾ ವಸ್ತುಗಳ ಪೂರೈಕೆಗೂ ತಾಳೆಯೇ ಆಗುವುದಿಲ್ಲ. ಈ ವಂಚಕರನ್ನು ಪತ್ತೆಹಚ್ಚುವುದು ಕಷ್ಟಸಾಧ್ಯ," ಎಂದು ಅವರು ಹೇಳಿದರು.
'ಟ್ರಾಕ್ ಆ್ಯಂಡ್ ಟ್ರೇಸ್' ವ್ಯವಸ್ಥೆ ಜಾರಿ
ಈ ತೆರಿಗೆ ವಂಚನೆಯ ಜಾಲಕ್ಕೆ ಕಡಿವಾಣ ಹಾಕಲು, 'ಟ್ರಾಕ್ ಆ್ಯಂಡ್ ಟ್ರೇಸ್' ಎಂಬ ಹೊಸ ನಿಯಮವನ್ನು ಜಾರಿಗೆ ತರಲು ಈ ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. "ಈ ವ್ಯವಸ್ಥೆಯಡಿ, ಕಚ್ಚಾ ವಸ್ತುವಿನಿಂದ ಅಂತಿಮ ಉತ್ಪನ್ನದವರೆಗಿನ ಮೌಲ್ಯ ಸರಪಳಿಯಲ್ಲಿ ಬರುವ ಎಲ್ಲಾ ಪದಾರ್ಥಗಳನ್ನು ಪತ್ತೆಹಚ್ಚಲಾಗುತ್ತದೆ. ಇದರ ಆಧಾರದ ಮೇಲೆ ಎಷ್ಟು ಪ್ರಮಾಣದ ಅಂತಿಮ ಉತ್ಪನ್ನ ಮಾರಾಟವಾಗಿದೆ ಎಂಬುದನ್ನು ನಿಖರವಾಗಿ ಅಂದಾಜಿಸಲು ಸಾಧ್ಯವಾಗುತ್ತದೆ. ಈ 'ಟ್ರಾಕ್ ಅಂಡ್ ಟ್ರೇಸ್' ವ್ಯವಸ್ಥೆಯನ್ನು ಜಾರಿಗೊಳಿಸಲು ಕಾನೂನಿನಲ್ಲಿಯೇ ಅವಕಾಶ ಮಾಡಿಕೊಡಲಾಗುತ್ತಿದೆ," ಎಂದು ಕೃಷ್ಣ ಬೈರೇಗೌಡರು ಸ್ಪಷ್ಟಪಡಿಸಿದರು.
ಈ ನಿಯಮವು ದೇಶದ ಎಲ್ಲಾ ರಾಜ್ಯಗಳಿಗೂ ಅನ್ವಯಿಸಲಿದ್ದು, ಜಿಎಸ್ಟಿ ಮಂಡಳಿಯ ನಿರ್ಧಾರದ ಭಾಗವಾಗಿದೆ. "ಮುಂದಿನ ವಾರ ಜಿಎಸ್ಟಿ ಮಂಡಳಿಯ ಸಭೆ ಇದೆ. ಈ ತಿದ್ದುಪಡಿಗೆ ಅನುಮೋದನೆ ಪಡೆಯದೆ ಅಲ್ಲಿಗೆ ಹೋಗುವುದು ಸರಿಯಲ್ಲ. ಆ ಕಾರಣಕ್ಕಾಗಿಯೇ ಈ ವಿಧೇಯಕವನ್ನು ಸದನದಲ್ಲಿ ಮಂಡಿಸಿ, ಅಂಗೀಕಾರ ಪಡೆಯಲಾಗುತ್ತಿದೆ," ಎಂದು ಸಚಿವರು ತಿಳಿಸಿದರು.